
ಶ್ರೀನಗರ: ಏಪ್ರಿಲ್ 22ರ ಮಂಗಳವಾರ ಮಧ್ಯಾಹ್ನ ನಡೆದ ಉಗ್ರರ ದಾಳಿಯಲ್ಲಿ ಓರ್ವ ಕಾಶ್ಮೀರಿ ವ್ಯಕ್ತಿ ಸೇರಿದಂತೆ 26 ಜನರು ಮೃತರಾಗಿದ್ದಾರೆ. ಕಣಿವೆ ಪ್ರದೇಶದಿಂದ ಪ್ರವಾಸಿಗರಿರೋ ಸ್ಥಳಕ್ಕೆ ಬಂದ ಉಗ್ರರು, ಧರ್ಮ ಕೇಳಿ ಗುಂಡಿನ ದಾಳಿ ನಡೆಸಿದ್ದರು ಎಂದು ಸಂತ್ರಸ್ತ ಕುಟುಂಬಸ್ಥರು ಹೇಳಿದ್ದಾರೆ.ಅನುಮಾನ ಬಂದ್ರೆ ಪುರುಷರ ಪ್ಯಾಂಟ್ ಬಿಚ್ಚಿಸಿ ಧರ್ಮ ಖಚಿತಪಡಿಸಿಕೊಂಡು ಗುಂಡಿಕ್ಕಿದರು ಎಂಬ ಮಾತುಗಳು ಕೇಳಿ ಬಂದಿವೆ. ಈ ದಾಳಿಯಲ್ಲಿ ಕಾಶ್ಮೀರಿ ನಿವಾಸಿ, ಇಸ್ಲಾಂ ಧರ್ಮಕ್ಕೆ ಸೇರಿದ ಸೈಯದ್ ಆದಿಲ್ ಹುಸೈನ್‌ಗೂ ಉಗ್ರರು ಗುಂಡಿಕ್ಕಿ ಕೊಂದಿದ್ದಾರೆ.
ಮೃತ ಸೈಯದ್ ಆದಿಲ್ ಹುಸೈನ್ ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಹಾಪತಾನಗರದ ನಿವಾಸಿಯಾಗಿದ್ದು, ಪ್ರವಾಸಿಕೇಂದ್ರ ಪಹಲ್ಗಾಮ್‌ನಲ್ಲಿ ಕುದುರೆ ಸವಾರನಾಗಿ ಕೆಲಸ ಮಾಡಿಕೊಂಡಿದ್ದರು. ಇದೀಗ ದುಡಿಯುವ ಮಗನನ್ನು ಕಳೆದುಕೊಂಡು ಆದಿಲ್ ಕುಟಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.
ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮಾಧ್ಯಮಗಳೊಂದಿಗೆ ಮಾತನಾಡುವ ವೇಳೆ ಸೈಯದ್ ಆದಿಲ್ ಹುಸೈನ್ ಸಾವಿನ ಬಗ್ಗೆ ಹೇಳಿದ್ದಾರೆ. ಬಹುಶಃ ಆದಿಲ್, ಉಗ್ರರರನ್ನು ತಡೆಯುವ ಕೆಲಸ ಮಾಡಿರಬೇಕು ಮತ್ತು ಅವರ ಕೈಯಲ್ಲಿದ್ದ ಬಂದೂಕು ಕಿತ್ತುಕೊಳ್ಳಲು ಪ್ರಯತ್ನಿಸಿ ತನ್ನ ಜೊತೆಯಲ್ಲಿದ್ದ ಪ್ರವಾಸಿಗರ ರಕ್ಷಣೆ ಮುಂದಾಗಿರಬೇಕು. ಹಾಗಾಗಿ ಉಗ್ರರು ಸೈಯದ್ ಆದಿಲ್ ಹುಸೈನ್‌ನನ್ನು ಸಹ ಕೊಂದಿರಬಹುದು. ನಮ್ಮ ಸರ್ಕಾರ ಆದಿಲ್ ಕುಟುಂಬದ ಜೊತೆ ನಿಲ್ಲುತ್ತದೆ ಎಂದು ಹೇಳಿದ್ದಾರೆ.
ಕುಟುಂಬಕ್ಕೆ ಆಸರೆಯಾಗಿದ್ದ ಆದಿಲ್
ಮೃತ ಆದಿಲ್ ಕುಟುಂಬದ ಹಿರಿಯ ಮಗನಾಗಿದ್ದು, ಮನೆಗೆ ಆಸರೆಯಾಗಿದ್ದ. ತಂದೆ, ತಾಯಿ, ಪತ್ನಿ ಮತ್ತು ಇಬ್ಬರು ಕಿರಿಯ ಸೋದರರು ಮನೆಯಲ್ಲಿದ್ದು, ಆದಿಲ್ ಮಾತ್ರ ಕೆಲಸ ಮಾಡುತ್ತಿದ್ದರು. ಆದಿಲ್ ಮಗ ಸಹ ಇತ್ತೀಚೆಗೆ ಮೃತನಾಗಿದ್ದನು. ಬಿಬಿಸಿ ಜೊತೆ ಮಾತನಾಡಿರುವ ಆದಿಲ್ ತಂದೆ, ಪಹಲ್ಗಾಮ್‌ನಲ್ಲಿ ಕುದುರೆ ಓಡಿಸುವ ಕೆಲಸಕ್ಕೆ ಹೋಗಿದ್ದನು. ನಮಗೆ ಮಧ್ಯಾಹ್ನ 3ರ ವೇಳೆಗೆ ಗುಂಡಿನ ದಾಳಿ ನಡೆದ ವಿಷಯ ಗೊತ್ತಾಯ್ತು. ಕೂಡಲೇ ಫೋನ್ ಮಾಡಿದಾಗ ಆದಿಲ್ ಮೊಬೈಲ್ ಸ್ವಿಚ್ಛ್ ಆಫ್ ಆಗಿತ್ತು. 4 ಗಂಟೆಯ ನಂತರ ಮಗನ ಮೊಬೈಲ್ ಆನ್ ಆಯ್ತು. ಇದಾದ ಸ್ವಲ್ಪ ಸಮಯದ ಬಳಿಕ ಮಗನಿಗೆ ಅಪಘಾತವಾಗಿದೆ ಎಂಬ ವಿಷಯ ಗೊತ್ತಾಯ್ತು. ಕೂಡಲೇ ನಮ್ಮ ಮಕ್ಕಳು ಆಸ್ಪತ್ರೆಗೆ ಹೋದ್ರೆ ಮಗನ ಜೀವ ಹೋಗಿತ್ತು. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕೆಂದು ಆಗ್ರಹಿಸಿದರು.
ಇದನ್ನೂ ಓದಿ: ಲಾಡೆನ್‌ಗೆ ಆದ ಗತಿಯೇ ಪಾಕ್ ಸೇನಾ ಮುಖ್ಯಸ್ಥನಿಗೂ ಆಗಬೇಕು: ತೀವ್ರ ಆಕ್ರೋಶ ಹೊರಹಾಕಿದ ಅಮೆರಿಕಾ
ಅಂತ್ಯಕ್ರಿಯೆಯಲ್ಲಿ ಸಿಎಂ ಭಾಗಿ
ಬುಧವಾರ ಸಂಜೆಯೇ ಆದಿಲ್ ಅಂತ್ಯಕ್ರಿಯೆ ನಡೆಸಲಾಯ್ತು. ಸೈಯದ್ ಆದಿಲ್ ಹುಸೈನ್ ಅಂತ್ಯಕ್ರಿಯೆಯಲ್ಲಿ ಸಿಎಂ ಅಬ್ದುಲ್ಲಾ ಸೇರಿದಂತೆ ಹಲವರು ಭಾಗಿಯಾಗಿದ್ದರು. ಸೈಯದ್ ಆದಿಲ್ ಸಾವಿನಿಂದ ಇಡೀ ಊರಿನಲ್ಲಿ ಮೌನ ಆವರಿಸಿದೆ. ಅಂತ್ಯಕ್ರಿಯೆ ಬಳಿಕ ಮಾತನಾಡಿದ ಸಿಎಂ, ಈ ಘಟನೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ಆಘಾತಕ್ಕೆ ಒಳಗಾದವರಿಗೆ ನಮ್ಮ ಸಹಾನುಭೂತಿ ಇದೆ ಎಂದಿದ್ದಾರೆ.
10 ಲಕ್ಷ ಪರಿಹಾರ
ಉಗ್ರರ ದಾಳಿಯಲ್ಲಿ ಮೃತರ ಕುಟುಂಬಗಳಿಗೆ ಸಿಎಂ ಒಮರ್ ಅಬ್ದುಲ್ಲಾ ತಲಾ 10 ಲಕ್ಷ ರೂಪಾಯಿ ಪರಿಹಾರ ನೀಡುವದಾಗಿ ಘೋಷಣೆ ಮಾಡಿದ್ದಾರೆ. ಪಹಲ್ಗಾಮ್ ಘಟನೆಯಿಂದ ನಾನು ತೀವ್ರವಾಗಿ ಆಘಾತಕ್ಕೊಳಗಾಗಿ ದುಃಖಿತನಾಗಿದ್ದೇನೆ. ಸಂತ್ರಸ್ತ ಕುಟುಂಬಸ್ಥರಿಗೆ ಎಷ್ಟೇ ಹಣ ನೀಡಿದ್ರೆ ಮೃತರನ್ನು ಕರೆದುಕೊಂಡು ಬರಲು ಸಾಧ್ಯವಿಲ್ಲ. ಬೆಂಬಲ ಮತ್ತು ಒಗ್ಗಟ್ಟಿನ ಸಂಕೇತವಾಗಿ, ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿಗಳ ಪರಿಹಾರ ನೀಡಲಾಗುತ್ತದೆ. ಅಮಾಯಕ ನಾಗರಿಕರ ಮೇಲಿನ ದೌರ್ಜನ್ಯದ ಈ ಅಮಾನುಷ ಕೃತ್ಯಕ್ಕೆ ನಮ್ಮ ಸಮಾಜದಲ್ಲಿ ಸ್ಥಾನವಿಲ್ಲ, ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ಸಿಎಂ ಅಬ್ದುಲ್ಲಾ ಹೇಳಿದ್ದಾರೆ.
ಇದನ್ನೂ ಓದಿ: Shimla Agreement: 1972 ರ ಶಿಮ್ಲಾ ಒಪ್ಪಂದ ಮುರಿಯಲು ಪಾಕಿಸ್ತಾನ ಚಿಂತನೆ: ಗಡಿಯಲ್ಲಿ ಯುದ್ಧದ ಕಾರ್ಮೋಡ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ