
ನವದೆಹಲಿ: 125 ದೇಶಗಳನ್ನು ಒಳಗೊಂಡ ಜಾಗತಿಕ ಹಸಿವು ಸೂಚ್ಯಂಕ ಗುರುವಾರ ಬಿಡುಗಡೆಯಾಗಿದ್ದು, ಭಾರತ 111ನೇ ಸ್ಥಾನಕ್ಕೆ ಕುಸಿತ ಕಂಡಿದೆ. ಆದರೆ ಸೂಚ್ಯಂಕವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದು, ಇದು ತಪ್ಪು ಮಾನದಂಡಗಳಿಂದ ಮಾಡಿದ ಸೂಚ್ಯಂಕವಾಗಿದೆ ಹಾಗೂ ದುರುದ್ದೇಶದಿಂದ ಕೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಕಳೆದ ವರ್ಷ 121 ದೇಶಗಳ ಪಟ್ಟಿಯಲ್ಲಿ ಭಾರತ 107ನೇ ಸ್ಥಾನ ಹೊಂದಿತ್ತು. ಈ ವರ್ಷ ಭಾರತದ ಅಂಕ ಶೇ.28.7ರಷ್ಟಿದ್ದು, ಇದು ದೇಶದಲ್ಲಿ ಹಸಿವಿನ ಮಟ್ಟ ಗಂಭೀರವಾಗಿರುವುದನ್ನು ತೋರಿಸುತ್ತದೆ ಎಂದು ವರದಿ ತಿಳಿಸಿದೆ. ಆದರೆ ಭಾರತದ ನೆರೆಯ ರಾಷ್ಟ್ರಗಳು ಈ ವಿಷಯದಲ್ಲಿ ಉತ್ತಮ ಸ್ಥಿತಿಯಲ್ಲಿವೆ. ಪಾಕಿಸ್ತಾನ 102 ನೇ ಸ್ಥಾನ, ಬಾಂಗ್ಲಾದೇಶ 81, ನೇಪಾಳ 69 ಮತ್ತು ಶ್ರೀಲಂಕಾ 60ನೇ ಸ್ಥಾನದಲ್ಲಿವೆ. ಜಾಗತಿಕ ಹಸಿವಿನ ಸೂಚ್ಯಂಕ ಎಂಬುದು ಪ್ರಾದೇಶಿಕ, ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ಹಸಿವನ್ನು ಅಳೆಯುವ ಪ್ರಮಾಣವಾಗಿದೆ.
ಕೇಂದ್ರ ತಿರಸ್ಕಾರ:
ಆದರೆ ಸೂಚ್ಯಂಕವನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ್ದು, ಇದು ತಪ್ಪು ಮಾನದಂಡಗಳಿಂದ ಮಾಡಿದ ಸೂಚ್ಯಂಕವಾಗಿದೆ ಹಾಗೂ ದುರುದ್ದೇಶದಿಂದ ಕೂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಚಿಲ್ಲರೆ ಹಣದುಬ್ಬರ ಶೇ.5.02ಕ್ಕೆ ಇಳಿಕೆ 3 ತಿಂಗಳ ಕನಿಷ್ಠ
ನವದೆಹಲಿ: ದೇಶದ ಆಹಾರ ಹಾಗೂ ತರಕಾರಿ ಬೆಲೆಗಳು ಕೊಂಚ ಇಳಿದ ಪರಿಣಾಮ ಚಿಲ್ಲರೆ ಹಣದುಬ್ಬರ ಶೇ.5.02ಕ್ಕೆ ಇಳಿದಿದಿದ್ದು, 3 ತಿಂಗಳ ಕನಿಷ್ಠ ಹಣದುಬ್ಬರ ದಾಖಲಿಸಿದೆ. ಈ ಮೂಲಕ ಎರಡು ತಿಂಗಳ ರಿಸರ್ವ್ ಬ್ಯಾಂಕ್‌ನ ಶೇ.6ರ ಮಿತಿಯ ಒಳಗೆ ಹಣದುಬ್ಬರ ಇಳಿಕೆಯಾಗಿದೆ. ಗ್ರಾಹಕ ಬೆಲೆ ಸೂಚ್ಯಂಕವು ಆಗಸ್ಟ್‌ನಲ್ಲಿ ಶೇ.6.83 ಹಾಗೂ ಸೆಪ್ಟೆಂಬರ್‌ನಲ್ಲಿ ಶೇ.7.41ರಷ್ಟು ದಾಖಲಾಗಿತ್ತು. ಇನ್ನು ಅದರಲ್ಲಿ ಆಹಾರದ ಮೇಲಿನ ಹಣದುಬ್ಬರ ಆಗಸ್ಟ್‌ನಲ್ಲಿ ಶೇ.6.56 ಸೆಪ್ಟೆಂಬರ್‌ನಲ್ಲಿ ಶೇ.9.94ರಷ್ಟು ದಾಖಲಾಗಿತ್ತು. ಈ ಹಿಂದೆ ಜೂನ್ ತಿಂಗಳಿನಲ್ಲಿ ಶೇ.4.87ರಷ್ಟು ಚಿಲ್ಲರೆ ಹಣದುಬ್ಬರ ದಾಖಲಾಗಿತ್ತು. ಇದು ಇತ್ತೀಚಿನ ಅತಿ ಕನಿಷ್ಠವಾಗಿತ್ತು. ಆದರೆ ನಂತರ ತರಕಾರಿ ಹಾಗೂ ಆಹಾರ ಬೆಲೆ ಏರಿದ್ದರಿಂದ ಹಣದುಬ್ಬರ ನಿರಂತರ ಏರಿಕೆ ಆಗಿತ್ತು.
ಬಿಲ್ಕಿಸ್ ರೇಪಿಸ್ಟ್‌ಗಳ ಬಿಡುಗಡೆ: ತೀರ್ಪು ಕಾಯ್ದಿಟ್ಟ ಸುಪ್ರೀಂ
ನವದೆಹಲಿ: ಸನ್ನಡತೆ ಆಧಾರದಲ್ಲಿ ಗುಜರಾತ್‌ನ ಬಿಲ್ಕಿಸ್ ಬಾನೋ ಅತ್ಯಾಚಾರ ಪ್ರಕರಣದ 11 ದೋಷಿಗಳ ಅವಧಿಪೂರ್ವ ಬಿಡುಗಡೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂಕೋರ್ಟ್ ತೀರ್ಪು ಕಾಯ್ದಿರಿಸಿದೆ. ಅಲ್ಲದೇ ಈ ಪ್ರಕರಣದ ಮೂಲ ದಾಖಲೆಗಳನ್ನು ಅ.16ರೊಳಗೆ ಸಲ್ಲಿಸುವಂತೆ ಕೇಂದ್ರ ಹಾಗೂ ಗುಜರಾತ್ ಸರ್ಕಾರಕ್ಕೆ ಸೂಚನೆ ನೀಡಿದೆ.
11 ಮಂದಿ ಆರೋಪಿಗಳನ್ನು ಬಿಡುಗಡೆ ಮಾಡಿದ ಕ್ರಮವನ್ನು ಪ್ರಶ್ನಿಸಿ ಬಿಲ್ಕಿಸ್ ಬಾನೋ ವಕೀಲರಿಂದ ಹಾಗೂ ಹಲವು ಸಾರ್ವಜನಿಕ ಹಿಸಾಸಕ್ತಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ನ್ಯಾ।ಬಿ.ವಿ.ನಾಗರತ್ನ ಮತ್ತು ನ್ಯಾ।ಉಜ್ಜಲ್ ಭುಯಾನ್ ಅವರಿದ್ದ ಪೀಠ ತೀರ್ಪು ಕಾಯ್ದಿರಿಸಿದೆ. ಅಲ್ಲದೇ ಅ.16ರೊಳಗೆ ಬಿಡುಗಡೆಗೆ ಸಂಬಂಧಿಸಿದಂತೆ ಎಲ್ಲಾ ಮೂಲ ದಾಖಲೆಗಳನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಬೇಕು ಎಂದು ಸೂಚಿಸಿದೆ.
ಸನ್ನಡತೆ ಆಧಾರದಲ್ಲಿ ರೇಪಿಸ್ಟ್‌ಗಳ ಅವಧಿಪೂರ್ವ ಬಿಡುಗಡೆಗೆ ಸಿಪಿಎಂ ನಾಯಕಿ ಸುಭಾಷಿಣಿ ಅಲಿ, ಪತ್ರಕರ್ತೆ ರೇವತಿ ಲಾಲ್, ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಸೇರಿ ಹಲವರು ಪಿಐಎಲ್ ಸಲ್ಲಿಕೆ ಮಾಡಿದ್ದರು.
ವೇಗದ ರೈಲಿಗೆ ಹಠಾತ್ ಬ್ರೇಕ್ ಹಾಕಿದ್ದೇ ಹಳಿ ತಪ್ಪಲು ಕಾರಣ?
ನವದೆಹಲಿ: 4 ಜನರನ್ನು ಬಲಿ ಪಡೆದ ಬಿಹಾರದ ಬಕ್ಸರ್ ರೈಲು ದುರಂತಕ್ಕೆ ಹಳಿಗಳ ದೋಷವೇ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆ ಹೇಳಿದೆ. ಆದರೆ ಕೆಲವು ರೈಲ್ವೆ ಅಧಿಕಾರಿಗಳು ರೈಲು ಅತಿ ವೇಗದಲ್ಲಿ (ಗಂಟೆಗೆ 128 ಕಿ.ಮೀ.) ಸಾಗುತ್ತಿದ್ದಾಗ ಬ್ರೇಕ್ ಹಾಕಿದ್ದೇ ಹಳಿ ತಪ್ಪಲು ಕಾರಣವಿರಬಹುದು ಎಂದು ಸಂದೇಹಿಸಿದ್ದಾರೆ. ಗುರುವಾರ ರಾತ್ರಿ 9:52ಕ್ಕೆ ದೆಹಲಿಯ ಆನಂದ್ ವಿಹಾರ ಟರ್ಮಿನಲ್‌ನಿಂದ ಅಸ್ಸಾಂನ ಕಾಮಾಕ್ಯ ನಿಲ್ದಾಣಕ್ಕೆ ತೆರಳುತ್ತಿದ್ದ ನಾರ್ಥ್ ಈಸ್ಟ್ ಎಕ್ಸ್‌ಪ್ರೆಸ್ ಇಲ್ಲಿನ ರಘುನಾಥಪುರ ನಿಲ್ದಾಣವನ್ನು ದಾಟಿದ ಕೂಡಲೇ ರೈಲು ಹಳಿ ತಪ್ಪಿತ್ತು.
ಈ ಬಗ್ಗೆ ಪ್ರಾಥಮಿಕ ತನಿಖೆ ವರದಿಯ ಮಾಹಿತಿಯನ್ನು ಮೂಲಗಳು ನೀಡಿದ್ದು, ಹಳಿಯಲ್ಲಿನ ದೋಷವು ಘಟನೆಗೆ ಕಾರಣವಾಗಿಬಹುದು ಎಂದು ಹೇಳಲಾಗಿದೆ. ಒಟ್ಟಾರೆ ಈ ಘಟನೆಯಿಂದ 52 ಕೋಟಿ ರು. ಹಾನಿಯಾಗಿದೆ ಎಂದಿವೆ. ಆದರೆ ರೈಲು ಚಾಲಕ ವಿಪಿನ್ ಸಿನ್ಹಾ ಹೇಳಿಕೆ ನೀಡಿ, ‘ರೈಲು ರಘುನಾಥಪುರ ರೈಲು ನಿಲ್ದಾಣವನ್ನು 128 ಕಿ.ಮೀ. ವೇಗದಲ್ಲಿ ದಾಟಿತು. ಆಗ ರೈಲಿನಲ್ಲಿ ಇದ್ದಕ್ಕಿದ್ದಂತೆ ತೀವ್ರ ಕಂಪನ ಶುರುವಾಗಿ ಹಿಂದಿನ ಬೋಗಿಗಳು ಅಲುಗಾಡಲಾರಂಭಿಸಿದ್ದವು. ಅಲ್ಲದೇ ಈ ತೀವ್ರ ಕಂಪನದಿಂದಾಗಿ ಏಕಾಏಕಿ ರೈಲಿನ ಬ್ರೇಕ್ ಪ್ರೇಶರ್ ಇಳಿದು ರೈಲು ಹಳಿತಪ್ಪಿದೆ ಎಂದು ವರದಿ ನೀಡಿದ್ದಾರೆ. ಕೆಲವು ಅಧಿಕಾರಿಗಳು ಚಾಲಕನ ಹೇಳಿಕೆಯನ್ನೇ ಉಲ್ಲೇಖಿಸಿ, ಅತಿ ವೇಗದಲ್ಲಿ ರೈಲು ಸಾಗುವಾಗ ಬ್ರೇಕ್ ಹಾಕಿದ್ದೇ ಘಟನೆಗೆ ಕಾರಣವಿರಬಹುದು ಎಂದು ಶಂಕಿಸಿದ್ದಾರೆ. ಈ ದುರಂತದಿಂದಾಗಿ ಕನಿಷ್ಠ ನಾಲ್ಕು ಜನರು ಮೃತಪಟ್ಟಿದ್ದು, ಚಾಲಕ ಸಿನ್ಹಾ, ರೈಲಿನ ಸಹಾಯಕ ಚಾಲಕ ಸೇರಿ ಹಲವು ಮಂದಿ ಗಾಯಗೊಂಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ