ನದಿ ನೀರೇ ಭಾರತದ ಆಯುಧ: ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಲಿದೆ ಸಿಂಧೂ ಜಲ ಒಪ್ಪಂದದ ಅಮಾನತು

Published : Apr 24, 2025, 02:34 PM ISTUpdated : Apr 24, 2025, 02:54 PM IST
ನದಿ ನೀರೇ ಭಾರತದ ಆಯುಧ: ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಲಿದೆ ಸಿಂಧೂ ಜಲ ಒಪ್ಪಂದದ ಅಮಾನತು

ಸಾರಾಂಶ

ಭಯೋತ್ಪಾದನಾ ದಾಳಿಗಳಿಗೆ ಪ್ರತಿಯಾಗಿ ಭಾರತ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿದೆ. ಈ ಕ್ರಮ ಪಾಕಿಸ್ತಾನದ ಕೃಷಿ, ನೀರು ಮತ್ತು ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಉದ್ವಿಗ್ನತೆ ಹೆಚ್ಚಿಸುವ ಸಾಧ್ಯತೆಯೂ ಇದೆ.

ನದಿ ನೀರೇ ಭಾರತದ ಆಯುಧ: ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸಲಿದೆ ಸಿಂಧೂ ಜಲ ಒಪ್ಪಂದದ ಅಮಾನತು

ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಎಪ್ರಿಲ್ 23, 2025ರಂದು ಭಾರತ ಒಂದು ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿತು. ಸಿಂಧೂ ಜಲ ಒಪ್ಪಂದ (ಇಂಡಸ್ ವಾಟರ್ಸ್ ಟ್ರೀಟಿ - ಐಎಬ್ಲ್ಯುಟಿ) ಎಂಬ ಸಿಂಧೂ ನದಿಯ ನೀರಿನ ಹಂಚಿಕೆಯ ಕುರಿತು ಪಾಕಿಸ್ತಾನದೊಡನೆ ಮಾಡಿಕೊಂಡಿದ್ದ 65 ವರ್ಷ ಹಳೆಯ ಒಪ್ಪಂದವನ್ನು ಭಾರತ ಅಮಾನತುಗೊಳಿಸಿದೆ. ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭೀಕರ ಭಯೋತ್ಪಾದನಾ ದಾಳಿ ನಡೆದು, 26 ಜನರು ಪ್ರಾಣ ಕಳೆದುಕೊಂಡ ಒಂದು ದಿನದ ಬಳಿಕ ಭಾರತ ಈ ದಿಟ್ಟ ಹೆಜ್ಜೆಯನ್ನಿಟ್ಟಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಪಹಲ್ಗಾಮ್ ದಾಳಿಯ ಹಿಂದೆ ಪಾಕಿಸ್ತಾನ ಮೂಲದ ಭಯೋತ್ಪಾದನಾ ಸಂಘಟನೆಗಳ ಪಾತ್ರವಿದೆ ಎಂದು ಆರೋಪಿಸಿದ್ದು, ಪಾಕಿಸ್ತಾನ ಭಾರತದಲ್ಲಿ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ಸಂಪೂರ್ಣವಾಗಿ ನಿಲ್ಲಿಸುವ ತನಕ ಸಿಂಧೂ ಜಲ ಹಂಚಿಕೆಯ ಒಪ್ಪಂದವನ್ನು ಅಮಾನತುಗೊಳಿಸುವುದಾಗಿ ಘೋಷಿಸಿತು. ಈ ಒಪ್ಪಂದದ ರದ್ದತಿಯಿಂದ ಆಗುವ ಪರಿಣಾಮಗಳೇನು? ಅದರಲ್ಲೂ ಪಾಕಿಸ್ತಾನಕ್ಕೆ ಇದರಿಂದ ತೊಂದರೆಯಾಗಲಿದೆಯೇ? ಈ ಅಂಶಗಳನ್ನು ಸರಳವಾಗಿ ಗಮನಿಸೋಣ.

ಏನು ಈ ಸಿಂಧೂ ಜಲ ಹಂಚಿಕೆ ಒಪ್ಪಂದ (ಐಡಬ್ಲ್ಯುಟಿ)?
1960ರಲ್ಲಿ ಸಹಿ ಹಾಕಲಾದ ಸಿಂಧೂ ಜಲ ಹಂಚಿಕೆ ಒಪ್ಪಂದ ಸಿಂಧೂ, ಝೇಲಮ್, ಚೆನಾಬ್, ರಾವಿ, ಬಿಯಾಸ್, ಮತ್ತು ಸಟ್ಲೆಜ್ ಎಂಬ ಆರು ನದಿಗಳ ನೀರನ್ನು ಭಾರತ ಮತ್ತು ಪಾಕಿಸ್ತಾನಗಳ ನಡುವೆ ಹಂಚಿಕೆ ಮಾಡುವ ಕುರಿತು ಇರುವ ನಿಯಮಾವಳಿಗಳಂತಹ ಒಪ್ಪಂದವಾಗಿದೆ. ಹಲವಾರು ವರ್ಷಗಳ ಮಾತುಕತೆಗಳ ಬಳಿಕ, ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಪ್ರಸ್ತುತ ಒಪ್ಪಂದ ರೂಪುಗೊಂಡಿತು. ನದಿ ನೀರು ಹಂಚಿಕೆ ಒಪ್ಪಂದದ ಅಂಶಗಳು:

* ಭಾರತಕ್ಕೆ ಪೂರ್ವದ ಮೂರು ನದಿಗಳಾದ ರಾವಿ, ಬಿಯಾಸ್ ಮತ್ತು ಸಟ್ಲೆಜ್ ಮೇಲೆ ಸಂಪೂರ್ಣ ನಿಯಂತ್ರಣ ಲಭಿಸುತ್ತದೆ.

* ಪಾಕಿಸ್ತಾನಕ್ಕೆ ಪಶ್ಚಿಮದ ಮೂರು ನದಿಗಳಾದ ಸಿಂಧೂ, ಝೇಲಮ್, ಮತ್ತು ಚೆನಾಬ್ ನದಿಗಳ ಮೇಲೆ ಸಂಪೂರ್ಣ ನಿಯಂತ್ರಣ ಲಭಿಸುತ್ತದಾದರೂ, ಭಾರತ ಅವುಗಳನ್ನು ಜಲ ವಿದ್ಯುತ್ ಉತ್ಪಾದನೆ ಮತ್ತು ನಿಯಮಿತ ಪ್ರಮಾಣದ ಕೃಷಿಗೆ ಬಳಸಬಹುದು.

* ಸಿಂಧೂ ನದಿ ವ್ಯವಸ್ಥೆಯ ಒಟ್ಟು 80% ನೀರು ಪಾಕಿಸ್ತಾನಕ್ಕೆ ಲಭಿಸಿದರೆ, ಭಾರತ್ಕೆ ಕೇವಲ 20% ನೀರು ಲಭಿಸುತ್ತದೆ.

ಈ ಒಪ್ಪಂದ ಇಲ್ಲಿಯ ತನಕ ಸಾಗಿ ಬಂದಿದ್ದೇ ಒಂದು ಯಶೋಗಾಥೆಯಾಗಿದ್ದು, ಮೂರು ಯುದ್ಧಗಳು (1965, 1971, ಮತ್ತು 1999ರ ಕಾರ್ಗಿಲ್ ಯುದ್ಧ) ಮತ್ತು ನಿರಂತರ ಉದ್ವಿಗ್ನತೆಗಳ ನಡುವೆಯೂ ಒಪ್ಪಂದಕ್ಕೆ ಧಕ್ಕೆಯಾಗಿರಲಿಲ್ಲ. ತನ್ನ ಕೃಷಿ ಚಟುವಟಿಕೆಗಳಿಗಾಗಿ ಈ ನದಿಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿರುವ ಪಾಕಿಸ್ತಾನಕ್ಕೆ ಇದರಿಂದ ಅವಶ್ಯಕ ಪ್ರಮಾಣದ ನೀರು ಲಭಿಸುತ್ತದೆ.

ಭಾರತ ಯಾಕೆ ಒಪ್ಪಂದವನ್ನು ಅಮಾನತುಗೊಳಿಸಿದೆ?
ಪಹಲ್ಗಾಮ್ ದಾಳಿ ಭಾರತದ ತಾಳ್ಮೆಯ ಕಟ್ಟೆಯನ್ನು ನಿಜಕ್ಕೂ ಮೀರಿಬಿಟ್ಟಿತು. ಭಾರತ ಸರ್ಕಾರ ಈ ದಾಳಿಗೆ ಗಡಿಯಾಚೆಗಿನ ಸಂಬಂಧವಿರುವ ಕುರಿತು ತನ್ನ ಬಳಿ ಸಾಕ್ಷಿಗಳಿವೆ ಎಂದಿದ್ದು, ದಾಳಿ ನಡೆಸಿದ ಭಯೋತ್ಪಾದಕರಿಗೆ ಪಾಕಿಸ್ತಾನದ ಬೆಂಬಲ ಇತ್ತು ಎಂಬುದು ಭಾರತದ ಆರೋಪವಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆದ ಭದ್ರತಾ ಸಂಸದೀಯ ಸಮಿತಿಯ ಸಭೆ ಪಾಕಿಸ್ತಾನದ ವಿರುದ್ಧ ದಿಟ್ಟವಾದ ಕ್ರಮಗಳನ್ನು ಕೈಗೊಳ್ಳಲು ನಿರ್ಧರಿಸಿತು. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸುವ ತನಕವೂ ಈ ಒಪ್ಪಂದ ಅಮಾನತಿನಲ್ಲಿರಲಿದೆ ಎಂದಿದ್ದಾರೆ. ಭಾರತ ಅಟ್ಟಾರಿ - ವಾಘಾ ಗಡಿಯನ್ನೂ ಮುಚ್ಚಿದ್ದು, ಪಾಕಿಸ್ತಾನದ ರಾಜತಾಂತ್ರಿಕರನ್ನು ದೇಶದಿಂದ ಹೊರಹಾಕಿ, ಪಾಕಿಸ್ತಾನಿ ಪ್ರಜೆಗಳನ್ನು ಭಾರತಕ್ಕೆ ಪ್ರವೇಶಿಸುವುದರಿಂದ ನಿರ್ಬಂಧಿಸಿದೆ.

ಭಾರತ ಇದೇ ಮೊದಲ ಬಾರಿಗೆ ಸಿಂಧೂ ಜಲ ಹಂಚಿಕೆಯ ಕುರಿತು ತನ್ನ ಕಳವಳವನ್ನು ವ್ಯಕ್ತಪಡಿಸಿರುವುದಲ್ಲ. ಕಳೆದ ವರ್ಷ ಪಾಕಿಸ್ತಾನ ಈ ಒಪ್ಪಂದದ ದುರುಪಯೋಗ ನಡೆಸುತ್ತಿದೆ ಎಂದು ಭಾರತ ಆರೋಪಿಸಿದ್ದು, ಒಪ್ಪಂದದ ಮರು ಪರಿಶೀಲನೆ ನಡೆಸಲು ಸೂಚಿಸಿತ್ತು. ಭಾರತದ ಅಭಿವೃದ್ಧಿಗೆ ಮತ್ತು ಜಲ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ನೀರಿನ ಅಗತ್ಯವಿದೆ ಎನ್ನುವುದು ಭಾರತದ ವಾದವಾಗಿತ್ತು. ಆದರೆ ಒಪ್ಪಂದವನ್ನು ಅಮಾನತುಗೊಳಿಸುವುದು ಬಹುದೊಡ್ಡ ಹೆಜ್ಜೆಯಾಗಿದ್ದು, ಭಾರತ ಹಿಂದೆಂದೂ ಈ ಕ್ರಮವನ್ನು ಅನುಸರಿಸಿರಲಿಲ್ಲ.

ಪಾಕಿಸ್ತಾನದ ಮೇಲೆ ಒಪ್ಪಂದದ ಅಮಾನತಿನ ಪರಿಣಾಮಗಳೇನು?

ಪಾಕಿಸ್ತಾನದ ಆರ್ಥಿಕತೆ ಮತ್ತು ಆ ದೇಶದ ಉಳಿವು ಸಿಂಧೂ ನದಿ ವ್ಯವಸ್ಥೆಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ಈಗ ಒಪ್ಪಂದದ ಅಮಾನತಿನಿಂದ ಪಾಕಿಸ್ತಾನಕ್ಕೆ ಎದುರಾಗಬಹುದಾದ ತೊಂದರೆಗಳು:

1. ಬಿಕ್ಕಟ್ಟಿನಲ್ಲಿ ಕೃಷಿ ಚಟುವಟಿಕೆಗಳು: ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯಗಳು ಪಾಕಿಸ್ತಾನದ ಕೃಷಿಯ ಮುಖ್ಯ ಕೇಂದ್ರಗಳಾಗಿದ್ದು, ನೀರಾವರಿಗಾಗಿ ಸಿಂಧೂ, ಝೇಲಮ್, ಮತ್ತು ಚೆನಾಬ್ ನದಿಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿವೆ. ಪಾಕಿಸ್ತಾನದ 80%ದಷ್ಟು ಕೃಷಿ ಭೂಮಿ ಈ ನದಿಗಳನ್ನು ಆಧರಿಸಿವೆ. ಒಂದು ವೇಳೆ ಭಾರತ ನೀರಿನ ಹರಿವನ್ನು ಕಡಿಮೆಗೊಳಿಸಿದರೆ, ಗೋಧಿ, ಅಕ್ಕಿ, ಹತ್ತಿಯಂತಹ ಬೆಳೆಗಳು ನಷ್ಟವಾಗಿ, ಪಾಕಿಸ್ತಾನದಲ್ಲಿ ಆಹಾರದ ಕೊರತೆ ಮತ್ತು ಬೆಲೆ ಏರಿಕೆ ಉಂಟಾಗಬಹುದು.

2. ನೀರಿನ ಕೊರತೆ: ಪಾಕಿಸ್ತಾನ ಈಗಾಗಲೇ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಪಶ್ಚಿಮದ ನದಿಗಳನ್ನು ತಡೆಗಟ್ಟುವುದರಿಂದ, ಅಥವಾ ಅವುಗಳ ಹರಿವನ್ನು ಕಡಿಮೆಗೊಳಿಸುವುದರಿಂದ ಪಾಕಿಸ್ತಾನದಲ್ಲಿ, ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗಲಿದೆ. ಕರಾಚಿ ಮತ್ತು ಲಾಹೋರ್‌ನಂತಹ ನಗರಗಳು ಇನ್ನೂ ದೊಡ್ಡ ಸಮಸ್ಯೆಗೆ ಸಿಲುಕಲಿವೆ.

3. ಆರ್ಥಿಕ ಕುಸಿತ: ಕೃಷಿ ಪಾಕಿಸ್ತಾನದ ಅರ್ಧದಷ್ಟು ಕಾರ್ಮಿಕರಿಗೆ ಉದ್ಯೋಗ ನೀಡುತ್ತಿದ್ದು, ಪಾಕಿಸ್ತಾನದ ಆರ್ಥಿಕತೆಗೆ ಬಹಳಷ್ಟು ಮುಖ್ಯವಾಗಿದೆ. ನೀರಿನ ಕೊರತೆಯಿಂದಾಗಿ ಉದ್ಯೋಗ ನಷ್ಟ, ಬಡತನ ಮತ್ತು ಆರ್ಥಿಕ ಅಸ್ಥಿರತೆಗಳು ಉಂಟಾಗಬಹುದು. ಬಟ್ಟೆಗಳು ಸೇರಿದಂತೆ, ಪಾಕಿಸ್ತಾನದ ರಫ್ತಿನ ಮೇಲೆ ಭಾರೀ ಹೊಡೆತ ಬೀಳಬಹುದು.

4. ವಿದ್ಯುತ್ ಅಭಾವ: ಪಾಕಿಸ್ತಾನ ನದಿ ನೀರನ್ನು ಬಳಸಿ ಜಲ ವಿದ್ಯುತ್ ಉತ್ಪಾದಿಸುತ್ತದೆ. ನೀರಿನ ಪೂರೈಕೆ ಕಡಿಮೆಯಾದರೆ ವಿದ್ಯುತ್ ಉತ್ಪಾದನೆಯೂ ಕುಂಠಿತಗೊಳ್ಳಲಿದೆ. ಪಾಕಿಸ್ತಾನ ಈಗಾಗಲೇ ವಿದ್ಯುತ್ ಕೊರತೆಯನ್ನು ಎದುರಿಸುತ್ತಿದೆ.

ಭಾರತದ ಮೇಲೆ ಉಂಟಾಗುವ ಪರಿಣಾಮಗಳೇನು?

ಸಿಂಧೂ ಜಲ ಹಂಚಿಕೆ ಒಪ್ಪಂದವನ್ನು ಅಮಾನತುಗೊಳಿಸುವುದರಿಂದ ಭಾರತ ಪಾಕಿಸ್ತಾನಕ್ಕೆ 'ಭಯೋತ್ಪಾದನೆಯ ಪರಿಣಾಮಗಳು ಗಂಭೀರವಾಗಿರಲಿವೆ' ಎಂಬ ಗಟ್ಟಿಯಾದ ಸಂದೇಶ ರವಾನಿಸಿದಂತಾಗಲಿದೆ. ಇದು ಭಾರತಕ್ಕೆ ಪಶ್ಚಿಮದ ನದಿಗಳ ಮೇಲೂ ನಿಯಂತ್ರಣ ಒದಗಿಸಲಿದೆ. ಉದಾಹರಣೆಗೆ:

* ಭಾರತ ಈಗ ಒಪ್ಪಂದದ ನಿರ್ಬಂಧಗಳಿಲ್ಲದೆ, ಝೇಲಮ್ ಮತ್ತು ಚೆನಾಬ್ ನದಿಗಳಿಗೆ ಅಣೆಕಟ್ಟು ನಿರ್ಮಿಸಿ, ನೀರು ಸಂಗ್ರಹಿಸಬಹುದು. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರವಾಹ ನಿಯಂತ್ರಣ ಮತ್ತು ನೀರಾವರಿಗೆ ನೆರವಾಗಲಿದೆ.

* ಇದು ನೀರಿನ ಹರಿವಿನ ಮೇಲ್ಭಾಗದಲ್ಲಿರುವ ಭಾರತದ ಸ್ಥಾನವನ್ನು ಭದ್ರಪಡಿಸಿ, ಪಾಕಿಸ್ತಾನದ ಎದುರು ಮೇಲುಗೈ ಒದಗಿಸಲಿದೆ.

ಆದರೆ, ಇದರಿಂದ ಭಾರತಕ್ಕೂ ಒಂದಷ್ಟು ಅಪಾಯಗಳಿವೆ:
ಅಂತಾರಾಷ್ಟ್ರೀಯ ಪ್ರತಿರೋಧ: ಈ ಒಪ್ಪಂದವನ್ನು ರೂಪುಗೊಳಿಸಿದ ವಿಶ್ವಬ್ಯಾಂಕ್ ಅಮಾನತಿನ ಕುರಿತು ತನ್ನ ಕಳವಳವನ್ನು ವ್ಯಕ್ತಪಡಿಸಬಹುದು. ಇತರ ದೇಶಗಳು ಭಾರತದ ನಡೆಯನ್ನು ಆಕ್ರಮಣಕಾರಿ ಎಂದು ಪರಿಗಣಿಸಿ, ಭಾರತದ ಜಾಗತಿಕ ಗೌರವದ ಮೇಲೆ ಪರಿಣಾಮ ಬೀರಬಹುದು.

ಪಾಕಿಸ್ತಾನದೊಡನೆ ಉದ್ವಿಗ್ನ ಪರಿಸ್ಥಿತಿ: ಪಾಕಿಸ್ತಾನ ಅಂತರಾಷ್ಟ್ರೀಯ ನ್ಯಾಯಾಲಯಗಳ ಮೂಲಕ ಪ್ರತಿರೋಧ ವ್ಯಕ್ತಪಡಿಸಬಹುದು. ಅಥವಾ ಗಡಿಯಾದ್ಯಂತ ಉದ್ವಿಗ್ನತೆಗಳು ಹೆಚ್ಚಾಗುವಂತೆ ಪ್ರಚೋದಿಸಬಹುದು.

ಇದನ್ನೂ ಓದಿ: ಬಜೆಟ್ 2025: ಭಾರತದ ಬಾಹ್ಯಾಕಾಶ ಕನಸಿಗೆ 13,416 ಕೋಟಿ ರೂಪಾಯಿಗಳ ಉತ್ತೇಜನ

ಕಾನೂನು ಸಮಸ್ಯೆಗಳು: ಸಿಂಧೂ ಜಲ ಹಂಚಿಕೆಯ ಒಪ್ಪಂದ ಯಾವುದೇ ಮುಕ್ತಾಯವನ್ನು ಹೊಂದಿಲ್ಲ. ಆದ್ದರಿಂದ ಒಪ್ಪಂದವನ್ನು ಅಮಾನತುಗೊಳಿಸುವುದು ಕಾನೂನು ಸವಾಲುಗಳನ್ನು ಸೃಷ್ಟಿಸಬಲ್ಲದು. ಭಾರತ ಭಯೋತ್ಪಾದನೆ ಒಪ್ಪಂದದ ಮೂಲ ತತ್ವಕ್ಕೆ ವಿರುದ್ಧ ಎಂದು ವಾದಿಸಿದರೂ, ಪಾಕಿಸ್ತಾನ ಮಧ್ಯಸ್ಥಿಕೆಗೆ ಆಗ್ರಹಿಸಬಹುದು.

ಮುಂದೆ ಏನಾಗಲಿದೆ?
ಪಾಕಿಸ್ತಾನಿ ನಾಯಕರು ಇಂದು, ಅಂದರೆ ಎಪ್ರಿಲ್ 24ರಂದು ಸಭೆ ಸೇರಲಿದ್ದು, ತಮ್ಮ ಪ್ರತಿಕ್ರಿಯೆಯನ್ನು ಆಲೋಚಿಸಲಿದ್ದಾರೆ. ಪಾಕಿಸ್ತಾನ ಭಾರತ ಕೈಗೊಂಡಿರುವ ಕ್ರಮ ಅಕ್ರಮವಾಗಿದೆ ಎಂದು ವಿಶ್ವಬ್ಯಾಂಕ್ ಅಥವಾ ವಿಶ್ವಸಂಸ್ಥೆಗೆ ಮನವಿ ಮಾಡಿಕೊಳ್ಳಬಹುದು. ಪಾಕಿಸ್ತಾನ ಅಂತಾರಾಷ್ಟ್ರೀಯ ಬೆಂಬಲ ಸಂಪಾದಿಸಲು ಪ್ರಯತ್ನ ನಡೆಸಬಹುದಾದರೂ, ಈಗಾಗಲೇ ಪಾಕಿಸ್ತಾನ ಜಾಗತಿಕವಾಗಿ ಏಕಾಂಗಿಯಾಗಿರುವುದರಿಂದ ಅಂತಾರಾಷ್ಟ್ರೀಯ ಬೆಂಬಲ ಗಳಿಸುವುದು ಕಾರ್ಯಸಾಧ್ಯವಲ್ಲ. ಒಂದಷ್ಟು ತಜ್ಞರ ಪ್ರಕಾರ, ಬೇಸಿಗೆಯ ಸಂದರ್ಭದಲ್ಲಿ ನೀರಿನ ಬೇಡಿಕೆ ಮತ್ತು ಅಭಾವ ಬಹಳಷ್ಟು ಹೆಚ್ಚುವುದರಿಂದ, ತಿಂಗಳುಗಳೊಳಗೆ ಪಾಕಿಸ್ತಾನದ ನೀರಿನ ಬಿಕ್ಕಟ್ಟು ತಾರಕಕ್ಕೇರಲಿದೆ.

ಭಾರತದ ಪಾಲಿಗೆ ಇದೊಂದು ಭರ್ಜರಿ ಜೂಜಿನಂತಹ ನಡೆಯಾಗಿದೆ. ಸಿಂಧೂ ಜಲ ಹಂಚಿಕೆ ಒಪ್ಪಂದದ ಅಮಾನತಿನಿಂದಾಗಿ ಪಾಕಿಸ್ತಾನ ಉಗ್ರಗಾಮಿ ಸಂಘಟನೆಗಳ ಮೇಲೆ ಮುಗಿಬೀಳುವುದು ಅನಿವಾರ್ಯವಾಗಲಿದೆ ಎಂದು ಭಾರತ ಸರ್ಕಾರ ಭಾವಿಸಿದೆ. ಅದರೊಡನೆ, ಪಾಕಿಸ್ತಾನದ ಜೊತೆಗಿನ ಉದ್ವಿಗ್ನತೆಗಳನ್ನು ನಿಭಾಯಿಸುತ್ತಲೇ ಭಾರತ ತನ್ನ ನಡೆಯನ್ನು ಜಗತ್ತಿನ ಮುಂದೆ ಸಮರ್ಥಿಸಲು ಸಾಧ್ಯವೇ ಎನ್ನುವುದು ಅದರ ರಾಜತಾಂತ್ರಿಕತೆಯ ಮುಂದಿರುವ ಸವಾಲಾಗಿದೆ.

ಇದನ್ನೂ ಓದಿ: ಭಾರತದ ವಾಯು ರಕ್ಷಣಾ ಬಲ ವರ್ಧಿಸಿದ ಮೂರು ಆಧುನಿಕ ಕ್ಷಿಪಣಿ ವ್ಯವಸ್ಥೆಗಳು

ಕಷ್ಟಕರವಾದ, ಆದರೆ ಅವಶ್ಯಕವಾದ ನಿರ್ಧಾರ?
ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ ಅಮಾನತು ಪಹಲ್ಗಾಮ್ ದುರಂತಕ್ಕೆ ಭಾರತದ ದಿಟ್ಟ ಮತ್ತು ಭಾವನಾತ್ಮಕ ಪ್ರತಿಕ್ರಿಯೆಯಾಗಿದೆ. ಭಾರತ ಪಾಕಿಸ್ತಾನ ಬೆಂಬಲಿತ ಉಗ್ರ ದಾಳಿಗಳನ್ನು ಇನ್ನು ಸಹಿಸಲು ಸಿದ್ಧವಿಲ್ಲ ಎಂಬ ಸಂದೇಶವನ್ನು ಇದು ರವಾನಿಸಿದೆ. ಪಾಕಿಸ್ತಾನಕ್ಕೆ ಇದರ ಪರಿಣಾಮಗಳು ಅತ್ಯಂತ ಗಂಭೀರವಾಗಿರಲಿದ್ದು, ಅದರ ಕೃಷಿ, ಆರ್ಥಿಕತೆಗಳು ಮತ್ತು ನದಿ ನೀರನ್ನು ಅವಲಂಬಿಸಿರುವ ಜನರು ನಲುಗಲಿದ್ದಾರೆ. ಇದು ಭಾರತಕ್ಕೆ ಮೇಲುಗೈ ಒದಗಿಸಿದೆ. ಅದರೆ, ಭಾರತದ ನಡೆ ಈಗಾಗಲೇ ಉದ್ವಿಗ್ನವಾಗಿರುವ ಸಂಬಂಧವನ್ನು ಇನ್ನಷ್ಟು ತೀವ್ರಗೊಳಿಸುವ ಅಪಾಯವಿದೆ.

ಈ ಬೆಳವಣಿಗೆ ಭಾರತೀಯರಿಗೆ ಏಕಕಾಲದಲ್ಲಿ ಹೆಮ್ಮೆ ಮತ್ತು ಚಿಂತೆ ಎರಡನ್ನೂ ನೀಡಲಿದೆ. ನಮ್ಮ ಸರ್ಕಾರ ಭಯೋತ್ಪಾದನೆಯ ವಿರುದ್ಧ ದಿಟ್ಟ ಕ್ರಮ ಕೈಗೊಳ್ಳುತ್ತಿದೆ ಎನ್ನುವುದು ಹೆಮ್ಮೆಯ ವಿಚಾರವಾಗಿದೆ. ಆದರೆ, ನೀರು ಜೀವನಾವಶ್ಯಕವಾಗಿದ್ದು, ತಮ್ಮ ಸರ್ಕಾರದ ದುರ್ನಡತೆಗೆ ಹೆಚ್ಚಿನ ಸಂಬಂಧ ಹೊಂದಿರದ ಲಕ್ಷಾಂತರ ಸಾಮಾನ್ಯ ಪಾಕಿಸ್ತಾನಿ ನಾಗರಿಕರು ನರಳುವಂತಾಗುವುದು ಚಿಂತೆಯ ವಿಚಾರವಾಗಿದೆ. ಆದರೆ, ಪ್ರಸ್ತುತ ಒಪ್ಪಂದದ ಅಮಾನತು ಪಾಕಿಸ್ತಾನ ತನ್ನ ನಡೆಗಳನ್ನು ಮರು ಪರಿಶೀಲಿಸುವಂತೆ ಮಾಡುವ ನಿರೀಕ್ಷೆಗಳಿವೆ. ಒಟ್ಟಾರೆಯಾಗಿ ಮುಂದಿನ ಹಾದಿ ಭಾರತ ಮತ್ತು ಪಾಕಿಸ್ತಾನ ಎರಡಕ್ಕೂ ಸುಗಮವಾಗಿಲ್ಲ.

(ಗಿರೀಶ್ ಲಿಂಗಣ್ಣ ಅವರು ವಿಜ್ಞಾನ ಬರಹಗಾರ, ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)

ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ಟಿಆರ್‌ಎಫ್ ಭಯೋತ್ಪಾದನಾ ಕ್ರೌರ್ಯ: ಭಾರತದ ಗುಪ್ತಚರ ಜಾಲದ ಸಾಮರ್ಥ್ಯ ಪರೀಕ್ಷೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: 5 ವರ್ಷಗಳಲ್ಲಿ 2400 ವಿಮಾನಗಳಲ್ಲಿ ದೋಷ: ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ
ಮಹಿಳೆಯರ ಸಾರಥ್ಯದಲ್ಲಿ ಭಾರತ, ನ್ಯೂಜಿಲೆಂಡ್‌ ವ್ಯಾಪಾರ ಒಪ್ಪಂದ!