ಲಾಲ್ ಚೌಕ್‌ನಲ್ಲಿ ಗಣತಂತ್ರ ದಿನಾಚರಣೆ, 1990ರ ಬಳಿಕ ಮೊದಲ ಬಾರಿಗೆ ಅಂಗಡಿಗಳು ಓಪನ್!

By Suvarna NewsFirst Published Jan 26, 2023, 3:34 PM IST
Highlights

ಜಮ್ಮು ಮತ್ತು ಕಾಶ್ಮೀರದ ಲಾಲ್ ಚೌಕ್‌ನಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಗಿದೆ. ವಿಶೇಷ ಅಂದರೆ 1990ರ ಬಳಿಕ ಇದೇ ಮೊದಲ ಬಾರಿಗೆ ಲಾಲ್ ಚೌಕ್ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ಅಂಗಡಿಗಳು ತೆರೆಯಲಾಗಿದೆ. ಇದರ ಹಿಂದೆ ಒಂದು ಭಯಾನಕ ಇತಿಹಾಸವಿದೆ

ಶ್ರೀನಗರ(ಜ.26): ದೇಶದೆಲ್ಲೆಡೆ ಇಂದು ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಗಿದೆ. ಕೆಲ ವರ್ಷಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ತಿರಂಗ ಹಾರಿಸುವುದು ಸುಲಭದ ಮಾತಾಗಿರಲಿಲ್ಲ. ಇದೀಗ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಸೇರಿದಂತೆ ಎಲ್ಲಾ ಪ್ರಮುಖ ದಿನಾಚರಣೆಗಳಲ್ಲಿ ಶ್ರೀನಗರದ ಲಾಲ್ ಚೌಕ್‌ನಲ್ಲಿ ತಿರಂಗ ಹಾರಿಸಿ ಆಚರಣೆ ಮಾಡಲಾಗುತ್ತಿದೆ. ಇದೀಗ 74ನೇ ಗಣತಂತ್ರ ದಿನಾಚರಣೆಯನ್ನು ಲಾಲ್ ಚೌಕ್‌ನಲ್ಲಿ ಆಚರಿಸಲಾಗಿದೆ. ಮತ್ತೊಂದು ವಿಶೇಷವಿದೆ. 1990ರ ಬಳಿಕ ಇದೇ ಮೊದಲ ಬಾರಿಗೆ ಲಾಲ್ ಚೌಕ್, ಶ್ರೀನಗರ ಸೇರಿದಂತೆ ಕಣಿವೆ ರಾಜ್ಯದ ಅಂಗಡಿ ಮುಂಗುಟ್ಟುಗಳು ತೆರೆಯಲಾಗಿದೆ.

ಲಾಲ್ ಚೌಕ್ ಕ್ಲಾಕ್ ಟವರ್ ಮೇಲೆ ಭಾರತದ ತ್ರಿವರ್ಣ ಧ್ವಜ ಹಾರಿಸಲಾಗಿದೆ. ಕ್ಲಾಕ್ ಟವರ್ ಮೇಲೆ ಜಮ್ಮು ಮತ್ತು ಕಾಶ್ಮೀರ ಬಿಜೆಪಿ ಘಟಕ ಧ್ವಜಾರೋಹಣ ಮಾಡಿದೆ.  ಸ್ಥಳೀಯ ಎನ್‌ಜಿಒ ಹಾಗೂ ಜಿಲ್ಲಾಡಳಿತ ಲಾಲ್ ಚೌಕ್‌ನಲ್ಲಿ ಗಣತಂತ್ರ ದಿನಾಚರಣೆ ಪ್ರಯುಕ್ತ ಕಾರ್ಯಕ್ರಮ ಆಯೋಜಿಸಿತ್ತು. ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು. 

ಗಣತಂತ್ರದ ದಿನ ಕರ್ನಾಟಕ ಸ್ತಬ್ಧ ಚಿತ್ರ ಪ್ರದರ್ಶನ: ನಾರಿಶಕ್ತಿಯನ್ನು ಅಭಿನಂದಿಸಿದ ಜೋಶಿ

ಗಣರಾಜ್ಯೋತ್ಸವ ದಿನಾಚರಣೆಯಂದು ಲಾಲ್ ಚೌಕ್ ಸುತ್ತ ಮುತ್ತಲಿನ ಎಲ್ಲಾ ಬೀದಿಗಳಲ್ಲಿನ ಅಂಗಡಿ ಮುಂಗಟ್ಟುಗಳು ಕಾರ್ಯನಿರ್ವಹಿಸುತ್ತಿದೆ. ಇದು 1990ರ ಬಳಿಕ ಇದೇ ಮೊದಲು. 1990ರ ವೇಳೆ ಇಸ್ಲಾಮ್ ಮೂಲಭೂತವಾದಿತ್ವ, ಭಯೋತ್ಪಾದನೆಯಿಂದ ಕಾಶ್ಮೀರ ನಲುಗಿತ್ತು. 1990ರಲ್ಲಿ ಕಾಶ್ಮೀರ ಪಂಡಿತರು, ಹಿಂದುಗಳ ಹತ್ಯೆ ನಡೆಯಿತು. ಈ ನರಮೇಧ ಪ್ರಮುಖ ಉದ್ದೇಶ, ಜಮ್ಮು ಮತ್ತು ಕಾಶ್ಮೀರ ಮುಸಲ್ಮಾನರಿಗೆ ಸೇರಿದ್ದು. ಇಲ್ಲಿರುವ ಹಿಂದೂಗಳು ಇಸ್ಲಾಮ್‌ಗೆ ಮತಾಂತರಗೊಳ್ಳಿ ಅಥವಾ ತೊಲಗಿ ಎಂದು ಮಸೀದಿಯ ಮೈಕ್‌ಗಳಲ್ಲಿ ಘೋಷಣೆ ಹೊರಡಿಸಲಾಗಿತ್ತು. ರಾತ್ರೋ ರಾತ್ರೋ ಕಾಶ್ಮೀರಿ ಪಂಡಿತರು, ಹಿಂದೂಗಳ ಹತ್ಯೆ ನಡೆಯಿತು. ಮಹಿಳೆ, ಮಕ್ಕಳ ಮೇಲೆ ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿತ್ತು.

1990ರ ಹತ್ಯಾಕಾಂಡದ ಬಳಿಕ ಕಾಶ್ಮೀರದಲ್ಲಿ ಭಯೋತ್ಪಾದಕರ ಅಟ್ಟಹಾಸ ಹೆಚ್ಚಾಯಿತು. ತ್ರಿವರ್ಣ ಧ್ವಜ ಹಾರಾಟ 1990ರ ಮೊದಲು ಇರಲಿಲ್ಲ. ಆದರೆ 1990ರ ಬಳಿಕ ಭಾರತದ ತಿರಂಗ ಆಚರಣೆ, ಧ್ವಜಾರೋಹಣ ಮಾಡಿದರೆ ಈ ದಿನ ಜಮ್ಮು ಮತ್ತು ಕಾಶ್ಮೀರಕ್ಕೆ ಕರಾಳ ದಿನವಾಗಿತ್ತು. ಪ್ರಮುಖವಾಗಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ದಿನಾಚರಣೆಗಳನ್ನು ಕರಾಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿತ್ತು. ಈ ದಿನ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾರೂ ಅಂಗಡಿ ಮುಂಗುಟ್ಟು ತೆರೆಯುವಂತಿರಲಿಲ್ಲ.ಇದನ್ನು ಧಿಕ್ಕರಿಸಿ ಅಂಗಡಿ ತೆರೆದ ಹಲವು ಹಿಂದೂಗಳನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು.

ದೆಹಲಿಯ ಕರ್ತವ್ಯ ಪಥದಲ್ಲಿ ರಾಷ್ಟ್ರಪತಿಯಿಂದ ಧ್ವಜಾರೋಹಣ: ಹುತಾತ್ಮ ಯೋಧರಿಗೆ ಮೋದಿ ನಮನ

1990ರ ಬಳಿಕ ಪ್ರತಿ ವರ್ಷ ಕಾಶ್ಮೀರದಲ್ಲಿ ಇದೇ ಕರಾಳ ಆಚರಣೆ ಮುಂದುವರಿಯಿತು. ಆದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಆರ್ಟಿಕಲ್ 370 ರದ್ದುಗೊಳಿಸಿ, ಜಮ್ಮು ಮತ್ತು ಕಾಶ್ಮೀರದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಇದರ ಪರಿಣಾಮ ಹಸಿರು ಬಣ್ಣದಲ್ಲಿದ್ದ ಲಾಲ್ ಚೌಕ್ ಸೇರಿದಂತೆ ಹಲವು ಕ್ಲಾಕ್ ಟವರ್ ಇದೀಗ ತ್ರಿವರ್ಣಧ್ವಜದಲ್ಲಿ ಕಂಗೊಳಿಸುತ್ತಿದೆ. 

ಲಾಲ್ ಚೌಕ್ ಸೇರಿದಂತೆ ಕಾಶ್ಮೀರದ ಹಲವು ಭಾಗಗಳಲ್ಲಿ ಗಣತಂತ್ರ ದಿನಾಚರಣೆ ಆಚರಿಸಲಾಗಿದೆ. ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಯಾವುದೇ ಅಹಿತಕರ ಘಟನೆಗಳಿಲ್ಲದೆ ಕಣಿವೆ ರಾಜ್ಯದಲ್ಲಿ ಗಣರಾಜ್ಯೋತ್ಸ ಆಚರಿಸಲಾಗಿದೆ. 

click me!