Aadhaar Card Misuse Check: ನಿಮ್ಮ ಆಧಾರ್ ಕಾರ್ಡ್ ಮಿಸ್ ಯೂಸ್ ಆಗ್ತಿದೆಯಾ?: ಕೇವಲ 2 ನಿಮಿಷಗಳಲ್ಲಿ ಇದನ್ನ ಪತ್ತೆ ಮಾಡಿ

Published : Jun 06, 2026, 04:43 PM IST
Aadhaar Card

ಸಾರಾಂಶ

ಡಿಜಿಟಲ್ ಯುಗದಲ್ಲಿ ಅನಿವಾರ್ಯವಾಗಿರುವ ಆಧಾರ್ ಕಾರ್ಡ್, ದುರುಪಯೋಗದ ಅಪಾಯವನ್ನೂ ಹೊಂದಿದೆ. ನಿಮ್ಮ ಅನುಮತಿಯಿಲ್ಲದೆ ಬೇರೆಯವರು ನಿಮ್ಮ ಆಧಾರ್ ಬಳಸುತ್ತಿದ್ದಾರೆಯೇ ಎಂದು ತಿಳಿಯಲು, ಅದರ ಬಳಕೆಯ ಇತಿಹಾಸವನ್ನು (Authentication History) ಸುಲಭವಾಗಿ ಪರಿಶೀಲಿಸಬಹುದು.

ಬೆಂಗಳೂರು (ಜೂ.6): ಇಂದಿನ 'ಡಿಜಿಟಲ್ ಇಂಡಿಯಾ' (Digital India) ಯುಗದಲ್ಲಿ ನಮ್ಮ ದೈನಂದಿನ ಬಹುತೇಕ ಕೆಲಸಗಳು ಆನ್‌ಲೈನ್ ಮೂಲಕವೇ ನಡೆಯುತ್ತಿವೆ. ಇಂತಹ ಆನ್‌ಲೈನ್ ಸೇವೆಗಳಿಗೆ ಹಾಗೂ ಡಿಜಿಟಲ್ ವ್ಯವಹಾರಗಳಿಗೆ ಆಧಾರ್ ಕಾರ್ಡ್ ಅತ್ಯಂತ ಪ್ರಮುಖ ಮತ್ತು ಅನಿವಾರ್ಯ ದಾಖಲೆಯಾಗಿದೆ. ಕೇವಲ ಡಿಜಿಟಲ್ ಕ್ಷೇತ್ರ ಮಾತ್ರವಲ್ಲದೆ ಶಾಲೆ, ಕಾಲೇಜು ಪ್ರವೇಶಾತಿ, ಬ್ಯಾಂಕ್ ಖಾತೆ ತೆರೆಯುವುದು ಸೇರಿದಂತೆ ಪ್ರತಿಯೊಂದು ಕೆಲಸಕ್ಕೂ ಆಧಾರ್ ಕಾರ್ಡ್ ಈಗ ಕಡ್ಡಾಯ. ಹೀಗಾಗಿ, ನಮ್ಮ ಜೀವನದಲ್ಲಿ ಈ ಕಾರ್ಡ್‌ನ ಪ್ರಾಮುಖ್ಯತೆಯನ್ನು ಮತ್ತೊಮ್ಮೆ ಪ್ರತ್ಯೇಕವಾಗಿ ವಿವರಿಸುವ ಅಗತ್ಯವೇ ಇಲ್ಲ.

ಆದರೆ, ಹೆಚ್ಚುತ್ತಿರುವ ಡಿಜಿಟಲೀಕರಣದ ನಡುವೆ ಈ ಕಾರ್ಡ್‌ಗೆ ಸಂಬಂಧಿಸಿದ ವಂಚನೆ ಪ್ರಕರಣಗಳೂ ಕೂಡ ಅಷ್ಟೇ ವೇಗವಾಗಿ ಹೆಚ್ಚುತ್ತಿವೆ. ನಿಮಗೆ ಗೊತ್ತೇ ಇಲ್ಲದೆ ಅಥವಾ ನಿಮ್ಮ ಅನುಮತಿಯಿಲ್ಲದೆ ಬೇರಾರೋ ನಿಮ್ಮ ಆಧಾರ್ ಕಾರ್ಡ್ ಅನ್ನು ಕಾನೂನುಬಾಹಿರವಾಗಿ ಬಳಸುತ್ತಿರಬಹುದು. ಒಂದು ವೇಳೆ ಇಂತಹ ದುರುಪಯೋಗ ಸಂಭವಿಸಿದರೆ, ನಿಮಗೆ ಕಾನೂನು ಸಮಸ್ಯೆ ಅಥವಾ ಆರ್ಥಿಕ ನಷ್ಟಕ್ಕೆ ಸಿಲುಕುವ ಅಪಾಯವಿರುತ್ತದೆ. ಆದ್ದರಿಂದಲೇ ಇಂತಹ ಪರಿಸ್ಥಿತಿಗಳ ಬಗ್ಗೆ ಸದಾ ಜಾಗರೂಕರಾಗಿರಬೇಕು ಎಂದು ಸೈಬರ್ ತಜ್ಞರು ಎಚ್ಚರಿಸುತ್ತಾರೆ. ಹಾಗಾದರೆ, ನಿಮ್ಮ ಆಧಾರ್ ಕಾರ್ಡ್ ಎಲ್ಲಾದರೂ ದುರುಪಯೋಗವಾಗುತ್ತಿದೆಯೇ ಎಂಬುದನ್ನು ಪತ್ತೆಹಚ್ಚುವುದು ಹೇಗೆ? ಅದಕ್ಕೆ ಇಲ್ಲಿದೆ ಸರಳ ಪರಿಹಾರ

ನಿಮ್ಮ ಆಧಾರ್‌ ಕಾರ್ಡ್‌ಅನ್ನು ಬೇರೆಯವರು ಬಳಸುತ್ತಿದ್ದಾರೆಯೇ ಅನ್ನೋದನ್ನು ತಿಳಿಯೋದು ಹೇಗೆ?

ನಿಮ್ಮ ಆಧಾರ್ ಕಾರ್ಡ್‌ನ ಬಳಕೆಯ ಇತಿಹಾಸವನ್ನು (Authentication History) ಪರಿಶೀಲಿಸುವುದು ಅತ್ಯಂತ ಸುಲಭವಾಗಿದ್ದು, ಕೇವಲ 2 ನಿಮಿಷಗಳಲ್ಲಿ ನೀವು ಇದನ್ನು ಪತ್ತೆಹಚ್ಚಬಹುದು.

1.ಮೊದಲು ನೀವು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ ಆದ 'myAadhaar' ಪೋರ್ಟಲ್‌ಗೆ ಭೇಟಿ ನೀಡಬೇಕು.

2. ಅಲ್ಲಿ ಕಾಣಿಸುವ 'Login' (ಲಾಗಿನ್) ಆಯ್ಕೆಯ ಮೇಲೆ ಕ್ಲಿಕ್ ಮಾಡಿ, ನಿಮ್ಮ 12 ಅಂಕಿಗಳ ವಿಶಿಷ್ಟ ಆಧಾರ್ ಸಂಖ್ಯೆಯನ್ನು ನಮೂದಿಸಿ.

3. ತದನಂತರ ಪರದೆಯ ಮೇಲಿರುವ ಭದ್ರತಾ ಕೋಡ್ ಅಂದರೆ Captcha (ಕ್ಯಾಪ್ಚಾ) ಅನ್ನು ಸರಿಯಾಗಿ ನಮೂದಿಸಿ.

4. ಈಗ OTP (ಒನ್ ಟೈಮ್ ಪಾಸ್‌ವರ್ಡ್) ಗಾಗಿ ವಿನಂತಿಸಿ.

5. ಈ ಹಂತದಲ್ಲಿ ನಿಮ್ಮ ಆಧಾರ್ ಕಾರ್ಡ್‌ಗೆ ನೋಂದಾಯಿಸಲಾದ ಮೊಬೈಲ್ ಸಂಖ್ಯೆಗೆ ಒಂದು ರಹಸ್ಯ OTP ಸಂದೇಶ ಬರುತ್ತದೆ.

6. ಆ OTP ಅನ್ನು ನಮೂದಿಸುವ ಮೂಲಕ ಯಶಸ್ವಿಯಾಗಿ ಲಾಗಿನ್ ಆಗಿ. ಲಾಗಿನ್ ಆದ ನಂತರ, ಅಲ್ಲಿ ಕಾಣಿಸುವ 'Authentication History' (ದೃಢೀಕರಣದ ಇತಿಹಾಸ) ವಿಭಾಗಕ್ಕೆ ಹೋಗಿ.

7. ಅಲ್ಲಿ ನಿಮ್ಮ ಆಧಾರ್ ಬಳಕೆಯ ವಿವರಗಳನ್ನು ಯಾವ ನಿರ್ದಿಷ್ಟ ತಾರೀಖಿನಿಂದ ನೋಡಲು ಬಯಸುತ್ತೀರೋ, ಆ ತಾರೀಖು ಮತ್ತು ಅವಧಿಯನ್ನು (Date Range) ಆಯ್ಕೆ ಮಾಡಿ.

8. ಇಷ್ಟಾದ ತಕ್ಷಣ, ನಿಮ್ಮ ಆಧಾರ್ ಕಾರ್ಡ್ ಅನ್ನು ಎಲ್ಲೆಲ್ಲಿ, ಯಾವಾಗ ಮತ್ತು ಯಾವುದಕ್ಕಾಗಿ ಬಳಸಲಾಗಿದೆ ಎಂಬ ಸಂಪೂರ್ಣ ವಿವರಗಳು ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಪರದೆಯ ಮೇಲೆ ಮೂಡುತ್ತವೆ.

9. ಅವುಗ: ಪ್ರತಿಯೊಂದು ವಿವರವನ್ನೂ ಸೂಕ್ಷ್ಮವಾಗಿ ಪರಿಶೀಲಿಸಿ.

10. ಆ ಪಟ್ಟಿಯಲ್ಲಿ ನಿಮ್ಮ ಗಮನಕ್ಕೆ ಬಾರದ ಅಥವಾ ನಿಮಗೆ ಸಂಶಯಾಸ್ಪದ ಎನಿಸುವ ಯಾವುದೇ ಬಳಕೆಯ ವಿವರ ಕಂಡುಬಂದಲ್ಲಿ ತಕ್ಷಣವೇ ವರದಿ ಮಾಡಿ.

ಸಂಶಯಾಸ್ಪದ ಬಳಕೆ ಕಂಡುಬಂದಲ್ಲಿ ದೂರು ದಾಖಲಿಸುವುದು ಎಲ್ಲಿ?

ನಿಮ್ಮ ಆಧಾರ್ ಇತಿಹಾಸದಲ್ಲಿ ನೀವು ಮಾಡದ ಯಾವುದೇ ವ್ಯವಹಾರ ಅಥವಾ ಅನಾಮಧೇಯ ಲಾಗಿನ್ ಕಂಡುಬಂದಲ್ಲಿ, ನೀವು ತಕ್ಷಣವೇ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಬೇಕು:

ಹೆಲ್ಪ್‌ಲೈನ್ ಸಂಖ್ಯೆ: ಯುಐಡಿಎಐ (UIDAI) ನ ಅಧಿಕೃತ ಉಚಿತ ಸಹಾಯವಾಣಿ ಸಂಖ್ಯೆಯಾದ 1947 ಗೆ ಕರೆ ಮಾಡುವ ಮೂಲಕ ನೇರವಾಗಿ ನಿಮ್ಮ ದೂರನ್ನು ದಾಖಲಿಸಬಹುದು.

ಇಮೇಲ್ ಮೂಲಕ ದೂರು: ನೀವು help@uidai.gov.in ಎಂಬ ಅಧಿಕೃತ ಇಮೇಲ್ ವಿಳಾಸಕ್ಕೂ ಸಹ ನಿಮ್ಮ ದೂರನ್ನು ಬರೆದು ಕಳುಹಿಸಬಹುದು.

ಸುರಕ್ಷತಾ ಕ್ರಮ: ಇಂತಹ ತುರ್ತು ಪರಿಸ್ಥಿತಿಯಲ್ಲಿ ತಕ್ಷಣವೇ ನಿಮ್ಮ ಆಧಾರ್ ಕಾರ್ಡ್‌ನ ಬಯೋಮೆಟ್ರಿಕ್‌ ವಿವರಗಳನ್ನು (Biometric Lock) ಲಾಕ್ ಮಾಡುವುದು ಅತ್ಯಗತ್ಯ. ಹೀಗೆ ಮಾಡುವುದರಿಂದ ನಿಮ್ಮ ಹೆಬ್ಬೆರಳಿನ ಗುರುತು ಅಥವಾ ಕಣ್ಣಿನ ಐರಿಸ್ ಬಳಸಿ ಬೇರೆ ಯಾರೂ ನಿಮ್ಮ ಆಧಾರ್ ಅನ್ನು ದುರುಪಯೋಗಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.

ಆಧಾರ್ ಬಯೋಮೆಟ್ರಿಕ್‌ ಲಾಕ್ ಮಾಡುವುದು ಹೇಗೆ?

ನಿಮ್ಮ ಆಧಾರ್ ಮಾಹಿತಿಯನ್ನು ಸುರಕ್ಷಿತವಾಗಿಡಲು ಬಯೋಮೆಟ್ರಿಕ್‌ ಲಾಕ್ ವ್ಯವಸ್ಥೆಯನ್ನು ಹೀಗೆ ಸಕ್ರಿಯಗೊಳಿಸಿ

1. ಮೊದಲು UIDAI ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

2. ಅಲ್ಲಿ ಕಾಣಿಸುವ 'Lock or Unlock Biometrics' (ಬಯೋಮೆಟ್ರಿಕ್ಸ್ ಲಾಕ್ ಅಥವಾ ಅನ್‌ಲಾಕ್) ವಿಭಾಗವನ್ನು ಆಯ್ಕೆ ಮಾಡಿಕೊಳ್ಳಿ.

3. ಈಗ ನಿಮ್ಮ ವರ್ಚುವಲ್‌ ಐಡಿ (VID), ನಿಮ್ಮ ಹೆಸರು, ವಾಸಸ್ಥಳದ ಪಿನ್ ಕೋಡ್ (PIN Code) ಮತ್ತು ಕ್ಯಾಪ್ಚಾವನ್ನು ಭರ್ತಿ ಮಾಡಿ.

4. ನಿಮ್ಮ ಮೊಬೈಲ್‌ಗೆ ಬರುವ OTP ಬಳಸಿ ವಿವರಗಳನ್ನು ದೃಢೀಕರಿಸಿ (Verify), ತದನಂತರ ನಿಮ್ಮ ಬಯೋಮೆಟ್ರಿಕ್ ಅನ್ನು ಲಾಕ್ ಮಾಡಿ.

ಈ ಕೆಲವು ಸರಳ ಹಾಗೂ ಪ್ರಮುಖ ಭದ್ರತಾ ನಿಯಮಗಳನ್ನು ಪಾಲಿಸುವ ಮೂಲಕ ನೀವು ಸಂಭವನೀಯ ಸೈಬರ್ ಅಪರಾಧಗಳು ಮತ್ತು ಆಧಾರ್ ವಂಚನೆಯ ದೊಡ್ಡ ಅಪಾಯಗಳಿಂದ ನಿಮ್ಮನ್ನು ಮುನ್ನೆಚ್ಚರಿಕೆಯಾಗಿ ಪಾರುಮಾಡಿಕೊಳ್ಳಬಹುದು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡಿವೋರ್ಸ್ ವೇಳೆ ಅಕ್ರಮ ಸಂಬಂಧ ಒಪ್ಪಿಕೊಂಡ ಪತ್ನಿ, ಜೀವನಾಂಶ ಕುರಿತು ಕೋರ್ಟ್ ಮಹತ್ವದ ಆದೇಶ
ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!