
ಕುಡಿದ ಮತ್ತಿನಲ್ಲಿ ಬಿಲ್‌ಬೋರ್ಡ್ ಮೇಲೇರಿ ಮಲಗಿದ ಕುಡುಕ
ಕೆಲವರಿಗೆ ಪರಮಾತ್ಮ ಹೊಟ್ಟೆ ಸೇರಿದರೆ ನಂತರ ತಾವು ಏನು ಮಾಡುತ್ತಿದ್ದೇವೆ ಹೇಗೆ ವರ್ತಿಸುತ್ತಿದ್ದೇವೆ ಎಂಬುದರ ಮೇಲೆ ಸ್ವಲ್ಪವೂ ನಿಗಾ ಇರುವುದಿಲ್ಲ, ಬೇರೆಯದ್ದೇ ಲೋಕದಲ್ಲಿ ಅವರು ತೇಲಾಡುತ್ತಿರುತ್ತಾರೆ. ಒಳಗಿರುವ ಪರಮಾತ್ಮ ಆಡಿಸಿದಂತೆ ಆಡುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಕುಡಿದ ಮತ್ತಿನಲ್ಲಿ ಅಷ್ಟೆತ್ತರದ ಬಿಲ್‌ಬೋರ್ಡ್ ಮೇಲೇರಿ ಅದರ ಮೇಲೆ ಮಲಗಿದ್ದಾನೆ. ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಈ ಘಟನೆ ನಡೆದಿದ್ದು, ಬಳಿಕ ಕ್ರೇನ್ ತರಿಸಿ ಆತನನ್ನು ಆ ಬಿಲ್ ಬೋರ್ಡ್ ಮೇಲಿಂದ ಇಳಿಸಿ ರಕ್ಷಣೆ ಮಾಡಲಾಗಿದೆ. ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅನೇಕರು ಕುಡುಕನ ಸಾಹಸ ನೋಡಿ ದಂಗಾಗಿದ್ದಾರೆ.
ಕ್ರೇನ್ ತರಿಸಿ ಕುಡುಕನ ಕೆಳಗಿಳಿಸಿದ ಪೊಲೀಸರು
ಒಂದೆಡೆ ಜೋರಾಗಿ ಮಳೆ ಸುರಿಯುತ್ತಿದ್ದರೆ ಕುಡಿದ ಮತ್ತಿನಲ್ಲಿದ ಕುಡುಕ ಬಿಲ್‌ಬೋರ್ಡ್ ಮೇಲೇರಿ ಕಾಲುಗಳ ಕೆಳಗೆ ಇಳಿಸಿ ಅಲ್ಲಾಡಿಸುತ್ತಾ ಮಲಗಿರುವುದನ್ನು ನೋಡಿ ಜನ ಶಾಕ್ ಆಗಿದ್ದು, ಕೂಡಲೇ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ. ನಂತರ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಆತನನ್ನು ಕೆಳಗೆ ಇಳಿಸಿ ರಕ್ಷಣೆ ಮಾಡಿ ಬಳಿಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಕುಡುಕನ ಈ ಅವಾತರ ನೋಡಲು ಅಲ್ಲಿ ಸಾಕಷ್ಟು ಜನ ಸೇರಿದ್ದು, ಅನೇಕರು ತಮ್ಮ ಮೊಬೈಲ್‌ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ. ವೀಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ. ಆತ ಬಹುಶಃ ಕುಡಿದ ಮತ್ತಿನಲ್ಲಿ ಮನೆ ಮೆಟ್ಟಿಲು ಹತ್ತಿದ್ದಂತೆ ಹತ್ತಿ ಬಿಲ್ ಬೋರ್ಡನ್ನೇ ಹಾಸಿಗೆಯೆಂದು ಭಾವಿಸಿ ಮಲಗಿದಂತೆ ಕಾಣುತ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆತ ಅಲ್ಲಿ ಸುಖವಾಗಿ ಮಲಗಿದ್ದರೆ ಕೆಳಗಿದ್ದವರು ಅವನ ರಕ್ಷಣೆಗೆ ಕೂಗುತ್ತಿದ್ದಾರೆ ಆದರೂ ಆತನನ್ನು ರಕ್ಷಿಸಿದ ಪೊಲೀಸರಿಗೆ ಧನ್ಯವಾದ ಹೇಳಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ವೀಡಿಯೋ ಭಾರಿ ವೈರಲ್ ಆಗಿದೆ...
ಸಾಯಲೆತ್ನಿಸಿದವನ ರಕ್ಷಿಸಿ, ಸರಿಯಾಗಿ ತದುಕಿದ ಪೊಲೀಸರು
ಹಾಗೆಯೇ ಮತ್ತೊಂದು ವೈರಲ್ ಆದ ವೀಡಿಯೋದಲ್ಲಿ ಯುವಕನೋರ್ವನನ್ನು ರಕ್ಷಿಸಿದ ಪೊಲೀಸರು ನಂತರ ಚೆನ್ನಾಗಿ ಬಾರಿಸಿದ್ದಾರೆ. ಈ ಘಟನೆ ಎಲ್ಲಿ ನಡೆದಿದೆ ಎಂಬ ಬಗ್ಗೆ ಮಾಹಿತಿ ಇಲ್ಲ, ವೀಡಿಯೋದಲ್ಲಿ ಯುವಕನ ಸೊಂಟಕ್ಕೆ ಹಗ್ಗ ಕಟ್ಟಿ ಪೊಲೀಸರು ಮೇಲಕ್ಕೆ ಎಳೆಯುವುದನ್ನು ಕಾಣಬಹುದಾಗಿದೆ. ಟ್ವಿಟ್ಟರ್‌ನಲ್ಲಿ ಈ ವೀಡಿಯೋ ಪೋಸ್ಟ್ ಮಾಡಲಾಗಿದ್ದು, ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಣೆ ಮಾಡಿದ್ದಾರೆ. ವೀಡಿಯೋ ನೋಡಿದ ಜನ ರಕ್ಷಿಸಿದ ನಂತರ ಭಾರತೀಯ ಪೊಲೀಸರು ಆತನಿಗೆ ಮನೋವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಟ್ರಾಫಿಕ್ ಪೊಲೀಸರ ನೋಡಿ ಗಾಡಿ ತಳ್ಳಿಕೊಂಡು ಹೋದ ಕುಡುಕರು ಆದ್ರೂ ಬಿತ್ತು ಫೈನ್
ಹಾಗೆಯೇ ಚೀನಾದಿಂದ ವೈರಲ್ ಆದ ಮತ್ತೊಂದು ವೀಡಿಯೋದಲ್ಲಿ ಕುಡುಕರು ಟ್ರಾಫಿಕ್ ಪೊಲೀಸರನ್ನು ನೋಡಿ ತಮ್ಮ ಕಾರನ್ನು ತಳ್ಳಿಕೊಂಡು ಹೋದಂತಹ ಘಟನೆ ನಡೆದಿದೆ. ಡ್ರಿಂಕ್ & ಡ್ರೈವ್ ಶಿಕ್ಷೆ ತಪ್ಪಿಸುವುದಕ್ಕಾಗಿ ಕುಡುಕರು ಕಾರನ್ನು ತಳ್ಳಿಕೊಂಡು ಹೋಗಿದ್ದಾರೆ. ಆದರೆ ಕಾರನ್ನು ತಳ್ಳಿಕೊಂಡು ಹೋಗಿ ಸಂಚಾರ ದಟ್ಟಣೆಗೆ ಕಾರಣವಾಗಿದ್ದಾರೆ ಎಂದು ಪೊಲೀಸರು ಕುಡುಕರಿಗೆ ದಂಡ ವಿಧಿಸಿದ್ದಾರೆ ಎಂದು ವರದಿಯಾಗಿದೆ. ಚೀನಾದ ಹುಬೈ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ. ಮೂರು ಜನ ಕುಡುಕರು ಕಾರನ್ನು ತಳ್ಳಿಕೊಂಡು ಹೋಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಮಾರು 500 ಮೀಟರ್‌ವರೆಗೆ ಈ ಕುಡುಕರು ಕಾರನ್ನು ತಳ್ಳಿಕೊಂಡು ಹೋಗಿದ್ದಾರೆ. ಕಾರನ್ನು ಚಾಲನೆ ಮಾಡದಿದ್ದರು ಹೀಗೆ ಬ್ಯುಸಿ ರಸ್ತೆಯಲ್ಲಿ ಸಾಗಿ ಇತರ ವಾಹನ ಸವಾರರಿಗೆ ಅಡ್ಡಿ ಉಂಟುಮಾಡಿದ್ದು, ಕೂಡ ಸಂಚಾರ ನಿಯಮ ಉಲ್ಲಂಘನೆಯಾಗಿದೆ ಎಂದು ಪೊಲೀಸರು ಇವರಿಗೆ ದಂಡ ವಿಧಿಸಿದ್ದಾಗಿ ವರದಿಯಾಗಿದೆ.
ಇದನ್ನೂ ಓದಿ: ಮುದ್ದು ಮಾಡೋದೇ ಕೆಲಸ : ಸಂಬಳ 30 ಲಕ್ಷ
ಇದನ್ನೂ ಓದಿ: ರೈತರಿಗೂ ಬಂಪರ್: ಜಿಎಸ್‌ಟಿ ಇಳಿಕೆ ಬಳಿಕ ಟ್ರ್ಯಾಕ್ಟರ್ ಸೇರಿದಂತೆ ಹಲವು ಕೃಷಿ ಯಂತ್ರೋಪಕರಣಗಳ ದರ ಹೀಗಿದೆ
ಇದನ್ನೂ ಓದಿ: ಮರ್ಸಿಡಿಸ್ ಬೇಂಜ್ ಕಾರ್ ಇದೆ ಕಾಮನ್‌ಸೆನ್ಸ್ ಇಲ್ಲ: ರಸ್ತೆಗೆ ಕಸ ಎಸೆದ ಮಹಿಳೆ ಪ್ರಶ್ನಿಸಿದ್ದಕ್ಕೆ ಉದ್ಧಟತನದ ವರ್ತನೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ