
ನವದೆಹಲಿ: ಬೇಸಿಗೆಯ ಸೆಖೆ ದಿನದಿಂದ ದಿನಕ್ಕೆ ಹೆಚ್ಚಾಗ್ತಾನೆ ಇದೆ. ಬಿಸಿಲಿನ ತಾಪದಿಂದ ಪಾರಾಗಲು ಜನ ಎಸಿ ಕೂಲರ್, ಫ್ಯಾನ್‌ಗಳ ಮೊರೆ ಹೋಗುತ್ತಿದ್ದರೆ, ಹಳ್ಳಿಗಳಲ್ಲಿ ಜನ ಹಳ್ಳಕೊಳ್ಳತ್ತ ಹೋಗಿ ಈಜಾಡಿ ಬಿಸಿಲಿನ ತಾಪದಿಂದ ಹೊರಬರಲು ಪ್ರಯತ್ನಿಸುತ್ತಿದ್ದಾರೆ. ಆದರೆ ದೆಹಲಿ ವಿವಿ ವ್ಯಾಪ್ತಿಗೆ ಒಳಪಡುವ ಲಕ್ಷ್ಮಿಬಾಯಿ ಕಾಲೇಜಿನ ಪ್ರಾಂಶುಪಾಲರೊಬ್ಬರು ಬಿಸಿಲಿನ ಧಗೆಯಿಂದ ಉಂಟಾಗುವ ತಾಪದಿಂದ ಪಾರಾಗಲು ತಾವೇ ಸ್ವತಃ ಕಾಲೇಜಿನ ಗೋಡೆಗಳಿಗೆ ಸೆಗಣಿಯನ್ನು ಉಜ್ಜಿದ್ದಾರೆ. ಇದು ಈಗ ಚರ್ಚೆಯ ವಿಚಾರವಾಗಿದೆ.
ಲಕ್ಷ್ಮಿಬಾಯಿ ಕಾಲೇಜು ಪ್ರಾಂಶುಪಾಲರಾದ ಪ್ರತ್ಯುಷಾ ವತ್ಸಲಾ ಬೆಂಚಿನ ಮೇಲೇರಿ ಕಾಲೇಜಿನ ಗೋಡೆಗಳಿಗೆ ಸೆಗಣಿ ಉಜ್ಜುತ್ತಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಅನೇಕರು ಈ ಕ್ರಮಕ್ಕೆ ಪ್ರಾಂಶುಪಾಲರನ್ನು ಮೆಚ್ಚಿದರೆ ಮತ್ತೆ ಕೆಲವರು ಟೀಕೆ ಮಾಡಿದ್ದಾರೆ. ಕಾಲೇಜಿನ ಬ್ಲಾಕ್ ಸಿಯಲ್ಲಿ ಸ್ವತಃ ಪ್ರಾಂಶುಪಾಲರೇ ಎತ್ತರದ ಗೋಡೆಗಳಿಗೆ ಸೆಗಣಿಯನ್ನು ಉಜ್ಜುವುದನ್ನು ವೀಡಿಯೋದಲ್ಲಿ ಕಾಣಬಹುದು.
ಸಾಮಾನ್ಯವಾಗಿ ಹಳ್ಳಿಗಳಲ್ಲಿ ಕೀಟಗಳ ನಿವಾರಣೆಗೆ ಹಾಗೂ ಮಣ್ಣಿನ ಮನೆ ತಂಪಾಗಿರುವುದಕ್ಕೆ ಸೆಗಣಿ ಉಜ್ಜುತ್ತಾರೆ. ಇದು ಮನೆಯ ಒಳಾಂಗಣ ತಾಪಮಾನವನ್ನು ನಿಯಂತ್ರಿಸುತ್ತದೆ ಎಂದು ನಂಬಲಾದ ಸಾಂಪ್ರದಾಯಿಕ ಭಾರತೀಯ ಪದ್ಧತಿಗಳಲ್ಲಿ ಒಂದಾಗಿದೆ. ಆದರೆ ಕಾಲೇಜು ಪ್ರಾಂಶುಪಾಲರು ಹೀಗೆ ಮಾಡಿರುವುದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಾಂಶುಪಾಲರು ಸ್ವತಃ ಈ ವೀಡಿಯೋವನ್ನು ಕಾಲೇಜಿನ ಶಿಕ್ಷಕರ ಆಂತರಿಕ ವಾಟ್ಸಾಪ್ ಗ್ರೂಪ್‌ನಲ್ಲಿ ಶೇರ್ ಮಾಡಿದ್ದು, ಮೂಲಸೌಕರ್ಯ ಮಿತಿಗಳ ನಡುವೆಯೂ ಹಳೆಯ, ಪರಿಸರ ಸ್ನೇಹಿ ವಿಧಾನಗಳಿಗೆ ಮರಳುವುದನ್ನು ಪ್ರದರ್ಶಿಸುವ ಉದ್ದೇಶವನ್ನು ಹೊಂದಿತ್ತು. ಆದರೆ ಆಂತರಿಕವಾಗಿ ಚರ್ಚೆಯಾಗಗಬೇಕಿದ್ದ ಈ ವಿಷಯವು ಬೇಗನೆ ವಾಟ್ಸಾಪ್‌ನ ಆಚೆಗೂ ಬಂದು, ಸಾಮಾಜಿಕ ಮಾಧ್ಯಮಗಳಿಗೆ ಇಳಿದು ಚರ್ಚೆಗೆ ಗ್ರಾಸವಾಯ್ತು, ಅನೇಕರು ಪ್ರಾಂಶುಪಾಲರ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರೆ ಮತ್ತೆ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈರಲ್ ಆದ ವೀಡಿಯೊದಲ್ಲಿ, ವತ್ಸಲಾ ಇತರ ಸಿಬ್ಬಂದಿಗಳೊಂದಿಗೆ ಕೆಲಸ ಮಾಡುತ್ತಿರುವುದು ಕಂಡು ಬರುತ್ತದೆ, ತರಗತಿಯ ಗೋಡೆಗಳ ಮೇಲೆ ತಾವೇ ಸ್ವತಃ ತಮ್ಮ ಕೈಗಳಿಂದ ಹಸುವಿನ ಸಗಣಿ ಹರಡುತ್ತಿರುವುದನ್ನು ಕಾಣಬಹುದಾಗಿದೆ. ಶಿಕ್ಷಕರ ಪ್ರಕಾರ, ಈ ಪ್ರಯತ್ನವು ತರಗತಿ ಕೊಠಡಿಗಳನ್ನು ಬೋಧನೆಗೆ ಹೆಚ್ಚು ಆರಾಮದಾಯಕವಾಗಿಸುವ ಉಪಕ್ರಮದ ಭಾಗವಾಗಿದೆ. ವಿಶೇಷವಾಗಿ ಬ್ಲಾಕ್ ಸಿ, ಇದು ಕ್ಯಾಂಟೀನ್ ಮೇಲೆ ನೆಲೆಗೊಂಡಿದ್ದು, ಬೇಸಿಗೆಯಲ್ಲಿ ತುಂಬಾ ಬಿಸಿಯಾಗಿರುತ್ತದೆ ಎಂದು ಹೇಳಲಾಗುತ್ತದೆ.
ಆದರೆ ಈ ಕ್ರಮವು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಲ್ಲಿ ವ್ಯಾಪಕ ಚರ್ಚೆಗೆ ಕಾರಣ ಆಯ್ತು, ಈ ಸಮಸ್ಯೆಗೆ ಮೂಲ ಕಾರಣ ದೀರ್ಘಕಾಲದ ಮೂಲಸೌಕರ್ಯದ ನಿರ್ಲಕ್ಷ್ಯ ಎಂದು ಕೆಲವರು ವಾದಿಸಿದ್ದಾರೆ. ಅನೇಕ ತರಗತಿ ಕೊಠಡಿಗಳು ಕಿಕ್ಕಿರಿದು ತುಂಬಿವೆ. ಸರಿಯಾ ಗಾಳಿಯಾಡುವ ವ್ಯವಸ್ಥೆ ಇಲ್ಲ ಹಾಗೂ ಕಳಪೆಯಾಗಿ ಕಾರ್ಯನಿರ್ವಹಿಸುವ ಫ್ಯಾನ್‌ಗಳಿವೆ. ಕೂಲರ್‌ಗಳು ಅಥವಾ ಹವಾ ನಿಯಂತ್ರಣಗಳಿಲ್ಲ, ಮತ್ತು ಕಾಲೇಜುಗಳಲ್ಲಿ ಶೌಚಾಲಯಗಳು ಸಹ ಕಳಪೆಯಾಗಿ ನಿರ್ವಹಿಸಲ್ಪಟ್ಟಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಈ ಕಾಲೇಜಿನಲ್ಲಿ ಉಪಕುಲಪತಿ ಯೋಗೇಶ್ ಸಿಂಗ್ ಹೊಸ ಬ್ಲಾಕ್‌ಗೆ ಅಡಿಪಾಯ ಹಾಕಿದ್ದರೂ, ಹಳೆಯ ಕಟ್ಟಡಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಇದು ಇನ್ನಷ್ಟು ನಿರಾಶೆಯನ್ನು ಹೆಚ್ಚಿಸಿದೆ. ಕೆಲವು ಕೊಠಡಿಗಳು ಖಂಡಿತವಾಗಿಯೂ ಬಿಸಿಯಾಗಿರುತ್ತವೆ, ಆದರೆ ಯಾರೂ ಸಗಣಿ ಕೇಳಲಿಲ್ಲ, ನಮಗೆ ಸರಿಯಾದ ಫ್ಯಾನ್‌ಗಳು ಅಥವಾ ಕೂಲರ್‌ಗಳು ಬೇಕು ಎಂದು ಒಬ್ಬ ವಿದ್ಯಾರ್ಥಿ ಹೇಳಿದ್ದಾರೆ.
ರೈತನ ಕೈಹಿಡಿದ ಹಸುಗಳು: ಹಾಲು ಸೆಗಣಿ ಮಾರಿಯೇ ಕೋಟಿ ಮೌಲ್ಯದ ಬಂಗಲೆ ನಿರ್ಮಿಸಿದ ರೈತ
ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಾಂಶುಪಾಲರನ್ನು ಆಂಗ್ಲ ಮಾಧ್ಯಮ ಟೈಮ್ಸ್ ಆಫ್ ಇಂಡಿಯಾ ಸಂಪರ್ಕಿಸಿದ್ದು,
ಈ ವೇಳೆ ಪ್ರಾಂಶುಪಾಲರು, ಇದು ಅಧ್ಯಾಪಕರ ಸಂಶೋಧನಾ ಪ್ರಸ್ತಾವನೆಯ ಭಾಗವಾಗಿದೆ ಎಂದು ಹೇಳಿದರು ಎಂದು ವರದಿಯಾಗಿದೆ. ಗ್ರಾಮೀಣ ಭಾರತದಲ್ಲಿ ಮನೆಗಳನ್ನು ತಂಪಾಗಿಸಲು ಮತ್ತು ಕೀಟಗಳನ್ನು ಹಿಮ್ಮೆಟ್ಟಿಸಲು ಹಸುವಿನ ಸಗಣಿ ಬಹಳ ಹಿಂದಿನಿಂದಲೂ ಬಳಸಲ್ಪಡುತ್ತಿದೆ ಎಂಬ ಶತಮಾನಗಳಷ್ಟು ಹಳೆಯ ಜ್ಞಾನದಿಂದ ಪ್ರಾಂಶುಪಾಲರು ಈ ಅಸಾಂಪ್ರದಾಯಿಕ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾರೆ.
ಗ್ರಾಮೀಣ ಪ್ರದೇಶಗಳಲ್ಲಿ, ಹಸುವಿನ ಸಗಣಿ ಮತ್ತು ಮಣ್ಣಿನ ಮಿಶ್ರಣವನ್ನು ಸಾಮಾನ್ಯವಾಗಿ ನೆಲ ಮತ್ತು ಗೋಡೆಗಳಿಗೆ ಲೇಪಿಸಲು ಬಳಸಲಾಗುತ್ತದೆ. ಇದು ಮನೆಯನ್ನು ತಂಪಾಗಿಸುವುದರ ಜೊತೆಗೆ ಬ್ಯಾಕ್ಟೀರಿಯಾ ವಿರೋಧಿ ಮತ್ತು ಕೀಟ-ನಿವಾರಕ ಗುಣಗಳನ್ನು ಹೊಂದಿರುವುದರ ಜೊತೆಗೆ ತಾಪಮಾನವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೆಲವು ಆಫ್ರಿಕನ್ ಸಮುದಾಯಗಳು ಸಹ ಇದೇ ರೀತಿಯ ತಂತ್ರಗಳನ್ನು ಬಳಸುತ್ತವೆ.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೂ ಕೂಡ ಈ ಹಿಂದೆ ಹಸುವಿನ ಸಗಣಿಯಿಂದ ತಯಾರಿಸಿದ ಬಣ್ಣವನ್ನು(Paint) ಬಿಡುಗಡೆ ಮಾಡಿ, ಅದನ್ನು ಪರಿಸರ ಸ್ನೇಹಿ ಮತ್ತು ವಿಷಕಾರಿಯಲ್ಲ ಎಂದು ಕರೆದಿದ್ದರು. ಆದರೂ ಕಾಂಕ್ರೀಟ್ ಕಾಡಿನಿಂದ ಆವೃತ್ತವಾದ ನಗರಗಳಲ್ಲಿ ಇಂತಹ ವಸ್ತುಗಳು ಕಡಿಮೆ ಅಗತ್ಯವನ್ನು ಹೊಂದಿವೆ ಎಂದು ತಜ್ಞರು ಹೇಳುತ್ತಾರೆ.
ಆದರೆಕಡಿಮೆ ಸಂಕುಚಿತ ಶಕ್ತಿಯನ್ನು ಹೊಂದಿರುವ ಹಸುವಿನ ಸಗಣಿ, ಕಾಂಕ್ರೀಟ್ ರಚನೆಗಳಲ್ಲಿ ತಂಪಾಗಿಸಲು ಬದಲಾಯಿಸಲು ಸಾಧ್ಯವಿಲ್ಲ. ತಜ್ಞರ ಪ್ರಕಾರ, ಹಳೆಯ ಕಟ್ಟಡಗಳು, ಕಳಪೆ ವಾತಾಯನ ಮತ್ತು ದೊಡ್ಡ ಕೊಠಡಿಗಳನ್ನು ಹೊಂದಿರುವ ಲಕ್ಷ್ಮಿಬಾಯಿ ಕಾಲೇಜಿನಲ್ಲಿ ಫ್ಯಾನ್‌ಗಳು ಅಥವಾ ಕೂಲರ್‌ಗಳ ಅನುಪಸ್ಥಿತಿಯನ್ನು ಹಸುವಿನ ಸೆಗಣಿಯ ಲೇಪನದಿಂದ ಬದಲಾಯಿಸಲಾಗದು. ಆದರೆ ಇದು ಸುಸ್ಥಿರತೆ, ನಾವೀನ್ಯತೆ ಮತ್ತು ಆಧುನಿಕ ಬೇಡಿಕೆಗಳೊಂದಿಗೆ ನಾವು ಸಂಪ್ರದಾಯವನ್ನು ಹೇಗೆ ಸಮತೋಲನಗೊಳಿಸುತ್ತೇವೆ ಎಂಬುದರ ಕುರಿತು ದೊಡ್ಡ ಚರ್ಚೆ ಹುಟ್ಟುಹಾಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ