ಸೋನಿಯಾ, ರಾಹುಲ್‌ ವಿರುದ್ಧ ಮಾತನಾಡಿದ್ದಕ್ಕೆ ಮಗಳು ಟಾರ್ಗೆಟ್: ಸ್ಮೃತಿ ಇರಾನಿ

By BK AshwinFirst Published Jul 23, 2022, 6:03 PM IST
Highlights

ಸ್ಮೃತಿ ಇರಾನಿ ಪುತ್ರಿ ಅಕ್ರಮ ಲೈಸೆನ್ಸ್‌ ಇಟ್ಟುಕೊಂಡು ಬಾರ್‌ ನಡೆಸುತ್ತಿದ್ದಾರೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ಕೇಂದ್ರ ಸಚಿವೆ ಸುದ್ದಿಗೋಷ್ಠಿ ನಡೆಸಿ ತಿರುಗೇಟು ನೀಡಿದ್ದಾರೆ.

ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರಿ ಅಕ್ರಮ ಲೈಸೆನ್ಸ್‌ ಪಡೆದು ಬಾರ್‌ ನಡೆಸುತ್ತಿದ್ದಾರೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ಸ್ಮೃತಿ ಇರಾನಿ ಶನಿವಾರ ತಿರುಗೇಟು ನೀಡಿದ್ದಾರೆ. ನನ್ನ ಮಗಳು ಕಾಲೇಜು ವಿದ್ಯಾರ್ಥಿನಿ, ಬಾರ್‌ ನಡೆಸುವರಲ್ಲ. ರಾಹುಲ್‌ ಗಾಂಧಿ ವಿರುದ್ಧ ಲೋಕಸಭೆಯಲ್ಲಿ ತಾಯಿ ಸ್ಪರ್ಧೆ ಮಾಡಿರುವುದು ಹಾಗೂ ಸೋನಿಯಾ, ರಾಹುಲ್‌ ಲೂಟಿ ಮಾಡಿರುವ ಬಗ್ಗೆ ನಾನು ಮಾತನಾಡಿರುವುದೇ ನನ್ನ ಮಗಳು ಮಾಡಿರುವ ತಪ್ಪು ಎಂದು ಕೇಂದ್ರ ಸಚಿವೆ ವಾಗ್ದಾಳಿ ನಡೆಸಿದ್ದಾರೆ. 

ನ್ಯಾಷನಲ್‌ ಹೆರಾಲ್ಡ್‌ ಕೇಸ್‌ನಲ್ಲಿ ಸೋನಿಯಾ ಹಾಗೂ ರಾಹುಲ್‌ ಗಾಂಧಿ 5 ಸಾವಿರ ಕೋಟಿ ರೂ. ಲೂಟಿ ಮಾಡಿರುವ ಬಗ್ಗೆ ನನ್ನ ನಿಲುವಿನ ಹಿನ್ನೆಲೆ ಕಾಲೇಜು ವಿದ್ಯಾರ್ಥಿನಿಯಾದ ನನ್ನ ಮಗಳ ವಿರುದ್ಧ ಆರೋಪ ಮಾಡಲಾಗುತ್ತಿದೆ ಎಂದು ಕೇಂದ್ರ ಸಚಿವೆ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದ್ದಾರೆ. ನನ್ನ ಮಗಳು ಯಾವುದೇ ತಪ್ಪು ಮಾಡಿದ್ದರೂ, ಅದರ ವಿರುದ್ಧ ಸಾಕ್ಷಿ ನೀಡುವಂತೆಯೂ ಸ್ಮೃತಿ ಇರಾನಿ ಸುದ್ದಿಗೋಷ್ಠಿ ನಡೆಸುವ ಮೂಲಕ ಕಾಂಗ್ರೆಸ್‌ಗೆ ಸವಾಲು ಹಾಕಿದ್ದಾರೆ. 

‘ಗೋವಾದಲ್ಲಿ ಸ್ಮೃತಿ ಇರಾನಿ ಪುತ್ರಿಯಿಂದ ಅಕ್ರಮ ಬಾರ್‌..?’

ನನ್ನ ಮಗಳಿಗೆ 18 ವರ್ಷವಾಗಿದ್ದು, ಆಕೆ ಕಾಲೇಜಿನಲ್ಲಿ ಮೊದಲ ವರ್ಷದಲ್ಲಿ ಓದುತ್ತಿದ್ದಾರೆ, ಅದರ ಬದಲು ಯಾವುದೇ ಬಾರ್‌ ನಡೆಸುತ್ತಿಲ್ಲ ಎಂದೂ ಸಂಸದೆ ತಿರುಗೇಟು ನೀಡಿದ್ದಾರೆ. ಅಲ್ಲದೆ, ರಾಹುಲ್‌ ಹಾಗೂ ಸೋನಿಯಾ 5 ಸಾವಿರ ಕೋಟಿ ರೂ. ಲೂಟಿ ಮಾಡಿರುವ ಬಗ್ಗೆ ತಾಯಿ ಮಾತನಾಡಿರುವುದು ಹಾಗೂ ರಾಹುಲ್‌ ಗಾಂಧಿ ವಿರುದ್ಧ 2014 ಹಾಗೂ 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರುವುದೇ ನನ್ನ ಮಗಳು ಮಾಡಿರುವ ತಪ್ಪು ಎಂದೂ ಸ್ಮೃತಿ ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ರಾಹುಲ್‌ ಗಾಂಧಿಗೆ ಸವಾಲು ಹಾಕಿದ ಸ್ಮೃತಿ ಇರಾನಿ
2019ರಲ್ಲಿ ಅಮೇಥಿಯಲ್ಲಿ ರಾಹುಲ್‌ ಗಾಂಧಿ ವಿರುದ್ಧ ಸ್ಪರ್ಧೆ ಮಾಡಿದ್ದ ಸ್ಮೃತಿ ಇರಾನಿ ಕಾಂಗ್ರೆಸ್‌ ನಾಯಕನ ವಿರುದ್ಧ ಗೆಲುವು ಸಾಧಿಸಿದ್ದರು. ಇದೇ ರೀತಿ, 2024ರಲ್ಲಿ ಮತ್ತೊಮ್ಮೆ ರಾಹುಲ್‌ ಗಾಂಧಿ ಅಮೇಥಿಯಲ್ಲಿ ಸ್ಪರ್ಧೆ ಮಾಡಲಿ. ನಾನು ಮತ್ತೆ ಅವರನ್ನು ಸೋಲಿಸಿ ಮನೆಗೆ ಕಳಿಸುತ್ತೇನೆ ಎಂದೂ ಸಂಸದೆ ಸವಾಲು ಹಾಕಿದ್ದಾರೆ. ಇನ್ನು, ನನ್ನ ಮಗಳ ವಿರುದ್ಧದ ಆರೋಪಕ್ಕೆ ನಾನು ಕಾನೂನು ಹಾಗೂ ಜನತಾ ನ್ಯಾಯಾಲಯದಲ್ಲಿ ಉತ್ತರ ಪಡೆದುಕೊಳ್ಳುತ್ತೇನೆ ಎಂದೂ ಪ್ರತಿಕ್ರಿಯೆ ನೀಡಿದ್ದಾರೆ.   

ರಾಹುಲ್‌ ಕ್ಷೇತ್ರ ವಯನಾಡ್‌ಗೆ ಸಚಿವೆ ಸ್ಮೃತಿ ಇರಾನಿ: ಸಂಚಲನ

ಕಾಂಗ್ರೆಸ್‌ ಆರೋಪವೇನು..?
ಕೇಂದ್ರ ಸಚಿವೆ ಸ್ಮೃತಿ ಇರಾನಿ ಕುಟುಂಬದ ವಿರುದ್ಧ ಗಂಭೀರ ಭ್ರಷ್ಟಾಚಾರ ಆರೋಪಗಳಿವೆ. ಅವರ ಪುತ್ರಿ ಗೋವಾದಲ್ಲಿ ರೆಸ್ಟೋರೆಂಟ್‌ ನಡೆಸುತ್ತಿದ್ದು, ಅದರಲ್ಲಿ ಅಕ್ರಮ ಲೈಸೆನ್ಸ್‌ ಇಟ್ಟುಕೊಂಡು ಬಾರ್‌ ಅನ್ನೂ ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದ್ದರು. 

ಹಾಗೂ, ಆಕೆ ಮೃತ ವ್ಯಕ್ತಿಯ ಹೆಸರಿನಲ್ಲಿ ಬಾರ್‌ ಲೈಸೆನ್ಸ್‌ ಇಟ್ಟುಕೊಂಡಿದ್ದಾರೆ. ಆ ಲೈಸೆನ್ಸ್‌ ಅನ್ನು ಜೂನ್‌ 2022ರಲ್ಲಿ ಗೋವಾದಲ್ಲಿ ಪಡೆಯಲಾಗಿದೆ. ಅದರೆ, ಆ ಹೆಸರಿನ ವ್ಯಕ್ತಿ ಮೇ 2021ರಲ್ಲೇ ಮೃತಪಟ್ಟಿದ್ದಾರೆ. ಅವರು ಮೃತಪಟ್ಟ 13 ತಿಂಗಳ ಬಳಿಕ ಲೈಸೆನ್ಸ್‌ ತೆಗೆದುಕೊಂಡಿರುವುದು ಅಕ್ರಮವಾಗಿ’’ ಎಂದೂ ಕಾಂಗ್ರೆಸ್ ವಕ್ತಾರ ಪವನ್‌ ಖೇರಾ ಹೇಳಿಕೊಂಡಿದ್ದಾರೆ.

ಹಾಗೂ, ಗೋವಾದ ನಿಯಮಗಳ ಪ್ರಕಾರ ರೆಸ್ಟೋರೆಂಟ್‌ವೊಂದಕ್ಕೆ ಒಂದು ಬಾರ್‌ ಲೈಸೆನ್ಸ್ ನೀಡಲು ಮಾತ್ರ ಸಾಧ್ಯವಿದೆ. ಆದರೆ, ಈ ರೆಸ್ಟೋರೆಂಟ್‌ಗೆ ಎರಡು ಬಾರ್‌ ಲೈಸೆನ್ಸ್‌ಗಳನ್ನು ನೀಡಲಾಗಿದೆ. ಈ ಹಿನ್ನೆಲೆ ಸ್ಮೃತಿ ಇರಾನಿಯನ್ನು ಸಚಿವೆ ಸ್ಥಾನದಿಂದ ಪ್ರಧಾನಿ ಮೋದಿ ಕಿತ್ತು ಹಾಕಬೇಕು ಎಂದೂ ಆಗ್ರಹಿಸಿದ್ದಾರೆ.

ಅಲ್ಲದೆ, ರಾಹುಲ್‌ ಗಾಂಧಿ ವಿರುದ್ಧ ಆರೋಪಗಳನ್ನು ಮಾಡುವ ಸ್ಮೃತಿ ಇರಾನಿಗೆ ಅರಿವಿಲ್ಲದೆ ಅವರ ಪುತ್ರಿ ಈ ರೀತಿ ಮಾಡುತ್ತಿದ್ದಾರಾ ಎಂದೂ ಕಾಂಗ್ರೆಸ್‌ ವಕ್ತಾರ ಪವನ್‌ ಖೇರಾ ಮಾಧ್ಯಮದವರ ಎದುರು ಮಾತನಾಡಿದ್ದರು. ಕೈ ಪಕ್ಷದ ಈ ಆರೋಪಗಳಿಗೆ ಈಗ ಕೇಂದ್ರ ಸಚಿವೆ ಸ್ಮೃತಿ ಇರಾನಿ ತಿರುಗೇಟು ನೀಡಿದ್ದು, ಈ ಹಿನ್ನೆಲೆ ಬಾರ್‌ ವಿಚಾರಕ್ಕೆ ಬಿಜೆಪಿ - ಕಾಂಗ್ರೆಸ್‌ ನಡುವಿನ ಗಲಾಟೆ ಮತ್ತೊಂದು ಹಂತಕ್ಕೆ ತಿರುಗಿದೆ.

click me!