ಅಕ್ಕಿ, ಬೇಳೆ, ಈರುಳ್ಳಿ ಬೆಲೆ ಸರ್ಕಾರ ನಿಯಂತ್ರಿಸಲ್ಲ!

By Suvarna NewsFirst Published Sep 23, 2020, 7:29 AM IST
Highlights

 ಅಕ್ಕಿ, ಬೇಳೆ, ಈರುಳ್ಳಿ ಬೆಲೆ ಸರ್ಕಾರ ನಿಯಂತ್ರಿಸಲ್ಲ| -ಅಗತ್ಯವಸ್ತುಗಳ ಪಟ್ಟಿಯಿಂದ ಇವುಗಳು ಹೊರಕ್ಕೆ| ಅವಶ್ಯ ವಸ್ತು ತಿದ್ದುಪಡಿ ಮಸೂದೆಗೆ ಸಂಸತ್ತು ಅಸ್ತು| ಅಸಾಧಾರಣ ಸಂದರ್ಭದಲ್ಲಿ ಮಾತ್ರವೇ ಕಂಟ್ರೋಲ್‌

ನವದೆಹಲಿ(ಸೆ,23): ಅಕ್ಕಿ, ರಾಗಿಯಂತಹ ಆಹಾರ ಧಾನ್ಯ, ಬೇಳೆಕಾಳುಗಳು, ಎಣ್ಣೆಬೀಜಗಳು, ಖಾದ್ಯ ತೈಲ, ಈರುಳ್ಳಿ ಹಾಗೂ ಆಲೂಗಡ್ಡೆಯನ್ನು ಅವಶ್ಯ ವಸ್ತುಗಳ ಪಟ್ಟಿಯಿಂದ ಹೊರಗಿಡುವ ವಿಧೇಯಕ ಮಂಗಳವಾರ ಸಂಸತ್ತಿನಲ್ಲಿ ಅಂಗೀಕಾರವಾಗಿದೆ. ಇದಕ್ಕೆ ರಾಷ್ಟ್ರಪತಿಗಳ ಅಂಕಿತ ಬಿದ್ದರೆ, ಈ ಎಲ್ಲ ಆಹಾರೋತ್ಪನ್ನಗಳು ಸರ್ಕಾರದ ದರ ನಿಯಂತ್ರಣದಿಂದ ಮುಕ್ತಿ ಹೊಂದಲಿವೆ. ಈ ಮೂಲಕ ರೈತರ ಆದಾಯ ದ್ವಿಗುಣಗೊಳಿಸುವ ಗುರಿಯೊಂದಿಗೆ ಕೃಷಿ ಕ್ಷೇತ್ರದಲ್ಲಿ ಸರ್ಕಾರ ಮತ್ತೊಂದು ಸುಧಾರಣೆ ತಂದಂತಾಗಲಿದೆ.

ಸಹಕಾರಿ ಬ್ಯಾಂಕ್‌ ಆರ್‌ಬಿಐ ನಿಯಂತ್ರಣಕ್ಕೆ!

ಅವಶ್ಯ ವಸ್ತುಗಳ (ತಿದ್ದುಪಡಿ) ಮಸೂದೆ ಸೆ.15ರಂದು ಲೋಕಸಭೆಯಲ್ಲಿ ಅಂಗೀಕಾರವಾಗಿತ್ತು. ಇದಕ್ಕೆ ಮಂಗಳವಾರ ರಾಜ್ಯಸಭೆಯೂ ಅನುಮೋದನೆ ನೀಡಿದೆ. ಈ ವಿಧೇಯಕವನ್ನು ಕಳೆದ ಜೂನ್‌ನಲ್ಲಿ ಸುಗ್ರೀವಾಜ್ಞೆ ರೂಪದಲ್ಲಿ ಜಾರಿಗೊಳಿಸಲಾಗಿತ್ತು.

ಬೆಲೆ ಏರಿಕೆಗೆ ಸಂಬಂಧಿಸಿದಂತೆ ಸರ್ಕಾರದ ಕಡಿವಾಣ ಸಡಿಲಗೊಂಡರೂ ರಾಷ್ಟ್ರೀಯ ವಿಕೋಪ, ಮಿತಿಮೀರಿ ಬೆಲೆ ಏರಿಕೆ, ಯುದ್ಧದಂತಹ ಅಸಾಧಾರಣ ಸಂದರ್ಭಗಳಲ್ಲಿ ಸರ್ಕಾರ ನಿಯಂತ್ರಣವನ್ನು ಸಾಧಿಸಲು ಮಸೂದೆಯಡಿ ಅವಕಾಶವಿದೆ.

ತಮ್ಮ ಉದ್ದಿಮೆ ವ್ಯವಹಾರಗಳಲ್ಲಿ ಸರ್ಕಾರ ಮಿತಿಮೀರಿ ನಿಯಂತ್ರಣ ಹೇರುತ್ತಿದೆ ಎಂಬ ಕಳವಳವನ್ನು ಖಾಸಗಿ ಹೂಡಿಕೆದಾರರು ವ್ಯಕ್ತಪಡಿಸಿಕೊಂಡು ಬಂದಿದ್ದರು. ಅದನ್ನು ಹೋಗಲಾಡಿಸುವ ಉದ್ದೇಶದೊಂದಿಗೆ ಆರೂವರೆ ದಶಕಗಳ ಹಿಂದಿನ ಅವಶ್ಯ ವಸ್ತುಗಳ ಕಾಯ್ದೆಗೆ ತಿದ್ದುಪಡಿ ತರಲಾಗಿದೆ. ಉತ್ಪಾದನೆ, ದಾಸ್ತಾನು, ಸಾಗಣೆ, ವಿತರಣೆ ಹಾಗೂ ಪೂರೈಕೆಯಲ್ಲಿ ಸ್ವಾತಂತ್ರ್ಯ ದೊರೆಯಲಿದೆ. ಇದರಿಂದ ಕೃಷಿ ಕ್ಷೇತ್ರಕ್ಕೆ ಖಾಸಗಿ ಹಾಗೂ ವಿದೇಶಿ ನೇರ ಬಂಡವಾಳ ಹೂಡಿಕೆ ಹರಿದುಬರಲಿದೆ ಎಂದು ಸರ್ಕಾರ ತಿಳಿಸಿದೆ.

ಪ್ರತಿಭಟನಾನಿರತ ರಾಜ್ಯಸಭಾ ಸದಸ್ಯರಿಗೆ ಖುದ್ದು ಟೀ ತಂದು ಕೊಟ್ಟ ಉಪಸಭಾಪತಿ!

ಆಹಾರ ಧಾನ್ಯ ಉತ್ಪಾದನೆಯಲ್ಲಿ ಸರ್ಕಾರ ಸ್ವಾವಲಂಬಿ ಆಗಿಲ್ಲದ ದಿನಗಳಲ್ಲಿ ಅವಶ್ಯ ವಸ್ತುಗಳ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಹೀಗಾಗಿ 1955ರ ಕಾಯ್ದೆಗೆ ತಿದ್ದುಪಡಿ ತರಲಾಗಿದೆ ಎಂದು ನಾಗರಿಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ ಖಾತೆ ರಾಜ್ಯ ಸಚಿವ ರಾವ್‌ ಸಾಹೇಬ್‌ ದಾದಾರಾವ್‌ ದನ್ವೆ ತಿಳಿಸಿದರು.

ಏನಿದು ಅವಶ್ಯವಸ್ತುಗಳ ಕಾಯ್ದೆ?

1955ರಲ್ಲಿ ಕೇಂದ್ರ ಸರ್ಕಾರ ಅವಶ್ಯವಸ್ತುಗಳ ಕಾಯ್ದೆಯನ್ನು ಜಾರಿಗೊಳಿಸಿದೆ. ಅದರಂತೆ ಈ ಕಾಯ್ದೆಯಲ್ಲಿ ನಮೂದಿಸಲಾದ ವಸ್ತುಗಳ ಉತ್ಪಾದನೆ, ಪೂರೈಕೆ ಮತ್ತು ವಿತರಣೆಯ ಮೇಲೆ ಸರ್ಕಾರ ನಿಯಂತ್ರಣ ಹೇರಿದೆ. ಈ ವಸ್ತುಗಳನ್ನು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುವಂತೆ ಇಲ್ಲ. ಕೊರೋನಾ ವೈರಸ್‌ ಆರಂಭವಾದ ಸಂದರ್ಭದಲ್ಲಿ ದೇಶದಲ್ಲಿ ಮಾಸ್ಕ್‌ ಮತ್ತು ಸ್ಯಾನಿಟೈಸರ್‌ಗಳ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಅವುಗಳನ್ನು ಅಗತ್ಯವಸ್ತುಗಳ ಕಾಯ್ದೆಯ ಅಡಿಯಲ್ಲಿ ತರಲಾಗಿತ್ತು.

click me!