ಗಲ್ವಾನ್ ಹುತಾತ್ಮ ಯೋಧನ ತಂದೆಗೆ ಪೊಲೀಸರ ಕಿರುಕುಳ ಪ್ರಕರಣ, CM ನಿತೀಶ್‌ಗೆ ರಾಜನಾಥ್ ಸಿಂಗ್ ಮಹತ್ವದ ಸೂಚನೆ!

By Suvarna NewsFirst Published Mar 1, 2023, 4:04 PM IST
Highlights

ಗಲ್ವಾನ್ ಘರ್ಷಣೆಯಲ್ಲಿ ಹುತಾತ್ಮನಾದ ಯೋಧನ ತಂದೆಗೆ ಸ್ಮಾರಕ ವಿಚಾರವಾಗಿ ಪೊಲೀಸರು ಕಿರಕುಳ ನೀಡಿದ ಪ್ರಕರಣ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದೆ. ಯೋಧನ ಕುಟುಂಬಕ್ಕೆ ಭಾರತೀಯ ನೇರೆ ನೆರವಿಗೆ ಧಾವಿಸಿದ ಬೆನ್ನಲ್ಲೇ ಇದೀಗ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಹಾರ ಸಿಎಂ ನಿತೀಶ್ ಕುಮಾರ್ ಜೊತೆಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಇಷ್ಟೇ ಅಲ್ಲ ಪೊಲೀಸರು ಹಾಗೂ ಕಿರುಕುಳ ನೀಡಿದವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದಾರೆ.

ನವದೆಹಲಿ(ಮಾ.01): ಗಲ್ವಾನ್ ಘರ್ಷಣೆಯಲ್ಲಿ ಹುತಾತ್ಮನಾದ ಬಿಹಾರದ ಯೋಧ ಜೈಕಿಶೋರ್ ಸಿಂಗ್ ಸ್ಮಾರಕ ನಿರ್ಮಾಣ ವೈಶಾಲಿ ಜಿಲ್ಲೆಯ ಜನದಹ ಗ್ರಾಮದಲ್ಲಿ ಭಾರಿ ವಿವಾದಕ್ಕೆ ಕಾರಣವಾಗಿತ್ತು. ನೆರೆಮನೆವರ ಪ್ರಭಾವಕ್ಕೆ ಮಣಿದ ಪೊಲೀಸರು, ಹುತಾತ್ಮ ಯೋಧನ ತಂದೆಯನ್ನು ಧರಧರನೆ ಎಳೆದೊಯ್ದು ಕಿರುಕುಳ ನೀಡಿದ್ದರು. ಈ ಘಟನೆಯನ್ನು ಏಷ್ಯಾನೆಟ್ ನ್ಯೂಸ್ ವರದಿ ಮಾಡಿತ್ತು. ಈ ವರದಿ ಬೆನ್ನಲ್ಲೇ ಭಾರತೀಯ ಸೇನೆ ಯೋಧನ ಕುಟುಂಬದ ನೆರವಿಗೆ ಧಾವಿಸಿತ್ತು. ಅಧಿಕಾರಿಗಳು ಯೋಧನ ಮನೆಗೆ ತೆರಳಿ ಸ್ಮಾರಕ ನಿರ್ಮಾಣವನ್ನು ಭಾರತೀಯ ಸೇನೆ ಕೈಗೆತ್ತಿಕೊಳ್ಳುವುದಾಗಿ ಭರವಸೆ ನೀಡಿತ್ತು. ಈ ಘಟನೆ ಬೆನ್ನಲ್ಲೇ ಇದೀಗ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಂಟ್ರಿಕೊಟ್ಟಿದ್ದಾರೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ಗೆ ಕರೆ ಮಾಡಿರುವ ರಾಜನಾಥ್ ಸಿಂಗ್, ಗಲ್ವಾನ್ ಹುತಾತ್ಮ ಯೋಧನ ತಂದೆಯನ್ನು ನಡೆಸಿಕೊಂಡ ರೀತಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವೇಳೆ ಕಿರುಕುಳ ನೀಡಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ನಿತೀಶ್ ಕುಮಾರ್ ಭರವಸೆ ನೀಡಿದ್ದಾರೆ. 

ರಾಜ್‌ಕಪೂರ್ ಸಿಂಗ್ ಪುತ್ರ ಜೈಕಿಶೋರ್ ಸಿಂಗ್ 2020ರಲ್ಲಿ ಲಡಾಖ್ ಗಲ್ವಾನ್ ಕಣಿವೆಯಲ್ಲಿ ಚೀನಾ ವಿರುದ್ದ ನಡೆದ ಘರ್ಷಣೆಯಲ್ಲಿ ಹುತಾತ್ಮರಾಗಿದ್ದರು. ಯೋಧನ ಅಂತ್ಯಕ್ರಿಯೆಯಲ್ಲಿ ಹಲವು ರಾಜಕೀಯ ನಾಯಕರು, ನಿತೀಶ್ ಕುಮಾರ್ ಸರ್ಕಾರದ ಸಚಿವರು ಭಾಗವಹಿಸಿದ್ದರು. ಈ ವೇಳೆ ಜೈಕಿಶೋರ್ ಸಿಂಗ್ ಸ್ಮಾರಕ ನಿರ್ಮಾಣ ಮಾಡುವುದಾಗಿ ಘೋಷಿಸಿದ್ದರು.ಆದರೆ ಈ ಘಟನೆ ನಡೆದು ವರ್ಷಗಳು ಉರುಳಿದರೂ ಸ್ಮಾರಕ ನಿರ್ಮಾಣ ಆಗಲಿಲ್ಲ. ಸ್ಥಳೀಯ ಜಿಲ್ಲಾಡಳಿತ ಕೂಡ ಆಸಕ್ತಿ ತೋರಲಿಲ್ಲ. ಹೀಗಾಗಿ ಯೋಧನ ತಂದೆ ರಾಜ್ ಕಪೂರ್ ಸಿಂಗ್ ಹಾಗೂ ಗ್ರಾಮಸ್ಥರು ಸ್ಮಾರಕ ನಿರ್ಮಾಣಕ್ಕೆ ಮುಂದಾದರು. ಇದಕ್ಕಾಗಿ ಪಂಚಾಯಿತ್ ಅಧಿಕಾರಿಗಳನ್ನು ಸಂಪರ್ಕಿಸಿದರು. ಗ್ರಾಮದವರ ಅಭಿಪ್ರಾಯ ಸಂಗ್ರಹಿಸಿ, ರಾಜ್‌ಕಪೂರ್ ಸಿಂಗ್ ಅವರ ಸ್ಥಳಕ್ಕೆ ತಾಗಿಕೊಂಡೇ ಇರುವ ಸರ್ಕಾರಿ ಜಾಗದಲ್ಲಿ ಪ್ರತಿಮೆ ನಿರ್ಮಾಣಕ್ಕೆ ತೀರ್ಮಾನ ಕೈಗೊಳ್ಳಾಯಿತು. 

ಮನೆಗೆ ನುಗ್ಗಿ ಗಲ್ವಾನ್ ಘರ್ಷಣೆಯಲ್ಲಿ ಹುತಾತ್ಮನಾದ ಯೋಧನ ತಂದೆಯನ್ನು ಧರಧರನೆ ಎಳೆದೊಯ್ದ ಪೊಲೀಸ್!

ಸರ್ಕಾರಿ ಜಾಗದಲ್ಲಿ ಹುತಾತ್ಮ ಯೋಧನ ತಂದೆ ಹಣ ವೆಚ್ಚ ಮಾಡಿ ಸ್ಮಾರಕ ನಿರ್ಮಾಣ ಕಾರ್ಯ ಆರಂಭಿಸಿದರು. ಆದರೆ ಯೋಧನ ಮನೆ ಸಮೀಪದ ನಿವಾಸಿ ಹರಿನಾಥ್ ಹುತಾತ್ಮ ಯೋಧನ ವಿರುದ್ಧ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ನಮ್ಮ ಸ್ಥಳದ ಮುಂಭಾಗದಲ್ಲಿ ಸ್ಮಾರಕ ನಿರ್ಮಾಣ ಬೇಡ ಅನ್ನೋ ವಾದ ಮುಂದಿಟ್ಟಿದ್ದಾರೆ. ಈ ದೂರಿನ ಆಧಾರದಲ್ಲಿ ಪೊಲೀಸರು ರಾತ್ರೋ ರಾತ್ರಿ ಹುತಾತ್ಮ ಯೋಧನ ಮನೆಗೆ ದಾಳಿ ಮಾಡಿ ಯೋಧನ ತಂದೆಯನ್ನು ಧರಧರನೆ ಪೊಲೀಸ್ ಠಾಣೆಗೆ ಎಳೆದೊಯ್ದಿದ್ದಾರೆ. ತೀವ್ರವಾಗಿ ಕಿರುಕುಳ ನೀಡಿದ್ದಾರೆ.

ಈ ಘಟನೆಯನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಸಹೋದರ ಮಾಧ್ಯಮ ಏಷ್ಯಾನೆಟ್ ನ್ಯೂಸೇಬಲ್ ವರದಿ ಮಾಡಿತ್ತು. ಇದರ ಬೆನ್ನಲ್ಲೇ ಬಿಹಾರದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಇತ್ತ ಭಾರತೀಯ ಸೇನೆಗೆ ಗಮನಕ್ಕೆ ಬಂದಿತ್ತೂ. ಹೀಗಾಗಿ ಸೇನಾಧಿಕಾರಿಗಳು ಹುತಾತ್ಮ ಯೋಧನ ಮನೆಗೆ ಭೇಟಿ ನೀಡಿದ್ದರು. ಬಳಿಕ ಅರ್ಧಕ್ಕೆ ನಿಂತಿರುವ ಹುತಾತ್ಮ ಯೋಧನ ಸ್ಮಾರಕ ನಿರ್ಮಾಣವನ್ನು ಭಾರತೀಯ ಸೇನೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದೆ. ಇಷ್ಟೇ ಅಲ್ಲ ಯೋಧನ ಕುಟುಂಬಕ್ಕೆ ಯಾರು ಕಿರುಕುಳ ನೀಡದಂತೆ ಎಚ್ಚರಿಕೆ ನೀಡಿತ್ತು.

 

ಪೊಲೀಸರ ಕಿರುಕುಳ ಬೆನ್ನಲ್ಲೇ ಹುತಾತ್ಮ ಯೋಧನ ಕುಟುಂಬದ ನೆರವಿಗೆ ಧಾವಿಸಿದ ಭಾರತೀಯ ಸೇನೆ!

ಇತ್ತ ಬಿಹಾರ ವಿಧಾಸಭೆಯಲ್ಲಿ ಪ್ರತಿಪಕ್ಷಗಳು ತೀವ್ರ ಗದ್ದಲ ಸೃಷ್ಟಿಸಿತ್ತು. ಪೊಲೀಸರ ನಡೆ ಹಾಗೂ ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು. ಈ ಘಟನೆ ಬೆನ್ನಲ್ಲೇ ರಾಜನಾಥ್ ಸಿಂಗ್ ಕರೆ ಮಾಡಿ ನಿತೀಶ್ ಕುಮಾರ್ ಜೊತೆ ಮಾತುಕತೆ ನಡೆಸಿದ್ದಾರೆ. ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲು ಸೂಚಿಸಿದ್ದಾರೆ.ಇತ್ತ ಪೊಲೀಸರು ಹಾಗೂ ಕಿರಕುಳ ನೀಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ನಿತೀಶ್ ಕುಮಾರ್ ಭರವಸೆ ನೀಡಿದ್ದಾರೆ. 

ಇದೀಗ ಹುತಾತ್ಮ ಯೋಧನ ತಂದೆಗೆ ಕಿರುಕುಳ ನೀಡಿದ ಪೊಲೀಸರು ಹಾಗೂ ನೆರಮನೆಯ ಹರಿನಾಥ್‌ಗೆ ಆತಂಕ ಶುರುವಾಗಿದೆ. ಸಣ್ಣ ಗ್ರಾಮದಲ್ಲಿನ ಸ್ಮಾರಕ ವಿವಾದಕ್ಕೆ ಭಾರತೀಯ ಸೇನೆ ಹಾಗೂ ಕೇಂದ್ರ ರಕ್ಷಣಾ ಸಚಿವರೇ ಮಧ್ಯ ಪ್ರವೇಶಿಸಿದ್ದಾರೆ. ಹೀಗಾಗಿ ಪ್ರಕರಣದ ಗಂಭೀರತೆ ಇದೀಗ ಅರಿವಾಗಿದೆ.

click me!