
ಪಟಿಯಾಲ (ಸೆ.03): ಅತ್ಯಾ8ರ ಆರೋಪದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಪಂಜಾಬ್‌ನ ಆಮ್ ಆದ್ಮಿ ಪಕ್ಷದ ಶಾಸಕನೊಬ್ಬ, ಪೊಲೀಸರಿಂದ ಸಿನಿಮೀಯ ರೀತಿಯಲ್ಲಿ ತಪ್ಪಿಸಿಕೊಂಡು ಪರಾರಿಯಾದ ಘಟನೆ ಮಂಗಳವಾರ ನಡೆದಿದೆ. ಈ ಕೃತ್ಯದ ವೇಳೆ ಶಾಸಕನ ಆಪ್ತರು ಪೊಲೀಸರ ಮೇಲೇ ಗುಂಡು, ಕಲ್ಲಿನ ದಾಳಿ ನಡೆಸುವ ಮೂಲಕ ತಮ್ಮ ನಾಯಕನನ್ನು ಬಿಡಿಸಿಕೊಂಡು ಹೋಗಿದ್ದಾರೆ.
ಆಗಿದ್ದೇನು?: ಪಂಜಾಬ್‌ನ ಸನೂರ್ ಕ್ಷೇತ್ರದ ಆಪ್ ಶಾಸಕ ಹರ್ಮಿತ್ ಸಿಂಗ್ ತನ್ನನ್ನು ತಾನು ವಿಚ್ಛೇದಿತ ಎಂದು ಹೇಳಿ, 2021ರಲ್ಲಿ ನನ್ನನ್ನು ಮದುವೆಯಾಗಿದ್ದಾರೆ. ಬಳಿಕ ನನ್ನ ಮೇಲೆ ನಿರಂತರ ಲೈಂಗಿಕ ಶೋಷಣೆ ಎಸಗಿದ್ದಾರೆ ಎಂದು ಮಹಿಳೆಯೊಬ್ಬರು ದೂರಿದ್ದರು. ಈ ಹಿನ್ನೆಲೆಯಲ್ಲಿ ಹರ್ಯಾಣದ ಕರ್ನಲ್ ಜಿಲ್ಲೆಯ ಮನೆಯೊಂದರ ಮೇಲೆ ದಾಳಿ ನಡೆಸಿದ ಪಂಜಾಬ್ ಪೊಲೀಸರು, ಹರ್ಮಿತ್‌ಸಿಂಗ್‌ನನ್ನು ಬಂಧಿಸಿ ಕರೆದೊಯ್ಯುತ್ತಿದ್ದರು. ಈ ವೇಳೆ ಗುಂಪೊಂದು ಏಕಾಏಕಿ ಪೊಲೀಸರ ಮೇಲೆ ಕಲ್ಲು ಮತ್ತು ಗುಂಡಿನ ದಾಳಿ ನಡೆಸಿ ಅವರನ್ನು ವಿಚಲಿತಗೊಳಿಸಿದೆ.
ಈ ವೇಳೆ ಪೊಲೀಸರ ವಶದಲ್ಲಿದ್ದ ಹರ್ಮಿತ್ ಅವರ ಬಂಧನದಿಂದ ತಪ್ಪಿಸಿಕೊಂಡು, ತಮ್ಮ ಆಪ್ತರು ತಂದಿದ್ದ ಕಾರು ಏರಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ವೇಳೆ ಕಾರು ಅಡ್ಡಗಟ್ಟಲು ಮುಂದಾದ ಪೊಲೀಸರಿಗೆ ಶಾಸಕನಿದ್ದ ಕಾರು ಡಿಕ್ಕಿ ಹೊಡೆದ ಕಾರಣ ಅವರು ಗಾಯಗೊಂಡಿದ್ದಾರೆ. ಈ ನಡುವೆ ತಮ್ಮ ವಿರುದ್ಧ ರೇಪ್ ಆರೋಪದ ಕೇಸು ದಾಖಲಾದ ಬೆನ್ನಲ್ಲೇ ಫೇಸ್‌ಬುಕ್‌ನಲ್ಲಿ ಲೈವ್ ಬಂದಿದ್ದ ಶಾಸಕ ಹರ್ಮೀತ್, ತಮ್ಮದೇ ಆಡಳಿತದ ಪಂಜಾಬ್ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ. ಅಲ್ಲದೆ ದೆಹಲಿಯಲ್ಲಿ ಇರುವ ಆಪ್ ನಾಯಕತ್ವವು ಅಕ್ರಮವಾಗಿ ಪಂಜಾಬ್ ಸರ್ಕಾರವನ್ನು ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
ಏನಿದು ಪ್ರಕರಣ?
- ಪಂಜಾಬ್‌ನ ಆಪ್ ಶಾಸಕ ಹರ್ಮಿತ್ ಸಿಂಗ್ ಮೇಲೆ ಅತ್ಯಾ8ರ ಆರೋಪ
- 2021ರಲ್ಲಿ ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಹೊರಿಸಿದ್ದರು
- ಹರ್ಯಾಣದ ಕರ್ನಾಲ್ ಜಿಲ್ಲೆಯ ಮನೆಯಲ್ಲಿ ನಿನ್ನೆ ಶಾಸಕನ ಬಂಧನ
- ಆವರನ್ನು ಠಾಣೆಗೆ ಒಯ್ಯುವಾಗ ಬೆಂಬಲಿಗರಿಂದ ಪೊಲೀಸರ ಮೇಲೆ ಗುಂಡು
- ಈ ವೇಳೆ ಪೊಲೀಸರ ವಶದಲ್ಲಿದ್ದ ಹರ್ಮಿತ್, ಬೇರೆ ಕಾರಿನಲ್ಲಿ ಪರಾರಿ
- ಬಳಿಕ ಆಪ್ ಸರ್ಕಾರದ ಮೇಲೆ ಫೇಸ್‌ಬುಕ್ ಲೈವಲ್ಲಿ ಶಾಸಕನ ವಾಗ್ದಾಳಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ