
ಆಯೋಧ್ಯೆ(ಜ.22) ಭವ್ಯ ರಾಮ ಮಂದಿರ ಉದ್ಘಾಟನೆಯಾಗಿದೆ. ಪ್ರಧಾನಿ ಮೋದಿ ಅಮೃತಹಸ್ತದಲ್ಲಿ ಪ್ರಾಣಪ್ರತಿಷ್ಠೆ ನೆರವೇರಿಸಿದ್ದಾರೆ. ರಾಮ ಮಂದಿರ ಪ್ರಾಣಪ್ರತಿಷ್ಠೆ ಕಾರ್ಯಕ್ರಮಕ್ಕೆ ಬಹುತೇಕ ಎಲ್ಲಾ ಆಹ್ವಾನಿತ ಗಣ್ಯರು ತಪ್ಪದೇ ಹಾಜರಾಗಿದ್ದಾರೆ. ಆದರೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಆಹ್ವಾನ ತಿರಸ್ಕರಿಸಿತ್ತು.ರಾಮ ಮಂದಿರ ಪ್ರಾಣಪ್ರತಿಷ್ಠೆಯನ್ನು ಬಿಜೆಪಿ ರಾಜಕೀಯ ಕಾರ್ಯಕ್ರಮವನ್ನಾಗಿ ಮಾಡಿದೆ ಎಂದು ಆರೋಪಿಸಿತ್ತು. ಕಾಂಗ್ರೆಸ್ ಪ್ರಾಣಪ್ರತಿಷ್ಠೆ ಕಾರ್ಯಕ್ರಮ ತಿರಸ್ಕರಿಸಿದರೂ ಹಿಮಾಚಲ ಪ್ರದೇಶದ ಕಾಂಗ್ರೆಸ್ ಮಾಜಿ ಸಿಎಂ ಪುತ್ರ, ಹಾಲಿ ಕಾಂಗ್ರೆಸ್ ಸರ್ಕಾರದ ಸಚಿವ ವಿಕ್ರಮಾದಿತ್ಯ ಸಿಂಗ್ ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಹಾಜರಾಗಿದ್ದಾರೆ.
ಹಿಮಾಚಲ ಪ್ರದೇಶ ಕಾಂಗ್ರೆಸ್ ಅಧ್ಯಕ್ಷೆ ಪ್ರತಿಭಾ ಸಿಂಗ್ ಪುತ್ರ ವಿಕ್ರಮಾದಿತ್ಯ ಸಿಂಗ್ ರಾಮ ಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಂಡಿದ್ದಾರೆ. ವಿಕ್ರಮಾದಿತ್ಯ ಸಿಂಗ್ ಜೊತೆ ಹಿಮಾಚಲ ಪ್ರದೇಶ ಕಾಂಗ್ರೆಸ್ ಶಾಸಕ ಸುಧೀರ್ ಶರ್ಮಾ ಕೂಡ ಪಾಲ್ಗೊಂಡಿದ್ದಾರೆ. ರಾಮ ಮಂದಿರ ಬಿಜೆಪಿ ಕಾರ್ಯಕ್ರಮ, ಹೀಗಾಗಿ ಪಾಲ್ಗೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಅಧಿಕೃತ ಪ್ರಕಟಣೆಯಿಂದ ಹಲವು ನಾಯಕರು ರಾಮ ಮಂದಿರ ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಂಡಿಲ್ಲ. ಆದರೆ ವಿಕ್ರಮಾದಿತ್ಯ ಸಿಂಗ್ ಹಾಗೂ ಸುಧೀರ್ ಶರ್ಮಾ ಹೈಕಮಾಂಡ್ ಆದೇಶದ ನಡುವೆಯೂ ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಂಡು, ಪ್ರಭು ಶ್ರೀರಾಮನ ಆಶಿರ್ವಾದ ಪಡೆದಿದ್ದಾರೆ.
ಟೆಂಟ್ ಅಲ್ಲ, ಭವ್ಯ ಮಂದಿರದಲ್ಲಿ ಶ್ರೀರಾಮನ ದರ್ಶನ, ಮಂದಿರ ಲೋಕಾರ್ಪಣೆಗೊಳಿಸಿ ಮೋದಿ ಭಾಷಣ!
ಇದು ನನ್ನ ಸೌಭಾಗ್ಯ ಎಂದು ಭಾವಿಸುತ್ತೇನೆ. ಈ ಪವಿತ್ರ ದಿನದಲ್ಲಿ ಆಯೋಧ್ಯೆ ರಾಮನಗರಿಯಲ್ಲಿ ಭಗವಾನ್ ಶ್ರೀರಾಮನ ಮನೆಗೆ ಬಂದಿದ್ದೇವೆ. ಶ್ರೀರಾಮನ ಆಶೀರ್ವಾದ ಪಡೆಯಲು ನಾನು ಇಲ್ಲಿಗೆ ಬಂದಿದ್ದೇನೆ. ಹಿಂದೂ, ಭರತ ವರ್ಷ ಹಾಗೂ ಇಡೀ ವಿಶ್ವಕ್ಕೆ ಇಂದು ಅತ್ಯಂತ ಮಹತ್ವದ ದಿನವಾಗಿದೆ. ಈ ದಿನ ನನಗೆ ಇಲ್ಲಿಗೆ ಆಗಮಿಸುವ ಅವಕಾಶ ಸಿಕ್ಕಿದೆ. ಹಿಮಾಚಲ ಪ್ರದೇಶದ ಎಲ್ಲಾ ಜನತೆಗೆ ಭಗವಾನ್ ಶ್ರೀರಾಮ ಒಳಿತು ಮಾಡಲಿ. ಇತ್ತೀಚೆಗೆ ಹಿಮಾಚಲ ಪ್ರದೇಶದಲ್ಲಿನ ಮಳೆ ಪ್ರವಾಹಕ್ಕೆ ಭಾರಿ ನಷ್ಟ ಸಂಭವಿಸಿದೆ. ಪ್ರಾಕೃತಿಕ ವಿಕೋಪಕ್ಕೆ ಜನರು ತತ್ತರಿಸಿದ್ದಾರೆ. ಎಲ್ಲಾ ಸಂಕಷ್ಟಗಳಿಂದ ಹಿಮಾಚಲ ಪ್ರದೇಶ ಮುಕ್ತವಾಗಿ ಅಭಿವೃದ್ಧಿ ಕಾಣಲಿ ಎಂದು ಭಗವಾನ್ ಶ್ರೀರಾಮನಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ವಿಕ್ರಮಾದಿತ್ಯ ಸಿಂಗ್ ಹೇಳಿದ್ದಾರೆ.
ಭಗವಾನ್ ಶ್ರೀರಾಮನ ದರ್ಶನಕ್ಕೂ ಮೊದಲು ಹನುಮಾನ್ ಗುಡಿಗೆ ತೆರಳಿ ದರ್ಶನ ಪಡೆದ ವಿಕ್ರಮಾದಿತ್ಯ ಸಿಂಗ್, ಸಂಪೂರ್ಣ ಪ್ರಾಣಪ್ರತಿಷ್ಠೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ವೈಯುಕ್ತಿಕವಾಗಿ ಆಯೋಧ್ಯೆ ರಾಮ ಮಂದಿರ ಪ್ರಾಣಪ್ರತಿಷ್ಠೆಗೆ ತೆರಳುವ ನಾಯಕರಿಗೆ ಕಾಂಗ್ರೆಸ್ ನಿರ್ಬಂಧ ವಿಧಿಸಿಲ್ಲ ಎಂದು ಸ್ಪಷ್ಟಪಡಿಸಿತ್ತು. ಆದರೆ ಹೈಕಮಾಂಡ್ ಆದೇಶವನ್ನು ಬಹುತೇಕ ಕಾಂಗ್ರೆಸ್ ನಾಯಕರು ಮೀರಿಲ್ಲ. ಕೇವಲ ವಿಕ್ರಮಾದಿತ್ಯ ಸಿಂಗ್ ಹಾಗೂ ಸುಧೀರ್ ಶರ್ಮಾ ಇಬ್ಬರು ಪ್ರಾಣಪ್ರತಿಷ್ಠೆಯಲ್ಲಿ ಪಾಲ್ಗೊಂಡಿದ್ದಾರೆ.
ಶ್ರೀರಾಮ ಪ್ರಸಾದ ಸ್ವೀಕರಿಸುವ ಮೂಲಕ ಪ್ರಾಣಪ್ರತಿಷ್ಠೆಗೆ ಕೈಗೊಂಡ ಉಪವಾಸ ಪೂರ್ಣಗೊಳಿಸಿದ ಮೋದಿ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ