ಪಠಾಣ್ ಚಿತ್ರದ ಮೊದಲ ಹಾಡು 'ಬೇಶರಮ್ ರಂಗ್..' ಇತ್ತೀಚೆಗೆ ಬಿಡುಗಡೆಯಾಗಿತ್ತು. ಇದರಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಟ್ಟೆ ಧರಿಸಿ ಹಾಟ್ ದೃಶ್ಯದಲ್ಲಿ ಕಾಣಿಸಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ನೇರವಾಗಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ನವದೆಹಲಿ (ಡಿ.14): ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಚಿತ್ರ ಬಿಡುಗಡೆಗೆ ಮುನ್ನವೇ ವಿವಾದಗಳಲ್ಲಿ ಸಿಲುಕಿಕೊಂಡಿದೆ. ಇದರ ಟೀಸರ್ ಬುಧವಾರ ಬಿಡುಗಡೆಯಾಗಿದೆ. ಇದರ ಮೊದಲ ಹಾಡು 'ಬೇಷರಮ್ ರಂಗ್...' ಕೂಡ ಬಿಡುಗಡೆಯಾಗಿದೆ. ಇದರಲ್ಲಿ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಸಾಕಷ್ಟು ಹಾಟ್ ಹಾಗೂ ಬೋಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ದೃಶ್ಯದಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ರೀತಿಯ ಬಟ್ಟೆ ತೊಟ್ಟು ಹಾಟ್ ದೃಶ್ಯದಲ್ಲಿ ಕಾಣಿಸಿಕೊಂಡಿರುವುದು ಈಗ ಹಿಂದುಗಳ ಕೆಂಗಣ್ಣಿಗೆ ಗುರಿಯಾಗಿದ್ದು, ಸಿನಿಮಾಗೆ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿದೆ. ಈ ಕುರಿತಾಗಿ ಮಾತನಾಡಿರುವ ಮಧ್ಯಪ್ರದೇಶ ಗೃಹ ಸಚಿವ ಡಾ.ನರೋತ್ತಮ್ ಮಿಶ್ರಾ, ಪಠಾಣ್ ಚಿತ್ರದ ಹಾಡಿನಲ್ಲಿ ನಟಿಯ ವೇಷಭೂಷಣ ಮತ್ತು ದೃಶ್ಯಗಳ ಬಗ್ಗೆ ತಕ್ಷಣವೇ ನಿರ್ದೇಶಕರು ಹಾಗೂ ನಿರ್ಮಾಪಕರು ಗಮನ ನೀಡಬೇಕು. ಆ ಬಳಿಕವೇ ರಾಜ್ಯದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಅನುಮತಿ ನೀಡಬೇಕೇ ಇಲ್ಲವೇ ಎನ್ನುವುದನ್ನು ತೀರ್ಮಾನ ಮಾಡಲಿದ್ದೇವೆ. ಮಧ್ಯಪ್ರದೇಶದಲ್ಲಿ ಬಿಜೆಪಿ ನಾಯಕರು ಮಾತ್ರವಲ್ಲದೆ, ವಿರೋಧ ಪಕ್ಷದ ನಾಯಕರು ಕೂಡ ಚಿತ್ರದಲ್ಲಿನ ಕೆಲ ದೃಶ್ಯಗಳ ಬಗ್ಗೆ ಆಕ್ಷೇಪ ಎತ್ತಿದ್ದಾರೆ.
ಚಿತ್ರದ ಹಾಡಿನಲ್ಲಿ ಬಳಸಿರುವ ಕಾಸ್ಟ್ಯೂಮ್ ಮೇಲ್ನೋಟಕ್ಕೆ ಅತ್ಯಂತ ಆಕ್ಷೇಪಾರ್ಹವಾಗಿದೆ ಎಂದು ಮಿಶ್ರಾ ಹೇಳಿದ್ದಾರೆ. ಭ್ರಷ್ಟ ಮನಸ್ಥಿತಿಯಲ್ಲಿ ಈ ಹಾಡನ್ನು ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಹೇಗಾದರೂ, ದೀಪಿಕಾ ಪಡುಕೋಣೆ ತುಕ್ಡೆ ತುಕ್ಡೆ ಗ್ಯಾಂಗ್ ಬೆಂಬಲಿಗರಾಗಿದ್ದಾರೆ, ಆದ್ದರಿಂದ ಈ ದೃಶ್ಯಗಳನ್ನು ಕೂಡಲೇ ಸರಿಪಡಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.
ಸೆನ್ಸಾರ್ ಮಂಡಳಿ ಅನುಮತಿ ನೀಡಿದ್ದು ಹೇಗೆ?: ವಿರೋಧ ಪಕ್ಷದ ನಾಯಕ ಗೋವಿಂದ್ ಸಿಂಗ್ ಕೂಡ ಚಿತ್ರದ ದೃಶ್ಯಗಳ ಬಗ್ಗೆ ಕಿಡಿಕಾರಿದ್ದಾರೆ. ಚಿತ್ರದ ದೃಶ್ಯವು ಅಸಭ್ಯ ಮತ್ತು ಕೊಳಕು. ಭಾರತೀಯ ಸಂಸ್ಕೃತಿ ಇದನ್ನು ಒಪ್ಪಲು ಸಾಧ್ಯವಿಲ್ಲ. ಈ ತರಹದ ಅರೆನಗ್ನ ದೃಶ್ಯಗಳು ಯುವಜನತೆಯಲ್ಲಿ ಮೂಡಿಬರುವುದು ನಮ್ಮ ದೇಶದ ಸಂಪ್ರದಾಯವಲ್ಲ. ಉದ್ದೇಶಪೂರ್ವಕ ಷಡ್ಯಂತ್ರದ ಅಡಿಯಲ್ಲಿ ಇದನ್ನು ಮಾಡಲಾಗುತ್ತಿದೆ. ನಾನು ಅದನ್ನು ಖಂಡಿಸುತ್ತೇನೆ. ದುಡ್ಡು ಕೊಟ್ಟರೆ ಬಿಜೆಪಿ ಸರ್ಕಾರದಲ್ಲಿ ಏನು ಬೇಕಾದರೂ ಆಗುತ್ತದೆ. ಇಂಥ ದೃಶ್ಯಗಳಿರುವ ಚಿತ್ರವನ್ನು ಸೆನ್ಸಾರ್ ಮಂಡಳಿ ಒಪ್ಪಿದ್ದು ಹೇಗೆ. ಇದರಿಂದ ಅರ್ಥವಾಗುವುದು ಏನೆಂದರೆ, ಸಂಸ್ಕೃತಿ ಇರುವುದು ಬಿಜೆಪಿಯವರ ಭಾಷಣದಲ್ಲಿ ಮಾತ್ರ ಎನ್ನುವುದು ಎಂದು ಹೇಳಿದ್ದಾರೆ.
ವೈಷ್ಣೋದೇವಿ ದೇವಸ್ಥಾನಕ್ಕೆ ಭೇಟಿ ನೀಡಿದ ಶಾರುಖ್: ಮುಖ ಮುಚ್ಚಿಕೊಂಡು ಬಂದಿದ್ದೇಕೆ?
ಇಂಥ ದೃಶ್ಯಗಳಿರುವ ಚಿತ್ರಗಳಿಗೆ ಸೆನ್ಸಾರ್ ಮಂಡಳಿ ಒಪ್ಪಿಗೆ ನೀಡಿದ್ದು ಏಕೆ? ಸರ್ಕಾರದ ಪ್ರತಿನಿಧಿಗಳು ಸೆನ್ಸಾರ್ ಮಂಡಳಿಯಲ್ಲಿ ಇರೋದಿಲ್ಲವೇ? ಮೊದಲಿಗೆ ಹಣ ತೆಗೆದುಕೊಂಡು ಇಂಥ ಚಿತ್ರಗಳಿಗೆ ಅನುಮತಿ ನೀಡುತ್ತಾರೆ. ಬಳಿಕ ಇಡೀ ದೇಶದ ವಾತಾವರಣ ಹಾಳಾಗುವ ಸೂಚನೆ ಸಿಕ್ಕ ಬಳಿಕ ಇದನ್ನು ಖಂಡಿಸಲು ಹೋಗುತ್ತಾರೆ. ಚಿತ್ರದಲ್ಲಿ ಕೇಸರಿ ಬಣ್ಣವನ್ನು ಕೆಟ್ಟದಾಗಿ ತೋರಿಸಿದ್ದಾರೆ. ಇದು ಖಂಡಿತಾ ತಪ್ಪು. ಚಿತ್ರದಲ್ಲಿ ಕೇಸರಿ ಬಟ್ಟೆ ಹಾಕಿಕೊಂಡು ತೋರಿಸಿರುವ ಆಕ್ಷೇಪಾರ್ಹ ದೃಶ್ಯಗಳನ್ನು ಈ ಕೂಡಲೇ ತೆಗೆದುಹಾಕಬೇಕು ಎಂದು ಆಗ್ರಹಿಸಿದ್ದಾರೆ.
Besharam Rang; ಶಾರುಖ್ ಖಾನ್ 'ಪಠಾಣ್' ಸಾಂಗ್ ರಿಲೀಸ್, ದೀಪಿಕಾ ಸಖತ್ ಹಾಟ್ ಎಂದ ಫ್ಯಾನ್ಸ್
ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಕಾಣಿಸಿಕೊಂಡಿರುವ ಹಾಡಿಗೆ ಎರಡೇ ದಿನದಲ್ಲಿ 3 ಕೋಟಿ 20 ಲಕ್ಷ ವೀಕ್ಷಣೆ ಸಿಕ್ಕಿದೆ. ಈ ಹಾಡಿನಲ್ಲಿ ದೀಪಿಕಾ ಪಡುಕೋಣೆ ಆಕರ್ಷಕವಾಗಿ ಕಾಣಿಸಿಕೊಂಡಿದ್ದಾರೆ. ಅದ್ಭುತವಾಗಿ ನೃತ್ಯ ಕೂಡ ಮಾಡಿದ್ದಾರೆ. ಇನ್ನೊಂದೆಡೆ ಶಾರುಖ್ ಖಾನ್ ಲುಕ್ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿದೆ. ಈ ಹಾಡಿಗೆ ಶಿಲ್ಪಾ ರಾವ್ ಧ್ವನಿ ನೀಡಿದ್ದು, ವಿಶಾಲ್-ಶೇಖರ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡಿಗೆ ವೈಭವಿ ಮರ್ಚೆಂಟ್ ನೃತ್ಯ ಸಂಯೋಜನೆ ಮಾಡಿದ್ದಾರೆ. ಬಿಡುಗಡೆಯಾದಾಗಿನಿಂದ, ಈ ಹಾಡು ಹಲವು ರೀತಿಯಲ್ಲಿ ಸುದ್ದಿಯಲ್ಲಿದೆ.