
ನವದೆಹಲಿ (ಮಾರ್ಚ್ 29, 2023): ಸ್ವಾತಂತ್ರ್ಯಯೋಧ ವೀರ ಸಾವರ್ಕರ್ ಹೇಳಿಕೆ ಕುರಿತಂತೆ ಶಿವಸೇನೆ ಮತ್ತು ಕಾಂಗ್ರೆಸ್ ನಡುವೆ ಉಂಟಾಗಿದ್ದ ವೈಮನಸ್ಯ ಕೊಂಚ ತಣಿದಿದ್ದು, ರಾಹುಲ್ ಮತ್ತು ಶಿವಸೇನೆಯ ನಡುವೆ ಸಂಧಾನವಾಗಿದೆ. ಈ ಸಂಬಂಧ ಶಿವಸೇನೆ (ಉದ್ಧವ್ ಬಣ) ನಾಯಕ ಉದ್ಧವ್ ಠಾಕ್ರೆ ಹಾಗೂ ರಾಹುಲ್ ನಡುವೆ ಮಾತುಕತೆ ನಡೆದಿದ್ದು, ಸಂಧಾನ ಏರ್ಪಟ್ಟಿದೆ.
ಈ ಮಾತುಕತೆಯ ವಿವರ ನೀಡಿರುವ ಶಿವಸೇನೆ ವಕ್ತಾರ ಸಂಜಯ್ ರಾವುತ್, ‘ನಮ್ಮ ಹೋರಾಟ ಇರುವುದು ಸಾವರ್ಕರ್ ಅವರ ವಿರುದ್ಧವಲ್ಲ. ಬದಲಾಗಿ ಪ್ರಧಾನಿ ಮೋದಿ ಅವರ ವಿರುದ್ಧ ಎಂಬುದರ ಕುರಿತಾಗಿ ನಾವು ರಾಹುಲ್ ಗಾಂಧಿ ಅವರ ಜೊತೆ ಮಾತನಾಡಿದ್ದೇವೆ. ಈಗಾಗಲೇ ಏನು ಮಾತುಗಳು ನಡೆದು ಹೋಗಿವೆಯೋ ಅವುಗಳನ್ನು ಬಿಟ್ಟುಬಿಡೋಣ. ನಮ್ಮ ಒಗ್ಗಟ್ಟು ಬಹಳ ಮುಖ್ಯ ಎಂದು ಅವರಿಗೆ ತಿಳಿಸಿದ್ದೇವೆ’ ಎಂದಿದ್ದಾರೆ.
ಇದೇ ವೇಳೆ ಸಾವರ್ಕರ್ ಬಗ್ಗೆ ಟೀಕೆಗಳನ್ನು ಕಾಂಗ್ರೆಸ್ ನಿಲ್ಲಿಸಬೇಕು ಎಂದು ಮಹಾರಾಷ್ಟ್ರದ ಕಾಂಗ್ರೆಸ್ ಮಿತ್ರಪಕ್ಷ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರು ವಿಪಕ್ಷಗಳ ಸಭೆಯಲ್ಲಿ ಕಾಂಗ್ರೆಸ್ ನಾಯಕರನ್ನು ಆಗ್ರಹಿಸಿದ್ದರು. ಇದಕ್ಕೆ ಕಾಂಗ್ರೆಸ್ಸಿಗರು ಸಮ್ಮತಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಇದನ್ನು ಓದಿ: ಸಾವರ್ಕರ್ ನಮ್ಮ ದೇವರು; ಅವಮಾನಿಸಿದರೆ ಸಹಿಸಲ್ಲ: ಕೈ ಜತೆ ಮೈತ್ರಿ ಕಡಿದುಕೊಳ್ಳುವ ಎಚ್ಚರಿಕೆ ನೀಡಿದ ಉದ್ಧವ್ ಠಾಕ್ರೆ
ಸಾವರ್ಕರ್ ಕುರಿತ ರಾಹುಲ್ ಹೇಳಿಕೆಯನ್ನು ಮಿತ್ರಪಕ್ಷ ಶಿವಸೇನೆ ವಿರೋಧಿಸಿದ್ದು, ಮಹಾರಾಷ್ಟ್ರ ವಿಪಕ್ಷ ಮೈತ್ರಿಕೂಟದಲ್ಲಿ ಬಿರುಕು ಸೃಷ್ಟಿಸಿತ್ತು. ‘ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ’ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದ ಬಳಿಕ ಇದನ್ನು ವಿರೋಧಿಸಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಕಾಂಗ್ರೆಸ್ ಪಕ್ಷದ ಔತಣಕೂಟಕ್ಕೂ ಗೈರಾಗುವುದಾಗಿ ಘೋಷಿಸಿತ್ತು. ಇದೀಗ 2 ಪಕ್ಷಗಳ ನಡುವೆ ಈ ವಿಷಯವಾಗಿ ಸಂಧಾನ ನಡೆದಿದೆ ಎಂದು ಹೇಳಲಾಗುತ್ತಿದೆ.
ಇನ್ನು ಸಾವರ್ಕರ್ ಬಗ್ಗೆ ರಾಹುಲ್ ಮಾತಾಡಲ್ಲ: ಮೂಲಗಳು
ಈ ನಡುವೆ, ಉದ್ಧವ್ ಠಾಕ್ರೆ ಜತೆಗಿನ ಮಾತುಕತೆ ವೇಳೆ ರಾಹುಲ್ ಗಾಂಧಿ ಅವರು, ‘ಇನ್ನು ಮುಂದೆ ಸಾವರ್ಕರ್ ಬಗ್ಗೆ ಮಾತನಾಡುವುದಿಲ್ಲ’ ಎಂದು ಭರವಸೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ: ರಾಹುಲ್ ಗಾಂಧಿ, ಅದಾನಿ ವಿಚಾರಕ್ಕೆ ಬಲಿಯಾದ ಸಂಸತ್ ಕಲಾಪ: ಕಪ್ಪು ಬಟ್ಟೆ ಧರಿಸಿ ಬಂದ ಕಾಂಗ್ರೆಸ್ ಸಂಸದರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ