ಬರ್ತ್‌ಡೇ ಪಾರ್ಟಿಯಲ್ಲಿ ಗಾಂಜಾ ಸೇವನೆ: ಪಾಕಶಾಸ್ತ್ರದಲ್ಲಿ ಪದವಿ ಮಾಡ್ತಿದ್ದ ಆರು ವಿದ್ಯಾರ್ಥಿಗಳ ಬಂಧನ

Published : Nov 09, 2025, 01:09 PM IST
6 Students Arrested For Consuming Ganja

ಸಾರಾಂಶ

ಹೈದರಾಬಾದ್‌ನ ಕಲಿನರಿ ಅಕಾಡೆಮಿ ಆಫ್ ಇಂಡಿಯಾದ ಆರು ವಿದ್ಯಾರ್ಥಿಗಳನ್ನು ಬರ್ತ್‌ಡೇ ಪಾರ್ಟಿಯಲ್ಲಿ ಗಾಂಜಾ ಸೇವಿಸಿದ್ದಕ್ಕಾಗಿ ಬಂಧಿಸಲಾಗಿದೆ. ತನಿಖೆ ವೇಳೆ 11 ವಿದ್ಯಾರ್ಥಿಗಳು ಗಾಂಜಾ ಸೇವಿಸಿರುವುದನ್ನು ಒಪ್ಪಿಕೊಂಡಿದ್ದರು.ಆದರೆ ನಿಷೇಧಿತ ಟಿಹೆಚ್‌ಸಿ ಸೇವಿಸಿದ್ದ  ಆರು ಮಂದಿಯನ್ನು ಬಂಧಿಸಲಾಗಿದೆ.

ಕುಲಿನರಿ ಅಕಾಡೆಮಿ ಆಫ್ ಇಂಡಿಯಾದ ಆರು ವಿದ್ಯಾರ್ಥಿಗಳ ಬಂಧನ

ಹೈದರಾಬಾದ್‌: ನಗರದ ಕಲಿನರಿ ಅಕಾಡೆಮಿ ಆಫ್ ಇಂಡಿಯಾದ (Culinary Academy of India)ಆರು ಜನ ವಿದ್ಯಾರ್ಥಿಗಳನ್ನು ಬರ್ತ್‌ಡೇ ಪಾರ್ಟಿಯಲ್ಲಿ ಗಾಂಜಾ ಸೇವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುತ್ತಿನ ನಗರಿಯ ಪೊಲೀಸರು ಬಂಧಿಸಿದ್ದಾರೆ.(ಕಲಿನರಿ ಅಕಾಡೆಮಿ ಆಫ್ ಇಂಡಿಯಾ ಅಥವಾ ಸಿಐಎ ಇದು ಹೊಟೇಲ್ ಮ್ಯಾನೇಜ್‌ಮೆಂಟ್‌ನಂತೆ ಪಾಕಶಾಲೆಯ ಬಗ್ಗೆ ಅಥವಾ ಅತಿಥ್ಯ ಲೋಕದ ಬಗ್ಗೆ ತರಬೇತಿ ನೀಡುವ ಶಿಕ್ಷಣ ಸಂಸ್ಥೆಯಾಗಿದೆ)

ಬರ್ತ್‌ಡೇ ಪಾರ್ಟಿಯಲ್ಲಿ ಗಾಂಜಾ ಸೇವನೆ

ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ನಡೆಸುವ ಹೈದರಾಬಾದ್‌ನ ಈಗಲ್ ಫೋರ್ಸ್‌ನ (Eagle Force) ನಾರ್ಕೋಟಿಕ್ಸ್ ಪೊಲೀಸ್ ಠಾಣೆ ಈ ಘಟನೆಗೆ ಸಂಬಂಧಿಸಿದಂತೆ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ಇದರಲ್ಲಿರುವಂತೆ ಒಟ್ಟು 11 ವಿದ್ಯಾರ್ಥಿಗಳು ತಾವು ಗಾಂಜಾ ಸೇವಿಸಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ. ನಂತರ ವಿದ್ಯಾರ್ಥಿಗಳ ಪೋಷಕರು ಮತ್ತು ಕಾಲೇಜು ಪ್ರಾಂಶುಪಾಲರ ಸಮ್ಮುಖದಲ್ಲಿ ಅವರಿಗೆ ಮೂತ್ರ ಹಾಗೂ ಡ್ರಗ್ ಪರೀಕ್ಷೆ ನಡೆಸಲಾಗಿದೆ. ಈ ವೇಳೆ ಅವರಲ್ಲಿ ಆರು ವಿದ್ಯಾರ್ಥಿಗಳು ನಾರ್ಕೋಟಿಕ್ಸ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (NDPS) ಕಾಯ್ದೆಯಡಿ ಬಳಕೆಗೆ ನಿಷೇಧವಾಗಿರುವ ಸೈಕೋಟ್ರೋಪಿಕ್ ವಸ್ತುವಾದ THC (ಟೆಟ್ರಾಹೈಡ್ರೊಕ್ಯಾನಬಿನಾಲ್) ಸೇವಿಸಿರುವುದು ಸಾಬೀತಾಗಿದ್ದು, ಪರೀಕ್ಷೆ ನಡೆಸಿದಾಗ ಈ ವಿಚಾರ ದೃಢಪಟ್ಟಿದೆ. ಹೀಗಾಗಿ ಆರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

ಪಾಕಶಾಸ್ತ್ರದಲ್ಲಿ ಪದವಿ ಓದ್ತಿರುವ ವಿದ್ಯಾರ್ಥಿಗಳು

ಹೀಗಾಗಿ ಈ ಆರು ವಿದ್ಯಾರ್ಥಿಗಳ ವಿರುದ್ಧ 1985 ರ NDPS ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಬಂಧಿತರನ್ನು ಸಾಕ್ಷಿ ಎಮಾಲಿಯಾ (22), ಮೋಹಿತ್ ಶಾಹಿ (21), ಶುಭಮ್ ರಾವತ್ (27), ಕೆರೊಲಿನಾ ಸಿಂಥಿಯಾ ಹ್ಯಾರಿಸನ್ (19), ಅರಿಕ್ ಜೊನಾಥನ್ ಆಂಥೋನಿ (21), ಮತ್ತು ಲಾಯ್ ಬರುವಾ (22) ಎಂದು ಗುರುತಿಸಲಾಗಿದೆ. ಇವರೆಲ್ಲರೂ ಅಡುಗೆ ತಂತ್ರಜ್ಞಾನ ಮತ್ತು ಪಾಕಶಾಲೆಯ ಕಲೆಗಳಲ್ಲಿ ಪದವಿ ಪಡೆಯುತ್ತಿರುವ ಅಂತಿಮ ವರ್ಷದ ವಿದ್ಯಾರ್ಥಿಗಳಾಗಿದ್ದಾರೆ.

ಆರು ವಿದ್ಯಾರ್ಥಿಗಳಿಗೆ ಅವರ ಪೋಷಕರು ಮತ್ತು ಪ್ರಾಂಶುಪಾಲ ಎನ್ ಸುಧಾಕರ್ ರಾವ್ ಅವರ ಸಮ್ಮುಖದಲ್ಲಿ ಕೌನ್ಸೆಲಿಂಗ್ ನಡೆಸಲಾಗಿದ್ದು, ಅವರನ್ನು ಪುನರ್ವಸತಿಗಾಗಿ ವ್ಯಸನ ಮುಕ್ತ ಕೇಂದ್ರಕ್ಕೆ ಕಳುಹಿಸಲಾಗಿದೆ. ಪುನರ್ವಸತಿ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡರೆ ಪ್ರಕರಣವನ್ನು ಹಿಂಪಡೆಯಬೇಕೆಂದು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ವಿನಂತಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಸುತ್ತಿದ್ದ ಎಸ್.ಆರ್. ನಗರದ ನಿವಾಸಿ ಜೇಸನ್

ಎಸ್.ಆರ್. ನಗರದ ನಿವಾಸಿ ಜೇಸನ್ ಎಂಬಾತ ಈ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಸುತ್ತಿದ್ದ ಎಂಬುದನ್ನು ಪೊಲೀಸರು ಬಹಿರಂಗಪಡಿಸಿದ್ದಾರೆ. ಈ ಜೇಸನ್ ವಿದ್ಯಾರ್ಥಿಗಳಾದ ಲಾಯ್ ಬರುವಾ ಮತ್ತು ಅರಿಕ್ ಜೊನಾಥನ್ ಆಂಥೋನಿಗೆ ಗಾಂಜಾ ಪೂರೈಸುತ್ತಿದ್ದನೆಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಗಾಂಜಾ ಪೂರೈಕೆದಾರರ ಬಗ್ಗೆ ತನಿಖೆ ನಡೆಯುತ್ತಿದೆ.

ಕಲಿನರಿ ಅಕಾಡೆಮಿ ಆಫ್ ಇಂಡಿಯಾದಲ್ಲಿ ಗಾಂಜಾ ಪ್ರಕರಣ ಇದೇ ಮೊದಲಲ್ಲ:

ಕಲಿನರಿ ಅಕಾಡೆಮಿ ಆಫ್ ಇಂಡಿಯಾದಲ್ಲಿ ಮಾದಕವಸ್ತುಗಳಿಗೆ ಸಂಬಂಧಿಸಿದಂತೆ ಇದು ಮೊದಲ ಘಟನೆ ಅಲ್ಲಎಂದು ಈಗಲ್ ಫೋರ್ಸ್ ಹೇಳಿದೆ. ಇದಕ್ಕೂ ಹಿಂದೆ ನಡೆದ ಬಂಧನಗಳಲ್ಲಿ ವಿದ್ಯಾರ್ಥಿಗಳನ್ನು ಕೇವಲ ಕೌನ್ಸೆಲಿಂಗ್ ನಡೆಸಿ ನಂತರ ಬಿಡುಗಡೆ ಮಾಡಲಾಗಿತ್ತು ಎಂದು ಈಗಲ್ ಫೋರ್ಸ್ ಹೇಳಿದೆ. ಇಂತಹ ಪ್ರಕರಣಗಳು ಪುನರಾವರ್ತನೆಯಾಗುತ್ತಿರುವುದರಿಂದ ಮಾದಕವಸ್ತು ಮುಕ್ತ ಕ್ಯಾಂಪಸ್ ಅನ್ನು ಖಚಿತಪಡಿಸಿಕೊಳ್ಳುವಲ್ಲಿ ಸಂಸ್ಥೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಈಗಲ್ ಫೋರ್ಸ್‌ನ ನಾರ್ಕೋಟಿಕ್ಸ್ ಪೊಲೀಸ್ ಠಾಣೆ ತನ್ನ ಪ್ರಕಟಣೆಯಲ್ಲಿ ಹೇಳಿದೆ.

ಕಾಲೇಜು ಆಡಳಿತ ಮಂಡಳಿಗೆ ಈ ವಿಚಾರದ ಬಗ್ಗೆ ಈ ಹಿಂದೆಯೂ ಎಚ್ಚರಿಕೆ ನೀಡಿದ್ದರೂ ಕೇವಲ ವಿದ್ಯಾರ್ಥಿಗಳನ್ನು ಅಮಾನತು ಮಾಡಿ ಸುಮ್ಮನಾಗಿದೆ. ಈ ವಿಚಾರವನ್ನು ಕಾಲೇಜು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಈಗಲ್ ಫೋರ್ಸ್ ಹೇಳಿದೆ.

ಯಾವುದೇ ವಿದ್ಯಾರ್ಥಿ ಮಾದಕ ದ್ರವ್ಯ ಸೇವಿಸುತ್ತಿರುವುದು ಕಂಡುಬಂದರೆ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ ಹಾಗೂ , ಅವರ ಹೆಸರನ್ನು ಪೊಲೀಸ್ ದಾಖಲೆಗಳಿಂದ ತೆಗೆದುಹಾಕುವ ಮೊದಲು ಸರ್ಕಾರಿ ವ್ಯಸನ ಮುಕ್ತ ಕೇಂದ್ರದಲ್ಲಿ ಕ್ರಿಮಿನಲ್ ಮೊಕದ್ದಮೆಯ ಜೊತೆ ಕಡ್ಡಾಯ ಪುನರ್ವಸತಿಯನ್ನು ಎದುರಿಸಬೇಕಾಗುತ್ತದೆ ಎಂದು ಈಗಲ್ ಫೋರ್ಸ್ ಎಚ್ಚರಿಸಿದೆ.

ಈ ವಿಚಾರದ ನಂತರ ವಿದ್ಯಾರ್ಥಿಗಳ ಪೋಷಕರು ಕಾಲೇಜು ಆಡಳಿತ ಮಂಡಳಿಯೂ ಶಂಕಿತ ವಿದ್ಯಾರ್ಥಿಗಳಿಗೆ ಅನಿರೀಕ್ಷಿತ ಮಾದಕವಸ್ತು ಪರೀಕ್ಷೆಯನ್ನು ಮಾಡಬೇಕೆಂದು ವಿನಂತಿಸಿದ್ದಾರೆ. ಪಾರ್ಟಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ಪುನರ್ವಸತಿ ನಂತರ ಮಾದಕವಸ್ತು ಮುಕ್ತರಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಈಗಲ್ ಫೋರ್ಸ್ ಅವರಿಗೆ ಅನಿರೀಕ್ಷಿತ ಡೋಪಿಂಗ್ ಪರೀಕ್ಷೆಗಳನ್ನು ನಡೆಸುವುದಾಗಿ ಹೇಳಿದೆ.

ಇದನ್ನೂ ಓದಿ: ಜಲಪಾತ ನೋಡಲು ಹೋಗಿ 19, 20ರ ಹರೆಯದ ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ನೀರುಪಾಲು

ಇದನ್ನೂ ಓದಿ: ಅಮೆರಿಕಾದಲ್ಲಿ ಭಾರತದ ಇಬ್ಬರು ಮೋಸ್ಟ್ ವಾಂಟೆಂಡ್ ಗ್ಯಾಂಗ್‌ಸ್ಟಾರ್‌ಗಳ ಬಂಧನ, ಶೀಘ್ರದಲ್ಲೇ ಗಡೀಪಾರು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಕ್ರಮ ಸಂಬಂಧದ ಹಾದಿ ಹಿಡಿದ ಅಮ್ಮ: ಆಕೆಯ ಇಬ್ಬರು ಪುಟ್ಟ ಮಕ್ಕಳ ಮೋರಿಗೆಸೆದ ಪ್ರಿಯಕರ
19ರ ತರುಣನ ಜೊತೆ ಮಗಳ ಮದುವೆಗೆ ನಿರಾಕರಿಸಿದ ಪ್ರೇಯಸಿ ಮನೆಯವರು: ಕರೆಂಟ್ ಟವರ್ ಏರಿ ಪ್ರಿಯಕರನ ಹೈಡ್ರಾಮಾ