ಕೌಟುಂಬಿಕ ಕಲಹದ ಕಾರಣಕ್ಕೆ ತನ್ನದೇ ಮಗುವನ್ನು ಕೊಂದು ಬಳಿಕ ಸಿಕ್ಕಿಬಿದ್ದ ಮಹಿಳಾ ಉದ್ಯಮಿ, ಎಐ ಸ್ಟಾರ್ಟಪ್ ಕಂಪನಿ ಸಿಇಒ ಸುಚನಾ ಸೇಠ್, ಗಂಡನಿಂದ ಮಗು ಹಾಗೂ ಆಕೆಯ ನಿರ್ವಹಣೆಗೆ ಪ್ರತಿ ತಿಂಗಳು 2.5 ಲಕ್ಷ ಹಣ ವಸೂಲಿಗೆ ಬಯಸಿದ್ದರು ಎಂದು ತಿಳಿದು ಬಂದಿದೆ.
ಬೆಂಗಳೂರು: ಕೌಟುಂಬಿಕ ಕಲಹದ ಕಾರಣಕ್ಕೆ ತನ್ನದೇ ಮಗುವನ್ನು ಕೊಂದು ಬಳಿಕ ಸಿಕ್ಕಿಬಿದ್ದ ಮಹಿಳಾ ಉದ್ಯಮಿ, ಎಐ ಸ್ಟಾರ್ಟಪ್ ಕಂಪನಿ ಸಿಇಒ ಸುಚನಾ ಸೇಠ್, ಗಂಡನಿಂದ ಮಗು ಹಾಗೂ ಆಕೆಯ ನಿರ್ವಹಣೆಗೆ ಪ್ರತಿ ತಿಂಗಳು 2.5 ಲಕ್ಷ ಹಣ ವಸೂಲಿಗೆ ಬಯಸಿದ್ದರು ಎಂದು ತಿಳಿದು ಬಂದಿದೆ.
ಕಳೆದ ಆಗಸ್ಟ್‌ನಲ್ಲಿ ಈ ಪಶ್ಚಿಮ ಬಂಗಾಳ ಮೂಲದ ಸುಚನಾ ಸೇಠ್ ಗಂಡ ಕೇರಳ ಮೂಲದ ವೆಂಕಟರಾಮನ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ಕೇಸ್ ದಾಖಲಿಸಿ ಗಂಡನ ವಿರುದ್ಧ ತಡೆಯಾಜ್ಞೆ ತಂದಿದ್ದಳು. ತನ್ನ ಹಾಗೂ ಮಗುವಿನ ಮೇಲೆ ಆತ ದೈಹಿಕವಾಗಿ ಹಲ್ಲೆ ನಡೆಸಿ ದೌರ್ಜನ್ಯವೆಸಗಿದ್ದಾನೆ ಎಂದು ದೂರಿದ್ದಳು. ಅಲ್ಲದೇ ತನ್ನ ಪತಿ ವೆಂಕಟರಾಮನ್ ವಾರ್ಷಿಕ ಆದಾಯವೇ ತಿಂಗಳಿಗೆ ಒಂದು ಕೋಟಿ ಮೇಲೆ ಇದೆ ಎಂದು ದೂರಿನಲ್ಲಿ ತಿಳಿಸಿದ್ದ ಆಕೆ ಬಳಿಕ ತನಗೆ ತಿಂಗಳಿಗೆ ಆತ ನಿರ್ವಹಣಾ ವೆಚ್ಚವಾಗಿ 2.50 ಲಕ್ಷ ನೀಡಬೇಕು ಎಂದು ಬಯಸಿದ್ದಳು ಎಂದು ಕೋರ್ಟ್ ದಾಖಲೆಗಳಲ್ಲಿದೆ. ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಸಿಕ್ಕಿರುವ ಕೋರ್ಟ್ ದಾಖಲೆಗಳಲ್ಲಿ ಈ ಮಾಹಿತಿ ಲಭ್ಯವಾಗಿದೆ.
ತನ್ನ ಈ ಕೌಟುಂಬಿಕ ದೌರ್ಜನ್ಯದ ಆರೋಪವನ್ನು ಧೃಡೀಕರಿಸಲು ಆಕೆ ವೈದ್ಯಕೀಯ ವರದಿ ಹಾಗೂ ವಾಟ್ಸಾಪ್ ಪೋಟೋಗಳನ್ನು ದಾಖಲೆಯಾಗಿ ನೀಡಿದ್ದಳು ಎಂದು ತಿಳಿದು ಬಂದಿದೆ. ಇನ್ನು ಈ 4 ವರ್ಷದ ಮಗುವಿನ ಕೊಲೆ ನಡೆದಾಗ ತಂದೆ ವೆಂಕಟರಾಮನ್ ವಿದೇಶದಲ್ಲಿದ್ದ, ಅಲ್ಲದೇ ಅವರು ಈ ಕೌಟುಂಬಿಕ ಹಿಂಸೆಯ ಆರೋಪಗಳನ್ನು ನಿರಾಕರಿಸಿದ್ದಾರೆ. ಅಲ್ಲದೇ ಈಕೆ ತಂದಿದ್ದ ತಡೆಯಾಜ್ಞೆಯ ಹಿನ್ನೆಲೆಯಲ್ಲಿ ಆತನಿಗೆ ತನ್ನ ಪತ್ನಿಯ ಮನೆಯನ್ನು ಪ್ರವೇಶಿಸುವುದಕ್ಕಾಗಲಿ ಅಥವಾ ಆಕೆ ಹಾಗೂ ಮಗುವಿನ ಜೊತೆ ಫೋನ್ ಹಾಗೂ ಸಾಮಾಜಿಕ ಮಾಧ್ಯಮದ ಮೂಲಕವೂ ಸಂವಹನ ಮಾಡುವುದನ್ನು ನಿರ್ಬಂಧಿಸಲಾಗಿತ್ತು.
ಆದರೆ ಇದಾದ ನಂತರ ಕಳೆದ ವರ್ಷದ ಸೆಪ್ಟೆಂಬರ್‌ನಿಂದ ಮಧ್ಯಂತರ ನಿರ್ವಹಣೆಗಾಗಿ ಪ್ರತಿ ತಿಂಗಳು 20 ಸಾವಿರ ರೂಪಾಯಿ ನೀಡಬೇಕು ಎಂದು ಆತನಿಗೆ ಕೋರ್ಟ್ ತಿಳಿಸಿತ್ತು. ಇದರ ಜೊತೆಗೆ ತಂದೆಗೆ ಮಗುವನ್ನು ವಾರದಲ್ಲಿ ಒಮ್ಮೆ ಭಾನುವಾರ ಮಗುವನ್ನು ಭೇಟಿ ಮಾಡುವ ಹಕ್ಕನ್ನು ಕೂಡ ನೀಡಲಾಗಿತ್ತು. ಆದರೆ ಇದರಿಂದ ಕೊಲೆಗಾತಿ ಸುಚನಾ ಸೇಠ್ ಅಸಮಾಧಾನಗೊಂಡಿದ್ದಳು. ಇದೇ ಕಾರಣದಿಂದ ಆಕೆ ಮಗುವನ್ನು ಸಾಯಿಸಿದ್ದಾಳೆ ಎಂದು ಪೊಲೀಸರು ಊಹಿಸಿದ್ದಾರೆ.
ಗಂಡ ಹೆಂಡತಿ ಜಗಳಕ್ಕೆ ಹೆತ್ತ ಮಗುವನ್ನೇ ಕೊಂದ ತಾಯಿ? ಪತಿಗೆ ಕಂದಮ್ಮನ ಕೊಡಲು ಇಷ್ಟವಿಲ್ಲದೆ ಕೊಲೆ!
ಸುಚನಾ ಸೇಠ್ ದಾಖಲಿಸಿದ ಕೌಟುಂಬಿಕ ಹಿಂಸಾಚಾರ ಪ್ರಕರಣವನ್ನು ಡಿಸೆಂಬರ್ 12 ರಂದು ಕೊನೆಯದಾಗಿ ವಿಚಾರಣೆ ನಡೆಸಲಾಗಿತ್ತು. ಇದಾಗಿ ಮೂರು ವಾರದ ನಂತರ ಸುಚನಾ ಸೇಠ್ ತನ್ನ ಮಗುವನ್ನು ಕರೆದುಕೊಂಡು ಉತ್ತರ ಗೋವಾದ ಕ್ಯಾಂಡೋಲಿಮ್‌ನಲ್ಲಿರುವ ಸರ್ವಿಸ್ ಅಪಾರ್ಟ್‌ಮೆಂಟ್‌ಗೆ ಹೋಗಿದ್ದಳು. ಅಲ್ಲಿ ಆಕೆ ಮಗುವನ್ನು ಕೊಲೆ ಮಾಡಿದ್ದಳು. ಅಲ್ಲಿ ಸಿಕ್ಕಿರುವ ಖಾಲಿಯಾದ ಕೆಮ್ಮಿನ ಸಿರಪ್ ಬಾಟಲಿಗಳನ್ನು ಗಮನಿಸಿರುವ ಪೊಲೀಸರು ಇದೊಂದು ಪೂರ್ವಯೋಜಿತ ಕೃತ್ಯ ಎಂದು ಹೇಳುತ್ತಿದ್ದಾರೆ.
ಸುಚನಾ ಸೇಠ್ ಹಾಗೂ ಪತಿ ವೆಂಕಟರಾಮನ್ ನಡುವಿನ ಈ ಕೌಟುಂಬಿಕ ಕಲಹದ ವಿಚಾರಣೆಯನ್ನು ಈ ವರ್ಷದ ಜನವರಿ 29ಕ್ಕೆ ಕೋರ್ಟ್ ಮುಂದೂಡಿಕೆ ಮಾಡಿತ್ತು. 2010ರ ನವಂಬರ್‌ನಲ್ಲಿ ಸುಚನಾ ಸೇಠ್ ಹಾಗೂ ವೆಂಕಟರಾಮನ್ ಮದುವೆಯಾಗಿದ್ದರು. ಮದುವೆಯಾಗಿ ಸರಿಸುಮಾರು 9 ವರ್ಷದ ನಂತರ ಅಂದರೆ 2019ರಲ್ಲಿ ಈ ಗಂಡು ಮಗು ಜನಿಸಿತ್ತು. ಮಾರ್ಚ್ 2021ರಿಂದಲೂ ತಾನು ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸ ಮಾಡುತ್ತಿರುವೆ ಎಂದು ಕೋರ್ಟ್‌ಗೆ ಸುಚನಾ ತಿಳಿಸಿದ್ದಳು.
ಕಂದು ಬಣ್ಣದ ಬ್ಯಾಗೊಂದರಲ್ಲಿ ಮಗನ ಶವವನ್ನು ತುಂಬಿಸಿ ಗೋವಾದಿಂದ ಬೆಂಗಳೂರಿಗೆ ಬರುತ್ತಿದ್ದಾಗ ಚಿತ್ರದುರ್ಗದ ಹಿರಿಯೂರು ಸಮೀಪ ಆಕೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಳು. ಗೋವಾ ಸರ್ವೀಸ್ ಅಪಾರ್ಟ್‌ಮೆಂಟ್‌ನ ಸಿಬ್ಬಂದಿ ಆಕೆ ವಾಸವಿದ್ದ ರೂಮ್‌ನ್ನು ಸ್ವಚ್ಛಗೊಳಿಸುತ್ತಿದ್ದ ವೇಳೆ ಅಪಾರ್ಟ್‌ಮೆಂಟ್‌ನಲ್ಲಿ ರಕ್ತದಿಂದ ತುಂಬಿದ್ದ ಟವೆಲ್‌ನ್ನು ನೋಡಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೂಡಲೇ ಪೊಲೀಸರು ಸುಚನಾ ಸೇಠ್ ಪ್ರಯಾಣ ಮಾಡುತ್ತಿದ್ದ ಕ್ಯಾಬ್‌ನ ಚಾಲಕನನ್ನು ಸಂಪರ್ಕಿಸಿದ್ದರು. ಅಲ್ಲದೇ ಆತನಲ್ಲಿ ಸೂಕ್ಷ್ಮವಾಗಿ ಮಾತನಾಡಿ ಸಮೀಪದ ಪೊಲೀಸ್ ಠಾಣೆಗೆ ಕಾರನ್ನು ಕೊಂಡೊಯ್ಯುವಂತೆ ಹೇಳಿದ್ದರು. ಹೀಗಾಗಿ ಆಕೆ ಮಗುವಿನ ಶವ ಸಮೇತ ಸಿಕ್ಕಿಬಿದ್ದಿದ್ದಳು.
ಗೋವಾದಲ್ಲಿ ಮಗು ಕೊಂದ ಬೆಂಗಳೂರು ಸ್ಟಾರ್ಟಪ್ ಸಂಸ್ಥಾಪಕಿ ಅರೆಸ್ಟ್: ಶವದ ಸಮೇತ ಕರ್ನಾಟಕದಲ್ಲಿ ಸಿಕ್ಕಿಬಿದ್ದ ಪಾತಕಿ!
ಆಕೆಯನ್ನು ಗೋವಾ ಪೊಲೀಸರ ಕಸ್ಟಡಿಗೆ ನೀಡಲಾಗಿದ್ದು, ಇಲ್ಲಿವರೆಗಿನ ವಿಚಾರಣೆ ವೇಳೆ ಆಕೆ ತುಂಬಾ ಸಲ ಪೊಲೀಸರ ದಾರಿ ತಪ್ಪಿಸಲು ನೋಡಿದ್ದಾಳೆ. ಆಕೆ ಇದ್ದ ಕೋಣೆಯಲ್ಲಿ ಸಿಕ್ಕ ರಕ್ತದಿಂದ ಕೂಡಿದ ಟವೆಲ್ ಬಗ್ಗೆ ಕೇಳಿದಾಗ ಅದು ಋತುಸ್ರಾವದಿಂದ ಆದ ರಕ್ತ ಎಂದು ಹೇಳಿದ್ದಳು ಎಂದು ತಿಳಿದು ಬಂದಿದೆ. ಈ ವೇಳೆ ಪೊಲೀಸರು ವಿಚಾರಣೆ ನಡೆಸಿದಾಗ ಮಗು ಹೇಗೆ ಸತ್ತಿದೆ ಎಂದು ನನಗೆ ಗೊತ್ತಿಲ್ಲ, ನಿದ್ದೆಯ ನಂತರ ನೋಡಿದಾಗ ಆತ ಸಾವನ್ನಪಿದ್ದ ಎಂದು ಸುಳ್ಳು ಹೇಳಿದ್ದಳು. ಆದರೆ ನಂತರ ಪೊಲೀಸರು ಆಕೆಗೆ ನೀರಿಳಿಸಿದ್ದು, ಈಗ ಆಕೆ ತಾನೇ ಮಗುವನ್ನು ಕೊಂದೆ ಎಂದು ಒಪ್ಪಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ.