
ಇಲಿಗೆ ಆಹಾರವಾಯ್ತು ಪೋಷಕರು ತೊರೆದ ಮಗು:
ಇಂದೋರ್: ಆ ಕಂದ ಅದೇನು ಪಾಪ ಮಾಡಿತ್ತೋ ಏನೋ? ಹುಟ್ಟಿದ ಕೂಡಲೇ ಆ ಹೆಣ್ಣು ಮಗುವನ್ನು ಪೋಷಕರು ತೊರೆದಿದ್ದರು. ಹುಟ್ಟಿನಿಂದಲೇ ಹಲವು ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದ ಆ ಮಗುವನ್ನು ಪೋಷಕರು ತೊರೆದ ನಂತರ ಆಸ್ಪತ್ರೆಯವೇ ಆಸ್ಪತ್ರೆಯ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಇರಿಸಿ ಆ ಮಗುವಿಗೆ ಚಿಕಿತ್ಸೆ ನೀಡಲಾಗ್ತಿತ್ತು. ಆದರೆ ಪೋಷಕರು ತೊರೆದ ಆ ಮಗುವಿನ ಮೇಲೆ ಎನ್‌ಐಸಿಯುನಲ್ಲೇ ಇಲಿಯೂ ದಾಳಿ ಮಾಡಿ ಮಗುವಿನ ಭುಜ ಹಾಗೂ ಬೆರಳುಗಳನ್ನು ಕಚ್ಚಿ ಗಾಯಗೊಳಿಸಿತ್ತು. ಪರಿಣಾಮ ಮಗು ಸಾವನ್ನಪ್ಪಿದ್ದು, ಈ ಘಟನೆ ಮನಕಲುಕುವುದರ ಜೊತೆ ಅತ್ಯಂತ ಸ್ವಚ್ಛತೆಯಿಂದ ಇರಬೇಕಾದ ಆಸ್ಪತ್ರೆಯ ಎನ್‌ಐಸಿಯುನಲ್ಲೂ ಇಲಿಗಳ ಹಾವಳಿ ವಿಚಾರ ವರದಿಯಾದ ನಂತರ ಆಸ್ಪತ್ರೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಅಂದಹಾಗೆ ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಇಂದೋರ್‌ನ ಅತ್ಯಂತ ಪ್ರಸಿದ್ದ ಹಾಗೂ ಅತ್ಯಂತ ದೊಡ್ಡ ಸರ್ಕಾರಿ ಆಸ್ಪತ್ರೆಯಾದ ಮಹಾರಾಜ ಯಶ್ವಂತ್ ರಾವ್ ಆಸ್ಪತ್ರೆಯಲ್ಲಿ. ನಿಗದಿಗಿಂತ ಕಡಿಮೆ ತೂಕವಿದ್ದ ಹೆಣ್ಣು ಮಗು ಕೇವಲ 1.2 ಕೇಜಿ ತೂಗುತ್ತಿದ್ದು, ಅದರ ಹಿಮೋಗ್ಲೋಬಿನ್ ಪ್ರಮಾಣವೂ ಕೂಡ ಬಹಳ ಕಡಿಮೆ ಇತ್ತು ಅಲ್ಲದೇ ಶ್ವಾಸಕೋಶದ ತೊಂದರೆಯಿಂದಲೂ ಈ ಮಗು ಬಳಲುತ್ತಿತ್ತಲ್ಲದೇ ಹುಟ್ಟಿನಿಂದಲೇ ಹಲವು ಆರೋಗ್ಯ ಸಮಸ್ಯೆ ಇದ್ದ ಕಾರಣ ಈ ಮಗುವನ್ನು ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಇಡಲಾಗಿತ್ತು. ಈ ಮಗುವೂ ಸೇರಿದಂತೆ ಒಟ್ಟು ಎರಡು ನವಜಾತ ಶಿಶುಗಳಿಗೆ ಇಲ್ಲಿ ಇಲಿಗಳು ಕಚ್ಚಿವೆ. ಈ ಇಬ್ಬರು ಮಕ್ಕಳಿಗೆ, ಶಿಶುಗಳ ಶಸ್ತ್ರಚಿಕಿತ್ಸೆ ವಿಭಾಗದಿಂದ ಚಿಕಿತ್ಸೆ ನೀಡಲಾಗುತ್ತಿತ್ತು.
ಹೆಣ್ಣು ಮಗುವನ್ನು ಆಸ್ಪತ್ರೆಯಲ್ಲೇ ತೊರೆದು ಹೋಗಿದ್ದ ಪೋಷಕರು:
ಈಗ ಸಾವನ್ನಪ್ಪಿದ ಹೆಣ್ಣು ಮಗು ಜನಿಸಿ ಕೇವಲ 6 ದಿನಗಳಾಗಿತ್ತು ಅಷ್ಟೇ, ಇಂದೋರ್ ಜಿಲ್ಲೆಗೆ ಹೊಂದಿಕೊಂಡಿರುವ ಖರ್ಗೋನೆ ಜಿಲ್ಲೆಯ ಪೋಷಕರು ಈ ಮಗುವನ್ನು ಆಸ್ಪತ್ರೆಯಲ್ಲೇ ತೊರೆದು ಹೋಗಿದ್ದರು.ಆಕೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ವೆಂಟಿಲೇಟರ್ ಬೆಂಬಲದಲ್ಲಿದ್ದರು. ಮಗು ಸೆಪ್ಟಿಸೆಮಿಯಾದಿಂದ ಸಾವನ್ನಪ್ಪಿದೆ ಇಲಿ ಕಚ್ಚಿರುವುದು ಮಗುವಿನ ಸಾವಿಗೆ ಕಾರಣ ಅಲ್ಲ, ಏಕೆಂದರೆ ಗಾಯವು ತುಂಬಾ ಚಿಕ್ಕದಾಗಿತ್ತು ಎಂದು ಎಂಜಿಎಂ ವೈದ್ಯಕೀಯ ಕಾಲೇಜಿನ ಡೀನ್ ಡಾ. ಅರವಿಂದ್ ಘಂಘೋರಿಯಾ ಹೇಳಿದ್ದಾರೆ.
ಹಾಗೆಯೇ ಇಲ್ಲಿಯಿಂದ ಕಚ್ಚಲ್ಪಟ್ಟ ಮತ್ತೊಂದು ಮಗುವಿಗೆ ಸರ್ಜರಿ ಮಾಡಲಾಗಿದ್ದು, ವೆಂಟಿಲೇಟರ್ ಬೆಂಬಲದೊಂದಿಗೆ ಆ ಮಗುವಿನ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ಈ ಮಗು ದೇವಾಸ್ ಜಿಲ್ಲೆಯ ಪೋಷಕರದ್ದು ಎಂದು ಆಸ್ಪತ್ರೆ ಮಾಹಿತಿ ನೀಡಿದೆ. ಮಕ್ಕಳ ತೀವ್ರ ನಿಗಾ ಘಟಕದಲ್ಲಿ ಇಲಿಗಳು ಓಡಾಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆದರೆ ಐಸಿಯುನಲ್ಲಿ ಇಲಿಗಳ ಕಾಟ ಕಳೆದ 4ರಿಂದ 5 ದಿನಗಳಿಂದ ಮಾತ್ರ ಇತ್ತು ಎಂದು ವೈದ್ಯಕೀಯ ಕಾಲೇಜು ಆಸ್ಪತ್ರೆ ಡೀನ್ಡಾ. ಘಂಘೋರಿಯಾ ವಾದಿಸಿದರು.
ವೈದ್ಯಕೀಯ ಸಿಬ್ಬಂದಿಗಳ ಅಮಾನತು
ಇನ್ನು ಈ ಸ್ಥಳದಲ್ಲಿ ಇಲಿಗಳು ಓಡಾಡುತ್ತಿರುವುದನ್ನು ಮೇಲಾಧಿಕಾರಿಗಳ ಗಮನಕ್ಕೆ ತರದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಇಬ್ಬರು ನರ್ಸಿಂಗ್ ಅಧಿಕಾರಿಗಳಾದ ಆಕಾಂಶಾ ಬೆಂಜಮಿನ್ ಮತ್ತು ಶ್ವೇತಾ ಚೌಹಾಣ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ಹೇಳಿದರು. ಕಳೆದ ಕೆಲವು ದಿನಗಳಿಂದ ಐಸಿಯುನಲ್ಲಿ ಇಲಿಗಳನ್ನು ನೋಡಿದ್ದರೂ ಆಸ್ಪತ್ರೆ ಆಡಳಿತಕ್ಕೆ ಈ ಬಗ್ಗೆ ಮಾಹಿತಿ ನೀಡಲು ವಿಫಲರಾಗಿದ್ದಾರೆ ಎಂದು ಈ ಇಬ್ಬರನ್ನು ಅಮಾನತು ಮಾಡಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಮುಖ್ಯ ನರ್ಸ್ ಕಲಾವತಿ ಬಾಲವಿ, ಮಕ್ಕಳ ಐಸಿಯು ಉಸ್ತುವಾರಿ ಪ್ರವೀಣ ಸಿಂಗ್ ಮತ್ತು ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥೆ ಡಾ. ಮನೋಜ್ ಜೋಶಿ ಅವರಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಅವರ ಉತ್ತರ ಮತ್ತು ನಡೆಯುತ್ತಿರುವ ತನಿಖೆಯ ಸಂಶೋಧನೆಗಳನ್ನು ಆಧರಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಡೀನ್ ಹೇಳಿದ್ದಾರೆ. ಇವರ ಜೊತೆಗೆ ನರ್ಸಿಂಗ್ ಸೂಪರಿಂಟೆಂಡೆಂಟ್ ಮಾರ್ಗರೇಟ್ ಜೋಸೆಫ್ ಅವರನ್ನು ಅವರ ಸ್ಥಾನದಿಂದ ತೆಗೆದು ಹಾಕಿ ಅವರ ಜಾಗಕ್ಕೆ ದಯಾವತಿ ದಯಾಳ್ ಅವರನ್ನು ನೇಮಿಸಲಾಗಿದೆ. ಹಾಗೆಯೇ ಆಸ್ಪತ್ರೆಯಲ್ಲಿ ಕೀಟ ನಿಯಂತ್ರಣದ ಜವಾಬ್ದಾರಿ ಹೊತ್ತಿದ್ದ ಕಂಪನಿಗೆ ರೂ.1 ಲಕ್ಷ ದಂಡ ವಿಧಿಸಲಾಗಿದೆ.
ಇತ್ತೀಚಿನ ಭಾರೀ ಮಳೆಯಿಂದಾಗಿ ಆಸ್ಪತ್ರೆ ಕಟ್ಟಡದ ಬಳಿ ಉಂಟಾದ ಪ್ರವಾಹವು ಇಲಿಗಳ ಹಾವಳಿಗೆ ಕಾರಣವಾಗಿರಬಹುದು ಎಂದು ನಡೆಯುತ್ತಿರುವ ತನಿಖೆ ಸೂಚಿಸುತ್ತದೆ. ಐದು ವೈದ್ಯರು ಮತ್ತು ನರ್ಸಿಂಗ್ ಅಧಿಕಾರಿಯನ್ನು ಒಳಗೊಂಡ ಉನ್ನತ ಮಟ್ಟದ ತನಿಖಾ ಸಮಿತಿಯನ್ನು ವೈದ್ಯಕೀಯ ಕಾಲೇಜು ರಚಿಸಿದೆ. ಒಂದು ವಾರದೊಳಗೆ ತನ್ನ ವರದಿಯನ್ನು ಸಲ್ಲಿಸಲು ಸಮಿತಿಯನ್ನು ಕೇಳಲಾಗಿದೆ ಎಂದು ಡಾ. ಘಂಘೋರಿಯಾ ಹೇಳಿದ್ದಾರೆ. ಒಟ್ಟಿನಲ್ಲಿ ಪೋಷಕರಿಂದಲೂ ಆಸ್ಪತ್ರೆಯಿಂದಲೂ ನಿರ್ಲಕ್ಷ್ಯಕ್ಕೊಳಗಾದ ಕಂದನೊಂದು ತಾನು ಮಾಡದ ತಪ್ಪಿಗೆ ಜೀವ ತೆತ್ತಿದೆ.
ಇದನ್ನೂ ಓದಿ: ಪ್ರವಾಸಿಗರ ಗೇಲಿ ಮಾಡ್ತಿದ್ದ ಗಿಳಿಗಳು: ಗಿಳಿಗಳ ಕೆಟ್ಟ ಮಾತು ಕೇಳಲಾಗದೇ ಪ್ರತ್ಯೇಕಗೊಳಿಸಿದ ಝೂ ಸಿಬ್ಬಂದಿ..
ಇದನ್ನೂ ಓದಿ: ವಿದೇಶಿ ಪ್ರವಾಸಿಗರಿಂದಲೂ ಲಂಚ ಪಡೆದು ದೇಶದ ಮರ್ಯಾದೆ ಕಳೆದ ಟ್ರಾಫಿಕ್ ಪೊಲೀಸರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ