
ವಾಹನ ಪಾರ್ಕಿಂಗ್ ವಿಚಾರಕ್ಕೆ ಆರಂಭವಾದ ಗಲಾಟೆಯೊಂದು 30 ವರ್ಷದ ಯುವಕ ಕೊಲೆಯಲ್ಲಿ ಅಂತ್ಯವಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಗ್ರೇಟರ್ ನೋಯ್ಡಾದಲ್ಲಿ ಈ ಘಟನೆ ನಡೆದಿದೆ. ಮೃತ ಯುವಕನನ್ನು ಹರ್ಕೇಶ್ ಎಂದು ಗುರುತಿಸಲಾಗಿದ್ದು, ಈತ ಕಮೆರಾಲಾ ಗ್ರಾಮದ ನಿವಾಸಿಯಾಗಿದ್ದಾನೆ. ಈತ ಗ್ರೇಟರ್ ನೋಯ್ಡಾದಿಂದ ತನ್ನ ಸ್ನೇಹಿತ ಮೋಹಿತ್ ಜೊತೆ ಆಗಮಿಸುತ್ತಿದ್ದ ವೇಳೆ ಗುಂಪೊಂದು ಇವರ ಮೇಲೆ ಹಲ್ಲೆ ಮಾಡಿದ್ದು, ಹಲ್ಲೆಯಿಂದ ಗಂಭೀರ ಗಾಯಗೊಂಡ ಹರ್ಕೇಶ್ ಸಾವನ್ನಪ್ಪಿದ್ದಾರೆ.
ಪೊಲೀಸರ ಪ್ರಕಾರ, ಯುವ ತರುಣರ ಗುಂಪೊಂದು ಕ್ರಿಕೆಟ್ ಪಂದ್ಯಾಟದ ಬಳಿಕ ನಡುರಸ್ತೆಯಲ್ಲೇ ವಾಹನವನ್ನು ನಿಲ್ಲಿಸಿ ಅಲ್ಲೇ ಮದ್ಯಸೇವನೆ ಮಾಡುತ್ತಿದ್ದರು. ಇದೇ ದಾರಿಯಲ್ಲಿ ಬಂದ ಹರ್ಕೇಶ್ ಅವರು ವಾಹನವನ್ನು ಸ್ವಲ್ಪ ಪಕ್ಕಕ್ಕೆ ಸರಿಸುವಂತೆ ಹೇಳಿದ್ದಾರೆ. ಈ ವೇಳೆ ಆ ಗುಂಪು ಹಾಗೂ ಹರ್ಕೇಶ್ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಈ ಗಲಾಟೆ ಸ್ವಲ್ಪ ಹೊತ್ತಿನಲ್ಲೇ ವಿಕೋಪಕ್ಕೆ ತಿರುಗಿದ್ದು, ಯುವಕರ ಗುಂಪು ಹರ್ಕೇಶ್ ಮೇಲೆ ಮುಗಿಬಿದ್ದು ಹಲ್ಲೆ ಮಾಡಿದ್ದಾರೆ.
ಆರೋಪಿಗಳು ಹರ್ಕೇಶ್ ಹಾಗೂ ಮೋಹಿತ್ ಇಬ್ಬರ ಮೇಲೂ ದೊಣ್ಣೆ ಹಾಗೂ ಇತರ ಗಟ್ಟಿಯಾದ ವಸ್ತುಗಳಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ಹರ್ಕೇಶ್ ಹಾಗೂ ಮೋಹಿತ್ ಇಬ್ಬರಿಗೂ ಗಂಭೀರ ಗಾಯಗಳಾಗಿದೆ. ಘಟನೆಯ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ ಅಲ್ಲಿನ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಪೊಲೀಸರು ಬಂದು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ವೇಳೆ ಹರ್ಕೇಸ್ ಅವರು ಸಾವನ್ನಪ್ಪಿದ್ದಾರೆ. ಇತ್ತ ಅವರ ಸ್ನೇಹಿತ ಮೋಹಿತ್ ಅವರು ಆಸ್ಪತ್ರೆಯಲ್ಲಿದ್ದು, ಅವರ ಸ್ಥಿತಿ ಗಂಭಿರವಾಗಿದೆ.
ನಂತರ ಸಂತ್ರಸ್ತರ ಕುಟುಂಬದವರು ನೀಡಿದ ದೂರಿನ ಮೇರೆಗೆ ಪೊಲೀಸರು ಹಲವು ಅಪರಿಚಿತ ಯುವಕರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಇದುವರೆಗೆ ಒಟ್ಟು ಇಬ್ಬರು ಆರೋಪಿಗನ್ನು ಪೊಲೀಸರು ಬಂಧಿಸಿದ್ದು, ಈ ಪ್ರಕರಣದಲ್ಲಿ ಭಾಗಿಯಾದ ಇತರರ ಪತ್ತೆಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ: ಈ ರಮ್ ಬ್ರಾಂಡ್‌ಗೆ ಸನ್ಯಾಸಿಗಳೇ ಸ್ಪೂರ್ತಿ: ನಿಮಗೆ ತಿಳಿಯದ ಭಾರತದ ಪ್ರಸಿದ್ಧ ರಮ್ ಬ್ರಾಂಡ್ 'Old Monk' ಇಂಟರೆಸ್ಟಿಂಗ್ ಕಹಾನಿ
ಘಟನೆಗೆ ಸಂಬಂಧಿಸಿದಂತೆ ಹಿರಿಯ ಪೊಲೀಸ್ ಅಧಿಕಾರಿ ಸುಧೀರ್ ಕುಮಾರ್ ಮಾತನಾಡಿ, ಸೋಮವಾರ ಮಧ್ಯಾಹ್ನ ಕಮೇರಾಳ ಗ್ರಾಮದಲ್ಲಿ ಯುವಕರ ನಡುವೆ ಹಿಂಸಾತ್ಮಕ ವಾಗ್ವಾದ ನಡೆದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಸ್ಥಳಕ್ಕೆ ತಲುಪಿದ ಪೊಲೀಸರು ತಕ್ಷಣ ಗಾಯಗೊಂಡ ಮೋಹಿತ್ ಮತ್ತು ಹರ್ಕೇಶ್ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರು. ಚಿಕಿತ್ಸೆಯ ಸಮಯದಲ್ಲಿ, ಹರ್ಕೇಶ್ ಸಾವನ್ನಪ್ಪಿದರು. ಘಟನೆಯ ಸಮಯದಲ್ಲಿ ಆರೋಪಿಗಳು ಮದ್ಯದ ಅಮಲಿನಲ್ಲಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಮೋಹಿತ್ ಮತ್ತು ಹರ್ಕೇಶ್ ತಮ್ಮ ವಾಹನದಲ್ಲಿ ಆ ಪ್ರದೇಶದಲ್ಲಿ ಹಾದು ಹೋಗುತ್ತಿದ್ದಾಗ ದಾರಿ ಬಿಡುವ ಬಗ್ಗೆ ವಾಗ್ವಾದ ನಡೆಯಿತು. ಶೀಘ್ರದಲ್ಲೇ ಪರಿಸ್ಥಿತಿ ಹಿಂಸೆಗೆ ತಿರುಗಿತು ಎಂದು ಪೊಲೀಸ್ ಅಧಿಕಾರಿ ಸುಧೀರ್ ಕುಮಾರ್ ಹೇಳಿದರು.
ಇದನ್ನೂ ಓದಿ: ಅಸ್ವಸ್ಥ ತಾಯಿಯ ನೋಡಿಕೊಳ್ಳಲು ರಜೆ ಕೇಳಿದ ಉದ್ಯೋಗಿಗೆ ಮ್ಯಾನೇಜರ್ ಹೇಳಿದ್ದೇನು? ಕೆಲಸ ತೊರೆದು ಸಂಕಟ ತೋಡಿಕೊಂಡ ಮಹಿಳೆ
ಕಾನೂನು ಕ್ರಮಗಳನ್ನು ಪ್ರಾರಂಭಿಸಲಾಗಿದೆ ಮತ್ತು ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ