ಕಾಂಗ್ರೆಸ್‌ನಿಂದ ಒಂದು ಕಾಲು ಹೊರಕ್ಕೆ; AAP ಪಕ್ಷದ ಪಂಜಾಬ್ ಸಿಎಂ ಅಭ್ಯರ್ಥಿಯಾಗ್ತಾರ ಸಿಧು?

By Suvarna NewsFirst Published Jun 22, 2021, 9:26 PM IST
Highlights
  • ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದ ನವಜೋತ್ ಸಿಂಗ್ ಸಿಧು
  • ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ವಿರುದ್ಧ ಸಿಧು ವಾಗ್ದಾಳಿ
  • ಕಾಂಗ್ರೆಸ್ ಒಳಜಗಳದ ನಡುವೆ AAP ಸಿಎಂ ಅಭ್ಯರ್ಥಿಯಾಗ್ತಾರಾ ಸಿಧು?

ಪಂಜಾಬ್(ಜೂ.22): ಕಾಂಗ್ರೆಸ್ ಪಕ್ಷದ ಒಳಜಗಳ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್‌ಗೆ ತೀವ್ರ ಸಂಕಷ್ಟ ತಂದೊಡ್ಡಿದೆ. ಪ್ರಮುಖವಾಗಿ ಅಮೃತಸರ ಪೂರ್ವ ಕ್ಷೇತ್ರದ ಶಾಸಕ ನವಜೋತ್ ಸಿಂಗ್ ಸಿಧು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಪಟ್ಟು ಹಿಡಿದಿದ್ದಾರೆ. ಚುನಾವಣೆ ಗೆಲ್ಲಲು ಬಳಸುವ ಪ್ರದರ್ಶನ ಗೊಂಬೆ ತಾನಲ್ಲ. ತನಗೂ ಅರ್ಹ ಸ್ಥಾನದ ಅವಶ್ಯಕತೆ ಇದೆ ಎಂದು ಅಮರಿಂದರ್ ಸಿಂಗ್ ವಿರುದ್ಧ ಸಿದ್ಧು ಬಹಿರಂಗ ವಾಗ್ದಾಳಿ ನಡೆಸಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಆಮ್ ಆದ್ಮಿ ಪಾರ್ಟಿ ಪಂಜಾಬ್‌ನಲ್ಲಿ ಸಿಖ್ ವ್ಯಕ್ತಿಯೇ ಪಕ್ಷದ ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ದಾರೆ. ಈ ಘೋಷಣೆ ಇದೀಗ ಕೆಲ ಸೂಚನೆಗಳನ್ನೂ ನೀಡಿದೆ. ಆಪ್ ಘೋಷಣೆ ಪ್ರಕಾರ ಕಾಂಗ್ರೆಸ್‌ನಿಂದ ಒಂದು ಕಾಲು ಹೊರಗಿಟ್ಟ ನವಜೋತ್ ಸಿಂಗ್ ಸಿಧು ಪಂಜಾಬ್ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗ್ತಾರೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುತ್ತಿದೆ.

ಸಚಿವ ಸಿಧು ರೆಕ್ಕೆ ಕತ್ತರಿಸಿದ ಸಿಎಂ ಅಮರೀಂದರ್ ಸಿಂಗ್!

ಪಂಜಾಬ್ ಕಾಂಗ್ರೆಸ್ ಘಟಕದಲ್ಲಿನ ಬಣ ರಾಜಕೀಯ ಶಮನಗೊಳಿಸಲು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮೂವರು ಸದಸ್ಯರ ಸಮಿತಿ ರಚಿಸಿದ್ದಾರೆ. ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಘಟಕದಲ್ಲಿ ಬಣರಾಜಕೀಯ ಒಳಿತಲ್ಲ ಎಂಬ ಸೂಚನೆಯನ್ನು ಸೋನಿಯಾ ಗಾಂಧಿ ನೀಡಿದ್ದಾರೆ. ಇದರ ನಡುವೆ ಪಂಜಾಬ್ ಕಾಂಗ್ರೆಸ್ ಹಾಗೂ ಅಮರಿಂದರ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇರುವ ಸಿಧು, ನೇರವಾಗಿ ಆಮ್ ಆದ್ಮಿ ಪಕ್ಷದಿಂದ ಸಿಎಂ ಅಭ್ಯರ್ಥಿಯಾಗಿ ಅಖಾಡಕ್ಕೆ ಧುಮಕುತ್ತಾರೆ ಅನ್ನೋ ಮಾತುಗಳಿಗೆ ಪುಷ್ಠಿ ಸಿಗುತ್ತಿದೆ.

2022ರ ಪಂಜಾಬ್ ವಿಧಾನ ಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ಆಮ್ ಆದ್ಮಿ ಪಾರ್ಟಿ, ಈಗಿನಿಂದಲೆ ತಯಾರಿ ಆರಂಭಿಸಿದೆ . ದೆಹಲಿ ಬಳಿಕ ಆಮ್ ಆದ್ಮಿ ಪಕ್ಷಕ್ಕೆ ಅತೀ ಹೆಚ್ಚಿನ ಬೆಂಬಲ ವ್ಯಕ್ತವಾಗಿರುವುದು ಪಂಜಾಬ್‌ನಲ್ಲೇ. ಹೀಗಾಗಿ ಪಂಜಾಬ್‌ನಲ್ಲಿ ಆಪ್ ಅಧಿಕಾರದ ಚುಕ್ಕಾಣಿ ಹಿಡಿಯಲು ದೆಹಲಿ ಸಿಎಂ, ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಒಂದೊಂದೇ ಅಸ್ತ್ರಗಳನ್ನು ಪ್ರಯೋಗಿಸುತ್ತಿದ್ದಾರೆ. ಇದರ ಅಂಗವಾಗಿ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ಸಿಎಂ ಅಭ್ಯರ್ಥಿ ಸಿಖ್ ಸಮುದಾಯಕ್ಕೆ ಸೇರಿದವರೇ ಆಗಿರುತ್ತಾರೆ ಎಂದು ಕೇಜ್ರಿವಾಲ್ ಘೋಷಿಸಿದ್ದಾರೆ. ಇದು ಕಾಂಗ್ರೆಸ್‌ನಿಂದ ನವಜೋತ್ ಸಿಂಗ್ ಸಿಧು ಆಪ್ ಪಕ್ಷ ಸೇರಿಕೊಳ್ಳಲಿದ್ದಾರೆ ಅನ್ನೋ ಮಾತನ್ನು  ಪುಷ್ಠೀಕರಿಸಿದೆ.

ಪಕ್ಷ ಬದಲಾಯಿಸುವುದು ಸಿಧುಗೆ ಹೊಸದೇನಲ್ಲ.  ಕ್ರಿಕೆಟ್‌ನಿಂದ ವಿದಾಯ ಹೇಳಿದ ಬಳಿಕ ರಾಜಕೀಯದಲ್ಲಿ ತೊಡಗಿಸಿಕೊಂಡ ನವಜೋತ್ ಸಿಂಗ್ ಸಿಧು ಪಂಜಾಬ್ ಮುಖ್ಯಂತ್ರಿ ಆಗಬೇಕು ಅನ್ನೋ ಕನಸು ಕಂಡವರಲ್ಲಿ ಪ್ರಮುಖರು. ಬಿಜೆಪಿ ಪಕ್ಷದ ಮೂಲಕ ಮಾತಿನಿಂದಲೇ ಬಿರುಗಾಳಿ ಎಬ್ಬಿಸಿದ್ದ ಸಿಧು, ಇದ್ದಕ್ಕಿದ್ದಂತೆ ಕಾಂಗ್ರೆಸ್ ಸೇರಿಕೊಂಡರು. ಆದರೆ ಸಿಧು ಏಕಾಏಕಿ ತೆಗೆದುಕೊಂಡ ನಿರ್ಧಾರ ಆಗಿರಲಿಲ್ಲ. ಪಂಜಾಬ್‌ನಲ್ಲಿ ಬಿಜೆಪಿ ಅಧಿಕಾರಕ್ಕೇರಲು ದಶಕಗಳೇ ಹಿಡಿಯಲಿದೆ ಅನ್ನೋದು ಅರಿತ ಸಿಧು, ನೇರವಾಗಿ ಕಾಂಗ್ರೆಸ್ ಪಕ್ಷ ಆಯ್ಕೆ ಮಾಡಿಕೊಂಡರು. 

ಬಿಸಿ ರಕ್ತದ ತರುಣ ಬೇಕು: ಪಂಜಾಬ್ ಸಿಎಂ ಬೇಡಿಕೆ!.

ಯಾವಾಗ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಪಾಕಿಸ್ತಾನ ಪ್ರಧಾನಿಯಾಗಿ ಹೊರಹೊಮ್ಮಿದರೋ, ಅಂದಿನಿಂದಲೇ ಸಿಧು ಆಲೋಚನೆಗಳು ಬದಲಾಯಿತು. ಇಮ್ರಾನ್ ಖಾನ್ ಆಹ್ವಾನದ ಮೇರೆ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪಾಕಿಸ್ತಾನಕ್ಕೆ ತೆರಳಿದ ಸಿಧು ವಿರುದ್ಧ ಸ್ವತಃ ಪಂಜಾಬ್ ಕಾಂಗ್ರೆಸ್ ಅಸಮಾಧಾನಗೊಂಡಿತ್ತು. ಆದರೆ ಸಿಧು ಎಲ್ಲೂ ಪಂಜಾಬ್ ನಾಯಕ ವಿರುದ್ಧ ಮಾತನಾಡಿರಲಿಲ್ಲ. ಜೊತೆಗೆ ಶಿಸ್ತಿನ ಸಿಪಾಯಿಯಂತೆ ಕೆಲಸ ಮಾಡಿದ್ದರು. ಇಮ್ರಾನ್ ಖಾನ್ ಪಾಕಿಸ್ತಾನ ಪ್ರಧಾನಿಯಾದರೆ, ಟೀಂ ಇಂಡಿಯಾದ ಉತ್ತಮ ಕ್ರಿಕೆಟಿಗ ಎಂದು ಗುರುತಿಸಿಕೊಂಡಿದ್ದ ತನಗೆ ಕನಿಷ್ಠ ಪಂಜಾಬ್ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲವೇ ಅನ್ನೋದು ಸಿಧು ನಿಲುವಾಗಿತ್ತು. 

ತಕ್ಕ ಸಂದರ್ಭಕ್ಕೆ ಕಾಯುತ್ತಿದ್ದ ಸಿಧು ಕಾಂಗ್ರೆಸ್‌ನಲ್ಲಿ ಬಣರಾಜಕೀಯ ಆರಂಭಿಸಿದರು. ಇದನ್ನರಿತ ಅಮರಿಂದರ್ ಸಿಂಗ್, 2019ರ ಲೋಕಸಭಾ ಚುನಾವಣೆಯಲ್ಲಿ ಪಂಜಾಬ್ ನಗರದಲ್ಲಿನ ಕಾಂಗ್ರೆಸ್ ಸೋಲಿಗೆ ಸಿಧು ಕಾರಣ ಎಂದು ಆರೋಪಿಸಿ, ಅವರ ಖಾತೆಗಳನ್ನು ವಾಪಸ್ ಪಡೆದರು. ಈ ಸಂದರ್ಭವನ್ನು ಬಳಸಿಕೊಂಡ ಸಿಧು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡರು.

ಕಾಂಗ್ರೆಸ್‌ಗೆ ನಿಷ್ಠೆಯಿಂದ ಇದ್ದರೆ ತಾನು ಮುಖ್ಯಮಂತ್ರಿ ಆಗಲು ದಶಕಗಳೇ ಹಿಡಿಯಬಹುದು. ಮುಂದಿನ ಬಾರಿ ಕಾಂಗ್ರೆಸ್ ಗೆದ್ದರೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಸಿಎಂ ಆಗಲಿದ್ದಾರೆ. ಇಲ್ಲದಿದ್ದರೆ ಪಂಜಾಬ್ ಮೂಲ ಕಾಂಗ್ರೆಸ್ಸಿಗರಿಗೆ ಸ್ಥಾನ ಹೋಗಲಿದೆ. ಹೀಗಾದಲ್ಲಿ ಸಿಧು ಸಿಎಂ ಆಸೆ ಈಡೇರುವುದಿಲ್ಲ. ಇದೇ ವೇಳೆ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಬಲಗೊಳ್ಳುತ್ತಿದೆ. ಅದರಲ್ಲೂ ರೈತ ಪ್ರತಿಭಟನೆ ಬಳಿಕ ಪಂಜಾಬ್‌ನಲ್ಲಿ ಆಪ್ ಪಕ್ಷದ ಬೆಂಬಲ ಮತ್ತಷ್ಟು ಹೆಚ್ಚಾಗಿದೆ. ಕಾರಣ ಕೇಂದ್ರದ ಬಿಜೆಪಿಯಿಂದ, ರಾಜ್ಯದ ಕಾಂಗ್ರೆಸ್‌ನಿಂದ ಪ್ರತಿಭಟನಾ ನಿರತ ರೈತರಿಗೆ ನೆರವು ಸಿಕ್ಕಿಲ್ಲ. ಆದರೆ ಅರವಿಂದ್ ಕೇಜ್ರಿವಾಲ್ ಸ್ವತ: ಪ್ರತಿಭಟನಾ ನಿರತ ಸ್ಥಳಕ್ಕೆ ತೆರಳಿ ಅನುಕಂಪ ಗಿಟ್ಟಿಸಿಕೊಂಡಿದ್ದರು. ಈ ಎಲ್ಲಾ ಬೆಳವಣಿಗೆ ಹಾಗೂ ಸಹಜವಾಗಿ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷಕ್ಕಿರುವ ಬೆಂಬಲದಿಂದ 2022ರಲ್ಲಿ ಕಾಂಗ್ರೆಸ್‌ಗೆ ತೀವ್ರ ಪೈಪೋಟಿ ನೀಡಲಿದೆ. ಇದರೊಂದಿಗೆ ತನ್ನ ಇಮೇಜ್, ಜೊತೆಗೆ ಹೆಚ್ಚಿನ ಶ್ರಮವಹಿಸಿ ಕೆಲಸ ಮಾಡಿದರೆ,  ಆಮ್ ಆದ್ಮಿ ಮೂಲಕ ಮುಖ್ಯಮಂತ್ರಿ ಆಗಬಲ್ಲೆ ಅನ್ನೋದು ಸಿಧು ಬಲವಾದ ನಂಬಿಕೆ.

ಇದಕ್ಕೆ ಪೂರಕವಾಗಿ ಈಗಾಗಲೇ ಆಮ್ ಆದ್ಮಿ ಪಕ್ಷದ ಸಿಧು ಮಾತುಕತೆ ನಡೆಸಿದ್ದಾರೆ ಅನ್ನೋ ರಾಜಕೀಯ ತಜ್ಞರ ಮಾತುಗಳಿಗೆ ಕೇಜ್ರಿವಾಲ್ ಹೇಳಿಕೆ ತುಪ್ಪ ಸುರಿದಿದೆ. ಆಮ್ ಆದ್ಮಿ ಇತ್ತೀಚೆಗೆ ಪಂಜಾಬ್ ಮಾಜಿ ಪೊಲೀಸ್ IGP ಕುನ್ವಾರ್ ವಿಜಯ್ ಪ್ರತಾಪ್ ಸಿಂಗ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದೆ. ಪಕ್ಷ ಬಲಗೊಳ್ಳುತ್ತಿದೆ. ಇತ್ತ ಸಿಧು ಆಸೆಗಳು ರೆಕ್ಕ ಪುಕ್ಕ ಪಡೆದು ಹಾರಾಡಲು ಆರಂಭಿಸಿದೆ. 

ಈ ಬೆಳವಣಿಗೆನ್ನು ಸೂಕ್ಷ್ಮವಾಗಿ ಗಮನಿಸಿರುವ ಮಲ್ಲಿಕಾರ್ಜನ ಖರ್ಗೆ ನೇತೃತ್ವದ ಕಾಂಗ್ರೆಸ್ ಸಮಿತಿ, ಸಿಧುಗೆ ಸೂಕ್ತ ಸ್ಥಾನ ಮಾನ ನೀಡಲು ಮುಂದಾಗಿದೆ. ಆದರೆ ಈ ಚದುರಂಗದಾಟದಲ್ಲಿ ಸಿಧು ಮುಂದಿನ ನಡೆ ಇದೀಗ ತೀವ್ರ ಕುತೂಹಲ ಕೆರಳಿಸಿದೆ.

click me!