ಭಾರತದ ಅರುಣಾಚಲ ಪ್ರದೇಶ, ಲಡಾಖ್, ಅಕ್ಸಾಯ್ ಚಿನ್ ಪ್ರದೇಶವನ್ನೂ ಸೇರಿಸಿಕೊಂಡು ತಾನು ಬಿಡುಗಡೆ ಮಾಡಿರುವ 2023ನೇ ಸಾಲಿನ ನಕ್ಷೆಯನ್ನು ಚೀನಾ ಸಮರ್ಥಿಸಿಕೊಂಡಿದೆ.
ಬೀಜಿಂಗ್: ಭಾರತದ ಅರುಣಾಚಲ ಪ್ರದೇಶ, ಲಡಾಖ್, ಅಕ್ಸಾಯ್ ಚಿನ್ ಪ್ರದೇಶವನ್ನೂ ಸೇರಿಸಿಕೊಂಡು ತಾನು ಬಿಡುಗಡೆ ಮಾಡಿರುವ 2023ನೇ ಸಾಲಿನ ನಕ್ಷೆಯನ್ನು ಚೀನಾ ಸಮರ್ಥಿಸಿಕೊಂಡಿದೆ. ಭಾರತದ ಆಕ್ಷೇಪದ ಹೊರತಾಗಿಯೂ, 'ಈ ನಕ್ಷೆ ಕಾನೂನುಬದ್ಧವಾಗಿದೆ ಎಂದು ಅದು ವಾದಿಸಿದೆ. ಬುಧವಾರ ಭಾರತದ ಆಕ್ಷೇಪಕ್ಕೆ ಪ್ರತಿಕ್ರಿಯೆ ನೀಡಿರುವ ಚೀನಾ ವಿದೇಶಾಂಗ ಸಚಿವಾಲಯ, ಚೀನಾ ನಕ್ಷೆಯ 2023ರ ಆವೃತ್ತಿಯ ಬಿಡುಗಡೆಯು ಕಾನೂನಿಗೆ ಅನುಸಾರವಾಗಿ ಇದೆ. ಇದು ದೇಶದ ಸಾರ್ವಭೌಮತೆಗೆ ಸಂಬಂಧಿಸಿದ ಸಾಮಾನ್ಯ ಪ್ರಕ್ರಿಯೆಯಾಗಿದೆ ಎಂದಿದೆ.
ಇದಲ್ಲದೆ, ಸಂಬಂಧಿತ ಪಕ್ಷಗಳು ಅದನ್ನು ವಸ್ತುನಿಷ್ಠವಾಗಿ ಪರಿಗಣಿಸುತ್ತವೆ ಮತ್ತು ಅದನ್ನು ಅತಿಯಾಗಿ ಅರ್ಥೈಸಿಕೊಳ್ಳುವುದಿಲ್ಲ ಎಂದು ಭಾವಿಸುತ್ತೇವೆ ಎಂದೂ ಅದು ಹೇಳಿದೆ. ಈ ಮೂಲಕ ಭಾರತದ ಹೆಸರೆತ್ತದೇ ಪರೋಕ್ಷ ತಿರುಗೇಟು ನೀಡಿದೆ. ಚೀನಾ, 2023ನೇ ಸಾಲಿನ ತನ್ನ ದೇಶದ ಅಧಿಕೃತ ನಕ್ಷೆಯನ್ನು ಮಂಗಳವಾರ ಬಿಡುಗಡೆ ಮಾಡಿತ್ತು. ಇದರಲ್ಲಿ ಭಾರತದ ಅರುಣಾಚಲ ಪ್ರದೇಶ (Arunachal Pradesh), ಅಕ್ಸಾಯ್ ಚಿನ್ ಪ್ರದೇಶಗಳಿದ್ದವು. ಜೊತೆಗೆ ತೈವಾನ್ ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿರುವ ಇನ್ನಿತರ ವಿವಾದಿತ ಪ್ರದೇಶಗಳನ್ನೂ ಈ ನಕ್ಷೆಯಲ್ಲಿ ಸೇರಿಸಿಕೊಂಡಿತ್ತು.
ಗಡಿ ಗಲಾಟೆ ತೆಗೆದ ಚೀನಾ, ವಿಸ್ತರಣಾವಾದಿಗೆ ಉತ್ತರ ನೀಡುತ್ತಾ ಭಾರತ?
ಚೀನಾ ವರ್ತನೆಗೆ ತೀಕ್ಷ ಪ್ರತಿಕ್ರಿಯೆ ನೀಡಿದ್ದ ಭಾರತ ವಿದೇಶಾಂಗ ಸಚಿವ ಎಸ್.ಜೈಶಂಕರ್(S Jaishankar), ಅಸಂಬದ್ಧ ಹೇಳಿಕೆ ನೀಡುವುದರಿಂದ ಯಾವುದೇ ದೇಶದ ಭೂಭಾಗ ನಿಮ್ಮದಾಗದು. ಚೀನಾ ಹಿಂದಿನಿಂದಲೂ ಇಂಥ ವರ್ತನೆ ತೋರಿಕೊಂಡೇ ಬಂದಿದೆ. ಮತ್ತೊಂದು ದೇಶದ ಭೂಭಾಗವನ್ನು ನಿಮ್ಮ ಭೂಪಟದಲ್ಲಿ ತೋರಿಸಿದಾಕ್ಷಣ ಅದು ನಿಮ್ಮದಾಗದು ಎಂದಿದ್ದರು.
ಚೀನಾ ನಕ್ಷೆ ಗಂಭೀರ ವಿಚಾರ, ಮೋದಿ ಮೌನ ಮುರಿಯಲಿ: ರಾಹುಲ್
ನವದೆಹಲಿ: ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ಮೇಲೆ ಹಕ್ಕು ಸಾಧಿಸುವ ಚೀನಾದ ನಕ್ಷೆಯನ್ನು ತುಂಬಾ ಗಂಭೀರ ವಿಚಾರ ಎಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi), ನೆರೆಯ ದೇಶವು ಈಗಾಗಲೇ ಲಡಾಖ್‌ನಲ್ಲಿ ಭಾರತದ ಭೂಮಿಯನ್ನು ವಶಪಡಿಸಿಕೊಂಡಿದೆ ಮತ್ತು ಪ್ರಧಾನಿ ನರೇಂದ್ರ ಮೋದಿ ಮೌನ ಮುರಿಯಬೇಕು ಎಂದು ಆಗ್ರಹಿಸಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಗಾಂಧಿ, ನಾನು ಲಡಾಖ್‌ನಿಂದ ಹಿಂತಿರುಗಿದ್ದೇನೆ ಮತ್ತು ಲಡಾಖ್‌ನಲ್ಲಿ (ladakh) ಒಂದು ಇಂಚು ಭೂಮಿಯೂ ಕಳೆದುಹೋಗಿಲ್ಲ ಎಂದು ಪ್ರಧಾನಿ ಹೇಳಿರುವುದನ್ನು ನಾನು ವರ್ಷಗಳಿಂದ ಹೇಳುತ್ತಿದ್ದೇನೆ. ಒಂದು ಸಂಪೂರ್ಣ ಸುಳ್ಳು, ಚೀನಾ ನಮ್ಮ ಭೂಮಿಯನ್ನು ಆಕ್ರಮಿಸಿಕೊಂಡಿದೆ ಎಂದು ಇಡೀ ಲಡಾಖ್‌ಗೆ ತಿಳಿದಿದೆ ಎಂದರು. ಈ ನಕ್ಷೆಯ ವಿಷಯವು ತುಂಬಾ ಗಂಭೀರವಾಗಿದೆ. ಆದರೆ ಅವರು ಈಗಾಗಲೇ ನಮ್ಮ ಭೂಮಿಯನ್ನು ಕಸಿದುಕೊಂಡಿದ್ದಾರೆ ಮತ್ತು ಪ್ರಧಾನಿ ಅದರ ಬಗ್ಗೆಯೂ ಏನಾದರೂ ಹೇಳಬೇಕು ಎಂದು ರಾಹುಲ್ ಆಗ್ರಹಿಸಿದರು.
ಚೀನಾದಿಂದ ಅರುಣಾಚಲ ಪ್ರದೇಶ-ಲಡಾಖ್ ಕಬ್ಜಾ, ರಾಹುಲ್ ಗಾಂಧಿ ಸೂಚನೆ ಕಡೆಗಣಿಸಿತಾ ಕೇಂದ್ರ?
ಕೇಂದ್ರ ಕಿಡಿ:
ಈ ನಡುವೆ, ರಾಹುಲ್ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ ಜೋಶಿ (prahlad joshi), ರಾಹುಲ್ ಆರೋಪ ನಿರಾಧಾರ. ಚೀನಾ ಭೂಮಿ ಕಬಳಿಸಿದ್ದೇ ಆದಲ್ಲಿ ಅದು ನೆಹರು ಅವಧಿಯಲ್ಲಿ ಎಂದು ತಿರುಗೇಟು ನೀಡಿದ್ದಾರೆ.