
4 ತಿಂಗಳ ಗರ್ಭಿಣಿಯಾಗಿದ್ದ ಸ್ವಾಟ್ ಕಮಾಂಡೋ ಆಗಿದ್ದ 24 ವರ್ಷದ ಮಹಿಳೆಯನ್ನು ಆಕೆಯ ಪತಿ ಡಂಬಲ್ಸ್‌ನಿಂದ ತಲೆಗೆ ಹೊಡೆದು ಕೊಂದಂತಹ ಆಘಾತಕಾರಿ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ. ಕಾಜಲ್ ಚೌಧರಿ ಹೀಗೆ ಗಂಡನಿಂದಲೇ ಸಾವನ್ನಪ್ಪಿದ ನತದೃಷ್ಟೆ. ಸ್ವಾಟ್ ಕಮಾಂಡೋ ಎಂಬುದು ದೆಹಲಿ ಪೊಲೀಸ್ ವಿಶೇಷ ಘಟಕವಾಗಿದೆ. ಇಲ್ಲಿ ಉದ್ಯೋಗದಲ್ಲಿದ್ದ ಕಾಜಲ್ ಚೌಧರಿ ಅವರು 4 ತಿಂಗಳ ಗರ್ಭಿಣಿಯಾಗಿದ್ದರು. ಹಣಕಾಸಿನ ವಿಚಾರಕ್ಕೆ ಗಂಡ ಹೆಂಡತಿ ಮಧ್ಯೆ ಗಲಾಟೆ ನಡೆದಿದ್ದು, ನಂತರ ಗಂಡ ಆಕೆಗೆ ಡಂಬಲ್ಸ್‌ನಿಂದ ಥಳಿಸಿದ್ದಾನೆ. ಘಟನೆಯಿಂದಾಗಿ ಗಂಭೀರ ಗಾಯಗೊಂಡಿದ್ದ ಕಾಜಲ್ ಚೌಧರಿ ಐದು ದಿನಗಳ ಕಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದರು ಅವರು ಬದುಕುಳಿಯಲಿಲ್ಲ. ಅಂಕುರ್ ಎಂಬಾತನೇ ಪತ್ನಿಯನ್ನು ಹೀಗೆ ಕೊಲೆ ಮಾಡಿದ ಆರೋಪಿ.
ಕಾಜಲ್ ಚೌಧರಿ ಪತಿ ಅಂಕುರ್ ರಕ್ಷಣಾ ಸಚಿವಾಲಯದಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ. ಜನವರಿ 22 ರಂದು ಗಂಡ ಹೆಂಡತಿ ಮಧ್ಯೆ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಕಾಜಲ್ ಚೌಧರಿಯ ಸಹೋದರ ನಿಖಿಲ್, ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್ ಆಗಿ ಕೆಲಸ ಮಾಡುತ್ತಿದ್ದು, ತನ್ನ ಸಹೋದರಿ ಮೇಲೆ ಹಲ್ಲೆ ನಡೆದ ದಿನ ಆಕೆ ತನಗೆ ಕರೆ ಮಾಡಿದ್ದಳು. ತಾನು ತನ್ನ ಸಹೋದರಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದಾಗಲೇ, ಅಂಕುರ್ ಡಂಬ್ಬೆಲ್‌ನಿಂದ ಆಕೆಗೆ ಹೊಡೆಯಲು ಪ್ರಾರಂಭಿಸಿದನು ಎಂದು ಅವರು ಹೇಳಿದರು. ಕೆಲವು ನಿಮಿಷಗಳ ನಂತರ, ಅಂಕುರ್ ಫೋನ್ ಮೂಲಕ ಹಲ್ಲೆಯ ಬಗ್ಗೆ ಸ್ಪಷ್ಟವಾಗಿ ನಮಗೆ ತಿಳಿಸಿದನು.
ಇದನ್ನೂ ಓದಿ: ಕೆಳಗಿಳಿದು ಬರಲು ಒಪ್ಪದ ಕಸ್ಟಮರ್ ಆರ್ಡರ್ ಕ್ಯಾನ್ಸಲ್ ಮಾಡಿದ ಝೋಮ್ಯಾಟೋ ಡೆಲಿವರಿ ಬಾಯ್ ಮಾಡಿದ್ದೇನು?
ಕಾಜಲ್ ಚೌಧರಿಗೆ ಆಕೆಯ ಅತ್ತೆ ಮತ್ತು ಇಬ್ಬರು ಅತ್ತಿಗೆಯರು ನಿರಂತರವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ನಿಖಿಲ್ ಆರೋಪಿಸಿದ್ದಾರೆ. ಅಂಕುರ್ ಕಾಜಲ್ ಪೋಷಕರಿಂದ ಹಣ ಪಡೆದಿದ್ದ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅಂಕುರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಕಾಜೋಲ್ ಅವರಿಗೆ 2022ರಲ್ಲಿ ದೆಹಲಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಸಿಕ್ಕಿತ್ತು. ಹಾಗೂ ಅವರು ಪ್ರಸ್ತುತ ವಿಶೇಷ ಶಸ್ತ್ರಾಸ್ತ್ರಗಳು ಮತ್ತು ತಂತ್ರಗಳು (SWAT)ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಅವರು 2023 ರಲ್ಲಿ ದೆಹಲಿ ಕಂಟೋನ್ಮೆಂಟ್‌ನಲ್ಲಿದ್ದ ಅಂಕುರ್ ಜೊತೆ ಕಾಜೋಲ್ ಮದುವೆ ನಡೆದಿತ್ತು. ದಂಪತಿಗೆ ಒಂದೂವರೆ ವರ್ಷದ ಮಗನಿದ್ದಾನೆ.
ಇದನ್ನೂ ಓದಿ: ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮೀಸೆ ಚಿಗುರದ ಮಕ್ಕಳ ಧಮ್ ಮಾರೋ ಧಮ್: ವಿಡಿಯೋ ವೈರಲ್
ಒಟ್ಟಿನಲ್ಲಿ ಗಂಡ ಹೆಂಡತಿಯ ನಡುವಿನ ಕಿತ್ತಾಟದಿಂದಾಗಿ ಏನೂ ಅರಿಯದ ಒಂದೂವರೆ ವರ್ಷದ ಪುಟ್ಟ ಮಗು ಅನಾಥವಾಗಿದೆ. ಆಕೆ ಪೊಲೀಸ್ ಇಲಾಖೆಯಲ್ಲಿ ಕಮಾಂಡೊ ಆಗಿ ಕೆಲಸ ಮಾಡುತ್ತಿದ್ದರು ಗಂಡನ ದೌರ್ಜನ್ಯದಿಂದ ಆಕೆಗೆ ತಪ್ಪಿಸಿಕೊಳ್ಳಲಾಗದೇ ಉಸಿರು ಚೆಲ್ಲಿದ್ದು ಮಾತ್ರ ದುರಂತ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ