Success story: ಎಂಜಿನಿಯರಿಂಗ್ ಇಲ್ಲ, ವರ್ಕ್‌ಶಾಪ್ ಇಲ್ಲ: 1 ಲಕ್ಷ ರೂ.ಗೆ ಸೋಲಾರ್ ವಾಹನ ನಿರ್ಮಿಸಿದ 17ರ ಬಾಲಕ!

Published : Nov 06, 2026, 11:43 AM IST
Solar Power Car

ಸಾರಾಂಶ

ಗುರುಗ್ರಾಮ್‌ನ 12ನೇ ತರಗತಿ ವಿದ್ಯಾರ್ಥಿ ಅಕ್ಷಿತ್ ಖೇರಾ ಬಡ ಕುಟುಂಬಗಳಿಗಾಗಿ ಕಡಿಮೆ ವೆಚ್ಚದ ಸೌರಶಕ್ತಿ ಚಾಲಿತ ಎಲೆಕ್ಟ್ರಿಕ್ ತ್ರಿಚಕ್ರ ವಾಹನವನ್ನು ವಿನ್ಯಾಸಗೊಳಿಸಿದ್ದಾರೆ. ಕೇವಲ ₹1 ಲಕ್ಷ ಬಜೆಟ್‌ನಲ್ಲಿ ನಿರ್ಮಿಸಲಾದ ಈ ವಾಹನವು ಒಮ್ಮೆ ಚಾರ್ಜ್ ಮಾಡಿದರೆ 50 ಕಿ.ಮೀ ಚಲಿಸುತ್ತದೆ. ಈ ಪರಿಸರ ಸ್ನೇಹಿ ವಾಹನವನ್ನು ಅಗತ್ಯವಿರುವ ಬಡ ಕುಟುಂಬಕ್ಕೆ ದಾನ ಮಾಡಲು ಅವರು ನಿರ್ಧರಿಸಿದ್ದಾರೆ.

ಉತ್ತರ ಪ್ರದೇಶದ ಗುರುಗ್ರಾಮ್‌ನ ಹೆರಿಟೇಜ್ ಇಂಟರ್‌ನ್ಯಾಷನಲ್ ಎಕ್ಸ್‌ಪೀರಿಯೆನ್ಶಿಯಲ್ ಶಾಲೆ 12ನೇ ತರಗತಿ ವಿದ್ಯಾರ್ಥಿ ಅಕ್ಷಿತ್ ಖೇರಾಗೆ ಯಾವುದೇ ಎಂಜಿನಿಯರಿಂಗ್ ಡಿಗ್ರಿ ಅಥವಾ ಸ್ವಂತ ವರ್ಕ್‌ಶಾಪ್ ಇರಲಿಲ್ಲ. ಆದರೆ, ನಗರದ ವಿಪರೀತ ವಾಯುಮಾಲಿನ್ಯ ಮತ್ತು ವಲಸೆ ಕಾರ್ಮಿಕ ಕುಟುಂಬಗಳ ಸಾರಿಗೆ ಕಷ್ಟ ಕಂಡ ಅವರಿಗೆ ಹೊಸ ಕಲ್ಪನೆಯೊಂದು ಮೂಡಿತು. ಅವರ ಮನೆ ಕೆಲಸದವರ ಕುಟುಂಬ ಮತ್ತು ಸಣ್ಣ ವ್ಯಾಪಾರಿಗಳೊಂದಿಗೆ ಮಾತನಾಡಿದಾಗ, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಎಲೆಕ್ಟ್ರಿಕ್ ವಾಹನಗಳ ಬೆಲೆ (₹1.5 ಲಕ್ಷದಿಂದ ₹2 ಲಕ್ಷ) ಅತಿಯಾಗಿದ್ದು, ಬಡ ಕುಟುಂಬಗಳಿಗೆ ಭರಿಸಲು ಸಾಧ್ಯವಾಗುತ್ತಿಲ್ಲ ಎಂಬುದು ತಿಳಿಯಿತು. ಈ ಸಮಸ್ಯೆಗೆ ಪರಿಹಾರವಾಗಿ ಕಡಿಮೆ ಬಜೆಟ್‌ನ ವಾಹನ ವಿನ್ಯಾಸಗೊಳಿಸಲು ಅವರು ನಿರ್ಧರಿಸಿದರು. ಅದೇ ಮುಂದೆ ಇತನ ಬದುಕು ಬದಲಾಯಿಸಿತು.

ವಾಹನದ ಪ್ರಮುಖ ವೈಶಿಷ್ಟ್ಯಗಳು!

ಸುಮಾರು ₹1 ಲಕ್ಷ ಬಜೆಟ್‌ನ ಗುರಿಯೊಂದಿಗೆ ಆರಂಭವಾದ ಈ ಯೋಜನೆಗೆ ಅಂತಿಮವಾಗಿ ₹1,02,536 ವೆಚ್ಚವಾಯಿತು. ಅಲ್ಲದೇ ಇದು ಹವಾಮಾನ ನಿರೋಧಕ 2-ಸೀಟರ್ ಕ್ಯಾಬಿನ್, ಸರಕು ಸಾಗಣೆ ಪೆಟ್ಟಿಗೆ (ಕಾರ್ಗೋ ಬಾಕ್ಸ್) ಮತ್ತು 400W ಸೌರ ಫಲಕವನ್ನು ಒಳಗೊಂಡಿರುವ ಬಹುಪಯೋಗಿ ತ್ರಿಚಕ್ರ ವಾಹನವಾಗಿದೆ. 300 ಕೆಜಿ ವರೆಗೆ ಭಾರ ಹೊರಬಲ್ಲದು ಮತ್ತು ಒಮ್ಮೆ ಚಾರ್ಜ್ ಮಾಡಿದರೆ ಕನಿಷ್ಠ 50 ಕಿ.ಮೀ ಪ್ರಯಾಣಿಸುತ್ತದೆ. ಅದರೊಂದಿಗೆ ಪ್ರತಿ ಕೀ.ಮೀ ಕೇವಲ 13 ಪೈಸೆ ವೆಚ್ಚವಾಗುತ್ತದೆ. 400W ಸೌರ ಫಲಕವು ವಾಹನದ ಛಾವಣಿಯಾಗಿಯೂ ಕಾರ್ಯನಿರ್ವಹಿಸುತ್ತದೆ ಮತ್ತು ದೈನಂದಿನ ವಿದ್ಯುತ್ ಅಗತ್ಯದ ಶೇ. 63 ರಷ್ಟು ಪೂರೈಸುತ್ತದೆ.

ಎದುರಾದ ಸವಾಲುಗಳು ಮತ್ತು ಪರಿಹಾರಗಳು!

ಆರಂಭದಲ್ಲಿ ₹1.35 ಲಕ್ಷ ಅಂದಾಜಿಸಲಾಗಿದ್ದ ವೆಚ್ಚವನ್ನು ಕಡಿಮೆ ಮಾಡಲು ಬ್ಯಾಟರಿ ಸಾಮರ್ಥ್ಯವನ್ನು 3.072 kWh ಗೆ ಇಳಿಸಿದರು. ಸ್ಟೀಲ್ ಟ್ಯೂಬ್‌ಗಳನ್ನು ಅಗತ್ಯವಿರುವಲ್ಲಿ ಮಾತ್ರ ಬಳಸಿ ₹2,100 ಉಳಿಸಿದರು. ದೆಹಲಿಯ ಮಾಯಾಪುರಿ ಆಟೋಮೊಬೈಲ್ ಮಾರುಕಟ್ಟೆಯಲ್ಲಿ ಚೌಕಾಶಿ ನಡೆಸಿ ₹17,000 ಕ್ಕೂ ಹೆಚ್ಚು ವೆಚ್ಚವನ್ನು ಉಳಿಸಿದರು. ಸೌರ ಪ್ಯಾನಲ್ ವೋಲ್ಟೇಜ್ ಬ್ಯಾಟರಿಗಿಂತ ಕಡಿಮೆಯಿದ್ದ ಕಾರಣ, ಬಕ್ ಚಾರ್ಜ್ ನಿಯಂತ್ರಕದ ಬದಲು ಬೂಸ್ಟ್ ನಿಯಂತ್ರಕವನ್ನು ಬಳಸಿ ಮರುವಿನ್ಯಾಸಗೊಳಿಸಿದರು. ದೀರ್ಘಾವಧಿ ಕಾರ್ಯಕ್ಷಮತೆ ಮತ್ತು ಕಡಿಮೆ ಪರಿಸರ ಮಾಲಿನ್ಯವನ್ನು ಪರಿಗಣಿಸಿ, ಅಗ್ಗದ ಲೆಡ್-ಆಸಿಡ್ ಬ್ಯಾಟರಿ ಬದಲು ಲಿಥಿಯಂ-ಐಯಾನ್ ಬ್ಯಾಟರಿಯನ್ನೇ ಆಯ್ಕೆ ಮಾಡಿಕೊಂಡರು. 12ಕ್ಕೂ ಹೆಚ್ಚು ವರ್ಕ್‌ಶಾಪ್‌ಗಳು ನಿರಾಕರಿಸಿದ ನಂತರ, ಮನೆಗೆ 30 ಕಿ.ಮೀ ದೂರದಲ್ಲಿದ್ದ ಅರುಣ್ ಎಂಬುವವರ ವರ್ಕ್‌ಶಾಪ್‌ನಲ್ಲಿ ಈ ವಾಹನವನ್ನು ನಿರ್ಮಿಸಲಾಯಿತು.

ಪೋಷಕರ ಬೆಂಬಲ ಮತ್ತು ಅಕ್ಷಿತ್ ಅವರ ಹಿನ್ನೆಲೆ!

ಅಕ್ಷಿತ್ ಅವರ ಪೋಷಕರಾದ ಅಮಿತ್ ಖೇರಾ ಮತ್ತು ಕಾಂಚನ್ ಖೇರಾ ಅವರು ಮಗನ ಪ್ರಾಯೋಗಿಕ ಕಲಿಕೆಗೆ ಸಂಪೂರ್ಣ ಬೆಂಬಲ ನೀಡಿದರು. 2025 ರಲ್ಲಿ ಸಿಂಗಾಪುರದಲ್ಲಿ ನಡೆದ ಸ್ಟೇಮ್‌ ರೇಸಿಂಗ್ ವರ್ಲ್ಡ್ ಫೈನಲ್ಸ್‌ನಲ್ಲಿ ಅಕ್ಷಿತ್ ಅವರ ತಂಡ 7ನೇ ವೇಗದ ಸಮಯವನ್ನು ಸಾಧಿಸಿತ್ತು. ಈ ಅನುಭವವೂ ಈ ವಾಹನ ನಿರ್ಮಾಣಕ್ಕೆ ಸಹಾಯ ಮಾಡಿತು.

ಭವಿಷ್ಯದ ಯೋಜನೆಗಳು!

ಪ್ರಸ್ತುತ ವಾಹನವನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಅಕ್ಷಿತ್ ಇದನ್ನು ವಾಣಿಜ್ಯಿಕವಾಗಿ ಸಾಗಿಸಲು ಆಟೋಮೊಬೈಲ್ ತಯಾರಕರೊಂದಿಗೆ ಕೆಲಸ ಮಾಡಲು ಬಯಸಿದ್ದಾರೆ. ಬೃಹತ್ ಪ್ರಮಾಣದ ಉತ್ಪಾದನೆಯಿಂದ ಬೆಲೆಯನ್ನು ಮತ್ತಷ್ಟು ಶೇ. 10-20 ರಷ್ಟು ಕಡಿಮೆ ಮಾಡಬಹುದು ಎಂಬುದು ಅವರ ಅಂದಾಜು. ಆದರೆ, ಈ ವಾಹನವು ಸಾಮಾನ್ಯ ಜನರಿಗೆ ಕೈಗೆಟುಕುವಂತೆ ಇರಬೇಕು ಎಂಬುದೇ ಅವರ ಮುಖ್ಯ ಷರತ್ತಾಗಿದೆ. ಕೊನೆಯಲ್ಲಿ, ಈ ಮೂಲಮಾದರಿಯನ್ನು ಅಗತ್ಯವಿರುವ ಬಡ ಕುಟುಂಬಕ್ಕೆ ದಾನ ಮಾಡಲು ಅಕ್ಷಿತ್ ನಿರ್ಧರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮಹಾಭಾರತ, ಅರ್ಥಶಾಸ್ತ್ರ, ರಾಜತರಂಗಿಣಿ ಭಾರತದ ಮೂರು ಐತಿಹಾಸಿಕ ಕೃತಿಗಳು UNESCO ಪಟ್ಟಿಗೆ ಸೇರ್ಪಡೆ!
'ಮುಸ್ಲಿಂ ಮುಂಬೈ' ಸೃಷ್ಟಿಸುವ ಪ್ರಯತ್ನ ನಡೆಯುತ್ತಿದ್ದೆಯೇ? ಸಿಎಂ ಫಡ್ನವೀಸ್‌ಗೆ ಬಿಜೆಪಿ ನಾಯಕ ಬರೆದ ಪತ್ರ ಸಂಚಲನ!