32 ವರ್ಷದ ಹಿಂದಿನ ಕೊಲೆ ಕೇಸ್‌: ಕುಖ್ಯಾತ ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ಜೀವಾವಧಿ ಶಿಕ್ಷೆ

By BK AshwinFirst Published Jun 5, 2023, 4:11 PM IST
Highlights

ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿ ವಿರುದ್ಧದ 61 ಕ್ರಿಮಿನಲ್ ಪ್ರಕರಣಗಳಲ್ಲಿ ಇದು ಆರನೇ ಶಿಕ್ಷೆಯಾಗಿದ್ದು, ಇವರ ವಿರುದ್ಧ ರಾಜ್ಯದ ವಿವಿಧೆಡೆ ಇನ್ನೂ 20 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ.

ಹೊಸದಿಲ್ಲಿ (ಜೂನ್ 5, 2023) : ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ಕೊಲೆ ಪ್ರಕರಣವೊಂದರಲ್ಲಿ ನ್ಯಾಯಾಲಯವೊಂದು ಜೀವಾವಧಿ ಶಿಕ್ಷೆ ವಿಧಿಸಿದೆ. 32 ವರ್ಷಗಳ ಹಿಂದಿನ ಕೊಲೆ ಪ್ರಕರಣದಲ್ಲಿ ಉತ್ತರ ಪ್ರದೇಶದ ವಾರಾಣಸಿಯ  ನ್ಯಾಯಾಲಯವು ಜೈಲಿನಲ್ಲಿರುವ ದರೋಡೆಕೋರ ಮುಖ್ತಾರ್ ಅನ್ಸಾರಿ ಅವರನ್ನು ಇಂದು ದೋಷಿ ಎಂದು ಘೋಷಿಸಿ ಶಿಕ್ಷೆ ವಿಧಿಸಿದೆ. ಅಲ್ಲದೆ 1,00,000 ರೂ. ದಂಡವನ್ನೂ ವಿಧಿಸಲಾಗಿದೆ. 

ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿ ವಿರುದ್ಧದ 61 ಕ್ರಿಮಿನಲ್ ಪ್ರಕರಣಗಳಲ್ಲಿ ಇದು ಆರನೇ ಶಿಕ್ಷೆಯಾಗಿದ್ದು, ಇವರ ವಿರುದ್ಧ ರಾಜ್ಯದ ವಿವಿಧೆಡೆ ಇನ್ನೂ 20 ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ. ಕಾಂಗ್ರೆಸ್ ಮುಖಂಡರೊಬ್ಬರ ಕೊಲೆಯ ಪ್ರಕರಣದಲ್ಲಿ ಇವರಿಗೆ ಈ ಶಿಕ್ಷೆ ವಿಧಿಸಲಾಗಿದೆ. ಆಗಸ್ಟ್ 3, 1991 ರಂದು, ಕಾಂಗ್ರೆಸ್ ನಾಯಕ ಮತ್ತು ಮಾಜಿ ಶಾಸಕ ಅಜಯ್ ರಾಯ್‌ ಅವರ ಸಹೋದರ ಅವಧೇಶ್ ರಾಯ್‌ ಅವರನ್ನು ವಾರಾಣಸಿಯಲ್ಲಿ ಅಜಯ್ ರಾಯ್‌ ಅವರ ಮನೆಯ ಹೊರಗೆ ಗುಂಡಿಕ್ಕಿ ಕೊಲ್ಲಲಾಯಿತು. 

ಇದನ್ನು ಓದಿ: ‘ಶೀಘ್ರದಲ್ಲೇ ಯೋಗಿಯನ್ನು ಕೊಲ್ಲುತ್ತೇನೆ’: ಮಾಫಿಯಾಗೆ ಕೊನೆಮೊಳೆ ಹೊಡೀತಿರೋ ಯುಪಿ ಸಿಎಂಗೆ ಹತ್ಯೆ ಬೆದರಿಕೆ

ಅಪರಾಧ ಎಸಗಿದಾಗ ಮುಕ್ತಾರ್ ಅನ್ಸಾರಿ ಅವರು ಶಾಸಕರಾಗಿರಲಿಲ್ಲ. ಇನ್ನು, ಈ ತೀರ್ಪಿನ ಪೂರ್ವಭಾವಿಯಾಗಿ ನ್ಯಾಯಾಲಯದ ಆವರಣದಲ್ಲಿ ಬಿಗಿ ಭದ್ರತೆ ಏರ್ಪಾಡಾಗಿತ್ತು. ಅಜಯ್‌ ರಾಯ್‌ ಅವರು ಎಫ್‌ಐಆರ್‌ನಲ್ಲಿ ಮುಖ್ತಾರ್ ಅನ್ಸಾರಿ, ಭೀಮ್ ಸಿಂಗ್, ಮಾಜಿ ಶಾಸಕ ಅಬ್ದುಲ್ ಕಲೀಂ ಮತ್ತು ಇತರ ಇಬ್ಬರನ್ನು ಹೆಸರಿಸಿದ್ದಾರೆ.

ಐದು ಅವಧಿಯ ಶಾಸಕರಾಗಿರುವ ಮುಖ್ತಾರ್ ಅನ್ಸಾರಿಗೆ ಏಪ್ರಿಲ್‌ನಲ್ಲಿ ಮತ್ತೊಂದು ಅಪಹರಣ ಮತ್ತು ಕೊಲೆ ಪ್ರಕರಣದಲ್ಲಿ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು. ಇವರ ವಿರುದ್ಧ ಭೂಕಬಳಿಕೆ, ಕೊಲೆ ಮತ್ತು ಸುಲಿಗೆ ಸೇರಿ ಹಲವಾರು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.

ಇದನ್ನೂ ಓದಿ: ಯುಪಿಯಲ್ಲಿ ಗುಂಡಿನ ದಾಳಿಗೆ ಯುವತಿ ಬಲಿ: ಅತೀಕ್‌ ಹತ್ಯೆಯಂತೆ ಈ ಸಾವನ್ನೂ ಸಂಭ್ರಮಿಸುತ್ತೀರಾ ಎಂದು ಟೀಕೆ

ವಾರಾಣಸಿ ಎಂಪಿ ಎಂಎಲ್ಎ ನ್ಯಾಯಾಲಯವು ಮೇ 19 ರಂದು ಅಂತಿಮ ವಾದಗಳ ನಂತರ ಅವಧೇಶ್ ರಾಯ್‌ ಪ್ರಕರಣದ ವಿಚಾರಣೆಯನ್ನು ಅಂತ್ಯಗೊಳಿಸಿದ್ದು, ತನ್ನ ಆದೇಶವನ್ನು ಕಾಯ್ದಿರಿಸಿದ್ದು ಮತ್ತು ಜೂನ್ 5 ರಂದು ತೀರ್ಪಿನ ದಿನಾಂಕವನ್ನು ನಿಗದಿಪಡಿಸಿತು. ಮುಖ್ತಾರ್ ಅನ್ಸಾರಿ 1996, 2002, 2007, 2012 ಮತ್ತು 2017 ಸೇರಿ ಐದು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. ಕಳೆದ ಮೂರು ಗೆಲುವುಗಳು ಜೈಲಿನಲ್ಲಿದ್ದಾಗ ಬಂದಿವೆ ಎನ್ನುವುದೂ ವಿಶೇಷ. ಇನ್ನು, ಗ್ಯಾಂಗ್‌ಸ್ಟರ್‌ನ ಪುತ್ರ ಅಬ್ಬಾಸ್ ಅನ್ಸಾರಿ ಅವರು 2022 ರಲ್ಲಿ ಸುಹೇಲ್‌ದೇವ್ ಭಾರತೀಯ ಸಮಾಜ ಪಕ್ಷದಿಂದ (SBSP) ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಭದ್ರಕೋಟೆಯಾದ ಮೌ ಸದರ್‌ನಿಂದ ಗೆಲುವು ಸಾಧಿಸಿದ್ದಾರೆ.

ಈ ಮಧ್ಯೆ, ಉತ್ತರ ಪ್ರದೇಶದ ಇತಿಹಾಸದಲ್ಲಿ ಬಹುಶಃ ಅತ್ಯಂತ ಸಂವೇದನಾಶೀಲ ರಾಜಕೀಯ ಕೊಲೆಯಲ್ಲಿ ಮುಕ್ತಾರ್ ಅನ್ಸಾರಿ ಕೂಡ ಆರೋಪಿಯಾಗಿದ್ದಾರೆ. ನವೆಂಬರ್ 2005 ರಲ್ಲಿ ಬಿಜೆಪಿ ಶಾಸಕ ಕೃಷ್ಣಾನಂದ ರಾಯ್‌ ಅವರನ್ನು ಎಕೆ-47 ರೈಫಲ್‌ನಿಂದ ಕೊಂದರು ಎಂದು ಹೇಳಲಾಗಿದ್ದು, ಸ್ಥಳದಿಂದ 400 ಬುಲೆಟ್ ಶೆಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ. ಅಲ್ಲದೆ, ಕೃಷ್ಣಾನಂದ ರಾಯ್‌ ಮೃತದೇಹದಿಂದ 21 ಗುಂಡುಗಳು ಪತ್ತೆಯಾಗಿವೆ.

ಇದನ್ನೂ ಓದಿ: ದೊಡ್ಡ ಡಾನ್‌ ಆಗಲು ದೊಡ್ಡ ತಲೆಯನ್ನೇ ತೆಗೆಯಬೇಕೆಂದು ಯುಪಿ ಗ್ಯಾಂಗ್‌ಸ್ಟರ್‌ ಅತೀಕ್‌ ಅಹ್ಮದ್‌ ಹತ್ಯೆ!

click me!