
ಅಬುಧಾಬಿ: ವಿಮಾನ 36,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ ಪ್ರಯಾಣಿಕರೊಬ್ಬರಿಗೆ ಆರೋಗ್ಯದಲ್ಲಿ ಏರುಪೇರಾಗಿ ತುರ್ತು ಆರೋಗ್ಯ ಸಹಾಯದ ಅಗತ್ಯ ಬೇಕಿತ್ತು. ಈ ವೇಳೆ ವಿಮಾನದಲ್ಲಿ ಇಬ್ಬರು ಭಾರತದ ಕೇರಳದ ಮಲೆಯಾಳಿ ನರ್ಸ್‌ಗಳು ಆ ರೋಗಿಗೆ ನೆರವಾಗುವ ಮೂಲಕ ಮಾನವೀಯತೆ ಮೆರೆದಿದ್ದು, ಇವರ ಕಾರ್ಯಕ್ಕೆ ಈಗ ಶ್ಲಾಘನೆ ವ್ಯಕ್ತವಾಗ್ತಿದೆ. ವಿಮಾನ ಮಧ್ಯ ಆಗಸದಲ್ಲಿ ಹಾರುತ್ತಿದ್ದಾಗ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ಹೃದಯಾಘಾತವಾಗಿದೆ. ಕೂಡಲೇ ವಿಮಾನದಲ್ಲಿದ್ದ ಇಬ್ಬರು ನರ್ಸ್‌ಗಳು ಅವರ ಸಹಾಯಕ್ಕೆ ಧಾವಿಸಿ ಬಂದು ಜೀವ ಉಳಿಸಿದ್ದಾರೆ. ಈ ವಿಮಾನವೂ ಕೇರಳದ ಕೊಚ್ಚಿಯಿಂದ ಅಬುಧಾಬಿಗೆ ಹೋಗುತ್ತಿದ್ದಾಗ ಘಟನೆ ನಡೆದಿದೆ. ಯುಎಇಯ ಏರ್ ಅರೇಬಿಯಾದ ಈ ವಿಮಾನದಲ್ಲಿ ಕೇರಳದ ಇಬ್ಬರು ನರ್ಸ್‌ಗಳಾದ ಅಭಿಜಿತ್ ಜೀಸ್ ಹಾಗೂ ಅಜೀಶ್ ನೆಲ್ಸನ್ ಇದ್ದರು. ಈ ಇಬ್ಬರು ಹೃದಯಾಘಾತಕ್ಕೆ ಒಳಗಾದ 34 ವರ್ಷದ ತ್ರಿಶೂರ್‌ನ ನಿವಾಸಿಗೆ ವೈದ್ಯಕೀಯ ನೆರವು ನೀಡುವ ಮೂಲಕ ಹೀರೋಗಳಾಗಿದ್ದಾರೆ.
ಮೊದಲ ವಿಮಾನ ಪ್ರಯಾಣದಲ್ಲಿದ್ದ ಅಭಿಜಿತ್, ಅಜೀಶ್
ಆಕ್ಟೋಬರ್ 13ರಂದು ಏರ್ ಅರೇಬಿಯಾದ ವಿಮಾನ 3ಎಲ್ 128ನಲ್ಲಿ ಈ ಘಟನೆ ನಡೆದಿದೆ. ನರ್ಸ್‌ಗಳಾದ ವಯನಾಡ್ ಮೂಲದ 26 ವರ್ಷದ ಅಭಿಜಿತ್ ಹಾಗೂ ಚೆಂಗನೂರ್ ಮೂಲದ 29 ವರ್ಷದ ಅಜೀಶ್ ಅವರು ತಮ್ಮ ಮೊದಲ ವಿಮಾನ ಪಯಣದಲ್ಲಿದ್ದಾಗಲೇ ಈ ಘಟನೆ ನಡೆದಿದೆ. ಯುಎಇಯ ಅತಿದೊಡ್ಡ ತುರ್ತು ಮತ್ತು ಆನ್-ಸೈಟ್ ವೈದ್ಯಕೀಯ ಸೇವೆಗಳನ್ನು ಒದಗಿಸುವ ರೆಸ್ಪಾನ್ಸ್ ಪ್ಲಸ್ ಹೋಲ್ಡಿಂಗ್ ಅಡಿಯಲ್ಲಿ ರೆಸ್ಪಾನ್ಸ್ ಪ್ಲಸ್ ಮೆಡಿಕಲ್ (RPM)ನಲ್ಲಿ ನೋಂದಾಯಿತ ನರ್ಸ್‌ಗಳಾಗಿ ಇತ್ತಿಚೆಗಷ್ಟೇ ಈ ಇಬ್ಬರು ಕೆಲಸ ಗಿಟ್ಟಿಸಿಕೊಂಡಿದ್ದರು. ಈ ಕೆಲಸಕ್ಕೆ ಸೇರುವುದಕ್ಕಾಗಿ ಇವರಿಬ್ಬರು ಅಬುಧಾಬಿಗೆ ಹೋಗುತ್ತಿದ್ದು, ಇದು ಅವರ ಮೊದಲ ವಿಮಾನ ಪ್ರಯಾಣವಾಗಿತ್ತು. ಈ ರೆಸ್ಪಾನ್ಸ್ ಪ್ಲಸ್ ಮೆಡಿಕಲ್ ಅನ್ನು ಕೇರಲದ ಹೆಸರಾಂತ ಆರೋಗ್ಯ ಉದ್ಯಮಿ ಡಾ. ಶಂಶೀರ್ ವಯಲಿಲ್ ಸ್ಥಾಪಿಸಿದ್ದಾರೆ.
ಘಟನೆ ನಡೆದ ಏರ್ ಅರೇಬಿಯಾ ವಿಮಾನವೂ ಕೊಚ್ಚಿ ವಿಮಾನ ನಿಲ್ದಾಣದಿಂದ ಮುಂಜಾನೆ 5.30ರ ಸುಮಾರಿಗೆ ಟೇಕಾಫ್ ಆಗಿತ್ತು. ಈ ವಿಮಾನವೂ ಅರಬ್ಬಿ ಸಮುದ್ರದ ಮೇಲೆ ಹಾರುತ್ತಿದ್ದಾಗ ಬೆಳಗ್ಗಿನ ಜಾವ 5.50ರ ಸುಮಾರಿಗೆ ಅಭಿಜಿತ್ ಅವರು ತಮ್ಮ ಸಹ ಪ್ರಯಾಣಿಕ ಉಸಿರಾಡುವುದಕ್ಕೆ ಕಷ್ಟಪಡುತ್ತಿರುವುದನ್ನು ಗಮನಿಸಿದರು. ವ್ಯಕ್ತಿಯೊಬ್ಬರು ಚಲನರಹಿತವಾಗಿ ಮಲಗಿರುವುದನ್ನು ನಾನು ನೋಡಿದೆ ಮತ್ತು ಪರಿಕ್ಷಿಸಿದಾಗ ಅವರಿಗೆ ನಾಡಿಮಿಡಿತ ಸಿಗಲಿಲ್ಲ ಹೀಗಾಗಿ ಅವನಿಗೆ ಹೃದಯಾಘಾತವಾಗಿದೆ ಎಂಬುದು ಸ್ಪಷ್ಟವಾಗಿತ್ತು ಎಂದು ಅವರು ಘಟನೆಯನ್ನು ನೆನಪಿಸಿಕೊಂಡರು.
ಕೂಡಲೇ ಅಭಿಜಿತ್ ಅವರು ವಿಮಾನದ ಸಿಬ್ಬಂದಿಗೆ ಈ ವಿಚಾರವನ್ನು ಗಮನಕ್ಕೆ ತಂದರು. ಅಲ್ಲದೇ ಅವರಿಗೆ ಸಿಪಿಆರ್ ಮಾಡುವುದಕ್ಕೆ ಶುರು ಮಾಡಿದರು. ಇವರಿಗೆ ಅಜೀಶ್ ಅವರು ಕೂಡ ಕೈ ಜೋಡಿಸಿದರು. ಇಬ್ಬರು ಸೇರಿ ಎರಡು ಸುತ್ತುಗಳ ಸಿಪಿಆರ್‌ನ್ನು ಮಾಡಿದರು. ಇದಾದ ನಂತರವೇ ಹದಯಾಘಾತಕ್ಕೀಡಾದ ಪ್ರಯಾಣಿಕನ ನಾಡಿಮಿಡಿತ ಸಿಕ್ಕಿತು. ಹಾಗೆಯೇ ಈ ವಿಮಾನದಲ್ಲಿದ್ದ ಮತ್ತೊಬ್ಬ ವೈದ್ಯ ಡಾ. ಅರಿಫ್ ಅಬ್ದುಲ್ ಖದೀರ್ ಅವರು ಕೂಡ ಈ ನರ್ಸ್‌ಗಳಿಗೆ ಸಹಾಯ ಮಾಡಿದರು. ವಿಮಾನವು ಅಬುಧಾಬಿಯಲ್ಲಿ ಸುರಕ್ಷಿತವಾಗಿ ಇಳಿಯುವವರೆಗೆ ರೋಗಿಯನ್ನು ಸ್ಥಿರಗೊಳಿಸಲು IV ದ್ರವಗಳನ್ನು ನೀಡುವ ಮೂಲಕ ಅವರಿಗೆ ಸಹಾಯ ಮಾಡಿದರು.
ಇದು ನಮ್ಮ ಮೊದಲ ವಿದೇಶಿ ಪ್ರಯಾಣ, ಆದರೆ ಈ ನಮ್ಮ ಪ್ರಯಾಣದ ಆರಂಭದಲ್ಲೇ ವ್ಯಕ್ತಿಯೊಬ್ಬರ ಜೀವ ಉಳಿಸುವ ಅವಕಾಶ ಸಿಕ್ಕಿದ್ದು, ನಮ್ಮ ಆಶೀರ್ವಾದ ಎಂದು ಅಜೀಶ್ ಅವರು ಹೇಳಿದ್ದಾರೆ. ನಂತರ ಆ ಹೃದಯಾಘಾತಕ್ಕೀಡಾದ ರೋಗಿಗೆ ವಿಮಾನ ಲ್ಯಾಂಡ್ ಆದ ಕೂಡಲೇ ಏರ್‌ಪೋರ್ಟ್‌ನಲ್ಲಿ ವೈದ್ಯಕೀಯ ನೆರವು ನೀಡಲಾಯ್ತು. ಅವರು ಈಗ ಹುಷಾರಾಗಿದ್ದು, ಅವರ ಕುಟುಂಬದವರು ಅವರ ಜೀವ ಉಳಿಸಿದ ಇಬ್ಬರು ನರ್ಸ್‌ಗಳಿಗೆ ಹೃದಯ ತುಂಬಿದ ಧನ್ಯವಾದ ಹೇಳಿದ್ದಾರೆ.
ಅಜೀಶ್ ಹಾಗೂ ಅಭಿಷೇಕ್ ಅವರ ಈ ಮಾನವೀಯ ಕಾರ್ಯದ ವಿಚಾರ ಸಹೋದ್ಯೋಗಿ ಬ್ರಿಂಟ್ ಅಂಟೋ ಅವರಿಂದ ಉದ್ಯೋಗದಾತರನ್ನು ಕೂಡ ತಲುಪಿದ್ದು, ಕಂಪನಿಯ ಸಿಇಒ ರೋಹಿಲ್ ರಾಘವನ್ ಅವರು ಇವರಿಬ್ಬರನ್ನು ಶ್ಲಾಘಿಸಿದ್ದಾರೆ. ಹಾಗೂ ಅವರಿಗೆ ಪ್ರಮಾಣಪತ್ರವನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರ್‌ಪಿಎಂ ಪ್ರಾಜೆಕ್ಟ್‌ನ ಮೆಡಿಕಲ್ ಡೈರೆಕ್ಟರ್ ಮೊಹಮ್ಮದ್ ಅಲಿ ಮಾತನಾಡಿ, ಈ ಇಬ್ಬರ ಸಾಧನೆಯನ್ನು ಕೊಂಡಾಡಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ರತಿ ನಿಮಿಷವೂ ಬಹಳ ಮಹತ್ವದ್ದು, ಅಭಿಜಿತ್ ಹಾಗೂ ಅಜೀಶ್ ಅವರು ಸದಾ ಸನ್ನದ್ಧವಾಗಿರುವುದು ಹಾಗೂ ಶಾಂತವಾಗಿರುವುದನ್ನು ಸಾಬೀತುಪಡಿಸಿದ್ದಾರೆ ಎಂದರು.
ಇದನ್ನೂ ಓದಿ: ತಿಂಗಳಿಗೆ 50000ದಿಂದ ಲಕ್ಷದವರೆಗೆ ವೇತನ ಶ್ರೇಣಿ ಹೊಂದಿರುವ ಡಿಎಸ್‌ಪಿಯಿಂದಲೇ ಕಳ್ಳತನ
ಇದನ್ನೂ ಓದಿ: ಅಪಘಾತದ ನಂತರ ಸಾರಿ ಕೇಳಿದ್ರು ಬಿಡದೇ ಬೈಕ್ ಸವಾರರ ಕಾರಿನಲ್ಲಿ ಚೇಸ್ ಮಾಡಿ ಕೊಂದ ದಂಪತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ