ಕೈಲಾಸಕ್ಕೆ ವಿಶ್ವಸಂಸ್ಥೆ ಮಾನ್ಯತೆ ಸಿಕ್ಕಿತೆಂದು ಕತೆ ಕಟ್ಟಿದ ನಿತ್ಯಾ! UN ಸಭೆಯಲ್ಲಿ ತನ್ನವರು ಭಾಗಿ ಎಂದು ಸುಳ್ಳು ಸುದ್ದಿ

By Kannadaprabha NewsFirst Published Mar 1, 2023, 9:02 AM IST
Highlights

ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಕೈಲಾಸಕ್ಕೆ ವಿಶ್ವಸಂಸ್ಥೆ ಸಭೆಯಲ್ಲಿ ಭಾಗಿಯಾಗಲು ಅವಕಾಶ ಸಿಕ್ಕಿದೆ ಎಂದು ನಿತ್ಯಾನಂದ ಸುಳ್ಳು ಪುರಾಣ ಕತೆ ಹೇಳಿದ್ದಾನೆ. ಭಾರತದಲ್ಲಿ ನಿತ್ಯಾನಂದನಿಗೆ ಕಿರುಕುಳ ಎಂದು ಸಭೆಯಲ್ಲಿ ಸುಳ್ಳು ಮಾಹಿತಿ ನೀಡಲಾಗಿದೆ. ಸಾರ್ವಜನಿಕರಿಗೆ ಮುಕ್ತವಿದ್ದ ಸಭೆಯಲ್ಲಿ ಪಾಲ್ಗೊಂಡು ನಿತ್ಯಾ ಭಕ್ತರು ಸುಳ್ಳು ಹರಡಿದ್ದಾರೆ.

ನವದೆಹಲಿ (ಮಾರ್ಚ್‌ 1, 2023): ಸದ್ಯ ವಿದೇಶಕ್ಕೆ ಪರಾರಿಯಾಗಿರುವ ಅತ್ಯಾಚಾರ ಪ್ರಕರಣದ ಆರೋಪಿ, ಸ್ವಯಂಘೋಷಿತ ಧರ್ಮಗುರು, ಬಿಡದಿ ನಿತ್ಯಾನಂದ ಆಶ್ರಮದ ನಿತ್ಯಾನಂದ ಸ್ವಾಮಿ, ತನ್ನ ‘ಯುನೈಟೆಡ್‌ ಸ್ಟೇಟ್ಸ್‌ ಆಫ್‌ ಕೈಲಾಸ’ ದೇಶಕ್ಕೆ ವಿಶ್ವಸಂಸ್ಥೆ ಸಭೆಯಲ್ಲಿ ಭಾಗಿಯಾಗುವ ಅವಕಾಶ ಕಲ್ಪಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದಾನೆ. ಈ ಮೂಲಕ ತನ್ನ ದೇಶಕ್ಕೆ ವಿಶ್ವಸಂಸ್ಥೆಯ ಮಾನ್ಯತೆ ಸಿಕ್ಕಿದೆ ಎಂದು ಜನರನ್ನು ನಂಬಿಸುವ ಯತ್ನಕ್ಕೆ ಕೈ ಹಾಕಿದ್ದಾನೆ.

ವಿಶ್ವಸಂಸ್ಥೆಯ (United Nations) ಅಂಗಸಂಸ್ಥೆಯ ಸಭೆಯೊಂದರಲ್ಲಿ ಭಾಗಿಯಾಗಿದ್ದ ನಿತ್ಯಾನಂದನ (Nityananda) ಶಿಷ್ಯೆ ವಿಜಯಪ್ರಿಯ ನಿತ್ಯಾನಂದ ಮತ್ತು ಇಯಾನ್‌ ಕುಮಾರ್‌ ಎಂಬುವವರು, ‘ನಿತ್ಯಾನಂದ ಸ್ವಾಮಿಯು, ಪುರಾತನ ಹಿಂದೂ (Hindu) ನೀತಿ ಮತ್ತು ದೇಶೀಯ ಪರಿಹಾರಗಳನ್ನು ಕೈಲಾಸ ದೇಶದಲ್ಲಿ  (Kailasa Country) ಜಾರಿಗೊಳಿಸುತ್ತಿದ್ದಾರೆ. ಈ ಮೂಲಕ ಸುಸ್ಥಿರ ಅಭಿವೃದ್ಧಿ ಕೈಗೊಂಡಿದ್ದಾರೆ. 

ಇದನ್ನು ಓದಿ: ವಿಶ್ವಸಂಸ್ಥೆಯಲ್ಲಿ ನಿತ್ಯಾನಂದ ಸಂಚಲನ, UN ಸಭೆಯಲ್ಲಿ ಕೈಲಾಸ ದೇಶದ ಪ್ರತಿನಿಧಿ ಭಾಗಿ, ಭಾರತದ ವಿರುದ್ಧ ದೂರು!

ಕೈಲಾಸ ದೇಶದಲ್ಲಿ ಎಲ್ಲರಿಗೂ ಆಹಾರ, ವಸತಿ, ಬಟ್ಟೆ, ಶಿಕ್ಷಣ, ವೈದ್ಯಕೀಯ ಸೌಲಭ್ಯಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಆದರೆ ಇದೇ ಕಾರಣಕ್ಕಾಗಿಯೇ ನಿತ್ಯಾನಂದನ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿ ಕಿರುಕುಳ ನೀಡಲಾಯಿತು. ಅವರಿಗೆ ಬೋಧನೆ ಮಾಡಲು ಅವಕಾಶ ನಿರಾಕರಿಸಿದ ಕಾರಣ ಅವರು ತಾವು ಹುಟ್ಟಿದ ದೇಶ ಬಿಡುವಂತಾಯಿತು’ ಎಂದು ಸಭೆಯ ಮುಂದೆ ವಾದಿಸಿದ್ದಾರೆ. ಈ ಕುರಿತ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ (Social Media) ಪ್ರಚಾರ ಮಾಡಿರುವ ನಿತ್ಯಾನಂದ ಹಾಗೂ ಆತನ ಶಿಷ್ಯರು, ಇದು ವಿಶ್ವಸಂಸ್ಥೆಯ ಸಭೆ (United Nations Meeting) ಎಂದು ಬಿಂಬಿಸುವ ಯತ್ನ ಮಾಡಿದ್ದಾರೆ.

ವಾಸ್ತವ ಏನು?:
ಆದರೆ ಇದು ವಾಸ್ತವವಾಗಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಥವಾ ಇನ್ಯಾವುದೇ ಸದಸ್ಯ ದೇಶಗಳ ಸಭೆಯಲ್ಲ. ಬದಲಾಗಿ ವಿಶ್ವಸಂಸ್ಥೆ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಕುರಿತಾದ ಸಮಿತಿಯು ಇತ್ತೀಚೆಗೆ ಜಿನೇವಾದಲ್ಲಿ ಹಮ್ಮಿಕೊಂಡಿದ್ದ ಸುಸ್ಥಿರ ಅಭಿವೃದ್ಧಿ ಕುರಿತಾದ ಸಾಮಾನ್ಯ ಸಮಾಲೋಚನಾ ಸಭೆಯಾಗಿತ್ತು. ಇದರಲ್ಲಿ ಸಾರ್ವಜನಿಕರಿಗೂ ಭಾಗಿಯಾಗಲು ಮುಕ್ತ ಅವಕಾಶ ನೀಡಲಾಗಿತ್ತು. ಈ ಸಭೆಯಲ್ಲಿ ಭಾಗಿಯಾಗಿದ್ದ ನಿತ್ಯಾನಂದನ ಶಿಷ್ಯರು, ‘ಇದನ್ನೇ ವಿಶ್ವಸಂಸ್ಥೆ ಸಭೆ, ಇದರಲ್ಲಿ ಭಾಗಿಯಾಗಲು ಅವಕಾಶ ಕಲ್ಪಿಸುವ ಮೂಲಕ ನಮ್ಮ ಕೈಲಾಸ ದೇಶಕ್ಕೆ ಮಾನ್ಯತೆ ನೀಡಲಾಗಿದೆ’ ಎಂದು ತಪ್ಪು ಮಾಹಿತಿ ರವಾನಿಸುವ ಕೆಲಸ ಮಾಡಿದ್ದಾರೆ.

ಇದನ್ನೂ ಓದಿ: ಇನ್ನು ಮುಂದೆ ಕೈಲಾಸಕ್ಕೆ ಹೋದ್ರೂ ಕೆಲಸ ಗ್ಯಾರಂಟಿ!

click me!