ವಿಶ್ವದ ಮೊದಲ ನೇಸಲ್ ಡ್ರಾಪ್ ಕೋವಿಡ್ ಲಸಿಕೆ ಭಾರತದಲ್ಲಿ ಬಿಡುಗಡೆಯಾಗಿದೆ. ಇದರೊಂದಿಗೆ ಕೋವಿಡ್ ವಿರುದ್ಧದ ಭಾರತದ ಹೋರಾಟಕ್ಕೆ ಮತ್ತಷ್ಟು ಬಲ ಬಂದಿದೆ. ಮೂಗಿನ ಮೂಲಕ ನೀಡುವ ಲಸಿಕೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿನ ಬೆಲೆ ಎಷ್ಟು? ಎಲ್ಲಾ ಮಾಹಿತಿ ಇಲ್ಲಿದೆ.
ನವದೆಹಲಿ(ಜ.26): ಗಣರಾಜ್ಯೋತ್ಸವ ದಿನದಂದು ವಿಶ್ವದ ಮೊದಲ ನೇಸಲ್ ಡ್ರಾಪ್ ಕೋವಿಡ್ ಲಸಿಕೆ ಭಾರತದಲ್ಲಿ ಬಿಡುಗಡೆಯಾಗಿದೆ. ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಭಾರತದಲ್ಲಿ ಇನ್‌ಕೋವಾಕ್ ಲಸಿಕೆ ಬಿಡುಗಡೆ ಮಾಡಿದ್ದಾರೆ. ನವೆಂಬರ್ ತಿಂಗಳಲ್ಲಿ ಭಾರತದ ಡ್ರಗ್ಸ್ ಕಂಟ್ರೋಲರ್ ಆಫ್ ಇಂಡಿಯಾ(DCGI) ತುರ್ತು ಬಳಕೆಗೆ ಅನುಮತಿ ನೀಡಿತ್ತು. 18 ವರ್ಷ ಮೇಲ್ಪಟ್ಟವರಿಗೆ ಈ ಲಸಿಕೆ ನೀಡಬಹುದು. ಅತ್ಯಂತ ಪರಿಣಾಮಕಾರಿ ಅನ್ನೋದು ಪ್ರಯೋಗದಲ್ಲಿನ ವರದಿಯಲ್ಲಿ ಬಹಿರಂಗವಾಗಿದೆ. ಈ ಮೂಲಕ ಭಾರತದ ಕೋವಿಡ್ ಹೋರಾಟಕ್ಕೆ ಮತ್ತಷ್ಟು ಬಲ ಸಿಕ್ಕಿದೆ.
ಶೀತ, ಮೂಗು ಕಟ್ಟುವಿಕೆಗೆ ಈಗಾಗಲೇ ನೇಸಲ್ ಡ್ರಾಪ್ ಬಳಕೆ ಮಾಡಲಾಗುತ್ತದೆ. ಇದೀಗ ಇದೇ ರೀತಿಯಲ್ಲಿ ಇನ್‌ಕೋವಾಕ್ ಲಸಿಕೆ ಬಲಸಬಹುದು. ಇದೂ ಕೂಡ ಮೂಗಿನ ಮೂಲಕ ನೀಡುವ ಲಸಿಕೆಯಾಗಿದೆ. ಇನ್‌ಕೋವಾಕ್ ನೇಸಲ್ ಡ್ರಾಪ್ ಕೊರೋನಾ ಲಸಿಕೆ ಬೆಲೆ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯತ್ಯಾಸವಿದೆ. ಖಾಸಗಿ ಆಸ್ಪತ್ರೆಗಲ್ಲಿ ಇನ್‌ಕೋವಾಕ್ ಲಸಿಕೆ ಬೆಲೆ 800 ರೂಪಾಯಿ. ಇನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಲಸಿಕೆ ಬೆಲೆ 325 ರೂಪಾಯಿ.
ಚೀನಾ ಹೊಸವರ್ಷ: ನಿತ್ಯ ಕೋವಿಡ್‌ಗೆ 36,000 ಜನರ ಸಾವು..?
ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಈ ಲಸಿಕೆ ಕೊರೋನಾ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದೆ. ಇಷ್ಟೇ ಅಲ್ಲ ಕೋವಿಡ್ ಮಹಾಮಾರಿಯಿಂದ ದೂರವಿರಲು ಸುಲಭ ಲಸಿಕೆ ಇದಾಗಿದೆ. ಇದು ಇದು ವಿಶ್ವದಲ್ಲೇ ಮೊದಲ ಇಂಟ್ರಾ ನೇಸಲ್ ಲಸಿಕೆ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ.
ಕಳೆದ ಆಗಸ್ಟ್‌ನಲ್ಲಿ ನೇಸಲ್ ಡ್ರಾಪ್ ಲಸಿಕೆಯ 3ನೇ ಹಂತದ ಪ್ರಯೋಗವೂ ಮುಗಿದಿತ್ತು. ಆಗ ಇದು ಅತ್ಯಂತ ಸುರಕ್ಷಿತ ಹಾಗೂ ರೋಗನಿರೋಧಕ ಶಕ್ತಿ ಬಲಪಡಿಸುವ ಲಸಿಕೆ ಎಂದು ಸಾಬೀತಾಗಿತ್ತು. ಮೂಗಿನ ಮೂಲಕ ಹಾಕುವ ಲಸಿಕೆ ಆಗಿದ್ದರಿಂದ ಶ್ವಾಸಕೋಶದಲ್ಲಿ ಉತ್ತಮ ಪ್ರತಿಕಾಯ ಶಕ್ತಿಗಳನ್ನು ಅಭಿವೃದ್ಧಿಪಡಿಸಲಿದೆ. ಇದರಿಂದ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬರುತ್ತದೆ ಎಂದು ಕಂಪನಿ ತಿಳಿಸಿದೆ.
ಈ ಲಸಿಕೆಯು 2 ರಿಂದ 8 ಡಿಗ್ರಿ ಸೆಲ್ಸಿಯಸ್‌ನಲ್ಲಿ ಸ್ಥಿರವಾಗಿರುತ್ತದೆ. ಅಲ್ಲದೇ ಈ ಲಸಿಕೆಯನ್ನು ಸುಲಭವಾಗಿ ಸಂಗ್ರಹಿಸಬಹುದು ಮತ್ತು ವಿತರಣೆಯನ್ನು ಮಾಡಬಹುದಾಗಿದೆ. ಅಲ್ಲದೆ, ಚುಚ್ಚುಮದ್ದಿನ ಮೂಲಕ ನೀಡುವ ಲಸಿಕೆಯಿಂದ ಚುಚ್ಚುಮದ್ದಿನ ತ್ಯಾಜ್ಯ ಉತ್ಪತ್ತಿ ಆಗುತ್ತಿತ್ತು. ಆದರೆ ಈಗ ತ್ಯಾಜ್ಯದ ಸಮಸ್ಯೆ ಇಲ್ಲ. ಲಸಿಕೆ ನೀಡಲು ತಜ್ಞರ ಅವಶ್ಯಕತೆ ಇಲ್ಲ. ಜಾಗತಿಕ ಬೇಡಿಕೆ ಪ್ರಮಾಣದ ಸುಲಭವಾಗಿ ಉತ್ಪಾದನೆ ಸಾಧ್ಯ.
ಚೀನಾಗೆ ಭಾರತದ ಕೋವಿಡ್ ಲಸಿಕೆ ಮಾರಾಟಕ್ಕೆ ಚಿಂತನೆ
ಲಸಿಕೆಯಾದ ಬಿಬಿವಿ154 ದೇಹದಲ್ಲಿ ಪ್ರತಿಕಾಯಗಳನ್ನು ಸೃಷ್ಟಿಸಿದೆ ಅಲ್ಲದೇ ಕೋವಿಡ್ ಸೋಂಕು ತಡೆ ಹಾಗೂ ಹರಡುವಿಕೆ ವಿರುದ್ಧವೂ ಪರಿಣಾಮಕಾರಿಯಾಗಿದೆ ಎಂದು ಭಾರತ ಬಯೋಟೆಕ್ ವೆಬ್‌ಸೈಟಿನಲ್ಲಿ ತಿಳಿಸಲಾಗಿದೆ. 3100 ಜನರ ಮೇಲೆ ಇದರ ಪ್ರಯೋಗ ನಡೆದಿತ್ತು.
ಬೆಂಗಳೂರಲ್ಲಿ 29 ಮಂದಿಗೆ ಕೊರೋನಾ ಸೋಂಕು
ಬೆಂಗಳೂರು ನಗರದಲ್ಲಿ ಬುಧವಾರ 29 ಜನರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಪಾಸಿಟಿವಿಟಿ ದರ ಶೇ.0.60 ದಾಖಲಾಗಿದೆ. ಸೋಂಕಿನಿಂದ 31 ಜನ ಗುಣಮುಖರಾಗಿದ್ದು, ಮೃತಪಟ್ಟವರದಿಯಾಗಿಲ್ಲ.
133 ಸಕ್ರಿಯ ಸೋಂಕು ಪ್ರಕರಣಗಳಿದ್ದು, 12 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದವರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟು 7199 ಮಂದಿ ಕೋವಿಡ್ ವಿರುದ್ಧ ಲಸಿಕೆ ಪಡೆದು ಕೊಂಡಿದ್ದಾರೆ. 282 ಮಂದಿ ಮೊದಲ ಡೋಸ್, 862 ಮಂದಿ ಎರಡನೇ ಡೋಸ್ ಮತ್ತು 6055 ಮಂದಿ ಮೂರನೇ ಡೋಸ್ ಲಸಿಕೆ ಪಡೆದಿದ್ದಾರೆ. ನಗರದಲ್ಲಿ 3508 ಮಂದಿಗೆ ಕೊರೋನಾ ಸೋಂಕು ಪರೀಕ್ಷೆ ನಡೆಸಲಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.