
ನವದೆಹಲಿ (ಜ.6): 210 ಟನ್ ತೂಕದ ವಿಶ್ವದ ಅತಿದೊಡ್ಡ ಶಿವಲಿಂಗವು ಬಿಹಾರಕ್ಕೆ ಆಗಮಿಸಿದ್ದು, ಜನವರಿ 17 ರಂದು ಪೂರ್ವ ಚಂಪಾರಣ್‌ನ ಕಲ್ಯಾಣಪುರ ಬ್ಲಾಕ್‌ನ ಕೈತ್ವಾಲಿಯಾದಲ್ಲಿರುವ ವಿರಾಟ್ ರಾಮಾಯಣ ಮಂದಿರದಲ್ಲಿ ಪ್ರತಿಷ್ಠಾಪನೆಗೊಳ್ಳಬೇಕಿದೆ. ಆದರೆ, ಪೂರ್ವ ಚಂಪಾರಣ್‌ಗೆ ಪ್ರಯಾಣಿಸುವ ಹಾದಿಯಲ್ಲಿ ವಿಶ್ವದ ಅತಿದೊಡ್ಡ ಶಿವಲಿಂಗಕ್ಕೆ ಕೆಲವು ಲಾಜಿಸ್ಟಿಕ್ ಸವಾಲುಗಳು ಎದುರಾಗಿವೆ. ಪ್ರಸ್ತುತ ಈ ಶಿವಲಿಂಗ ಗೋಪಾಲ್‌ಗಂಜ್ ಜಿಲ್ಲೆಯ ಚೆಕ್‌ಪೋಸ್ಟ್‌ನಲ್ಲಿಯೇ ಕೆಲ ದಿನಗಳಿಂದ ನಿಂತಿದೆ. ಪೂರ್ವ ಚಂಪಾರಣ್‌ಗೆ ಪ್ರವೇಶಿಸಬೇಕಿದ್ದಲ್ಲಿ ಗೋಪಾಲ್‌ಗಂಜ್‌ನ ಸೇತುವೆಯನ್ನು ದಾಟಬೇಕಿದೆ. ಆದರೆ, ಸೇತುವೆ ದುರ್ಬಲವಾಗಿರುವ ಕಾರಣಕ್ಕೆ ಸವಾಲುಗಳು ಎದುರಾಗಿದೆ.
ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಗಂಡಕಿ ನದಿಯ ಮೇಲೆ ಇರುವ ದುಮಾರಿಯಾ ಘಾಟ್ ಸೇತುವೆಯು ಶಿವಲಿಂಗದ ಪ್ರಯಾಣಕ್ಕೆ ಮಹತ್ವದ ಸವಾಲು ಒಡ್ಡಿದೆ. ಶಿವಲಿಂಗದ ಸಾಗಣೆಗೆ ಅನುಮತಿ ನೀಡುವ ಮೊದಲು ಸೇತುವೆಯನ್ನು ಪರಿಶೀಲಿಸಲು ಬಿಹಾರ ರಾಜ್ಯ ಪುಲ್ ನಿರ್ಮಾಣ್ ನಿಗಮ್ ಲಿಮಿಟೆಡ್ (BRPNNL) ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ತಂಡಗಳನ್ನು ಕರೆಯಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಪವನ್ ಕುಮಾರ್ ಸಿನ್ಹಾ ಅಮರ್ ಉಜಲಾ ತಿಳಿಸಿದ್ದಾರೆ.
ಆರಂಭಿಕ ತಪಾಸಣೆಯ ಸಮಯದಲ್ಲಿ, ಸೇತುವೆಯ ಮೇಲೆ ಹಲವಾರು ಸ್ಥಳಗಳಲ್ಲಿ ಬಿರುಕುಗಳು ಕಂಡುಬಂದಿದ್ದು, ಗಂಭೀರ ಸುರಕ್ಷತಾ ಕಳವಳಗಳನ್ನು ಹುಟ್ಟುಹಾಕಿದೆ. ವರದಿಗಳ ಪ್ರಕಾರ, ಶಿವಲಿಂಗವನ್ನು 106 ಚಕ್ರಗಳ ಟ್ರೇಲರ್‌ನಲ್ಲಿ ಸಾಗಿಸಲಾಗುತ್ತಿದ್ದು, ಈ ಟ್ರೇಲರ್ ಸ್ವತಃ ಸುಮಾರು 160 ಟನ್ ತೂಗುತ್ತದೆ.
ಆಡಳಿತವು ಪರ್ಯಾಯ ಮಾರ್ಗಗಳನ್ನು ಯೋಜಿಸುತ್ತಿದೆ. ಅಧಿಕಾರಿಗಳು ಪಶ್ಚಿಮ ಚಂಪಾರಣ್‌ನ ಬೆಟ್ಟಿಯಾ ಮೂಲಕ ಒಂದು ಮಾರ್ಗವನ್ನು ಮತ್ತು ಪಕ್ಕದ ಗ್ರಾಮೀಣ ಸಂಪರ್ಕಗಳ ಮೂಲಕ ಇನ್ನೊಂದು ಮಾರ್ಗವನ್ನು ಪರಿಶೀಲಿಸುತ್ತಿದ್ದಾರೆ. ಆದರೂ, ಬೃಹತ್ ವಿಗ್ರಹವು ಮುಂದುವರಿಯುವ ಮೊದಲು ಪ್ರತಿಯೊಂದೂ ಹಂತದಲ್ಲಿ ಸವಾಲು ಎದುರಾಗಲಿದ್ದು, ಅವುಗಳನ್ನು ತಾಂತ್ರಿಕವಾಗಿಯೇ ಪ್ರಮಾಣೀಕರಿಸಬೇಕಾಗಿದೆ.
ಪ್ರಸ್ತುತ, ಗೋಪಾಲ್‌ಗಂಜ್‌ನ ಬಾಲಥಾರಿ ಚೆಕ್‌ಪೋಸ್ಟ್ ಬಳಿ ಶಿವಲಿಂಗವು ಇದೆ. ಶಿವಲಿಂಗವು ತನ್ನ ಗಮ್ಯಸ್ಥಾನದ ಕಡೆಗೆ ತಲುಪುವಲ್ಲಿ ನಿರೀಕ್ಷಿತ ಪ್ರಗತಿಯನ್ನು ವಿಳಂಬಗೊಳಿಸಿದರೂ ಸಹ, ಸಾರ್ವಜನಿಕ ಸುರಕ್ಷತೆ ಮತ್ತು ರಚನಾತ್ಮಕ ಸಮಗ್ರತೆಯು ಪ್ರತಿಯೊಂದು ನಿರ್ಧಾರಕ್ಕೂ ಮಾರ್ಗದರ್ಶನ ನೀಡಬೇಕು ಎಂದು ಜಿಲ್ಲಾ ಅಧಿಕಾರಿಗಳು ತಿಳಿಸಿದ್ದಾರೆ.
ಏಕಶಿಲೆಯಿಂದ ಕೆತ್ತಿದ ಶಿವಲಿಂಗವು ಕಳೆದ ವರ್ಷ ನವೆಂಬರ್ ಅಂತ್ಯದಲ್ಲಿ ಮಹಾಬಲಿಪುರಂನಿಂದ ವಿರಾಟ್ ರಾಮಾಯಣ ದೇವಾಲಯದ ಕಡೆಗೆ ತನ್ನ ದೀರ್ಘ ಪ್ರಯಾಣವನ್ನು ಪ್ರಾರಂಭಿಸಿತು. ಐದು ರಾಜ್ಯಗಳಲ್ಲಿ 2,100 ಕಿಲೋಮೀಟರ್‌ಗಳನ್ನು ಮೀರಿದ ಈ ಪ್ರಯಾಣದಲ್ಲಿ, ಪಟ್ಟಣಗಳು ಮತ್ತು ನಗರಗಳಲ್ಲಿ ಹೆದ್ದಾರಿಗಳಲ್ಲಿ ಸಾಲುಗಟ್ಟಿ ನಿಂತ ಭಕ್ತರು, ಜಪಗಳು, ಪೂಜೆಗಳು ಮತ್ತು ಅರ್ಪಣೆಗಳೊಂದಿಗೆ ಬೃಹತ್ ಏಕಶಿಲೆಯನ್ನು ಸ್ವಾಗತಿಸಿದರು.
ವಿರಾಟ್ ರಾಮಾಯಣ ದೇವಾಲಯದಲ್ಲಿ ಶಿವಲಿಂಗ ಪ್ರತಿಷ್ಠಾಪನೆಗೆ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ ಎಂದು ವರದಿ ತಿಳಿಸಿದೆ. ಪ್ರತಿಷ್ಠಾಪನಾ ಸಮಾರಂಭದಲ್ಲಿ ಐದು ಪವಿತ್ರ ನದಿಗಳಿಂದ ನೀರನ್ನು ತೆಗೆದುಕೊಂಡು ಸಾಂಪ್ರದಾಯಿಕ ಅಭಿಷೇಕ (ಧಾರ್ಮಿಕ ಸ್ನಾನ) ಮತ್ತು ಹೆಲಿಕಾಪ್ಟರ್‌ಗಳಿಂದ ವಿಧ್ಯುಕ್ತವಾಗಿ ಪುಷ್ಪವೃಷ್ಟಿ ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ