ಸಡಗರ ಸಂಭ್ರಮದಿಂದ ಮದುವೆ ನಡೆದಿತ್ತು. ಆದ್ರೆ ಗಂಡನ ಮನೆ ಸೇರುವ ಮೊದಲೇ ವಧು ಆಸ್ಪತ್ರೆಯಲ್ಲಿ ದಾಖಲಾಗುವಂತೆ ಆಯ್ತು. ಇದಾದ ಬಳಿಕ ಆಕೆಯ ಗಂಡನ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಜೈಪುರ: ಮದುವೆಯಾಗಿ ಗಂಡನ ಮನೆಗೆ ತೆರಳುತ್ತಿದ್ದು ವಧು ಆಸ್ಪತ್ರೆಯ ಬೆಡ್ ಮೇಲೆ ಮಲಗುವಂತಾಗಿದೆ. ತವರಿನಿಂದ ಗಂಡನ ಮನೆಯತ್ತ ಹೊರಟಿದ್ದ ವಧುವಿಕ ಕಾರ್ ಅಪಘಾತಕ್ಕೊಳಗಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾಳೆ. ಕಾರ್ ಅಪಘಾತಕ್ಕೊಳಗಾಗುತ್ತಿದ್ದಂತೆ ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಭಾರೀ ಅನಾಹುತ ತಪ್ಪಿದೆ. ವಧುವಿನ ಜೊತೆಯಲ್ಲಿದ್ದ ವರನಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ವರ ಚಿಕಿತ್ಸೆ ಬಳಿಕ ಗುಣಮುಖನಾಗಿದ್ದು, ಪತ್ನಿ ಬಳಿಯಲ್ಲಿಯೇ ಕುಳಿತು ಆರೈಕೆ ಮಾಡಿದ್ದಾನೆ. ವರನ ಈ ನಡೆ ಕಂಡು ಕುಟುಂಬಸ್ಥರು ಮತ್ತು ಆಸ್ಪತ್ರೆ ಸಿಬ್ಬಂದಿ ಮೂಕವಿಸ್ಮಿತರಾಗಿದ್ದಾರೆ. ಈ ಜೋಡಿ ಜೀವನದಲ್ಲಿ ಸಂತೋಷವಾಗಿ ಬದುಕುತ್ತಾರೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಪಾಲಿ ಪಟ್ಟಣದ ಪ್ರತಾಪ್ ನಗರ ನಿವಾಸಿ 22 ವರ್ಷದ ಮದನ್ ಮದುವೆ ಸಮೀಪದ ಊರಿನ 21 ವರ್ಷದ ಭಾವನಾ ಜೊತೆ ಮಂಗಳವಾರ ರಾತ್ರಿ ನಡೆದಿತ್ತು. ಮದುವೆ ಅತ್ಯಂತ ಸಂಭ್ರಮ ಸಡಗರದಿಂದ ನಡೆದಿತ್ತು. ಮದುವೆ ಬಳಿಕ ಮದನ್ ಕೈ ಹಿಡಿದು ಭಾವನಾ ಕಾರ್ ಹತ್ತಿದ್ದಳು. ತವರು ಮನೆಗೆ ವಿದಾಯ ಹೇಳಿ ದುಃಖದಲ್ಲಿ, ಗಂಡನ ಮನೆಗೆ ಹೋಗುತ್ತಿರುವ ಸಂತೋಷದಲ್ಲಿ ಭಾವನಾ ಹೊಸ ಜೀವನದ ಪ್ರಯಾಣ ಆರಂಭಿಸಿದ್ದಳು.
ಇತ್ತ ಮದನ್ ಕುಟುಂಬಸ್ಥರು ಇಬ್ಬರ ಸ್ವಾಗತಕ್ಕಾಗಿ ತಯಾರಿ ಮಾಡಿಕೊಂಡು ಕಾಯುತ್ತಿದ್ದರು. ಮದನ್-ಭಾವನಾ ಮೊದಲ ರಾತ್ರಿಗೂ ಕೋಣೆ ಹೂಗಳಿಂದ ಅಲಂಕಾರಗೊಂಡಿತ್ತು. ಆದ್ರೆ ಸಂತೋಷದಲ್ಲಿದ್ದ ಕುಟುಂಬಸ್ಥರಿಗೆ ಅಪಘಾತದ ಸುದ್ದಿ ಬರ ಸಿಡಿಲಿನಂತೆ ಬಂದು ತಲುಪಿತ್ತು. ಮದುವೆ ಶಾಸ್ತ್ರಗಳನ್ನು ಅಲ್ಲಿಯೇ ಬಿಟ್ಟು ಕುಟುಂಬಸ್ಥರು ಆಸ್ಪತ್ರೆಗೆ ತೆರಳಿದ್ದಾರೆ.
ನವದಂಪತಿ ಕಾರ್ ಅಪಘಾತ ಆಗಿದ್ದು ಹೇಗೆ?
ಮದನ್ ಮತ್ತು ಭಾವನಾ ಜೊತೆಯಾಗಿ ಪ್ರಯಾಣಿಸುತ್ತಿದ್ದ ಕಾರ್ ಸಂವಲತಾ ಗ್ರಾಮದ ಮಾರ್ಗವಾಗಿ ತೆರಳುತ್ತಿತ್ತು. ಆದ್ರೆ ರಸ್ತೆಯಲ್ಲಿ ಜಾನುವಾರುಗಳು ಮಲಗಿದ್ದರಿಂದ ಚಾಲಕನಿಗೆ ದಾರಿ ಕಾಣಿಸಿಲ್ಲ. ಕತ್ತಲಿನಲ್ಲಿ ಕಾರ್ ಜಾನುವಾರಗಳಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಏರ್ ಬ್ಯಾಗ್ ಓಪನ್ ಆಗಿದ್ದರಿಂದ ಹಿಂಬದಿ ಕುಳಿತಿದ್ದ ದಂಪತಿ ಬದುಕುಳಿದಿದ್ದಾರೆ. ಆದರೆ ಕಾರ್ ಚಾಲಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಕಾರ್ ಸಹ ಸಂಪೂರ್ಣ ನಜ್ಜುಗುಜ್ಜಾಗಿದ್ದು, ವಧು ಭಾವನಾ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಮದನ್ ಗಾಯಗೊಂಡಿದ್ದರೂ, ಆಸ್ಪತ್ರೆಯಲ್ಲಿ ಪತ್ನಿ ಪಕ್ಕವೇ ಕುಳಿತು ಧೈರ್ಯ ತುಂಬುತ್ತಿರುವ ದೃಶ್ಯ ಕಂಡು ಎಲ್ಲರೂ ಭಾವುಕರಾಗಿದ್ದರು. ಇಂದು ಅಥವಾ ನಾಳೆ ವಧುವನ್ನು ಡಿಸ್ಚಾರ್ಜ್ ಮಾಡಲಾಗುವುದು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಅಪಘಾತ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.