
ನವದೆಹಲಿ[ಫೆ.09]: ಉತ್ತರ ಪ್ರದೇಶ ಮತ್ತು ಕೇರಳದಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ವಿಒಐಪಿ (ವಾಯ್‌್ಸ ಓವರ್ ಇಂಟರ್ನೆಟ್ ಪ್ರೊಟೊಕಾಲ್) ಟೆಲಿಪೋನ್ ಎಕ್ಸ್‌ಚೇಂಜ್ ದಂಧೆಯೊಂದನ್ನು ಜಮ್ಮು- ಕಾಶ್ಮೀರ ಸೇನಾ ಗುಪ್ತಚರ ಮತ್ತು ಮುಂಬೈ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಯಲಿಗೆ ಎಳಿದಿದ್ದಾರೆ. ಅಕ್ರಮ ಟೆಲಿಫೋನ್ ಎಕ್ಸ್‌ಚೇಂಜ್ ಕೇಂದ್ರಗಳನ್ನು ಬಳಸಿ ರಕ್ಷಣಾ ಸಿಬ್ಬಂದಿಗಳಿಂದ ಸೇನಾ ನೆಲೆಗಳ ಕುರಿತು ಮಾಹಿತಿಯನ್ನು ಕಲೆ ಹಾಕಲಾಗುತ್ತಿತ್ತು ಎಂಬ ಆಘಾತಕಾರಿ ಮಾಹಿತಿ ಬಹಿರಂಗಗೊಂಡಿದೆ.
ಶೋಧ ಕಾರ್ಯಾಚರಣೆಯ ವೇಳೆ ಇಂಟರ್‌ನೆಟ್ ರೂಟರ್ ಮೂಲಕ ಕರೆ ಮಾಡಲು ಸಾಧ್ಯವಾಗುತ್ತಿದ್ದ 100 ಸಿಮ್ ಕಾರ್ಡ್ ಇರುವ ಎರಡು ಸಿಮ್ ಬಾಕ್ಸ್, 2 ರೂಟರ್‌ಗಳು, ಆ್ಯಂಟೆನಾಗಳು, ಬ್ಯಾಟರಿಗಳು ಮತ್ತು ಕನೆಕ್ಟರ್‌ಗಳು ಇನ್ನಿತರ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಪಾಲಕ್ಕಾಡ್ ನಿವಾಸಿ ಮೊಹಮ್ಮದ್ ಕುಟ್ಟಿಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಎಕೆ-47 ಬುಲೆಟ್ ತಡೆಯಬಲ್ಲ ಜಾಕೆಟ್ ಆವಿಷ್ಕರಿಸಿದ ಭಾರತೀಯ ಸೇನಾಧಿಕಾರಿ!
ಈ ಪತ್ತೆ ಆಗಿರುವ ಅಕ್ರಮ ಟೆಲಿಫೋನ್ ಎಕ್ಸ್‌ಚೇಂಜ್‌ಗಳ ಮೂಲಕ ಪಾಕಿಸ್ತಾನದಿಂದ ಬರುವ ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಲಾಗುತ್ತಿತ್ತು. 2019ರ ಸೆಪ್ಟೆಂಬರ್‌ನಲ್ಲಿ ರಕ್ಷಣಾ ಸಿಬ್ಬಂದಿಗೆ ಅನುಮಾನಾಸ್ಪದ ನಂಬರ್‌ನಿಂದ ಕರೆಗಳನ್ನು ಮಾಡಿ ಮಹತ್ವದ ರಕ್ಷಣಾ ನೆಲೆಗಳ ಬಗ್ಗೆ ಮಾಹಿತಿ ಪಡೆಯಲಾಗಿತ್ತು. ತನಿಖೆಯ ವೇಳೆ ನೋಯ್ಡಾ ಮತ್ತು ಕೇರಳದ ಕೆಲವು ಅಕ್ರಮ ಟೆಲಿಫೋನ್ ಎಕ್ಸ್‌ಚೇಂಜ್‌ನಿಂದ ಕರೆ ಬಂದಿರುವುದು ತಿಳಿದುಬಂದಿತ್ತು. ಪಾಕಿಸ್ತಾನದಿಂದ ಸ್ಥಳೀಯ ನಂಬರ್‌ಗೆ ಕರೆ ಮಾಡಲು ಈ ಎಕ್ಸ್‌ಚೇಂಜ್‌ಗಳು ಬಳಕೆ ಆಗುತ್ತಿವೆ ಮತ್ತು ಅದನ್ನು ರಕ್ಷಣಾ ಸಿಬ್ಬಂದಿಯಿಂದ ಮಾಹಿತಿ ಕಲೆಹಾಕಲು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿತ್ತು. ಇದರ ಹಿಂದೆ ಪಾಕಿಸ್ತಾನ ಗುಪ್ತಚರ ಸಂಸ್ಥೆಯ ಕೈವಾಡ ಇರವ ಸಾಧ್ಯತೆ ಇರುವ ಬಗ್ಗೆ ಅನುಮಾನ ಪಟ್ಟು ಮುಂಬೈ ಪೊಲೀಸರು ಸೇನಾ ಗುಪ್ತಚರ ಸಂಸ್ಥೆಯ ಜೊತೆಗೂಡಿ ಜಂಟಿ ಕಾರ್ಯಾಚರಣೆ ಕೈಗೊಂಡಿದ್ದರು. ತನಿಖೆಯ ಆಳಕ್ಕೆ ಇಳಿದ ವೇಳೆ ಉತ್ತರ ಪ್ರದೇಶ ಮತ್ತು ಕೇರಳದಲ್ಲಿ ನಡೆಸಲಾಗುತ್ತಿದ್ದ ಟೆಲಿಫೋನ್ ಎಕ್ಸ್‌ಚೇಂಜ್ ಕೆಂದ್ರಗಳು ಪತ್ತೆ ಆಗಿವೆ.
ಈ ದಂಧೆಯಲ್ಲಿ ಭಾಗಿಯಾದ ಇನ್ನಷ್ಟುಜನರನ್ನು ಪತ್ತೆ ಹಚ್ಚುವ ನಿಟ್ಟಿನಿಂದ ತನಿಖೆ ಕೈಗೊಳ್ಳಲಾಗಿದ್ದು, ಸದ್ಯದಲ್ಲೇ ಇನ್ನಷ್ಟುಜನರನ್ನು ಬಂಧಿಸುವ ಸಾಧ್ಯತೆ ಇದೆ.
ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದ ಕಾರಣ ಈ ದಂಧೆಯಿಂದ ದೇಶದ ದೂರಸಂಪರ್ಕ ಇಲಾಖೆಗೆ ಕೋಟಿಗಟ್ಟಲೆ ಆದಾಯ ನಷ್ಟವಾಗಿದೆ ಎಂಬ ಸಂಗತಿಯೂ ತನಿಖೆಯಿಂದ ತಿಳಿದುಬಂದಿದೆ.
ಏನಿದು ಟೆಲಿಫೋನ್ ಎಕ್ಸ್‌ಚೇಂಜ್ ದಂಧೆ?
ಪ್ರಕರಣದಲ್ಲಿ ಬಂಧಿತನಾಗಿರುವ ಆರೋಪಿ ಮೊಹಮ್ಮದ್ ಕುಟ್ಟಿಸಾಫ್ಟ್‌ವೇರ್ ಬಿಸ್‌ನೆಸ್‌ವೊಂದನ್ನು ನಡೆಸುತ್ತಿದ್ದ. ಟೆಲಿಫೋನ್ ಎಕ್ಸ್‌ಚೇಂಜ್ ದಂಧೆಯನ್ನು ಆತ ಯುಎಇನಲ್ಲಿ ಕಲಿತುಕೊಂಡಿದ್ದ ಎನ್ನಲಾಗಿದೆ. ಭಾರತಕ್ಕೆ ಮರಳಿದ ಬಳಿಕ ಆತ ತನ್ನದೇ ಆತ ಅಕ್ರಮ ಟೆಲಿಫೋನ್ ಎಕ್ಸ್‌ಚೇಂಜ್‌ವೊಂದನ್ನು ಆರಂಭಿಸಿದ್ದ. ಇದಕ್ಕಾಗಿ ಆತ ಇಂಟರ್‌ನೆಟ್ ಮೂಲಕ ಬರುವ ಕರೆಗಳನ್ನು ಸ್ವೀಕರಿಸಬಲ್ಲ ಚೀನಾ ನಿರ್ಮಿತ ಸಿಮ್ ಬಾಕ್ಸ್‌ಗಳನ್ನು ಬಳಕೆ ಮಾಡಿಕೊಂಡಿದ್ದ.
ಡಿಫೆನ್ಸ್ ಎಕ್ಸ್‌ಪೋದಲ್ಲಿ ಅಸಾಲ್ಟ್ ರೈಫಲ್ ಎತ್ತಿದ ಪ್ರಧಾನಿ ಮೋದಿ!
ಅದರಲ್ಲಿ ಸ್ಥಳೀಯ ಸೆಲ್ಯುಲಾರ್ ಸೇವಾ ಪೂರೈಕೆದಾರರಿಂದ ಪಡೆದ ಜಿಎಸ್‌ಎಂ ಸಿಮ್‌ಗಳನ್ನು ಅಳವಡಿಸಿದ್ದ. ಹೀಗಾಗಿ ಈ ಎಕ್ಸ್‌ಚೇಂಜ್‌ಗಳ ಮೂಲಕ ಬರುವ ಕರೆಗಳನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಅಲ್ಲದೇ ಕರೆ ಎಲ್ಲಿಂದ ಬರುತ್ತಿದೆ ಎಂಬುದನ್ನು ಪತ್ತೆ ಹಚ್ಚುವುದೂ ಕಷ್ಟ. ಈ ವವಸ್ಥೆ ಅಕ್ರಮ ಎಂದು ಭಾರತೀಯ ದೂರ ಸಂಪರ್ಕ ನಿಯಂತ್ರಣಾ ಸಂಸ್ಥೆ ಘೋಷಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ