ಅಯೋಧ್ಯಾ: ನೀವು ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದರೆ, ಇನ್ಸ್ಟಾ ರೀಲ್ಸ್‌ಗಳನ್ನು ಹೆಚ್ಚೆಚ್ಚು ನೋಡುತ್ತಿದ್ದರೆ, ಪಟ್ಲಿ ಕಮರಿಯಾ ಮೊರಿ ಹಾಯ್ ಹಾಯ್ ಹಾಯ್ ಎಂಬ ಹಾಡನ್ನು ಪಕ್ಕಾ ಕೇಳಿರ್ತೀರಾ ಈ ಹಾಡಿಗೆ ಸೊಂಟ ಬಳುಕಿಸಿದ ಸಾವಿರಾರು ಜನ ರೀಲ್ಸ್‌ಗಳನ್ನು ನೀವು ನೋಡಿರಬಹುದು. ಸಾಮಾಜಿಕ ಜಾಲತಾಣದಲ್ಲಿ ಇತ್ತೀಚೆಗೆ ಅಷ್ಟೊಂದು ಕ್ರೇಜ್ ಸೃಷ್ಟಿಸಿದ ಭೋಜ್‌ಪುರಿ ಹಾಡು ಇದಾಗಿದ್ದು, ಈ ಹಾಡಿಗೆ ತುಂಬಾ ಜನ ಸೊಂಟ ಬಳುಕಿಸಿದ್ದಾರೆ. ನೀವು ಕೂಡ ರೀಲ್ಸ್ ಮಾಡುವವರಾಗಿದ್ದರೆ ಈ ಹಾಡಿಗೆ ಹೆಜ್ಜೆ ಹಾಕಿರಬಹುದು. ಅದೇ ರೀತಿ ಎಲ್ಲರಂತೆ ಈ ಹಾಡಿಗೆ ಹೆಜ್ಜೆ ಹಾಕಿ ರೀಲ್ಸ್ ಮಾಡಿದ ಮಹಿಳಾ ಪೊಲೀಸರಿಗೆ ಮಾತ್ರ ಈಗ ಈ ಹಾಡು ಸಂಕಷ್ಟ ತಂದಿದೆ. ಈ ಹಾಡಿಗೆ ಡಾನ್ಸ್ ಮಾಡಿದ ಕಾರಣಕ್ಕೆ ನಾಲ್ವರು ಮಹಿಳಾ ಪೊಲೀಸರನ್ನು ಬೇರೆಡೆ ವರ್ಗಾವಣೆ ಮಾಡಲಾಗಿದೆ. ಉತ್ತರಪ್ರದೇಶದ ಆಯೋಧ್ಯದಲ್ಲಿ ಈ ಘಟನೆ ನಡೆದಿದೆ.
ಮೂಲತಃ ಇದು ಭೋಜ್‌ಪುರಿ ಭಾಷೆಯ ಅಶ್ಲೀಲ ಹಾಡು. ಕೆಲವರು ಭಾಷೆ ಅರ್ಥ ತಿಳಿದೂ ಡಾನ್ಸ್ ಮಾಡಿದರೆ ಬಹುತೇಕರು ಡಾನ್ಸ್ ಮಾಡುವಾಗ ಸಾಹಿತ್ಯದ ಮೇಲೆ ಗಮನ ಹರಿಸುವುದಿಲ್ಲ. ಗುಂಪಿನಲ್ಲಿ ಗೋವಿಂದ ಅಂತ ಸಂಗೀತಾದ ಜೋಶ್‌ನಲ್ಲಿ ಆಗಿದ್ದಾಗಲಿ ಅಂತ ನಾಲ್ಕು ಸ್ಟೆಪ್ ಹಾಕಿ ಬಿಡುತ್ತಾರೆ. ಹಾಗೆಯೇ ಇಲ್ಲಿ ಪಾಪ ಮಹಿಳಾ ಪೊಲೀಸ್ ಪೇದೆಯರು ಅರ್ಥ ಗೊತ್ತಿದ್ದು, ಕುಣಿದರೋ ಗೊತ್ತಿಲ್ಲದೇ ಕುಣಿದರೋ ತಿಳಿಯದು ಒಟ್ಟಿನಲ್ಲಿ ಅವರಿಗೆ ಈ ಹಾಡಿನಿಂದ ಅಮಾನತಿನ ಶಿಕ್ಷೆಯಾಗಿದೆ. ಪತ್ಲಿ ಕಮರಿಯಾ ಮೊರಿ (Patli Kamariya Mori) ಹಾಡಿಗೆ ಇವರು ಕುಣಿದು ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಇವರು ಕರ್ತವ್ಯದಲ್ಲಿದ್ದ ವೇಳೆ ಈ ಡಾನ್ಸ್ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು, ಅವರನ್ನು ಅವರು ಕರ್ತವ್ಯದಲ್ಲಿದ್ದ ರಾಮಜನ್ಮ ಭೂಮಿ (Shri Ram Janmabhoomi) ಅಯೋಧ್ಯೆಯ ಸ್ಥಳದಿಂದ ಪೊಲೀಸ್ ಲೈನ್‌ಗೆ ವರ್ಗಾಯಿಸಲಾಗಿದೆ.
ಭೋಜ್‌ಪುರಿ ಹಾಡಿಗೆ ಮಕ್ಕಳೆದುರು ಕುಣಿದ ಶಿಕ್ಷಕಿ: ವಿಡಿಯೋ ವೈರಲ್, ಪೋಷಕರ ಆಕ್ರೋಶ
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಎಸ್‌ಪಿ ಮುನಿರಾಜ್ (Muniraj), ಈ ಘಟನೆಗೆ ಸಂಬಂಧಿಸಿದಂತೆ ತನಿಖೆಗೆ ಆದೇಶಿಸಿದ್ದಾರೆ. ಇನ್ನು ವೈರಲ್ ಆದ ವಿಡಿಯೋದಲ್ಲಿ ಇದ್ದ ಮಹಿಳಾ ಪೇದೆಗಳನ್ನು ಕವಿತಾ ಪಟೇಲ್ (Kavita Patel) , ಕಾಮಿನಿ ಕುಶ್ವಾಹ್ (Kamini Kushwaha), ಕಶಿಶ್ ಸಹ್ನಿ (Kashish Sahni) ಹಾಗೂ ಸಂಧ್ಯಾ ಸಿಂಗ್ (Sandhya Singh) ಎಂದು ಗುರುತಿಸಲಾಗಿದೆ.ಈ ವೈರಲ್ ಆಗಿರುವ ವಿಡಿಯೋದಲ್ಲಿ ಮೂವರು ಪೊಲೀಸರು ಕ್ಯಾಮರಾದಲ್ಲಿ ಸೆರೆ ಆಗಿದ್ದರೆ ಇನ್ನೊಬ್ಬರು ಕ್ಯಾಮರಾ ಹಿಂದಿದ್ದಾರೆ. ಈ ವಿಡಿಯೋ ವಾರದ ಹಿಂದೆ ವೈರಲ್ ಆಗಿದ್ದು, ಇತ್ತೀಚೆಗಷ್ಟೇ ಅಯೊಧ್ಯೆಗೆ ಎಸ್ಎಸ್‌ಪಿಯಾಗಿ ವರ್ಗಾವಣೆಗೊಂಡು ಬಂದ ಮುನಿರಾಜ್‌ಗೆ ತಲುಪಿದ್ದು, ಕರ್ತವ್ಯದ ಸಮಯದಲ್ಲಿ ಡಾನ್ಸ್ ಮಾಡಿದ ಮಹಿಳಾ ಸಿಬ್ಬಂದಿಗೆ ಬಿಸಿ ಮುಟ್ಟಿಸಿದ್ದಾರೆ.
ದೀಪಿಕಾ ಪಡುಕೋಣೆ ಹಾಡಿಗೆ ಸಖತ್ ಬೋಲ್ಡ್ ಆಗಿ ಹೆಜ್ಜೆ ಹಾಕಿದ ಭೋಜ್‌ಪುರಿ ನಟಿ ಮಾದಕ ಡ್ಯಾನ್ಸ್ ವೈರಲ್!
ಇತ್ತೀಚೆಗಷ್ಟೇ ಇದೇ ಹಾಡಿಗೆ ಶಾಲಾ ಶಿಕ್ಷಕಿಯೊಬ್ಬರು ತರಗತಿಯಲ್ಲೇ ಮಕ್ಕಳೊಂದಿಗೆ ಡಾನ್ಸ್ ಮಾಡಿದ್ದರು. ಮಕ್ಕಳೊಂದಿಗೆ ಅಶ್ಲೀಲ ಹಾಡಿಗೆ ಹೆಜ್ಜೆ ಹಾಕಿದ ಕಾರಣಕ್ಕೆ ಶಿಕ್ಷಕಿಯ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅನೇಕರು ಶಿಕ್ಷಕಿಯನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದರು. ಪೊಲೀಸ್ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಸಮಾಜದ ತಪ್ಪುಗಳನ್ನು ತಿದ್ದುವ ಜವಾಬ್ದಾರಿಯನ್ನು ಹೊಂದಿರುವ ಶಿಸ್ತುಬದ್ಧ ಇಲಾಖೆಗಳಾಗಿದ್ದು, ಈ ಇಲಾಖೆಯ ಸಿಬ್ಬಂದಿ ಹೀಗೆ ಶಿಸ್ತು ಮರೆತು ನೃತ್ಯ ಮಾಡಿರುವುದಕ್ಕೆ ಈಗ ಅಮಾನತಿನ ಶಿಕ್ಷೆ ಎದುರಾಗಿದೆ. ಅದೇನೆ ಇರಲಿ ಹಾಡು ಸಂಗೀತಾಕ್ಕೆ ಭಾಷೆ ದೇಶದ ಗಡಿಯಿಲ್ಲ ಎಂಬುದು ನಿಜವೇ ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಹಾಡುಗಳಿಗೆಲ್ಲಾ ಹೆಜ್ಜೆ ಹಾಕುವ ಮೊದಲು ಸ್ವಲ್ಪ ಅರ್ಥ ತಿಳಿದು ಸೊಂಟ ಬಳುಕಿಸುವುದೊಳಿತು. ಇಲ್ಲದಿದ್ದರೆ ಹೀಗೆಲ್ಲಾ ಅನಾಹುತ ಎದುರಾಗುವುದು ಖಂಡಿತ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ