ಆತ್ಮಗಳ ಭಯ? ಒಡಿಸಾ ರೈಲು ದುರಂತದಲ್ಲಿ ಮೃತರ ಶವ ಇಟ್ಟಿದ್ದ ಶಾಲೆಗೆ ಬರಲು ಮಕ್ಕಳ ಹಿಂದೇಟು

By Anusha KbFirst Published Jun 9, 2023, 12:13 PM IST
Highlights

ಜೂನ್‌ 2 ರಂದು ನಡೆದ ಬಾಲಸೋರ್ ತ್ರಿವಳಿ ರೈಲು ದುರಂತದಲ್ಲಿ ಮಡಿದವರ ಶವಗಳನ್ನು ಇಟ್ಟಿದ್ದ ಶಾಲೆಗೆ ಈಗ ಮಕ್ಕಳು ಬರಲು ಹಿಂದೇಟು ಹಾಕುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. 

ಬಾಲಸೋರ್‌: ಕಳೆದ ಜೂನ್‌ 2 ರಂದು ನಡೆದ ಬಾಲಸೋರ್ ತ್ರಿವಳಿ ರೈಲು ದುರಂತದಲ್ಲಿ ಮಡಿದವರ ಶವಗಳನ್ನು ಇಟ್ಟಿದ್ದ ಶಾಲೆಗೆ ಈಗ ಮಕ್ಕಳು ಬರಲು ಹಿಂದೇಟು ಹಾಕುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಒಡಿಶಾದ ಬಾಲಸೋರ್ ಜಿಲ್ಲೆಯ ಬಹನಾಗ ಬಳಿ ತ್ರಿವಳಿ ರೈಲುಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ 288 ಜನರು ದಾರುಣವಾಗಿ ಸಾವನ್ನಪ್ಪಿದ್ದರು.  ಅಪಘಾತದ ನಂತರ ರಕ್ಷಣಾ ಕಾರ್ಯಾಚರಣೆಗೆ ಸಹಾಯವಾಗಲೆಂದು ಮೃತಪಟ್ಟವರ ಶವಗಳನ್ನು ಘಟನೆ ನಡೆದ ಸ್ಥಳದಿಂದ ಕೇವಲ 500 ಮೀಟರ್ ದೂರದಲ್ಲಿರುವ ಶಾಲೆಯ ಕೊಠಡಿಗಳಲ್ಲಿ ಇಡುವುದಕ್ಕೆ ವ್ಯವಸ್ಥೆ ಮಾಡಲಾಗಿತ್ತು. ನಂತರ ಅಲ್ಲಿಂದ ಶವಗಳನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿತ್ತು.

ಕೆಲ ದಿನಗಳ ಕಾಲ ಶವಾಗಾರವಾಗಿ ಬದಲಾಗಿದ್ದ ಈ ಶಾಲೆಗೆ ಈಗ ಮಕ್ಕಳು ಬರಲು ಹಿಂದೇಟು ಹಾಕುತ್ತಿದ್ದು, ಇದು ಆಡಳಿತಕ್ಕೆ ದೊಡ್ಡ ತಲೆನೋವಾಗಿದೆ. 60 ವರ್ಷಗಳಷ್ಟು ಹಳೆಯ ಶಾಲೆ ಇದಾಗಿದ್ದು, ಇದನ್ನು ಕಾಲಕ್ಕೆ ತಕ್ಕಂತೆ ಆಗಾಗ ನವೀಕರಿಸಲಾಗಿದ್ದು, ವಿಜ್ಞಾನದ ಪ್ರಯೋಗಾಲಯ ಸೇರಿದಂತೆ ಉತ್ತಮ ಸ್ಥಿತಿಯಲ್ಲಿರುವ ಈ ಶಾಲೆಯನ್ನು ಒಡೆದು ಹಾಕಬೇಕಷ್ಟೇ ಎಂಬ ಮಾತುಗಳು ಕೇಳಿ ಬರುತ್ತಿವೆ.

ಆತ್ಮಗಳ ಭಯ

ಮನುಷ್ಯ ನಂತರ ಆತ್ಮಗಳು ಮೋಕ್ಷವನ್ನು ಪಡೆಯುತ್ತವೆ. ಅಪಘಾತದಂತಹ ಅಪಮೃತ್ಯುವಿನಿಂದ ಮೃತರಾದವರು ಆತ್ಮಕ್ಕೆ ಶಾಂತಿ ಸಿಗದೇ ಅಲೆದಾಡುತ್ತಿರುತ್ತವೆ ಎಂಬ ನಂಬಿಕೆ ಸಮಾಜದಲ್ಲಿದೆ. ಸತ್ತ ನಂತರ ಆತ್ಮಗಳು ಕಾಡುತ್ತವೆ ಎಂಬ ಮೂಢನಂಬಿಕೆ ಭಯವೇ ಮಕ್ಕಳು ಶಾಲೆಗೆ ಬರಲು ಹಿಂದೇಟು ಹಾಕುತ್ತಿರುವುದಕ್ಕೆ ಕಾರಣ ಎನ್ನಲಾಗುತ್ತಿದೆ.

ನಾನು ಸತ್ತಿಲ್ಲ, ನೀರು ಕೊಡಿ; ರೈಲು ದುರಂತದ ಶವಗಳ ರಾಶಿಯಲ್ಲಿದ್ದ ವ್ಯಕ್ತಿಯ ರಕ್ಷಣೆ!

ಜಿಲ್ಲಾಧಿಕಾರಿ ಭೇಟಿ
ಬಹಾನಗಾದ ಈ ಸರ್ಕಾರಿ ನೋಡಲ್‌ ಪ್ರೌಢ ಶಾಲೆಗೆ ಬಾಲಸೋರ್ ಜಿಲ್ಲಾಧಿಕಾರಿ ದತ್ತಾತ್ರೇಯ ಬಾಬುಸಾಹೇಬ್ ಶಿಂಧೆ ಅವರು ಭೇಟಿ ನೀಡಿದ್ದು, ಈ ರೀತಿ ಮೂಢನಂಬಿಕೆಯನ್ನು ಹಬ್ಬಿಸದಂತೆ ಜನರಲ್ಲಿ ಮನವಿ ಮಾಡಿದ್ದಾರೆ.  ಈ ಬಗ್ಗೆ ಪೋಷಕರ ಹಾಗೂ ಮಕ್ಕಳ ಜೊತೆ ಚರ್ಚಿಸಿ ಅವರಿಗೆ  ಸಮಾಲೋಚನೆ ಮಾಡಲಾಗುವುದು ಎಂದು ಕೂಡ ಅವರು ಹೇಳಿದ್ದಾರೆ.  ಎಳೆಯ ಮಕ್ಕಳ ಮನಸ್ಸಿನಲ್ಲಿ ಮೂಢನಂಬಿಕೆಯನ್ನು ಬಿತ್ತುವ ಬದಲು ಅವರಿಗೆ ವೈಜ್ಞಾನಿಕ ವಿಚಾರಗಳ ಮೂಲಕ ಅರಿವು ಮೂಡಿಸಿ ಎಂದು ಅವರು ಮನವಿ ಮಾಡಿದ್ದಾರೆ. 

ಬಹಾನಗಾದ ಈ ಸರ್ಕಾರಿ ನೋಡಲ್‌ ಪ್ರೌಢ ಶಾಲೆ ರೈಲು ದುರಂತ ನಡೆದ ಸ್ಥಳದಿಂದ ಕೇವಲ 500 ಮೀಟರ್ ದೂರದಲ್ಲಿದ್ದು, ತುರ್ತು ರಕ್ಷಣಾ ಕಾರ್ಯದ ಸಲುವಾಗಿ ಶಾಲೆಯನ್ನು ತಾತ್ಕಾಲಿಕ ಶವಾಗಾರ ಮಾಡಲಾಗಿತ್ತು. ಈ ಶಾಲೆಯ ಆರು ತರಗತಿ ಹಾಗೂ ಹಾಲ್‌ನಲ್ಲಿ ಶವಗಳನ್ನು ಇರಿಸಲಾಗಿತ್ತು. ನಂತರ ಇಲ್ಲಿಂದ ಎಲ್ಲಾ ಶವಗಳನ್ನು ಜಿಲ್ಲಾಸ್ಪತ್ರೆಗೆ ಶವಾಗಾರಕ್ಕೆ ಸಾಗಿಸಲಾಗಿತ್ತು. ಜೊತೆಗೆ ಈ ಶವ ಇಟ್ಟ ಕ್ಲಾಸ್‌ ರೂಮ್‌ಗಳನ್ನು ಸ್ಯಾನಿಟೈಶ್‌ ಬಳಸಿ ಸ್ವಚ್ಛ ಮಾಡಲಾಗಿತ್ತು. ಆದರೆ ಶಿಕ್ಷಕರು ಹಾಗೂ ಮಕ್ಕಳು ಈ ಶಾಲೆಗೆ ಬರಲು ಮನಸ್ಸು ಮಾಡುತ್ತಿಲ್ಲ ಎಂದು ಶಾಲಾಡಳಿತ ಮಂಡಳಿ ಜಿಲ್ಲಾಡಳಿತಕ್ಕೆ ತಿಳಿಸಿದೆ. 

ಒಡಿಶಾ ರೈಲು ದುರಂತ: ರೈಲ್ವೆ ನೌಕರರ ಫೋನ್‌ಗಳು ಸಿಬಿಐ ವಶ​ಕ್ಕೆ

ಅಲ್ಲದೇ ಈ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ತಜ್ಞರಿಂದ ಕೌನ್ಸೆಲಿಂಗ್ ಮಾಡಲು ಕೂಡ ಸರ್ಕಾರದ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ. 
 

click me!