ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಕಳೆದ ವಾರ ಮೃತಪಟ್ಟ ಎರಡು ಚೀತಾಗಳ ಸಾವಿಗೆ ರೇಡಿಯ ಕಾಲರ್‌ನಿಂದ ಉಂಟಾದ ಸೋಂಕು ಕಾರಣ ಎಂದು ವೈದ್ಯರು ಹೇಳಿದ್ದಾರೆ.
ಶ್ಯೋಪುರ: ದಕ್ಷಿಣ ಆಫ್ರಿಕಾದ ನಮೀಬಿಯಾದಿಂದ ತರಲಾಗಿದ್ದ 2 ಗಂಡು ಚೀತಾಗಳು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಕಳೆದ ವಾರ ಸಾವಿಗೀಡಾಗಿದ್ದಕ್ಕೆ ಸೆಪ್ಟಿಸೆಮಿಯಾ (ಬ್ಯಾಕ್ಟೀರಿಯಾ ಸೋಂಕಿನಿಂದ ರಕ್ತ ವಿಷವಾಗುವುದು) ಕಾರಣ. ಚೀತಾಗಳಿಗೆ ಅಳವಡಿಸಲಾಗಿದ್ದ ರೇಡಿಯೋ ಕಾಲರ್ ಹಾಗೂ ತೇವಾಂಶದ ವಾತಾವರಣದಿಂದಾಗಿ ಸೋಂಕು ಕಾಣಿಸಿಕೊಂಡು ಅವುಗಳಿಗೆ ಸೆಪ್ಟಿಕ್ ಆಗಿದೆ. ಇದರಿಂದ ಮರಣ ಉಂಟಾಗಿದೆ ಎಂದು ತಜ್ಞರೊಬ್ಬರು ಹೇಳಿದ್ದಾರೆ.
ಹೆಚ್ಚಿನ ತೇವಾಂಶದ ವಾತಾವರಣದಿಂದಾಗಿ ರೇಡಿಯೋ ಕಾಲರ್‌ಗಳಿಂದ ಸೋಂಕು ಉಂಟಾಗಿದೆ. ಎರಡೂ ಚೀತಾಗಳ ಸಾವಿಗೆ ಸೆಪ್ಟಿಸೆಮಿಯಾ ಕಾರಣ ಎಂದು ದಕ್ಷಿಣ ಆಫ್ರಿಕಾದ ಚೀತಾ ತಜ್ಞ ಹಾಗೂ ಆಫ್ರಿಕಾದಿಂದ ಭಾರತಕ್ಕೆ ಚೀನಾ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ವಿನ್ಸೆಂಟ್ ವ್ಯಾನ್ ಡೇರ್ ಮರ್ವೆ ಅವರು ಮಂಗೋಲಿಯಾದಿಂದ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಇದೇ ವೇಳೆ ಭಾರತದ ಚೀತಾ ಸ್ಥಳಾಂತರ ಯೋಜನೆ ಬಗ್ಗೆ ಅವರು ಆಶಾವಾದ ವ್ಯಕ್ತಪಡಿಸಿದ್ದಾರೆ. ಈಗಲೂ ಶೇ.75ರಷ್ಟು ಚೀತಾಗಳು ಜೀವಂತವಾಗಿವೆ. ಮರಣ ಪ್ರಮಾಣ ನಿಗದಿತ ಮಿತಿಯೊಳಗೇ ಇದೆ ಎಂದು ಹೇಳಿದ್ದಾರೆ.
ಈ ನಡುವೆ, ಚೀತಾಗಳ ಮರಣೋತ್ತರ ಪರೀಕ್ಷಾ ವರದಿಯನ್ನು ಭೋಪಾಲದಲ್ಲಿರುವ ಹಿರಿಯ ಅಧಿಕಾರಿಗಳಿಗೆ ರವಾನಿಸಿದ್ದೇವೆ ಎಂದು ಕುನೋ ರಾಷ್ಟ್ರೀಯ ಉದ್ಯಾನದ ನಿರ್ದೇಶಕ ಉತ್ತಮ್ ಶರ್ಮಾ ತಿಳಿಸಿದ್ದಾರೆ. ಅದರಲ್ಲಿ ಏನಿದೆ ಎಂಬುದನ್ನು ಬಹಿರಂಗಪಡಿಸಿಲ್ಲ. ಆದರೆ ಎರಡೂ ಚೀತಾಗಳ ಸಾವಿಗೆ ಸೋಂಕು ಕಾರಣವಾಗಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅರಣ್ಯಾಧಿಕಾರಿಯೊಬ್ಬರು ತಿಳಿಸಿದ್ದಾರೆ. ಸೂರಜ್ ಎಂಬ ಚೀತಾ ಶುಕ್ರವಾರ ಹಾಗೂ ತೇಜಸ್ ಎಂಬ ಮತ್ತೊಂದು ಚೀತಾ ಮಂಗಳವಾರ ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ಸಾವಿಗೀಡಾಗಿದ್ದವು.
6 ಸಾವಿನ ಬೆನ್ನಲ್ಲೇ ಕುನೋ ಅರಣ್ಯಕ್ಕೆ ನಮೀಬಿಯಾದಿಂದ ಬರುತ್ತಿದೆ ಮತ್ತೆ 7 ಚೀತಾ!
ಕುತ್ತಿಗೆಯ ಬಳಿ ತೀವ್ರ ಗಾಯ, ಕುನೋ ಪಾರ್ಕ್‌ನಲ್ಲಿ ಇನ್ನೊಂದು ಚೀತಾ ತೇಜಸ್ ಸಾವು!