ಹಫೀಜ್‌ ಸಯೀದ್‌ನನ್ನು ನಮಗೆ ಒಪ್ಪಿಸಿ, ಆಗ ಎಲ್ಲಾ ಸರಿ ಆಗುತ್ತದೆ: ಪಾಕಿಸ್ತಾನಕ್ಕೆ ಸಂದೇಶ ನೀಡಿದ ಭಾರತದ ರಾಯಭಾರಿ!

Published : May 20, 2025, 10:24 AM IST
ಹಫೀಜ್‌ ಸಯೀದ್‌ನನ್ನು ನಮಗೆ ಒಪ್ಪಿಸಿ, ಆಗ ಎಲ್ಲಾ ಸರಿ ಆಗುತ್ತದೆ: ಪಾಕಿಸ್ತಾನಕ್ಕೆ ಸಂದೇಶ ನೀಡಿದ ಭಾರತದ ರಾಯಭಾರಿ!

ಸಾರಾಂಶ

ಪಾಕಿಸ್ತಾನದ ವಿರುದ್ಧದ ಆಪರೇಷನ್ ಸಿಂಧೂರ್‌ಗೆ ಭಾರತ ಸದ್ಯಕ್ಕೆ ವಿರಾಮ ನೀಡಿದೆ. ಆದರೆ ಭಯೋತ್ಪಾದನೆ ವಿರುದ್ಧದ ಹೋರಾಟ ಮುಂದುವರಿಯಲಿದೆ ಎಂದು ಭಾರತದ ರಾಯಭಾರಿ ಜೆಪಿ ಸಿಂಗ್ ಹೇಳಿದ್ದಾರೆ. ಹಫೀಜ್ ಸಯೀದ್ ಸೇರಿದಂತೆ ಭಯೋತ್ಪಾದಕರನ್ನು ಹಸ್ತಾಂತರಿಸುವಂತೆ ಪಾಕಿಸ್ತಾನಕ್ಕೆ ಒತ್ತಾಯಿಸಿದ್ದಾರೆ. ಭಯೋತ್ಪಾದನೆ ನಿಲ್ಲದಿದ್ದರೆ ಸಿಂಧೂ ಜಲ ಒಪ್ಪಂದ ಮುಂದುವರಿಯುವುದಿಲ್ಲ ಎಂದಿದ್ದಾರೆ. ಭಯೋತ್ಪಾದನೆ ವಿರುದ್ಧ ಜಾಗತಿಕ ಸಹಕಾರ ಅಗತ್ಯವೆಂದೂ ಅವರು ಹೇಳಿದ್ದಾರೆ.

ನವದೆಹಲಿ (ಮೇ.20): ಪಾಕಿಸ್ತಾನದ ವಿರುದ್ಧ ಭಾರತ ನಡೆಸುತ್ತಿರುವ ಆಪರೇಷನ್ ಸಿಂಧೂರ್‌ಗೆ ಸದ್ಯಕ್ಕೆ ವಿರಾಮ ನೀಡಲಾಗಿದೆ. ಆದರೆ, ಭಾರತ ಇದನ್ನು ನಿಲ್ಲಿಸಿಲ್ಲ ಎಂದು ಇಸ್ರೇಲ್‌ನಲ್ಲಿರುವ ಭಾರತದ ರಾಯಭಾರಿ ಜೆಪಿ ಸಿಂಗ್‌ ಒತ್ತಿ ಹೇಳಿದ್ದಾರೆ. 26/11 ಮುಂಬೈ ಭಯೋತ್ಪಾದಕ ದಾಳಿಯ ಪ್ರಮುಖ ಆರೋಪಿ ತಹಾವೂರ್‌ ಹುಸೇನ್‌ ರಾಣಾನನ್ನು ಅಮೆರಿಕ ಹೇಗೆ ಭಾರತಕ್ಕೆ ಹಸ್ತಾಂತರ ಮಾಡಿತೋ ಅದೇ ರೀತಿಯಲ್ಲಿ ಭಾರತಕ್ಕೆ ಬೇಕಾದ ಮೋಸ್ಟ್‌ ವಾಂಟೆಡ್‌ ಉಗ್ರನಾಗಿರುವ ಹಫೀಜ್‌ ಸಯೀದ್‌, ಸಾಜಿದ್‌ ಮಿರ್‌,  ಝಕಿಯುರ್ ರೆಹಮಾನ್ ಲಖ್ವಿಯನ್ನು ಹಸ್ತಾಂತರಿಸುವಂತೆ ಅವರು ಇಸ್ಲಾಮಾಬಾದ್ ಅನ್ನು ಒತ್ತಾಯಿಸಿದ್ದಾರೆ.

ಸೋಮವಾರ ಇಸ್ರೇಲಿ ಟಿವಿ ಚಾನೆಲ್ i24 ಗೆ ನೀಡಿದ ಸಂದರ್ಶನದಲ್ಲಿ ಸಿಂಗ್, ಕಾರ್ಯಾಚರಣೆಯು ಆರಂಭದಲ್ಲಿ ಪಾಕಿಸ್ತಾನದಲ್ಲಿನ ಭಯೋತ್ಪಾದಕ ಮೂಲಸೌಕರ್ಯವನ್ನು ಭಾರತ ಗುರಿಯಾಗಿಸಿಕೊಂಡಿತ್ತು. ಏಪ್ರಿಲ್ 22 ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಯೇ ಇವೆಲ್ಲದಕ್ಕೂ ಮೂಲ ಕಾರಣ. ಭಯೋತ್ಪಾದಕರು ಅಲ್ಲಿ ಪ್ರವಾಸಿಗರು ಧರ್ಮದ ಆಧಾರದ ಮೇಲೆ ಕೊಂದರು. ಅವರನ್ನು ಕೊಲ್ಲುವ ಮೊದಲು ಅವರ ಧರ್ಮವನ್ನು ಕೇಳಿದ್ದಾರೆ. ಇಲ್ಲಿ 26 ಮಾಯಕ ಜೀವಗಳು ಬಲಿಯಾದವು ಎಂದು ಭಾರತೀಯ ರಾಯಭಾರಿ ಹೇಳಿದ್ದಾರೆ.

"ಭಾರತದ ಕಾರ್ಯಾಚರಣೆ ಭಯೋತ್ಪಾದಕ ಗುಂಪುಗಳು ಮತ್ತು ಅವುಗಳ ಮೂಲಸೌಕರ್ಯಗಳ ವಿರುದ್ಧವಾಗಿತ್ತು, ಇದಕ್ಕೆ ಪಾಕಿಸ್ತಾನವು ಭಾರತೀಯ ಮಿಲಿಟರಿ ಸ್ಥಾಪನೆಗಳ ಮೇಲೆ ದಾಳಿ ಮಾಡುವ ಮೂಲಕ ಪ್ರತಿಕ್ರಿಯಿಸಿತು" ಎಂದು ಸಿಂಗ್ ಹೇಳಿದರು. ಕದನ ವಿರಾಮ ಜಾರಿಯಲ್ಲಿದೆಯೇ ಎಂದು ಕೇಳಿದಾಗ, ಸಿಂಗ್ ಅದನ್ನು ದೃಢಪಡಿಸಿದ್ದು ಮಾತ್ರವಲ್ಲದೆ, ಆದರೆ ಭಾರತ ಆಪರೇಷನ್ ಸಿಂಧೂರ್ ಅನ್ನು ಮಾತ್ರ ವಿರಾಮಗೊಳಿಸಿದೆ ಎಂದು ಪುನರುಚ್ಚರಿಸಿದರು.

"ಭಯೋತ್ಪಾದನೆಯ ವಿರುದ್ಧದ ಹೋರಾಟ ಮುಂದುವರಿಯುತ್ತದೆ. ನಾವು ನ್ಯೂ ನಾರ್ಮಲ್‌ಅನ್ನು ಘೋಷಣೆ ಮಾಡಿದ್ದೇವೆ. ಅದರಂತೆ ನಾವು ಆಕ್ರಮಣಕಾರಿ ತಂತ್ರವನ್ನು ಅನುಸರಿಸುತ್ತೇವೆ. ಭಯೋತ್ಪಾದಕರು ಎಲ್ಲೇ ಇದ್ದರೂ, ನಾವು ಆ ಭಯೋತ್ಪಾದಕರನ್ನು ಕೊಲ್ಲಬೇಕು ಮತ್ತು ಅವರ ಮೂಲಸೌಕರ್ಯವನ್ನು ನಾಶಪಡಿಸಬೇಕು. ಆದ್ದರಿಂದ ಇದು ಇನ್ನೂ ಮುಗಿದಿಲ್ಲ ಆದರೆ ನಾವು ಮಾತನಾಡುವಾಗ ಕದನ ವಿರಾಮ ಇನ್ನೂ ಹಾಗೆಯೇ ಇದೆ" ಎಂದು ಸಿಂಗ್ ಪ್ರತಿಪಾದಿಸಿದರು.

ಮೇ 10 ರಂದು ಪಾಕಿಸ್ತಾನದ ನೂರ್ ಖಾನ್ ನೆಲೆಯ ಮೇಲೆ ಭಾರತ ನಡೆಸಿದ ದಾಳಿಯನ್ನು ಅವರು "ಗೇಮ್ ಚೇಂಜರ್" ಎಂದು ಬಣ್ಣಿಸಿದರು, ಇದು ಇಡೀ ಇಸ್ಲಾಮಾಬಾದ್‌ನಲ್ಲಿ ಭೀತಿಯನ್ನು ಉಂಟುಮಾಡಿತು. ಸಿಂಗ್ ಅವರ ಪ್ರಕಾರ, ದಾಳಿಯ ನಂತರ ಪಾಕಿಸ್ತಾನದ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (ಡಿಜಿಎಂಒ) ತಮ್ಮ ಭಾರತದ ಡಿಜಿಎಂಓಅನ್ನು ಸಂಪರ್ಕಿಸಿ ಕದನ ವಿರಾಮವನ್ನು ಕೋರಿದ್ದರು ಎಂದಿದ್ದಾರೆ.

ಸಿಂಧೂ ಜಲ ಒಪ್ಪಂದವನ್ನು (ಐಡಬ್ಲ್ಯೂಟಿ) ಅಮಾನತುಗೊಳಿಸುವುದು "ಯುದ್ಧದ ಕೃತ್ಯ" ಎಂಬ ಪಾಕಿಸ್ತಾನದ ಹೇಳಿಕೆಯನ್ನು ಉಲ್ಲೇಖಿಸಿದ ಸಿಂಗ್, ಒಪ್ಪಂದದ ಮಾರ್ಗದರ್ಶಿ ತತ್ವಗಳಾದ ಸದ್ಭಾವನೆ ಮತ್ತು ಸ್ನೇಹವನ್ನು ಪಾಕಿಸ್ತಾನ ಎಂದಿಗೂ ಎತ್ತಿಹಿಡಿಯಲಿಲ್ಲ ಎಂದು ಹೇಳಿದರು.

"ನಾವು ನೀರು ಹರಿಯಲು ಬಿಟ್ಟೆವು, ಆದರೆ ಪಾಕಿಸ್ತಾನ ಭಯೋತ್ಪಾದನೆಯನ್ನು ಭಾರತದೊಳಗೆ ಹರಿಯಲು ಬಿಟ್ಟಿತು" ಎಂದು ಅವರು ಹೇಳಿದರು. "ನಮ್ಮ ಪ್ರಧಾನಿ ಈಗಾಗಲೇ ಸ್ಪಷ್ಟವಾಗಿ, 'ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

ಪಾಕಿಸ್ತಾನ ಭಯೋತ್ಪಾದನೆಗೆ ನಿರಂತರ ಬೆಂಬಲ ನೀಡುತ್ತಿರುವುದರಿಂದ ಭಾರತದಲ್ಲಿ ಸಾರ್ವಜನಿಕರು ಹತಾಶೆಗೊಂಡ ಕಾರಣ ಒಪ್ಪಂದವನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಿಂಗ್ ಹೇಳಿದರು. "ಐಡಬ್ಲ್ಯೂಟಿ ಸ್ಥಗಿತಗೊಂಡಿದ್ದರೂ, ಮತ್ತೊಂದು ಐಡಬ್ಲ್ಯೂಟಿ ಚಾಲನೆಯಲ್ಲಿದೆ. ಅದು ಭಾರತದ ಭಯೋತ್ಪಾದನೆಯ ವಿರುದ್ಧದ ಯುದ್ಧ" ಎಂದು ಹೇಳಿದ್ದಾರೆ.

ಹಲವು ವರ್ಷಗಳ ಪುರಾವೆಗಳು ಮತ್ತು ಅಂತರರಾಷ್ಟ್ರೀಯ ಒತ್ತಡದ ಹೊರತಾಗಿಯೂ, ಭಾರತದಲ್ಲಿ ಪ್ರಮುಖ ದಾಳಿಗಳಿಗೆ ಕಾರಣರಾದ ಲಖ್ವಿ, ಹಫೀಜ್ ಸಯೀದ್ ಮತ್ತು ಸಾಜಿದ್ ಮಿರ್ ಅವರಂತಹ ಭಯೋತ್ಪಾದಕರು ನಿರಂತರವಾಗಿ ಮುಕ್ತವಾಗಿ ಓಡಾಡಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ. "ನಾವು ದಾಖಲೆಗಳು ಮತ್ತು ತಾಂತ್ರಿಕ ಮಾಹಿತಿಯನ್ನು ನೀಡಿದ್ದೇವೆ. ಅಮೆರಿಕ ಪುರಾವೆಗಳನ್ನು ಹಂಚಿಕೊಂಡಿದೆ. ಆದರೂ, ಈ ಟೆರರಿಸ್ಟ್‌ಳು ಮುಕ್ತವಾಗಿ ತಿರುಗಾಡುತ್ತಿದ್ದಾರೆ. ಅಮೆರಿಕ ರಾಣಾನನ್ನು ಹಸ್ತಾಂತರಿಸಬಹುದಾದರೆ, ಪಾಕಿಸ್ತಾನ ಈ ಭಯೋತ್ಪಾದಕರನ್ನು ಹಸ್ತಾಂತರಿಸಲು ಏಕೆ ಸಾಧ್ಯವಿಲ್ಲ? ಅವರು ಹಫೀಜ್ ಸಯೀದ್, ಲಖ್ವಿ, ಸಾಜಿದ್ ಮಿರ್ ಅವರನ್ನು ಹಸ್ತಾಂತರಿಸಿದರೆ ಸಾಕು, ವಿಷಯಗಳು ಇಲ್ಲಿಗೆ ಮುಗಿಯುತ್ತವೆ' ಎಂದಿದ್ದಾರೆ.

ಪಹಲ್ಗಾಮ್ ದಾಳಿಯ ತನಿಖೆ ನಡೆಸುವ ಪಾಕಿಸ್ತಾನದ ಪ್ರಸ್ತಾಪವನ್ನು ಸಿಂಗ್ ತಿರಸ್ಕರಿಸಿದರು, ಅದನ್ನು ದಿಕ್ಕು ತಪ್ಪಿಸುವ ತಂತ್ರವೆಂದು ಪರಿಗಣಿಸಿದರು ಮತ್ತು ಮುಂಬೈ, ಪಠಾಣ್‌ಕೋಟ್ ಮತ್ತು ಪುಲ್ವಾಮಾ ದಾಳಿಗಳ ತನಿಖೆಗಳಿಗೆ ಏನಾಯಿತು ಎಂದು ಪ್ರಶ್ನೆ ಮಾಡಿದ್ದಾರೆ.ಭಯೋತ್ಪಾದನೆಯನ್ನು ಎದುರಿಸುತ್ತಿರುವ ರಾಷ್ಟ್ರಗಳ ನಡುವೆ ಬಲವಾದ ಜಾಗತಿಕ ಸಮನ್ವಯ ಈ ವೇಳೆ ಅಗತ್ಯವಿದೆ ಎಂದು ಹೇಳಿದೆ.

"ಭಾರತ ಮತ್ತು ಇಸ್ರೇಲ್‌ನಂತಹ ದೇಶಗಳು ಸಹಕರಿಸಬೇಕು ಮತ್ತು ಒಕ್ಕೂಟವನ್ನು ರಚಿಸಬೇಕು - ಭಯೋತ್ಪಾದನೆಯ ವಿರುದ್ಧ ಮಾತ್ರವಲ್ಲ, ಅದನ್ನು ಬೆಂಬಲಿಸುವವರ ವಿರುದ್ಧವೂ" ಎಂದು ಅವರು ಹೇಳಿದರು. "ಪ್ರಧಾನಿಯವರು ಸ್ಪಷ್ಟಪಡಿಸಿದ್ದಾರೆ - ನಾವು ಭಯೋತ್ಪಾದನೆಯ ಬಗ್ಗೆ ಶೂನ್ಯ ಸಹಿಷ್ಣುತೆಯನ್ನು ಹೊಂದಿದ್ದೇವೆ. ಗಡಿಯಾಚೆಗಿನ ಭಯೋತ್ಪಾದನೆ ಸ್ವೀಕಾರಾರ್ಹವಲ್ಲ" ಎಂದು ಹೇಳಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್