ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ವ್ಯಕ್ತಿಯೊಬ್ಬ ದಲಿತ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಬೆನ್ನಲ್ಲೇ ಇದೀಗ ಉತ್ತರ ಪ್ರದೇಶದಲ್ಲೂ ಇಂಥಾದ್ದೊಂದು ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ.
ಲಖನೌ: ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ವ್ಯಕ್ತಿಯೊಬ್ಬ ದಲಿತ ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಬೆನ್ನಲ್ಲೇ ಇದೀಗ ಉತ್ತರ ಪ್ರದೇಶದಲ್ಲೂ ಇಂಥಾದ್ದೊಂದು ಅಮಾನವೀಯ ಕೃತ್ಯ ಬೆಳಕಿಗೆ ಬಂದಿದೆ. ಸೊನ್‌ಭದ್ರಾದ ಜುಗೈಲ್‌ನ ದಲಿತ ವ್ಯಕ್ತಿ ಗುಲಾಬ್ ಕೋಲ್ ಮತ್ತು ಜವಾಹರ್ ಪಟೇಲ್ ಇಬ್ಬರು ಸ್ನೇಹಿತರು. ಜು.11ರಂದು ಇಬ್ಬರು ಪಾನಮತ್ತರಾಗಿದ್ದಾರೆ. ಈ ವೇಳೆ ಯಾವುದೋ ಕಾರಣಕ್ಕೆ ಇಬ್ಬರ ಮಧ್ಯೆ ಜಗಳವಾಗಿದೆ. ಈ ವೇಳೆ ಗುಲಾಬ್ ಮೇಲೆ ಹಲ್ಲೆ ಮಾಡಿರುವ ಪಟೇಲ್, ಬಳಿಕ ಅವನ ಕಿವಿಯ ಮೇಲೆ ಮೂತ್ರ ವಿಸರ್ಜಿಸಿ ಕ್ರೌರ್ಯ ತೋರಿದ್ದಾನೆ. ಈ ವೇಳೆ ಅಲ್ಲೇ ಇದ್ದ ವ್ಯಕ್ತಿಯೊಬ್ಬ ಇದನ್ನು ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ. ಈ ಕೃತ್ಯಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಜುಲೈ 4 ರಂದು ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತನೊಬ್ಬ ಮದ್ಯದ ಅಮಲಿನಲ್ಲಿ ಬುಡಕಟ್ಟು ಜನಾಂಗದ ಮಾನಸಿಕ ವಿಕಲಚೇತನನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಅಮಾನವೀಯ ಘಟನೆ ನಡೆದಿತ್ತು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಘಟನೆಯ ಬಳಿಕ ಮಧ್ಯ ಪ್ರದೇಶ ಸಿಎಂ ಈ ಸಂತ್ರಸ್ತನನ್ನು ಕರೆದು ಆತನಿಗೆ ಪಾದಪೂಜೆ ಮಾಡಿ ಕ್ಷಮೆ ಕೇಳಿದ್ದರು. ಅತ್ತ ಕಾಂಗ್ರೆಸ್ ಕಾರ್ಯಕರ್ತರು ಸಂತ್ರಸ್ತ ವ್ಯಕ್ತಿಗೆ ಗೋಮೂತ್ರ ಸಿಂಪಡಣೆ ಮಾಡಿ ಶುದ್ಧಗೊಳಿಸಿದ್ದರು.
ಬುಡಕಟ್ಟು ವ್ಯಕ್ತಿ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಬಿಜೆಪಿ ನಾಯಕ: ಕಾಲು ತೊಳೆದು ಸನ್ಮಾನ ಮಾಡಿದ ಮಧ್ಯ ಪ್ರದೇಶ ಸಿಎಂ
ಇಷ್ಟೇ ಅಲ್ಲದೇ ಮಧ್ಯ ಪ್ರದೇಶ ಸರ್ಕಾರವೂ ಆರೋಪಿಯ ನಿವಾಸವನ್ನು ಬುಲ್ಡೋಜರ್‌ನಿಂದ ಕೆಡವಿತ್ತು. ಈ ಮೂತ್ರ ವಿಸರ್ಜನೆ ವಿಡಿಯೋ ಕುರಿತಾಗಿ ಪ್ರತಿಕ್ರಿಯೆ ನೀಡಿರುವ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲ್‌ನಾಥ್, ಸಿಧಿ ಜಿಲ್ಲೆಯಲ್ಲಿ ಬುಡಕಟ್ಟು ಯುವಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಅಮಾನುಷ ಕೃತ್ಯದ ವಿಡಿಯೋವನ್ನು ಗಮನಿಸಿದ್ದೇನೆ. ಬುಡಕಟ್ಟು ಯುವಕನೊಂದಿಗೆ ಇಂತಹ ಹೇಯ ಮತ್ತು ಹೀನ ಕೃತ್ಯಕ್ಕೆ ನಾಗರಿಕ ಸಮಾಜದಲ್ಲಿ ಸ್ಥಾನವಿಲ್ಲ. ಆದಿವಾಸಿಗಳ ದೌರ್ಜನ್ಯದಲ್ಲಿ ಮಧ್ಯಪ್ರದೇಶ ಈಗಾಗಲೇ ಮೊದಲ ಸ್ಥಾನದಲ್ಲಿದೆ. ಈ ಘಟನೆ ಇಡೀ ಮಧ್ಯಪ್ರದೇಶವನ್ನೇ ತಲೆತಗ್ಗಿಸುವಂತೆ ಮಾಡಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು ಮತ್ತು ಮಧ್ಯಪ್ರದೇಶದಲ್ಲಿ ಆದಿವಾಸಿಗಳ ಮೇಲಿನ ದೌರ್ಜನ್ಯವನ್ನು ಕೊನೆಗೊಳಿಸಬೇಕು ಎಂದು ನಾನು ಮುಖ್ಯಮಂತ್ರಿಯಲ್ಲಿ ಒತ್ತಾಯಿಸುತ್ತೇನೆ ಎಂದಿದ್ದರು.
ಆದಿವಾಸಿ ವ್ಯಕ್ತಿಯ ಮುಖದ ಮೇಲೆ ಮೂತ್ರ ಮಾಡಿದ್ದ ಪ್ರವೇಶ್ ಶುಕ್ಲಾ ಮನೆಗೆ ನುಗ್ಗಿದ ಬುಲ್ಡೋಜರ್!