ಕಸ ಎಸೆಯುತ್ತಿದ್ದ ಪಂಜಾಬ್‌ ಸಿಎಂ ನಿವಾಸಕ್ಕೆ 10 ಸಾವಿರ ದಂಡ..!

By BK AshwinFirst Published Jul 23, 2022, 5:03 PM IST
Highlights

ಪಂಜಾಬ್‌ ಸಿಎಂ ಅವರ ಚಂಡೀಗಢ ನಿವಾಸದಿಂದ ಕಸ ಹಾಕಿರುವ ಬಗ್ಗೆ ಹಲವು ದೂರುಗಳು ಕೇಳಿಬಂದ ಹಿನ್ನೆಲೆ 10 ಸಾವಿರ ರೂ. ದಂಡ ಮೊತ್ತದ ಚಲನ್‌ ಅನ್ನು ನೀಡಲಾಗಿದೆ ಎಂದು ಬಿಜೆಪಿ ಕೌನ್ಸಿಲರ್‌ ತಿಳಿಸಿದ್ದಾರೆ.

ನಗರಗಳಲ್ಲಿ ಕಸ ಎಸೆದರೆ ಸಾಮಾನ್ಯ ಜನತೆಗೆ ದಂಡ ಹಾಕುವುದು ಮಾಮೂಲಿ ಸಂಗತಿಯೇ. ಆದರೆ, ಚಂಡೀಗಢದಲ್ಲಿ ಪಂಜಾಬ್‌ ಸಿಎಂ ನಿವಾಸಕ್ಕೆ ದಂಡ ಹಾಕಲಾಗಿದೆ. ಹೌದು, ಕಸ ಎಸೆಯುತ್ತಿದ್ದಾರೆಂದು ಆರೋಪಿಸಿ ಪಂಜಾಬ್‌ ಸಿಎಂ ನಿವಾಸಕ್ಕೆ ಬರೋಬ್ಬರಿ 10 ಸಾವಿರ ರೂ. ದಂಡ ವಿಧಿಸಲಾಗಿದೆ. ಅದ್ಯಾರಪ್ಪಾ ಅಧಿಕಾರಿ ಸಿಎಂ ನಿವಾಸಕ್ಕೇ ದಂಡ ಕಳಿಸಿದವರು ಅಂತೀರಾ..? ಮುಂದೆ ಓದಿ..

ಕಸ ಹಾಕುತ್ತಿದ್ದ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬರುತ್ತಿದ್ದ ಹಿನ್ನೆಲೆ ಚಂಡೀಗಢ ನಗರ ಪಾಲಿಕೆ ಶನಿವಾರ ಬೆಳಗ್ಗೆ 10 ಸಾವಿರ ರೂ. ದಂಡದ ಚಲನ್‌ ಅನ್ನು ನೀಡಿದೆಯಂತೆ. ಅಂದಹಾಗೆ, ಈ ಚಲನ್‌ ನೀಡಿರುವುದು ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಹೆಸರಿನಲ್ಲಿ ಅಲ್ಲ. ಬದಲಾಗಿ ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಬೆಟಾಲಿಯನ್‌ ಡೆಪ್ಯುಟಿ ಸೂಪರಿಟೆಂಡೆಂಟ್‌ ಆಫ್‌ ಪೊಲೀಸ್‌ ಹರ್ಜಿಂದರ್‌ ಸಿಂಗ್ ಹೆಸರಿನಲ್ಲಿ ಎಂದು ತಿಳಿದುಬಂದಿದೆ. ಮನೆ ನಂಬರ್ - 7, ಸೆಕ್ಟರ್ -  2, ಚಂಡೀಗಢ ಎಂಬ ಮನೆಯ ವಿಳಾಸಕ್ಕೆ ಈ 10 ಸಾವಿರ ರೂ. ದಂಡ ಮೊತ್ತದ ಚಲನ್‌ ಅನ್ನು ನೀಡಲಾಗಿದೆ.

ಜಲಾಶಯದ 'ಪವಿತ್ರ ನೀರು' ಕುಡಿದ ಬಳಿಕ ಅಸ್ವಸ್ಥರಾದ ಪಂಜಾಬ್‌ ಸಿಎಂ..!

ಬಿಜೆಪಿ ಕೌನ್ಸಿಲರ್‌ನಿಂದ ಸಮನ್ಸ್‌ ಸಲ್ಲಿಕೆ..!
ಪಂಜಾಬ್‌ ಮುಖ್ಯಮಂತ್ರಿ ನಿವಾಸಕ್ಕೆ ಚಲನ್ ಕಳಿಸಿರುವ ಬಗ್ಗೆ ಸ್ಥಳೀಯ ಬಿಜೆಪಿ ಕೌನ್ಸಿಲರ್‌ ಮಹೇಶ್‌ ಇಂದರ್‌ ಸಿಂಗ್ ಸಿಧು ಪ್ರತಿಕ್ರಿಯೆ ನೀಡಿದ್ದಾರೆ. ಮನೆ ನಂಬರ್ - 7ರ ಬಳಿ ರಸ್ತೆ ಬದಿಯಲ್ಲಿ ಸಿಎಂ ನಿವಾಸದ ಸಿಬ್ಬಂದಿ ಪ್ರತಿದಿನ ತ್ಯಾಜ್ಯವನ್ನು ಎಸೆಯುತ್ತಿದ್ದಾರೆಂದು ಕಳೆದ 1 ವರ್ಷದಿಂದ ನನಗೆ ದೂರು ಕೇಳಿ ಬರುತ್ತಿತ್ತು. ಅಲ್ಲದೆ, ಮನೆಯ ಹೊರಗೆ ಕಸ ಎಸೆಯಬೇಡಿ ಎಂದು ಮಹಾನಗರ ಪಾಲಿಕೆಯ ಸಿಬ್ಬಂದಿ ಮನವಿ ಮಾಡಿಕೊಂಡಿದ್ದರು. ಆದರೆ, ಕಸ ಎಸೆಯುವುದು ಮಾತ್ರ ನಿಂತಿರಲಿಲ್ಲ. ಈ ಹಿನ್ನೆಲೆ ಚಲನ್‌ ಅನ್ನು ಕಳಿಸಲಾಗಿದೆ ಎಂದು ಮಹೇಶ್‌ ಇಂದರ್‌ ಸಿಂಗ್ ಹೇಳಿದ್ದಾರೆ.

44, 45, 6 and 7 ಮನೆ ನಂಬರ್‌ಗಳು ಪಂಜಾಬ್‌ ಮುಖ್ಯಮಂತ್ರಿಯ ನಿವಾಸದ ಭಾಗಗಳು ಎಂದೂ ಸ್ಥಳೀಯ ಬಿಜೆಪಿ ಕೌನ್ಸಿಲರ್‌ ಹೇಳಿದ್ದಾರೆ.          
     
‘’ಪಂಜಾಬ್‌ ಸಿಎಂ ನಿವಾಸದ ಸಿಬ್ಬಂದಿ ಹಾಗೂ ಅಲ್ಲಿಗೆ ಭೇಟಿ ನೀಡುವವರು ಕಸ ಹಾಕುತ್ತಿರುವ ಬಗ್ಗೆ ಸೆಕ್ಟರ್ 2 ನಿವಾಸಿಗಳು ಆಗಾಗ್ಗೆ ನನಗೆ ದೂರು ನೀಡುತ್ತಿದ್ದರು. ನಂತರ, ನಮ್ಮ ಪೌರ ಕಾರ್ಮಿಕರು ಕಸ ಹಾಕದಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದರು. ಜತೆಗೆ ಎಚ್ಚರಿಕೆಯನ್ನೂ ನೀಡಿದ್ದರು. ಆದರೂ ಸಹ ತ್ಯಾಜ್ಯ ಎಸೆಯುವುದು ಮುಂದುವರಿದಿತ್ತು. ಈ ಹಿನ್ನೆಲೆ, ಈ ಚಲನ್‌ ನೀಡಲಾಗಿದೆ’’ ಎಂದೂ ಸಿಧು ಅವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ಪಂಜಾಬ್‌ ಸಿಎಂ ಭಗವಂತ್‌ ಮಾನ್‌ಗೆ ಅನಾರೋಗ್ಯ: ದೆಹಲಿಯ ಆಸ್ಪತ್ರೆಗೆ ದಾಖಲು

ಕಲುಷಿತ ನೀರು ಕುಡಿದು ಸುದ್ದಿಯಾಗಿದ್ದ ಸಿಎಂ..!
ಇತ್ತೀಚೆಗಷ್ಟೇ ಕಾಲಾ ಬೇನಿ ಜಲಾಶಯದ ನೀರು ಕುಡಿದು ಪಂಜಾಬ್‌ ಮುಖ್ಯಮಂತ್ರಿ ಭಗವಂತ ಮಾನ್‌ ಅಸ್ವಸ್ಥರಾಗಿದ್ದರು ಎಂಬ ವರದಿಗಳು ಕೇಳಿಬಂದಿದ್ದವು. ಈಗ ಸಿಎಂ ನಿವಾಸದಿಂದಲೇ ಕಸವನ್ನು ಎಸೆಯುತ್ತಿರುವ ಬಗ್ಗೆ ದೂರು ಕೇಳಿಬಂದಿದ್ದು, ಒಟ್ಟಾರೆ ಪಂಜಾಬ್‌ನ ಆಪ್‌ ಪಕ್ಷದ ಮುಖ್ಯಮಂತ್ರಿ ಬೇರೆ ಬೇರೆ ಕಾರಣಗಳಿಗೆ ಸುದ್ದಿಯಲ್ಲಿದ್ದಾರೆ. ಜಲಾಶಯದ ನೀರು ಕುಡಿದ ಎರಡು ದಿನಗಳ ಬಳಿಕ ಅಸ್ವಸ್ಥರಾಗಿದ್ದ ಸಿಎಂ ಭಗವಂತ ಮಾನ್‌ರನ್ನು ಪಂಜಾಬ್‌ನಿಂದ ದೆಹಲಿಗೆ ಏರ್‌ಲಿಫ್ಟ್‌ ಮಾಡಲಾಗಿತ್ತು. ಬಳಿಕ ಅವರು ಇಂದ್ರಪ್ರಸ್ಥ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು. ಗುರುವಾರವೇ ಅವರು ಡಿಸ್ಚಾರ್ಜ್‌ ಆಗಿದ್ದಾರೆ ಎಂದು ಎಎಪಿ ನಾಯಕರು ತಿಳಿಸಿದ್ದಾರೆ. ತೀವ್ರ ಹೊಟ್ಟೆನೋವಿನಿಂದ ಸಿಎಂ ಬಳಲುತ್ತಿದ್ದರು ಎಂದೂ ತಿಳಿದುಬಂದಿತ್ತು.

click me!