
ಶ್ರೀನಗರ: ಕಾಶ್ಮೀರದ ಕಿಶ್ತ್ವಾರ್ ಛಾತ್ರು ಪ್ರದೇಶದಲ್ಲಿ ನಡೆಯುತ್ತಿರುವ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ಭಾರತೀಯ ಯೋಧರು ಈಗಗಾಲೇ ಮೂರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಆದರೆ ಈ ಕಾರ್ಯಾಚರಣೆಯಲ್ಲಿ ಭಾಗಿಯಾದ ನಾಲ್ಕು ಕಾಲಿನ ಯೋಧನ ಸುದ್ದಿ ಈಗ ಸಾಕಷ್ಟು ಸದ್ದು ಮಾಡುತ್ತಿದೆ. ಹೌದು ಸೇನೆಯ ಸ್ನಿಫರ್ ಡಾಗ್ ಟೈಸನ್ ಯೋಧರಿಗೂ ಮೊದಲೇ ಉಗ್ರರ ಇರುವಿಕೆಯನ್ನು ಪತ್ತೆ ಮಾಡಿದ್ದಲ್ಲದೇ ಕಾಲಿಗೆ ಗುಂಡು ಬಿದ್ದರೂ ಮುಂದೆ ಸಾಗಿ ಯೋಧರಿಗೆ ಉಗ್ರರಿರುವ ಸುಳಿವು ನೀಡಿತ್ತು.
ಅಧಿಕಾರಿಗಳ ಪ್ರಕಾರ 2 ಪ್ಯಾರಾ ವಿಶೇಷ ಪಡೆಗಳಿಗೆ ಸೇರಿದ ಶ್ವಾನ ಟೈಸನ್, ಭಾನುವಾರ ಬೆಳಗ್ಗೆ ಕಾರ್ಯಾಚರಣೆ ವಲಯದಲ್ಲಿ ಭಯೋತ್ಪಾದಕರ ಉಪಸ್ಥಿತಿಯನ್ನು ಮೊದಲು ದೃಢಪಡಿಸಿತು. ಸೈನಿಕರು ದಟ್ಟವಾದ ಭೂಪ್ರದೇಶದ ಮೂಲಕ ಮುನ್ನಡೆಯುತ್ತಿದ್ದಂತೆ, ಅಡಗುತಾಣವನ್ನು ಪತ್ತೆಹಚ್ಚಲು ನಾಯಿ ಯೋಧರಿಗೂ ಮುಂದೆ ಸಾಗಿದಾಗ ಅದರ ಕಾಲಿಗೆ ಗುಂಡು ತಗುಲಿತು ಎಂದು ವರದಿಯಾಗಿದೆ.
ಇದನ್ನೂ ಓದಿ: ನೇಪಾಳದಲ್ಲಿ ತ್ರಿಶೂಲಿ ನದಿಗುರುಳಿದ ಬಸ್ 18 ಜನ ಸಾವು
ಗುಂಡಿನ ದಾಳಿಯಿಂದ ಗಾಯಗೊಂಡಿದ್ದರು ಟೈಸನ್ ತಂಡದೊಂದಿಗೆ ಉಳಿದು ಭಯೋತ್ಪಾದಕರು ಇರುವ ಜಾಗಕ್ಕೆ ಸಂಪರ್ಕ ಸಾಧಿಸಲು ಪಡೆಗಳಿಗೆ ಸಹಾಯ ಮಾಡಿತು. ಸೈನಿಕರನ್ನು ಅಡಗುತಾಣಕ್ಕೆ ಕರೆದೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ ಟೈಸನ್‌ನನ್ನು ವಿಮಾನದ ಮೂಲಕ ಉಧಂಪುರದಲ್ಲಿರುವ ಸೇನಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಸ್ತುತ ಶ್ವಾನ ಪಡೆಯ ಯೋಧ ಟೈಸನ್ ಆರೋಗ್ಯ ಸ್ಥಿರವಾಗಿದೆ. ಅದು ಚೇತರಿಸಿಕೊಳ್ಳುತ್ತಿದೆ ಎಂದು ಜಮ್ಮು ಮತ್ತು ಕಾಶ್ಮೀರ ಮೂಲದ ಮಾಧ್ಯಮವೊಂದು ವರದಿ ಮಾಡಿದೆ.
ಟೈಸನ್ ಈ ಹಿಂದೆಯೂ ಹಲವಾರು ಪ್ರಮುಖ ಸೇನಾ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದೆ. ಸ್ಫೋಟಕಗಳನ್ನು ಪತ್ತೆಹಚ್ಚುವುದು, ಅನುಮಾನಾಸ್ಪದ ಸ್ಥಳಗಳನ್ನು ಗುರುತಿಸುವುದು ಮತ್ತು ಶೋಧ ಕಾರ್ಯಾಚರಣೆಗಳ ಸಮಯದಲ್ಲಿ ಭಯೋತ್ಪಾದಕರನ್ನು ಪತ್ತೆಹಚ್ಚಲು ಸಹಾಯ ಮಾಡುವ ತರಬೇತಿ ಪಡೆದಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಟೈಸನ್‌ನ ಪದೇ ಪದೇ, ಯೋಧರಿಗೆ ಕಷ್ಟಕರವಾದ ಭೂಪ್ರದೇಶಗಳಲ್ಲಿ ಅಡಗುತಾಣಗಳನ್ನು ಪತ್ತೆಹಚ್ಚಲು ಸಹಾಯ ಮಾಡಿದೆ.
ಇದನ್ನೂ ಓದಿ: ಬೆಂಗಾಳಿ ರಾಜಕಾರಣದ ಚಾಣಕ್ಯ, ಮಾಜಿ ರೈಲ್ವೆ ಸಚಿವ ಮುಕುಲ್ ರಾಯ್ ಹೃದಯಾಘಾತಕ್ಕೆ ಬಲಿ
ಕಿಶ್ತ್ವಾರ್ ಎನ್ಕೌಂಟರ್‌ನಲ್ಲಿ ಭದ್ರತಾ ಪಡೆಗಳಿಗೆ ಪ್ರಮುಖ ಯಶಸ್ಸು ಸಿಕ್ಕಿದ್ದು,, ಚತ್ರೂ ಪಟ್ಟಿಯ ಪಾಸರ್ಕುಟ್ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕೊಲ್ಲಲ್ಪಟ್ಟ ಮೂವರು ಭಯೋತ್ಪಾದಕರಲ್ಲಿ ಜೈಶ್-ಎ-ಮೊಹಮ್ಮದ್ ಕಮಾಂಡರ್ ಸೈಫುಲ್ಲಾ ಕೂಡ ಸೇರಿದ್ದಾನೆ. ಪಾಕಿಸ್ತಾನಿ ಪ್ರಜೆಯಾಗಿರುವ ಸೈಫುಲ್ಲಾ, ದೋಡಾ-ಕಿಶ್ತ್ವಾರ್ ಪ್ರದೇಶದಲ್ಲಿ ವರ್ಷಗಳಿಂದ ಸಕ್ರಿಯನಾಗಿದ್ದ ಮತ್ತು ಅನೇಕ ದಾಳಿಗಳ ಹಿಂದೆ ಆತ ಇದ್ದ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳದಿಂದ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳು, ಅಸಾಲ್ಟ್ ರೈಫಲ್‌ಗಳು ಸೇರಿದಂತೆ ಹಲವಾರು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನೆ ತಿಳಿಸಿದೆ. ಈ ಕಾರ್ಯಾಚರಣೆಯು ಈ ಪ್ರದೇಶದಲ್ಲಿನ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗೆ ಗಮನಾರ್ಹ ಹೊಡೆತವಾಗಿದೆ ಎಂದು ಅದು ಸೇನೆ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ