ವ್ಯಾನ್‌ ಕೊಡಲು ನಿರಾಕರಿಸಿದ ಆಸ್ಪತ್ರೆ, ಬೈಕ್‌ನಲ್ಲೇ ತಾಯಿಯ ಶವ ಸಾಗಿಸಿದ ಮಗ, ವಿಡಿಯೋ ವೈರಲ್!

Published : Aug 01, 2022, 07:48 PM IST
ವ್ಯಾನ್‌ ಕೊಡಲು ನಿರಾಕರಿಸಿದ ಆಸ್ಪತ್ರೆ, ಬೈಕ್‌ನಲ್ಲೇ ತಾಯಿಯ ಶವ ಸಾಗಿಸಿದ ಮಗ, ವಿಡಿಯೋ ವೈರಲ್!

ಸಾರಾಂಶ

ಅಚ್ಚರಿಯ ವಿಚಾರವೆಂದರೆ, ಆಂಬ್ಯುಲೆನ್ಸ್ ಅಲಭ್ಯತೆಯಿಂದಾಗಿ ಕುಟುಂಬಗಳು ತಮ್ಮ ಖಾಸಗಿ ವಾಹನಗಳಲ್ಲಿ, ಬೈಕ್‌ಗಳಲ್ಲಿ ಮೃತದೇಹಗಳನ್ನು ಕೊಂಡೊಯ್ಯಬೇಕಾದ ಘಟನೆ ಮಧ್ಯಪ್ರದೇಶದಲ್ಲಿ ನಡೆಯುತ್ತಿರುವುದು ಇದು ಮೊದಲೇನಲ್ಲ. ಜೂನ್‌ನಲ್ಲಿ ಒಬ್ಬ ವ್ಯಕ್ತಿ ತನ್ನ ಮಗಳ ಶವವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದ ನಂತರ ಮಧ್ಯಪ್ರದೇಶದಲ್ಲಿ ನಡೆದ ಇಂತಹ ಎರಡನೇ ಘಟನೆ ಇದಾಗಿದೆ.  

ಭೋಪಾಲ್‌ (ಆ.1): ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ಆಘಾತಕಾರಿ ವಿಡಿಯೋವೊಂದು ಹರಿದಾಡುತ್ತಿದೆ. ಅಂದಾಜು 80 ಕಿಲೋಮೀಟರ್‌ ದೂರ ತಾಯಿಯ ಶವವನ್ನು ಬೈಕ್‌ನಲ್ಲಿಯೇ ತೆಗೆದುಕೊಂಡು ಹೋದ ವಿಡಿಯೋ ಇದಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯು ಶವ ಸಾಗಿಸುವ ವಾಹನವನ್ನು ನಿರಾಕರಿಸಿದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ತಾಯಿಯ ಶವವನ್ನು ಬೈಕ್‌ನಲ್ಲಿಯೇ ತೆಗೆದುಕೊಂಡು ಹೋಗಿದ್ದಾರೆ. ಮೃತ ಮಹಿಳೆಯನ್ನು ಮಧ್ಯಪ್ರದೇಶ-ಛತ್ತೀಸ್‌ಗಢ ಗಡಿಯಲ್ಲಿರುವ ಅನುಪ್ಪುರ್ ಜಿಲ್ಲೆಯ ನಿವಾಸಿ ಜೈಮಂತ್ರಿ ಯಾದವ್ ಎಂದು ಗುರುತಿಸಲಾಗಿದೆ. ಕೆಲ ದಿನಗಳ ಹಿಂದೆ ಜೈಮಂತ್ರಿ ಯಾದವ್‌ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿತ್ತು. ಇದಕ್ಕಾಗಿ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಕೆಯ ಸ್ಥಿತಿ ಹದಗೆಡುತ್ತಿದ್ದಂತೆ, ಅನುಪ್ಪುರ್ ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳು ಅವರನ್ನು ಪಕ್ಕದ ಜಿಲ್ಲೆಯಾದ ಶಾಹದೋಲ್‌ ವೈದ್ಯಕೀಯ ಕಾಲೇಜು ಮತ್ತು ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ಆದರೆ, ಚಿಕಿತ್ಸೆಯ ವೇಳೆ ಆಕೆ ಸಾವು ಕಂಡಿದ್ದಾರೆ ಎಂದು ಆಸ್ಪತ್ರೆಯ ಸಿಬ್ಬಂದಿಯೊಬ್ಬರು ಮಾಹಿತಿ ನೀಡಿದ್ದಾರೆ.

ಜೈಮಂತ್ರಿ ಯಾದವ್‌ ಸಾವು ಕಂಡ ಬಳಿಕ, ಶವವನ್ನು ಊರಿಗೆ ಸಾಗಿಸಲು ವಾಹನದ ವ್ಯವಸ್ಥೆ ಮಾಡುವಂತೆ ಆಸ್ಪತ್ರೆಯ ಅಧಿಕಾರಿಗಳ ಬಳಿ ಮಗ ಮನವಿ ಮಾಡಿದ್ದ. ಆದರೆ, ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಆಸ್ಪತ್ರೆಯಲ್ಲಿ ಶವ ಸಾಗಿಸುವ ವಾಹನವಿಲ್ಲ ಎಂದು ಆಸ್ಪತ್ರೆಯವರು ಆತನಿಗೆ ಹೇಳಿದ್ದರು ಎಂದು ಆಸ್ಪತ್ರೆಯ ಸಿಬ್ಬಂದಿಯೊಬ್ಬ ಈ ಮಾಹಿತಿ ನೀಡಿದ್ದಾನೆ. ಕುಟುಂಬದವರು ಖಾಸಗಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ಪ್ರಯತ್ನಿಸಿದರಾದರೂ, ಅತಿಯಾದ ಶುಲ್ಕದ ಕಾರಣ ಅವರಿಗೆ ಇದು ಸಾಧ್ಯವಾಗಿರಲಿಲ್ಲ.

ದಾರಿಹೋಕರಿಂದ ಚಿತ್ರೀಕರಣ: ಕೊನೆಗೆ ತಾಯಿಯ ಶವವನ್ನು ಬೈಕ್‌ನಲ್ಲಿ ಸಾಗಿಸಲು ನಿರ್ಧರಿಸಿದ್ದರು. ನಂತರ ಮೃತದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ, ಬೈಕ್‌ಗೆ ಕಟ್ಟಿಕೊಂಡು, ಅಂದಾಜು 80 ಕಿಲೋಮೀಟರ್‌ ದೂರದಲ್ಲಿರುವ ತಮ್ಮ ಮನೆಗೆ ತೆಗೆದುಕೊಂಡು ಹೋಗಿದ್ದಾರೆ. ಈ ಘಟನೆಯನ್ನು ದಾರಿಹೋಕರೊಬ್ಬರು ಚಿತ್ರೀಕರಿಸಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್‌ ಮಾಡಿದ್ದಾರೆ. ಇದರ ಬೆನ್ನಲ್ಲಿಯೇ ಈ ವಿಡಿಯೋ ವೈರಲ್‌ ಆಗಿದೆ. ಆಕೆಯ ಇಬ್ಬರು ಪುತ್ರರು 100 ರೂ.ಗೆ ಮರದ ಚಪ್ಪಡಿಯನ್ನು ಖರೀದಿಸಿ, ಶವವನ್ನು ಅದಕ್ಕೆ ಕಟ್ಟಿ ಅನುಪ್ಪುರ್ ಜಿಲ್ಲೆಯ ಗುಡಾರು ಗ್ರಾಮಕ್ಕೆ ಸವಾರಿ ಮಾಡಿದ್ದಾರೆ ಎಂದು ವರದಿಯಾಗಿದೆ. 

Ramanagara Crime: ಬೈಕಲ್ಲಿ ಶವ ಸಾಗಣೆ ವೇಳೆ ಅಪಘಾತ: ಬಯಲಾಯ್ತು ಕೊಲೆ ರಹಸ್ಯ..!

ವಾಹನಕ್ಕೆ ಅವರು ಮನವಿ ಮಾಡಿರಲಿಲ್ಲ:ಶಹದೋಲ್ ವೈದ್ಯಕೀಯ ಕಾಲೇಜಿನ ಡೀನ್ ವೈದ್ಯ ಮಿಲಿಂದ್ ಸಿರಾಲ್ಕರ್, ಆರೋಪಗಳನ್ನು ನಿರಾಕರಿಸಿದ್ದು, ಕುಟುಂಬವು ಶವ ವಾಹನವನ್ನು ಕೇಳಿರಲಿಲ್ಲ. ಬದಲಿಗೆ ಅವರು ತಮ್ಮದೇ ಆದ ವ್ಯವಸ್ಥೆಯನ್ನು ಮಾಡಿಕೊಂಡಿರುವ ಬಗ್ಗೆ ಆಸ್ಪತ್ರೆಯ ಸಿಬ್ಬಂದಿಗೆ ತಿಳಿಸಿದ್ದರು. "ನನಗೆ ಮಾಧ್ಯಮಗಳ ಮೂಲಕ ಈ ಮಾಹಿತಿ ಸಿಕ್ಕಿತು. ಶವವನ್ನು ತೆಗೆದುಕೊಂಡು ಹೋಗಲು ಕುಟುಂಬ ಸದಸ್ಯರು ತಮ್ಮದೇ ಆದ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದಾರೆ ಎಂದು ವಾರ್ಡ್‌ ಬಾಯ್‌ಗೆ ಹೇಳಿದ್ದರು. ಆತ ಈ ಮಾತನ್ನು ನನಗೆ ಹೇಳಿದ್ದ. ಆಸ್ಪತ್ರೆಯಲ್ಲಿ ಶವದ ವಾಹನ ಇರುವ ಬಗ್ಗೆಯಾಗಲಿ, ಅಂಬ್ಯುಲೆನ್ಸ್‌ ಬಗ್ಗೆಯಾಗಲಿ ಅವರು ನಮ್ಮಲ್ಲಿ ವಿಚಾರಿಸಿರಲಿಲ್ಲ' ಎಂದು ಹೇಳಿದ್ದಾರೆ.

ಹೃದಯಾಘಾತದಿಂದ ತಂದೆಯ ಸಾವು, ಶವಕ್ಕೆ ಕುಂಕುಮ ಹಚ್ಚಿ ಆಟವಾಡುತ್ತಿದ್ದ ಪುಟ್ಟ ಮಕ್ಕಳು!

ಪದೇ ಪದೇ ಇಂಥ ಘಟನೆ: ಅಚ್ಚರಿಯೆಂದರೆ, ಮಧ್ಯಪ್ರದೇಶದಲ್ಲಿ ಅಂಬ್ಯುಲೆನ್ಸ್‌ನ ಅಲಭ್ಯತೆಯಿಂದಾಗಿ ಇಂಥ ಪ್ರಸಂಗಗಳು ನಡೆದಿರುವುದು ಇದೇ ಮೊದಲಲ್ಲ. ಹಿಂದೆಯೂ ಹಲವಾರು ಬಾರಿ ಇಂಥ ಘಟನೆಗಳು ನಡೆದು, ಕುಟುಂಬಸ್ಥರು ಶವವನ್ನು ತೆಗೆದುಕೊಂಡು ಹೋಗಲು ತಾವೇ ವ್ಯವಸ್ಥೆ ಮಾಡಿಕೊಂಡಿರುವ ಪ್ರಕರಣಗಳು ನಡೆದಿವೆ. ಜುಲೈ 11 ರಂದು, ಗುನಾ ಜಿಲ್ಲೆಯಲ್ಲಿ 8 ವರ್ಷದ ಮಗು ತನ್ನ ಎರಡು ವರ್ಷದ ಸಹೋದರನ ಶವವನ್ನು ಮನೆಗೆ ತೆಗೆದುಕೊಂಡು ಹೋಗಲು ವಾಹನಕ್ಕಾಗಿ ಕಾಯುತ್ತಿದ್ದ ವಿಡಿಯೋ ಕೂಡ ವೈರಲ್‌ ಆಗಿತ್ತು. ಈ ಸಂದರ್ಭದಲ್ಲಿ ಆಸ್ಪತ್ರೆ ಶವದ ವಾಹನ ನೀಡಲು ನಿರಾಕರಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್