ಶವ ಪರೀಕ್ಷೆಗೆ ಸಿದ್ಧತೆ ವೇಳೆ ಎದ್ದು ಕುಳಿತ ಹುಡುಗಿ: ವೈದ್ಯರಿಗೆ ಶಾಕ್

By Anusha KbFirst Published Jun 23, 2023, 12:33 PM IST
Highlights

ಬಾಲಕಿ ಮೃತಪಟ್ಟಿದ್ದಾಳೆ ಎಂದು ಶವಾಗಾರಕ್ಕೆ ಕರೆತಂದು ಇನ್ನೇನು ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ವೈದ್ಯರು ಸಿದ್ಧಗೊಳ್ಳುತ್ತಿದ್ದಾಗಲೇ ಬಾಲಕಿ ಎದ್ದು ಕುಳಿತು ಎಲ್ಲರನ್ನು ಬೆಚ್ಚಿ ಬೀಳಿಸಿದ್ದಾಳೆ. ಉತ್ತರಪ್ರದೇಶದ ಮಿರ್ಜಾಪುರದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 

ಉತ್ತರ ಪ್ರದೇಶ : ಕೆಲ ದಿನಗಳ  ಹಿಂದಷ್ಟೇ ಈಕ್ವೆಡಾರ್ ದೇಶದಲ್ಲಿ ಅಜ್ಜಿಯೊಬ್ಬರು ಮೃತಪಟ್ಟು ಅವರ ಶವ ಪರೀಕ್ಷಗೆ ಸಿದ್ಧತೆ ನಡೆಸುತ್ತಿದ್ದ ವೇಳೆ ಶವಪೆಟ್ಟಿಗೆ ಸದ್ದು ಮಾಡಿತ್ತು. ತೆರೆದು ನೋಡುವಾಗ ವೈದ್ಯರು ಸತ್ತಿದ್ದಾರೆ ಎಂದು ಘೋಷಣೆ ಮಾಡಿದ್ದ ಅಜ್ಜಿ ಉಸಿರಾಡುತ್ತಿರುವುದು ಬೆಳಕಿಗೆ ಬಂದಿತ್ತು. ಈ ಘಟನೆ ಮಾಸುವ ಮೊದಲೇ ಉತ್ತರಪ್ರದೇಶದಲ್ಲಿ ಇಂತಹದ್ದೇ ರೀತಿಯ ಘಟನೆಯೊಂದು ನಡೆದಿದೆ. ಆದರೆ ಇಲ್ಲಿ ಬದುಕಿ ಬಂದಿದ್ದು ಬಾಲಕಿ, ಬಾಲಕಿ ಮೃತಪಟ್ಟಿದ್ದಾಳೆ ಎಂದು ಶವಾಗಾರಕ್ಕೆ ಕರೆತಂದು ಇನ್ನೇನು ಮರಣೋತ್ತರ ಪರೀಕ್ಷೆ ನಡೆಸಬೇಕು ಎಂದು ವೈದ್ಯರು ಸಿದ್ಧಗೊಳ್ಳುತ್ತಿದ್ದಾಗಲೇ ಬಾಲಕಿ ಎದ್ದು ಕುಳಿತು ಎಲ್ಲರನ್ನು ಬೆಚ್ಚಿ ಬೀಳಿಸಿದ್ದಾಳೆ. ಉತ್ತರಪ್ರದೇಶದ ಮಿರ್ಜಾಪುರದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. 

ಮನೆಯ ಸಮೀಪದ ನದಿಗೆ ಈಜಲು ಹೋಗಿದ್ದ ಬಾಲಕಿ ಅಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಇದನ್ನು ಗಮನಿಸಿದ ಅಲ್ಲಿದ್ದ ಜನ ಆಕೆಯ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಬಾಲಕಿಯನ್ನು ಮೇಲಕ್ಕೆತ್ತಿ ಕೂಡಲೇ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಈ ವೇಳೆ ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಪೊಲೀಸರು ಕೂಡ ಬಂದಿದ್ದು, ಬಾಲಕಿಯನ್ನು ಗಮನಿಸಿ ಬಾಲಕಿ ಉಸಿರಾಡುತ್ತಿಲ್ಲ ಎಂದು ಪೊಲೀಸರು ಹೇಳಿದ್ದಾರೆ,  ಪೊಲೀಸರ ಮಾತನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲದ ಬಾಲಕಿ ಮನೆಯವರು ಸೀದಾ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ ಇದಕ್ಕೆ ಸಮ್ಮತಿಸದ ಪೊಲೀಸರು ಮರಣೋತ್ತರ ಪರೀಕ್ಷೆಗಾಗಿ ಸೀದಾ ಆಕೆಯನ್ನು ಸಮೀಪದ ಪತೆಹ್ರಾ ಸರ್ಕಾರಿ ಆಸ್ಪತ್ರೆಗೆ ಕರೆ ತಂದಿದ್ದಾರೆ. 

ಆಸ್ಪತ್ರೆಯಲ್ಲಿ ಬಾಲಕಿಯ ಮರಣೋತ್ತರ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ವೈದ್ಯರು ಇದಕ್ಕೂ ಮೊದಲು ಬಾಲಕಿಯ ಕೈ ಹಿಡಿದು ತಪಾಸಣೆ ಮಾಡಿದಾಗ ಬಾಲಕಿ ಬದುಕಿರುವುದು ಗೊತ್ತಾಗಿದೆ. ಅಲ್ಲದೇ ಸ್ವಲ್ಪ ಹೊತ್ತಿನಲ್ಲೇ ಬಾಲಕಿ ಎಚ್ಚರಗೊಂಡಿದ್ದು, ಎದ್ದು ಕೂತಿದ್ದಾಳೆ. ಇದನ್ನು ನೋಡಿ ವೈದ್ಯರು ಒಮ್ಮೆಗೆ ಗಾಬರಿಗೊಂಡಿದ್ದಾರೆ. ನಂತರ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಮರಣೋತ್ತರ ಪರೀಕ್ಷೆ ಮಾಡಲು ಬಂದ ವೈದ್ಯೆಗೆ ಶಾಕ್... ಹೆದರಿ ಓಡಿದ ಡಾಕ್ಟರ್

ಇತ್ತ ಪೊಲೀಸರ ಎಡವಟ್ಟಿನಿಂದಾಗಿ ಬದುಕಿದ್ದ ಮಗಳು ಸತ್ತಳು ಎಂದು ಅಳುತ್ತಾ ಕುಳಿತಿದ್ದ ಪೋಷಕರಿಗೆ ಇದರಿಂದ ಆನೆ ಬಲ ಬಂದಂತಾಗಿದ್ದು, ಇದು ತಮ್ಮ ಮಗಳ ಪುನರ್ಜನ್ಮವೇ ಸರಿ ಎಂದು ಪೋಷಕರು ಹೇಳಿದ್ದಾರೆ. ಅಂತು ಇಲ್ಲಿ ಪೋಷಕರ ನಂಬಿಕೆ ಪ್ರಾರ್ಥನೆ ಗೆದ್ದಿದ್ದು, ನಂತರ ಬಾಲಕಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಿಕೊಡಲಾಗಿದೆ. ಸತ್ನಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜೂನ್ 18 ರಂದು ಈ ಘಟನೆ ನಡೆದಿದೆ. 

ಇನ್ನು ಹೀಗೆ ಸತ್ತು ಬದುಕಿ ಬಂದ ಬಾಲಕಿಯನ್ನು ಸತ್ನಾಗರ್ (Satnagar) ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ರಹ್ ಕಲ್ನಾಹೌದ್ವಾ ನಿವಾಸಿ ರವೀನಾ ಎಂದು ಗುರುತಿಸಲಾಗಿದೆ. ಈ ಬಾಲಕಿ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದು, ಪೋಷಕರಿಗೆ ತಿಳಿಸದೇ ಮನೆ ಬಿಟ್ಟು ಬಂದಿದ್ದಳು. ನಂತರ ಮನೆಯಿಂದ ಕಿಲೋ ಮೀಟರ್ ದೂರದ ಸಿರ್ಸಿ ಚಾನೆಲ್ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು ಎಂದು ಪೋಷಕರು ಹೇಳಿದ್ದಾರೆ. 

ಸತ್ನಾಗರ ಪೊಲೀಸ್ ಠಾಣೆಯ ಮುಖ್ಯಸ್ಥ ಅರವಿಂದ್ ಸರೋಜ್ (Arvind Saroj) ಮಾತನಾಡಿ, ಗ್ರಾಮದವರು ಬಾಲಕಿ ನೀರಿನ ಚಾನೆಲ್ ಬಳಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವ ಬಗ್ಗೆ ಮಾಹಿತಿ ನೀಡಿದರು. ಪೊಲೀಸರು ಸ್ಥಳಕ್ಕೆ ಹೋಗಿ ಇದು ನೀರಿನಲ್ಲಿ ಮುಳುಗಿದ ಪ್ರಕರಣ ಎಂದು ಬಾಲಕಿಯನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಆದರ ಬಾಲಕಿ ಬದುಕಿ ಬಂದಿರುವುದು ಖುಷಿ ವಿಚಾರ ಎಂದು ಹೇಳಿದ್ದಾರೆ. 

ಶವಪೆಟ್ಟಿಗೆಯಿಂದ ಎದ್ದು ಕುಳಿತ ಮೃತ ಮಹಿಳೆ : ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸ್ತಿದ್ದವರು ಶಾಕ್

click me!