
ಸಾಮಾನ್ಯವಾಗಿ ಕೋತಿಗಳು ಮನುಷ್ಯರ ಕೈಯಲ್ಲಿದ್ದ ವಸ್ತುಗಳನ್ನು ಕಿತ್ತುಕೊಂಡು ಮರ ಏರುವುದನ್ನು ನೋಡಿದ್ದೇವೆ. ಬಹುತೇಕ ಪ್ರಸಿದ್ಧ ತೀರ್ಥಕ್ಷೇತ್ರಗಳಲ್ಲಿ ಈ ದೃಶ್ಯ ಕಾಣಲು ಸಿಗುತ್ತದೆ. ಅದರಲ್ಲು ಮಥುರಾದ ಬಂದಾವನದಲ್ಲಿ ಕೋತಿಗಳು ಮನುಷ್ಯರ ಕೈಯಲ್ಲಿದ್ದ ವಸ್ತುಗಳನ್ನು ಕಿತ್ತುಕೊಂಡು ಡೀಲಿಗಿಳಿದು ಬಿಡುತ್ತವೆ. ಬಳಿಕ ಅವುಗಳಿಗೆ ಬೇರೇನೋ ತಿನ್ನುವಂತಹದ್ದನ್ನು ನೀಡಿ ಜನ ತಮ್ಮ ಅಮೂಲ್ಯ ವಸ್ತುಗಳನ್ನು ಕೋತಿಯ ಕೈಯಿಂದ ಉಪಾಯವಾಗಿ ವಾಪಸ್ ಪಡೆಯುತ್ತಾರೆ. ಆದರೆ ಹಕ್ಕಿಗಳು/ಹದ್ದುಗಳು ಮನುಷ್ಯರ ಕೈಯಲ್ಲಿರುವುದನ್ನು ಕಸಿಯುವುದಕ್ಕೆ ಬರುವುದು ತೀರಾ ಅಪರೂಪ. ಆದರೆ ಇಲ್ಲೊಂದು ಅಚ್ಚರಿಯ ಘಟನೆ ನಡೆದಿದೆ. ಪರೀಕ್ಷೆಯ ಗಾಬರಿಯಲ್ಲಿದ್ದ ಪರೀಕ್ಷಾರ್ಥಿಗೆ ಹಕ್ಕಿಯೊಂದು ಮತ್ತಷ್ಟು ಆತಂಕಕ್ಕೀಡು ಮಾಡುವಂತೆ ಮಾಡಿದೆ. ಹಾಗಿದ್ರೆ ಹಕ್ಕಿ ಮಾಡಿದ್ದೇನು ನೋಡಿ...
ಪರೀಕ್ಷೆಗೆ ಇನ್ನೇನು ಸ್ವಲ್ಪ ಸಮಯ ಇದೇ ಎನ್ನುವಷ್ಟರಲ್ಲಿ ಪರೀಕ್ಷಾ ಹಾಲ್ ಮುಂದೆ ಹಾಲ್ ಟಿಕೆಟ್ ಹಿಡಿದು ನಿಂತಿದ್ದ ಪರೀಕ್ಷಾರ್ಥಿಯೊಬ್ಬನ ಕೈಯಿಂದ ಹಾಲ್ ಟಿಕೆಟ್ ಕಸಿದ ಹದ್ದೊಂದು ಬಳಿಕ ಮೇಲೇರಿ ಕುಳಿತಿದೆ. ಇದರಿಂದ ಪರೀಕ್ಷಾರ್ಥಿ ತೀವ್ರ ಆತಂಕಕ್ಕೀಡಾಗಿದ್ದಾನೆ. ಕೇರಳದ ಕಾಸರಗೋಡಿನ ಸರ್ಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು, ಹದ್ದಿನ ತುಂಟಾಟದಿಂದಾಗಿ ಪರೀಕ್ಷೆ ಬರೆಯಬೇಕಿದ್ದ ಪರೀಕ್ಷಾರ್ಥಿಗೆ ಮಾತೇ ಬರದಂತಾಗಿತ್ತು. ಹದ್ದು ಹಾಲ್ ಟಿಕೆಟ್ ಕಸಿದುಕೊಂಡು ಅದನ್ನು ತನ್ನೆರಡು ಕಾಲಿನಲ್ಲಿ ಸಿಲುಕಿಸಿಕೊಂಡು ಶಾಲೆಯ ಕಿಟಕಿ ಬಾಗಿಲಿನ ಮೇಲೇರಿ ಕುಳಿತಿದೆ.
ಪರೀಕ್ಷಾರ್ಥಿಗೆ ಬೆಳಗ್ಗೆ 7.30ಕ್ಕೆ ಪರೀಕ್ಷೆ ನಿಗದಿಯಾಗಿತ್ತು. ಇನ್ನೇನು ಪರೀಕ್ಷಾರ್ಥಿಗಳೆಲ್ಲಾ ಪರೀಕ್ಷಾ ಹಾಲ್ ಒಳಗೆ ಹೋಗಬೇಕಿತ್ತು. ಆ ಮಹತ್ವದ ಸಮಯದಲ್ಲಿ ಈ ಘಟನೆ ನಡೆದಿದ್ದು, ಪರೀಕ್ಷಾರ್ಥಿ ಹಾಗೂ ಅಲ್ಲಿದ್ದವರನ್ನೆಲ್ಲಾ ಅಚ್ಚರಿ, ಆತಂಕದಿಂದ ನೋಡುವಂತೆ ಮಾಡಿದೆ. ಪರೀಕ್ಷೆಗೆ ಹಾಜರಾಗಲು ಸುಮಾರು 300 ಇತರ ಸರ್ಕಾರಿ ಅಧಿಕಾರಿಗಳೊಂದಿಗೆ ಬೇಗನೆ ಬಂದಿದ್ದ ಈ ಪರೀಕ್ಷಾರ್ಥಿ ಹದ್ದು ಹಾಲ್ ಟಿಕೆಟ್ ಕಸಿದುಕೊಂಡು ಶಾಲೆಯ ಮೇಲಿನ ಮಹಡಿಯ ಕಿಟಕಿಯ ಅಂಚಿನಲ್ಲಿ ಶಾಂತವಾಗಿ ಕುಳಿತು, ಕಾಗದವನ್ನು ತನ್ನ ಕೊಕ್ಕಿನಲ್ಲಿ ಹಿಡಿದುಕೊಂಡಿದ್ದನು ನೋಡಿ ಅಚ್ಚರಿಗೊಂಡಿದ್ದಾರೆ. ಗದ್ದಲ ಮತ್ತು ಕೆಳಗೆ ಜನಸಂದಣಿ ಸೇರಿದ್ದರೂ, ಹದ್ದು ಯಾವುದೇ ಆತಂಕವಿಲ್ಲದೆ ಕೆಲವು ನಿಮಿಷಗಳ ಕಾಲ ಈ ಪರೀಕ್ಷಾ ಕೊಠಡಿ ಪ್ರವೇಶ ಪತ್ರವನ್ನು ತನ್ನ ಕೊಕ್ಕಿನಲ್ಲಿ ಹಿಡಿದುಕೊಂಡಿದೆ.
ಆದರೆ ಆ ಪರೀಕ್ಷಾರ್ಥಿ ಆತಂಕದ ಆ ಕ್ಷಣದಲ್ಲಿ ಎಷ್ಟು ದೇವರನ್ನು ಬೇಡಿಕೊಂಡರೋ ಏನೋ ಕೊನೆಗೂ ಇನ್ನೇನು ಪರೀಕ್ಷಾ ಕೊಠಡಿಯೊಳಗೆ ಹೋಗಲು ಕೆಲ ಸೆಕೆಂಡ್‌ಗಳಿರುವಾಗ ಹಾಲ್ ಟಿಕೆಟ್‌ನ್ನು ಕೆಳಗೆ ಹಾಕಿ ಪರೀಕ್ಷಾರ್ಥಿ ನಿರಾಳರಾಗುವಂತೆ ಮಾಡಿದೆ. ಕೊನೆಗೂ ಅವರು ಯೋಜಿಸಿದಂತೆ ಪರೀಕ್ಷೆಗೆ ಕುಳಿತುಕೊಳ್ಳಲು ಪರೀಕ್ಷಾರ್ಥಿಗೆ ಸಾಧ್ಯವಾಯಿತು. ಅವರಿಗೆ ಯಾವುದೇ ತೊಂದರೆಗಳು ಎದುರಾಗದಂತೆ ಅಧಿಕಾರಿಗಳು ಖಚಿತಪಡಿಸಿಕೊಂಡು ಪರೀಕ್ಷೆ ಬರೆಯಲು ಅವಕಾಶ ನೀಡಿದರು. ಈ ದೃಶ್ಯವನ್ನು ಅಲ್ಲಿದ್ದವರೇ ಯಾರೋ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನೇಕರು ಈ ವೀಡಿಯೋ ನೋಡಿ ಹಲವು ಕಾಮೆಂಟ್ ಮಾಡ್ತಿದ್ದಾರೆ.
ಕೆಲದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ವಿದ್ಯಾರ್ಥಿಯೊಬ್ಬ ಪರೀಕ್ಷೆಗೆ ಇನ್ನೇನು ಕೆಲ ಗಂಟೆಗಳಿರುವಾಗ ಪ್ಯಾರಾಗ್ಲೈಡಿಂಗ್ ಮೂಲಕ ಪರೀಕ್ಷಾ ಹಾಲ್‌ನ್ನು ತಲುಪಿದ ಘಟನೆಯನ್ನು ನಾವಿಲ್ಲಿ ಸ್ಮರಿಸಬಹುದು. ಸಮರ್ಥ್ ಮಹಾಂಗಡೆ ಎಂಬ ಬಿಕಾಂ ವಿದ್ಯಾರ್ಥಿ ಪರೀಕ್ಷಾ ದಿನದ ಬಗ್ಗೆ ಗೊಂದಲಕ್ಕೊಳಗಾಗಿದ್ದ ಪರೀಕ್ಷೆಗೆ ಕೆಲ ಗಂಟೆಗಳಿರುವಾಗ ಸ್ನೇಹಿತರು ಮಾಡಿದ ಕರೆಯಿಂದಾಗಿ ಆತನಿಗೆ ಅಂದು ಪರೀಕ್ಷೆ ಇರುವುದು ಗೊತ್ತಾಗಿತ್ತು. ಹೀಗಾಗಿ ರಸ್ತೆ ಮೂಲಕ ಸಾಗಿದರೆ ಪರೀಕ್ಷಾ ಸಮಯಕ್ಕೆ ಸರಿಯಾಗಿ ಆತನಿಗೆ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಆತ ತಮ್ಮೂರಿನಲ್ಲಿದ್ದ ಪ್ಯಾರಾಗ್ಲೈಡಿಂಗ್ ಸಂಸ್ಥೆಯ ನೆರವು ಕೇಳಿ ಪ್ಯಾರಾಗ್ಲೈಡಿಂಗ್ ಮೂಲಕ ಪರೀಕ್ಷಾ ಕೊಠಡಿ ತಲುಪಿದ್ದ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಸುದ್ದಿಯಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ