
ಹದಿಹರೆಯದಲ್ಲಿ ಮಕ್ಕಳು ಪ್ರೀತಿ ಪ್ರೇಮದ ಬಲೆಗೆ ಬೀಳುವುದು ಸಾಮಾನ್ಯ. ಹೀಗಾದಾಗ ಪೋಷಕರಾದವರು ಅವರನ್ನು ಶಿಕ್ಷಿಸುವ ಬದಲು ಮೃದುವಾಗಿ ಅವರಿಗೆ ಬುದ್ಧಿ ಹೇಳುವ ಮೂಲಕ ಸರಿದಾರಿಗೆ ತರಲು ಯತ್ನಿಸಬೇಕು. ಆದರೆ ಇಲ್ಲೊಬ್ಬ ತಂದೆ ಪ್ರೀತಿಸುತ್ತಿದ್ದಳೆಂದು 16 ವರ್ಷದ ಹದಿಹರೆಯದ ಮಗಳನ್ನು ಕೊಂದೇ ಬಿಟ್ಟಿದ್ದಾನೆ. ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದೆ. 16 ವರ್ಷದ ವಂದನಾ ಚೌಬೆ ಎಂಬಾಕೆಯನ್ನು ಆಕೆಯ ತಂದೆಯೇ ಕತ್ತು ಹಿಸುಕಿ ಕೊಲೆ ಮಾಡಿದ್ದು, ಬಳಿಕ ಮುಖಕ್ಕೆ ಆಸಿಡ್ ಹಾಕಿ ಆಕೆಯ ಗುರುತು ಯಾರಿಗೂ ಕಾಣದಂತೆ ಮಾಡಿ ಶವವನ್ನು ದೂರ ರಸ್ತೆ ಬದಿ ಎಸೆದಿದ್ದಾನೆ. 16 ವರ್ಷದ ವಂದನಾ ಯುವಕನೋರ್ವನನ್ನು ಪ್ರೀತಿಸುತ್ತಿದ್ದಳು. ಈ ಬಗ್ಗೆ ತಂದೆ ಹಾಗೂ ಕುಟುಂಬದವರಿಗೆ ಗೊತ್ತಾಗಿ ಆಕೆಗೆ ಪ್ರೀತಿ ಪ್ರೇಮದ ಹಿಂದೆ ಹೋಗದಂತೆ ಬುದ್ಧಿ ಹೇಳಿದ್ದಾರೆ. ಜೊತೆಗೆ ಆತನ ಜೊತೆಗಿನ ಸಂಪರ್ಕವನ್ನು ಕಡಿತಗೊಳಿಸುವಂತೆ ಮನವಿ ಮಾಡಿದ್ದಾರೆ. ಆದರೆ ಆಕೆ ತಂದೆಯ ಮಾತು ಕೇಳದೇ ಹೋದಾಗ ತಂದೆ ಆಕೆಯನ್ನು ಬಾರದ ಲೋಕಕ್ಕೆ ಕಳುಹಿಸಿದ್ದಾರೆ.
ವರದಿಗಳ ಪ್ರಕಾರ ಕಳೆದ ವರ್ಷ ಆಗಸ್ಟ್‌ನಲ್ಲಿ ವಂದನಾ ತನ್ನ ಗೆಳೆಯನ ಜೊತೆ ಓಡಿ ಹೋಗಿದ್ದಳು. ಅಪ್ರಾಪ್ತೆಯಾಗಿದ್ದ ಕಾರಣ ಪೊಲೀಸರಿಗೆ ದೂರು ನೀಡಿದ ಬಳಿಕ ಬಾಲಕಿಯನ್ನು ವಾಪಸ್ ಮನೆಗೆ ಕರೆತಂದರೆ ಅತ್ತ ಯುವಕ ಜೈಲು ಸೇರಿದ್ದ. ಜೈಲಿನಲ್ಲಿ ಮೂರು ತಿಂಗಳು ಕಳೆದ ನಂತರ ಆತ ಬಿಡುಗಡೆಯಾಗಿದ್ದು, ಇದಾದ ನಂತರ ನವೆಂಬರ್‌ನಲ್ಲಿ ಆಕೆ ಮತ್ತೆ ಆತನನ್ನು ಸಂಪರ್ಕಿಸಲು ಮುಂದಾಗಿದ್ದಾಳೆ.
ಇದನ್ನೂ ಓದಿ: ಚರ್ಚ್‌ನಲ್ಲಿ ಮೊಣಕಾಲೂರಿ ಪ್ರಾರ್ಥಿಸಿದ ದಳಪತಿ ವಿಜಯ್: ತೀವ್ರ ಟ್ರೋಲ್‌ಗೆ ಗುರಿಯಾದ 'ಟಿವಿಕೆ' ನಾಯಕನ ಭಕ್ತಿ!
ಹದಿಹರೆಯದ ಈ ಬಾಲಕಿಯ ವರ್ತನೆಯಿಂದ ಕುಟುಂಬಕ್ಕೆ ಅವಮಾನವಾಗಿತ್ತು. ಇದು ಆಕೆಯ ತಂದೆ ವಿಜಯ್‌ಕುಮಾರ್ ಚೌಬೆ ಅವರನ್ನು ಸಿಟ್ಟಿಗೇಳುವಂತೆ ಮಾಡಿತ್ತು. ಲಕ್ನೋ ಯುನಿವರ್ಸಿಟಿಯಲ್ಲಿ ಬಸ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ವಿಜಯ್‌ಕುಮಾರ್ ಚೌಬೆ ಮಗಳ ಕಾರಣದಿಂದ ಜನರ ಮಾತು ಕೇಳಲಾಗದೇ ಹಲವು ಬಾರಿ ಮನೆಯನ್ನು ಬದಲಾಯಿಸಿದ್ದರು. ಇದೆಲ್ಲದರ ನಡುವೆ ಮಗಳಿಗೆ ಹಲವು ಬಾರಿ ಅವರು ಈ ಸಂಬಂಧವನ್ನು ಬಿಟ್ಟು ಬಿಡುವಂತೆ ಬುದ್ಧಿ ಹೇಳುವ ಪ್ರಯತ್ನ ಮಾಡಿದ್ದಾರೆ. ಆದರೆ ಆಕೆ ಕೇಳದೇ ಹೋದಾಗ ಕೊಲೆ ಮಾಡುವುದಕ್ಕೆ ಮುಂದಾಗಿದ್ದಾರೆ.
ಇದನ್ನೂ ಓದಿ: ತಂಗಿಯನ್ನು ಚುಡಾಯಿಸಿದಕ್ಕೆ ಯುವಕನ ಎತ್ತಾಕೊಂಡೋಗಿ ಸರಿಯಾಗಿ ಬಾರಿಸಿದ ಅಕ್ಕ
ತನ್ನ ಸ್ನೇಹಿತ ಅಬ್ದುಲ್ ಮನ್ನನ್ ಜೊತೆ ಸೇರಿಕೊಂಡು ವಿಜಯ್‌ಕುಮಾರ್ ಚೌಬೆ ಯೋಜನೆ ರೂಪಿಸಿದ್ದು, ಏಪ್ರಿಲ್ 13ರಂದು ಇಬ್ಬರು ಒಂದು ಕಾರನ್ನು ಬಾಡಿಗೆಗೆ ಪಡೆದಿದ್ದಾರೆ. ಬಳಿಕ ಕಾರಿನಲ್ಲಿ ಬಾಲಕಿಯನ್ನು ಭೋತೋಚ್ಛಾಟನೆಗೆಂದು ರಾಜಸ್ಥಾನಕ್ಕೆ ಕರೆದೊಯ್ದಿದ್ದಾರೆ. ರಾತ್ರಿಯ ವೇಳೆ ಅವರು ಬರಾಬಂಕಿ ತಲುಪಿದ್ದು, ಅಲ್ಲಿನ ನಿರ್ಜನ ಪ್ರದೇಶವೊಂದರಲ್ಲಿ ಅವರು ಕಾರನ್ನು ನಿಲ್ಲಿಸಿದ್ದಾರೆ. ಬಳಿಕ ಬಾಲಕಿಯನ್ನು ಉಸಿರುಕಟ್ಟಿಸಿ ಸಾಯಿಸಿದ್ದು, ಶವದ ಗುರುತು ಪತ್ತೆಯಾಗದಂತೆ ಮುಖದ ಮೇಲೆ ಆಸಿಡ್ ಸುರಿದಿದ್ದಾರೆ. ಬಳಿಕ ಶವವನ್ನು ಪಕ್ಕದ ಶರ್ದಾ ಕಾಲುವೆಗೆ ಎಸೆಯಲು ನಿರ್ಧರಿಸಿದ್ದಾರೆ. ಆದರೆ ವಾಹನಗಳ ಓಡಾಟದಿಂದ ಭಯಗೊಂಡು ಶವವನ್ನು ರಸ್ತೆ ಪಕ್ಕದಲ್ಲೇ ಎಸೆದು ಹೋಗಿದ್ದಾರೆ.
ಬಳಿಕ ಮಗಳು ನಾಪತ್ತೆಯಾಗಿದ್ದಾಳೆ ಎಂದು ಏಪ್ರಿಲ್ 16ರಂದು ಚೌಬೆ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದಾರೆ. ಆದರೆ ವಿಚಾರಣೆ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಬಳಿಕ ಪೊಲೀಸರು ಯುವತಿಯ ತಂದೆ ಹಾಗೂ ಆತನ ಸ್ನೇಹಿತ ಅಬ್ದುಲ್ ಮನನ್ ಎಂಬುವವರನ್ನು ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ