ಲಸಿಕೆ ಹಾಕಿದವರಿಗೂ ಹಬ್ಬಬಲ್ಲ ವೈರಸ್: ಕರ್ನಾಟಕ ಸೇರಿ 5 ಕಡೆ 'ಡೆಲ್ಟಾ ಪ್ಲಸ್' ಪತ್ತೆ!

By Kannadaprabha NewsFirst Published Jun 23, 2021, 7:45 AM IST
Highlights

* ದೇಶದಲ್ಲಿ ಮಾರಕ ಡೆಲ್ಟಾ+ ವೈರಸ್‌ ಏರಿಕೆ!

* 3 ರಾಜ್ಯದಲ್ಲಿ ಪತ್ತೆ: ಕಟ್ಟುನಿಟ್ಟಿನ ನಿಯಂತ್ರಣಕ್ಕೆ ಕೇಂದ್ರ ಸೂಚನೆ

* 2ನೇ ಅಲೆಗೆ ಡೆಲ್ಟಾಕಾರಣ, 3ನೇ ಅಲೆಗೆ ಡೆಲ್ಟಾ+ ಮುನ್ನುಡಿ?

ನವದೆಹಲಿ(ಜೂ.23):: ‘ಡೆಲ್ಟಾ’ ಎಂಬ ಕೊರೋನಾ ರೂಪಾಂತರಿ ವೈರಾಣುವಿನಿಂದ ಸೃಷ್ಟಿಯಾದ 2ನೇ ಅಲೆಯಿಂದ ನಲುಗಿ ದೇಶ ಚೇತರಿಸಿಕೊಳ್ಳುತ್ತಿರುವಾಗಲೇ, ಡೆಲ್ಟಾದ ಮತ್ತೊಂದು ರೂಪಾಂತರಿಯಾಗಿರುವ ‘ಡೆಲ್ಟಾಪ್ಲಸ್‌’ ಸೋಂಕು ಈಗ ದೇಶದ 3 ರಾಜ್ಯಗಳಲ್ಲಿ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಲಸಿಕೆಯ ಶಕ್ತಿ ಮತ್ತು ರೋಗ ನಿರೋಧಕ ಶಕ್ತಿಯನ್ನೂ ಭೇದಿಸುವ ಸಾಮರ್ಥ್ಯ ಹೊಂದಿರುವ ಡೆಲ್ಟಾಪ್ಲಸ್‌, ದೇಶದಲ್ಲಿ ಮೂರನೇ ಅಲೆ ಏಳಲು ಕಾರಣವಾಗಬಹುದು ಎಂದು ತಜ್ಞರು ಅಂದಾಜಿಸುತ್ತಿದ್ದಾರೆ.

ಕರ್ನಾಟಕಕ್ಕೂ ಕಾಲಿಟ್ಟಿತು ಡೆಲ್ಟಾಪ್ಲಸ್‌ ವೈರಸ್‌..!

ಈ ಹಿನ್ನೆಲೆಯಲ್ಲಿ 3ನೇ ಅಲೆಯ ಗಂಭೀರತೆಯನ್ನು ಕಡಿಮೆ ಮಾಡಲು ಮುಂದಾಗಿರುವ ಕೇಂದ್ರ ಆರೋಗ್ಯ ಸಚಿವಾಲಯವು, ಡೆಲ್ಟಾಪ್ಲಸ್‌ ವೈರಸ್‌ ಕಾಣಿಸಿಕೊಂಡಿರುವ ಮೂರೂ ರಾಜ್ಯಗಳಿಗೆ ಸೋಂಕು ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಸೂಚಿಸಿದೆ. ಮುಖ್ಯವಾಗಿ ಸೋಂಕು ಪತ್ತೆಯಾದ ಪ್ರದೇಶ ಕೇಂದ್ರೀಕರಿಸಿ ಅಲ್ಲಿ ಜನಸಂದಣಿಗೆ ಬ್ರೇಕ್‌ ಹಾಕುವುದು, ಪರೀಕ್ಷೆ ಪ್ರಮಾಣ ಹೆಚ್ಚಳ ಮಾಡುವುದು, ಆದ್ಯತೆಯ ಮೇಲೆ ಲಸಿಕೆ ವಿತರಣೆ, ಕ್ಲಸ್ಟರ್‌ಗಳಲ್ಲಿ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವಂತೆ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ.

ಜೊತೆಗೆ ವೈರಾಣುವನ್ನು ವೇರಿಯಂಟ್‌ ಆಫ್‌ ಇಂಟ್ರಸ್ಟ್‌ನ ಬದಲಾಗಿ ವೇರಿಯಂಟ್‌ ಆಫ್‌ ಕನ್ಸರ್ನ್‌ ಎಂದು ಹೊಸದಾಗಿ ವರ್ಗೀಕರಿಸುವ ಮೂಲಕ ಇದು ಹೆಚ್ಚು ಅಪಾಯಕಾರಿ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

28 ಕೇಸು ಪತ್ತೆ:

ಸದ್ಯ 28 ಡೆಲ್ಟಾಪ್ಲಸ್‌ ವೈರಾಣು ಸೋಂಕಿತರು ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಕೇರಳದಲ್ಲಿ ಪತ್ತೆಯಾಗಿದ್ದಾರೆ. ಕೊರೋನಾ ಮೊದಲ ಹಾಗೂ ಎರಡನೇ ಅಲೆಯಲ್ಲಿ ಅತಿ ಹೆಚ್ಚು ಸಂಕಷ್ಟಅನುಭವಿಸಿದ ಮಹಾರಾಷ್ಟ್ರದಲ್ಲೇ ಹೆಚ್ಚಿನ ಸೋಂಕಿತರು ಕಂಡುಬಂದಿದ್ದಾರೆ. ಮಹಾರಾಷ್ಟ್ರದಲ್ಲಿ 21, ಮಧ್ಯಪ್ರದೇಶದಲ್ಲಿ 4 ಮಂದಿಯಲ್ಲಿ ಸೋಂಕು ಕಂಡುಬಂದಿದೆ. ಈ ಪೈಕಿ ಮಧ್ಯಪ್ರದೇಶದಲ್ಲಿ ಒಬ್ಬ ವ್ಯಕ್ತಿ ಸೋಂಕಿಗೆ ಬಲಿಯಾಗಿದ್ದಾರೆ. ಇನ್ನು ಕೇರಳದಲ್ಲಿ 3 ಪ್ರಕರಣಗಳು ಪತ್ತೆಯಾಗಿವೆ.

80 ದೇಶಗಳಿಗೆ ಹಬ್ಬಿದ ಡೆಲ್ಟಾ, ವಿಶ್ವದಲ್ಲೇ ಹೆಚ್ಚು ಹಬ್ಬಿದ ವೈರಸ್‌ ಪಟ್ಟದ ಭೀತಿ!

9 ದೇಶದಲ್ಲಿ ಪತ್ತೆ:

ವಿಶ್ವಾದ್ಯಂತ 9 ದೇಶಗಳಲ್ಲಿ 200 ಮಂದಿ ಡೆಲ್ಟಾಪ್ಲಸ್‌ ಸೋಂಕಿತರು ಪತ್ತೆಯಾಗಿದ್ದು, ಆ ಪೈಕಿ ಭಾರತದಲ್ಲೇ 28 ಮಂದಿ ಇದ್ದಾರೆ.

ಯಾವ ರಾಜ್ಯದಲ್ಲಿ ಎಷ್ಟುಪತ್ತೆ?

ಮಹಾರಾಷ್ಟ್ರ 21

ಮಧ್ಯಪ್ರದೇಶ 4

ಕೇರಳ 3

ಕೇಂದ್ರದ ಎಚ್ಚರಿಕೆ

- ಡೆಲ್ಟಾಪ್ಲಸ್‌ ವೈರಸ್‌ ‘ವೇರಿಯಂಟ್‌ ಆಫ್‌ ಕನ್ಸರ್ನ್‌’ ಎಂದು ಘೋಷಿಸಿದ ಕೇಂದ್ರ ಸರ್ಕಾರ

- ಸೋಂಕು ಪತ್ತೆಯಾದ ರಾಜ್ಯದಲ್ಲಿ ಪರೀಕ್ಷೆ ಹೆಚ್ಚಿಸಲು, ಲಸಿಕೆ ಹೆಚ್ಚೆಚ್ಚು ನೀಡಲು ಸೂಚನೆ

- ಲಸಿಕೆ, ರೋಗನಿರೋಧಕ ಶಕ್ತಿಯನ್ನೂ ಭೇದಿಸುವ ಸಾಮರ್ಥ್ಯ ಹೊಂದಿರುವ ತಳಿ: ತಜ್ಞರ ಶಂಕೆ

click me!