
ಮುಂಬೈ(ಜು.10) ತಂದೆ ವಯಸ್ಸು 60, ಮಗನಿಗೆ 35. ಮಗನಿಗೆ ಸಾಯುವ ವಯಸ್ಸ, ಅಪ್ಪ ಇಂತ ಸಾವಿಗೆ ಅರ್ಹನಲ್ಲ. ನೋಡ ನೋಡುತ್ತಿದ್ದಂತೆ ಎರಡು ಜೀವದ ಪ್ರಾಣ ಪಕ್ಷಿ ಹಾರಿ ಹೋಗಿದೆ. ಪ್ಲಾಟ್‌ಫಾರ್ಮ್ ಮೂಲಕ ಅಪ್ಪ ಮಗ ಮಾತನಾಡುತ್ತಾ ಸಾಗಿದ್ದಾರೆ. ಮೈ ಬೆವರುತ್ತಿದೆ. ಮಾತು ಕಟ್ಟುತ್ತಿದೆ. ನೋವು, ದುಃಖ ಉಮ್ಮಳಿಸಿ ಬರುತ್ತಿದೆ. ಆದರೆ ಆತಂಕ, ನೋವು, ಮಾನಸಿಕ ಹಿಂಸೆಗಿಂತ ಸಾವೇ ಸಿಹಿ ಎಂದು ನಿರ್ಧರಿಯಾಗಿದೆ. ರೈಲು ಬರುತ್ತಿದ್ದಂತೆ ಇಬ್ಬರು ಕೈ ಕೈ ಗಟ್ಟಿಯಾಗಿ ಹಿಡಿದುಕೊಂಡು ರೈಲಿಗೆ ತಲೆಯೊಡ್ಡಿದ ದಾರುಣ ಘಟನೆ ಮನಕಲುಕುವಂತಿದೆ.
ಮಹಾರಾಷ್ಟ್ರದ ಪಾಲ್ಗಾರ್ ಜಿಲ್ಲೆಯ ಬಯಾಂದ್ರ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಬೆಳಗ್ಗೆ 9.30ರ ವೇಳೆಗೆ ವಸೈ ನಿವಾಸಿಯಾದ 60 ವರ್ಷದ ಹರೀಶ್ ಮೆಹ್ತಾ ಹಾಗೂ 35 ವರ್ಷದ ಪುತ್ರ ಜಯ್ ಮೆಹ್ತಾ ಈ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಸಿಸಿಟಿವಿ ದೃಶ್ಯಗಳು ಭಯಾನಕ ಕತೆ ಹೇಳುತ್ತಿದೆ. ಇದರ ಜೊತೆಗೆ ಇವರಿಬ್ಬರ ನೋವು, ಕಣ್ಣೀರಿನ ಕರಾಳ ಕತೆಯನ್ನೂ ವಿವರಿಸುತ್ತಿದೆ.
ಬ್ಯಾಡಗಿ ಅಪಘಾತ: ಅಂಧರ ಪುಟ್ಬಾಲ್ ಟೀಂ ನಾಯಕಿ ಬಲಿ..!
ಹರೀಶ್ ಮೆಹ್ತಾ ಹಾಗೂ ಜಯ್ ಮೆಹ್ತಾ ಇಬ್ಬರು ಬಯಾಂದ್ರ ಸ್ಟೇಶನ್ ಪ್ಲಾಟ್‌ಫಾರ್ಮ್ ಮೂಲಕ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಈ ವೇಳೆ ಇಬ್ಬರು ಮಾತನಾಡಿಕೊಳ್ಳುತ್ತಿದ್ದಾರೆ. ಇಬ್ಬರಲ್ಲೂ ಆತಂಕ, ನೋವು ಗೋಚರಿಸುತ್ತಿದೆ. ಇಬ್ಬರು ಬೆವರುತ್ತಿದ್ದಾರೆ. ಬೆವರನ್ನು, ಕಣ್ಣೀರನ್ನು ಒರೆಸುತ್ತಾ ಸಾಗಿದ್ದಾರೆ. ಪ್ಲಾಟ್‌ಪಾರ್ಮ್ ಅಂತ್ಯಗೊಂಡ ಬಳಿಕ ನಿಧಾನವಾಗಿ ಟ್ರಾಕ್‌ನತ್ತ ಇಳಿದು ಇಬ್ಬರು ರೈಲು ಹಳಿಗಳಲ್ಲಿ ಸಾಗಿದ್ದಾರೆ.
ಪ್ಲಾಟ್‌ಫಾರ್ಮ್ ಮೂಲಕ ನಡೆದುಕೊಂಡು ಸಾಗುವಾಗ ಒಂದು ರೈಲು ಪಕ್ಕದಿಂದಲೇ ಸಾಗಿದೆ. ಆದರೆ ಪ್ಲಾಟ್‌ಫಾರ್ಮ್ ಬಳಿಕ ರೈಲು ಹಳಿಗಳ ಮೇಲೆ ನಡೆದುಕೊಂಡು ಸಾಗುವಾಗ ವಿರುದ್ದ ದಿಕ್ಕಿನಿಂದ ರೈಲು ಬಂದಿದೆ. ಇಬ್ಬರು ಕೈ ಕೈ ಹಿಡಿದುಕೊಂಡಿದ್ದಾರೆ. ತಕ್ಷಣವೇ ರೈಲು ಬರುತ್ತಿರುವ ಹಳಿಯತ್ತ ತೆರಳಿದ್ದಾರೆ. ಬಳಿಕ ರೈಲಿ ಹಳಿಯಲ್ಲಿ ತಲೆ ಇಟ್ಟ ಮಲಗಿದ್ದಾರೆ. ಅಷ್ಟೊತ್ತಿಗೆ ರೈಲು ಇವರಿಬ್ಬರ ಮೇಲಿನಿಂದ ಸಾಗಿದೆ. ಕ್ಷಣಾರ್ಧದಲ್ಲಿಲಿ ರೈಲು ಸಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಆಗಮಿಸಿದ ರೈಲ್ವೇ ಪೊಲೀಸರು ಸ್ಥಳ ಮಹಜರು ಮಾಡಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇವರ ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ. ಈ ಘಟನೆ ಕುರಿತು ಹಲವರು ಪ್ರತಿಕ್ರಿಯಿಸಿದ್ದಾರೆ. ಇದು ಹೇಡಿಗಳ ಕೃತ್ಯ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಮತ್ತೆ ಕೆಲವರು ಇದು ಹೇಡಿಗಳ ಕೃತ್ಯವಲ್ಲ. ಈ ರೀತಿ ಸಾಯಲು ಸಿದ್ಧವಾಗಲು ಎಂಟೆದೆ ಗುಂಡಿಗೆ ಬೇಕು. ಬದುಕುದಕ್ಕಿಂತ ಸಾಯುವುದೇ ಲೇಸು ಅನ್ನೋ ನಿರ್ಧಾರಕ್ಕೆ ಬರಲು ಅದೆಷ್ಟು ಕಠಿಣ ಪರಿಸ್ಥಿತಿ ಎದುರಿಸುತ್ತಿರಬೇಕು. ತಂದೆ ಮಗ ಇಬ್ಬರು ಈ ನಿರ್ಧಾರ ಮಾಡಿದ್ದಾರೆ ಎಂದರೆ ಹಲವು ಕಾರಣವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಂಗಳಮುಖಿಯರು ಕಿರುಕುಳ ನೀಡಿದ್ದಾರೆಂದು ಆತ್ಮಹತ್ಯೆ ಮಾಡಿಕೊಂಡ ಬಾಲಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ