
ಇತ್ತೀಚೆಗೆ ಯುವ ಸಮೂಹದಲ್ಲಿ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಡಾನ್ಸ್ ಮಾಡುತ್ತಿದ್ದಾಗ, ಪ್ರಯಾಣಿಸುತ್ತಿದ್ದಾಗ, ಸುಮ್ಮನೇ ಕುಳಿತಿದ್ದಾಗ, ಇನ್ನೇನು ಹಸೆಮಣೆ ಏರಲು ಸಿದ್ಧಗೊಳ್ಳುತ್ತಿದ್ದಾಗ, ಹೀಗೆ ವಿವಿಧ ಸಂದರ್ಭಗಳಲ್ಲಿ ಇದ್ದಕ್ಕಿದ್ದಂತೆ ಯುವಕರು ಯುವತಿಯರು ಹಠಾತ್ ಆಗಿ ಸಾವನ್ನಪ್ಪುತ್ತಿದ್ದಾರೆ. ಯುವಕರ ಈ ಹಠಾತ್ ಸಾವಿನಿಂದಾಗಿ ಅನೇಕ ಪೋಷಕರು ಕಂಗಾಲಾಗಿದ್ದಾರೆ. ಈ ಹಠಾತ್ ಸಾವಿನ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಈ ಮಧ್ಯೆ ನಿಜವಾದ ಹೃದಯವೇ ಇಲ್ಲದ ಬರೀ ಕೃತಕ ಹೃದಯದಿಂದ ಬದುಕುತ್ತಿರುವ ಮಹಿಳೆಯೊಬ್ಬರಿದ್ದಾರೆ ಎಂಬ ವಿಚಾರ ನಿಮಗೆ ಗೊತ್ತಾ..? ಅಚ್ಚರಿ ಎನಿಸಿದರು ಈ ವಿಚಾರ ಸತ್ಯ.
ಬ್ರಿಟನ್ ಪ್ರಜೆ ಸೆಲ್ವಾ ಹುಸೈನ್ ಎಂಬುವವರಿಗೆ ನಿಜವಾದ ಹೃದಯವೇ ಇಲ್ಲ. ನೈಸರ್ಗಿಕ ಹೃದಯವೇ ಇಲ್ಲದಿದ್ದರು ಅವರು ಎಲ್ಲರಂತೆ ಬದುಕುತ್ತಿರುವುದು ಇಡೀ ಜಾಗತಿಕ ವೈದ್ಯಲೋಕವನ್ನೇ ಅಚ್ಚರಿಗೀಡು ಮಾಡಿದೆ. ಹಾಗಂತ ಜನ್ಮತಃ ಅವರಿಗೆ ಹೃದಯವೇ ಇರಲಿಲ್ಲ ಎಂದಲ್ಲ, ಎಲ್ಲರಂತೆ ಅವರಿಗೂ ನೈಸರ್ಗಿಕವಾದ ಹೃದಯವೇ ಇತ್ತು. ಆದರೆ ಅವರ 39ನೇ ವಯಸ್ಸಿಗೆ ಅವರಿಗೆ ಹೃದಯಾಘಾತವಾಗಿ ಹೃದಯ ಕೆಲಸ ಮಾಡುವುದು ನಿಲ್ಲಿಸಿತು. ಹೃದಯ ಕೆಲಸ ಮಾಡುವುದು ನಿಲ್ಲಿಸಿದ ಮೇಲೆ ಯಾರು ಬದುಕುವುದೇ ಇಲ್ಲ, ಮನುಷ್ಯರು ಸಾಯಲೇಬೇಕು. ಆದರೆ ಹಾಗೆ ಆಗಲೇ ಇಲ್ಲ.
ಇದನ್ನೂ ಓದಿ: ಯಾರಿಗೂ ಬೇಡದ ಕಲ್ಲಿನಿಂದಲೂ ಹಣ ಮಾಡ್ಬಹುದು ಎಂದು ತೋರಿಸಿಕೊಟ್ಟ ಹುಡುಗ: ವೀಡಿಯೋ ಭಾರಿ ವೈರಲ್
ವೈದ್ಯರ ಚಾಣಾಕ್ಷತನದ ನಡೆಯಿಂದ ಸೆಲ್ವಾ ಹುಸೈನ್ ಬದುಕುಳಿದರು. ಅದು ಹೇಗೆ ಅಂತೀರಾ, ಅವರ ವೈಫಲ್ಯಕ್ಕೊಳಗಾದ ಹೃದಯವನ್ನು ಕೂಡಲೇ ತೆಗೆದ ವೈದ್ಯರು ಆ ಜಾಗದಲ್ಲಿ ಕೃತಕವಾಗಿ ಹೃದಯದ ಸಿಸ್ಟಂ ಅನ್ನು ಕೂಡಲೇ ಅಳವಡಿಸಿದರು. ಇದರಿಂದ ಸೆಲ್ವಾ ಹುಸೈನ್ ಹೃದಯವಿಲ್ಲದಿದ್ದರೂ ಜೀವಂತವಾಗುಳಿದರು. ಈ ಮೂಲಕ ಇಂತಹ ಪ್ರಕ್ರಿಯೆಯೊಂದರ ಮೂಲಕ ಬದುಕುಳಿದ ಪ್ರಪಂಚದ ಏಕೈಕ ಮಹಿಳೆ ಎಂಬ ಹೆಗ್ಗಳಿಕೆಗೆ ಸೆಲ್ವಾ ಹುಸೈನ್ ಅವರು ಪಾತ್ರರಾಗಿದ್ದಾರೆ. ಹಾಗಂತ ಇದೊಂದು ಸುಲಭದ ಕೆಲಸ ಏನು ಅಲ್ಲ. ಈ ಕೃತಕ ಹೃದಯ ಬರೋಬರಿ ಅರು ಕೇಜಿ ತೂಕವನ್ನು ಹೊಂದಿದೆ ಹಾಗೂ ಇದು ಇದು ದೇಹದ ಹೊರಗಿನಿಂದ ಕೆಲಸ ಮಾಡುತ್ತಿದೆ.
ಹೀಗಾಗಿ ಸೆಲ್ವಾ ಬದುಕುಳಿಯಬೇಕಾದರೆ ಇದನ್ನು ನಿಧಿಯಂತೆ ಸದಾ ಬೆನ್ನಮೇಲೋ ಕೈಯಲ್ಲಿ ಹಿಡಿದೋ ಹೊತ್ತು ಸಾಗಬೇಕು. ಎರಡು ಮಕ್ಕಳ ತಾಯಿಯಾಗಿರುವ ಸೆಲ್ವಾ ಈ ಎಲ್ಲಿಗೆಬೇಕಾದರಲ್ಲಿಗೆ ಹೊತ್ತೊಯ್ಯಬಲ್ಲ, ಈ ಕೃತಕ ಹೃದಯದ ಸಹಾಯದಿಂದ ಬದುಕುಳಿದಿದ್ದು, ತಮ್ಮ ದೈನಂದಿನ ಎಲ್ಲಾ ಕೆಲಸಗಳನ್ನು ಅವರು ಮಾಡಿಕೊಂಡು ಹೋಗುತ್ತಾರೆ. ಬದುಕುಳಿಯಬೇಕಾದರೆ ಸಲ್ಮಾಗೆ ಈ ಹೃದಯವಿರುವ ಮೆಷಿನ್ ಬಹಳ ಅಗತ್ಯವಾಗಿದೆ. ಅರು ಕೇಜಿ ತೂಗುವ ಈ ಹೃದಯವನ್ನು ಅವರು ತಮ್ಮ ಬ್ಯಾಗ್‌ನಲ್ಲಿ ಇರಿಸಿಕೊಂಡು ತಾವು ಹೋಗುವಲೆಲ್ಲಾ ತೆಗೆದುಕೊಂಡು ಹೋಗುತ್ತಾರೆ.
ಇದನ್ನೂ ಓದಿ: ವೈರಲ್ ಮೀಮ್ಸ್ ಆಗಿದ್ದ ಯುವಕನ ಫೋಟೋದ ಹಿಂದಿದೆ ನೋವಿನ ಕತೆ
ಇದು ಒಂದು ಮೋಟಾರ್ ಹಾಗೂ ಪಂಪ್ ಅನ್ನು ಹೊಂದಿದ್ದು, ಇದು ಅವಳ ಎದೆಗೆ ಸಂಪರ್ಕಗೊಂಡಿರುವ ಕೊಳವೆಗಳ ಮೂಲಕ ಗಾಳಿಯನ್ನು ತಳ್ಳುತ್ತದೆ. ಈ ಮೂಲಕ ಯಂತ್ರವೂ ಆಕೆಯ ದೇಹದಾದ್ಯಂತ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಸೆಲ್ವಾ ಹುಸೈನ್ ಅವರ ಪ್ರಕರಣವು ವೈದ್ಯಕೀಯ ತಂತ್ರಜ್ಞಾನವು ಎಷ್ಟು ಮುಂದುವರೆದಿದೆ ಎಂಬುದನ್ನು ತೋರಿಸುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇದು ಬೇರೆ ಯಾವುದೇ ಚಿಕಿತ್ಸೆಯ ಆಯ್ಕೆಗಳಿಲ್ಲದ ತೀವ್ರ ಹೃದಯ ಕಾಯಿಲೆ ಇರುವ ರೋಗಿಗಳಿಗೆ ಭರವಸೆಯನ್ನು ನೀಡುತ್ತದೆ. ಯುವ ಸಮೂಹದಲ್ಲಿ ಹೃದಯಘಾತಗಳು ಹೆಚ್ಚುತ್ತಿರುವ ಈ ಸಮಯದಲ್ಲಿ ಇಂತಹದೊಂದು ಯಂತ್ರದ ಬಗ್ಗೆ ನಿಮಗೇನನಿಸುತ್ತದೆ ಕಾಮೆಂಟ್ ಮಾಡಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ