
ಸಾಮಾನ್ಯವಾಗಿ ನೀವು ಮನುಷ್ಯರು ಗೊರಕೆ ಹೊಡೆಯುವುದನ್ನು ನೋಡಿರುತ್ತೀರಿ. ಕೆಲವರ ಗೊರಕೆ ಸದ್ದಿಗೆ ನಿದ್ದೆ ಮಾಡುವವರು ಕೂಡ ಎದ್ದು ಕುಳಿತುಕೊಳ್ಳುತ್ತಾರೆ. ಆದರೆ ಪುಟಾಣಿ ಆನೆ ಮರಿ ಗೊರಕೆ ಹೊಡೆಯುವುದನ್ನು ನೀವು ನೋಡಿದ್ದೀರಾ ಇಲ್ಲೊಂದು ಆನೆಮರಿ ಆಳವಾಗಿ ನಿದ್ದೆಗೆ ಜಾರಿದ್ದು, ಅದರ ಗೊರಕೆ ಸದ್ದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ.
ಥೈಲ್ಯಾಂಡ್‌ನ ಆನೆ ಮರಿ ಗೊರಕೆ ವೀಡಿಯೋ ಭಾರಿ ವೈರಲ್:
wildliferescuers ಎಂಬ ಇನ್ಸ್ಟಾ ಪೇಜ್‌ನಿಂದ ಈ ವೀಡಿಯೋವನ್ನು ಪೋಸ್ಟ್ ಮಾಡಲಾಗಿದ್ದು, ಹೀಗೆ ಬರೆದುಕೊಂಡಿದ್ದಾರೆ. ರಕ್ಷಿಸಲ್ಪಟ್ಟ ಮರಿ ಆನೆಯೊಂದು ಥೈಲ್ಯಾಂಡ್‌ನ ಆನೆ ಅಭಯಾರಣ್ಯದಲ್ಲಿ, ನಿದ್ರೆಯ ಸಮಯದಲ್ಲಿ ಶಾಂತಿಯುತವಾಗಿ ಗೊರಕೆ ಹೊಡೆಯುವುದನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಮಾನವ ಶಿಶುಗಳಂತೆಯೇ, ಚಿಕ್ಕ ಆನೆಗಳು ಆಳವಾದ, ಶಾಂತ ನಿದ್ರೆಯಲ್ಲಿರುವಾಗ ಗೊರಕೆ ಹೊಡೆಯಬಹುದು. ಏಕೆಂದರೆ ಅವು ಉಸಿರಾಡುವಾಗ, ವಿಶೇಷವಾಗಿ ಅವು ಪಕ್ಕಕ್ಕೆ ಅಥವಾ ಬೆನ್ನಿನ ಮೇಲೆ ಮಲಗಿರುವಾಗ ಅವುಗಳ ವಾಯುಮಾರ್ಗಗಳು ಕಂಪಿಸುತ್ತವೆ. ಶಬ್ದವು ಜೋರಾಗಿ ಮತ್ತು ಮುದ್ದಾಗಿದ್ದು, ಈ ದೈತ್ಯ ಪ್ರಾಣಿಗಳು ಸುರಕ್ಷಿತ ಮತ್ತು ಆರೈಕೆಯನ್ನು ಅನುಭವಿಸಿದಾಗ ಎಷ್ಟು ಆರಾಮವಾಗಿ ನಿದ್ದೆಗೆ ಜಾರುತ್ತವೆ ಹಾಗೂ ಮನುಷ್ಯರನ್ನು ಹೋಲುತ್ತವೆ ಎಂಬುದನ್ನು ತೋರಿಸುತ್ತದೆ.
ಮರಿಗಳು ಎಂದು ಕರೆಯಲ್ಪಡುವ ಮರಿ ಆನೆಗಳು ಹುಟ್ಟುವಾಗಲೇ ಸುಮಾರು 200 ಪೌಂಡ್‌ಗಳ ತೂಕ ಇರುತ್ತವೆ. ಹುಟ್ಟಿದ ಕೆಲವು ಗಂಟೆಗಳಲ್ಲಿ ಇವು ನಿಲ್ಲಬಲ್ಲವು. ಅವುಗಳು ತಮ್ಮ ರಕ್ಷಣೆ, ಹೊಸ ಕಲಿಕೆ ಮತ್ತು ಸೌಕರ್ಯಕ್ಕಾಗಿ ತಮ್ಮ ತಾಯಂದಿರು ಮತ್ತು ಹಿಂಡಿನ ಮೇಲೆ ಅವಲಂಬಿತವಾಗಿರುತ್ತವೆ. ಮರಿಗಳು ವರ್ಷದವರೆಗೆ ಅಥವಾ ಮೊದಲ ಕೆಲವು ತಿಂಗಳುಗಳವರೆಗೆ ತಮ್ಮ ತಾಯಿಯ ಹಾಲನ್ನು ಮಾತ್ರ ಕುಡಿಯುತ್ತವೆ, ನಂತರ ಕ್ರಮೇಣ ಎಲೆಗಳು, ಹುಲ್ಲು ಮತ್ತು ಹಣ್ಣುಗಳನ್ನು ತಿನ್ನಲು ಪ್ರಯತ್ನಿಸುತ್ತವೆ. ಮರಿಗಳಿದ್ದಾಗ ಅವು ಬಹಳ ಕುತೂಹಲವನ್ನು ಹೊಂದಿದ್ದು ತುಂಟಾಟಗಳ ಜೊತೆಗೆ ಸಾಮಾಜಿಕವಾಗಿರುತ್ತವೆ, ಪಕ್ಷಿಗಳನ್ನು ಬೆನ್ನಟ್ಟುವುದು, ನೀರಿನಲ್ಲಿ ಆಟವಾಡುವುದು ಅಥವಾ ತಮ್ಮ ಸುತ್ತಲಿನ ಎಲ್ಲವನ್ನೂ ಅನ್ವೇಷಿಸಲು ತಮ್ಮ ಸೊಂಡಿಲನ್ನು ಬಳಸುವುದನ್ನು ಹೆಚ್ಚಾಗಿ ಕಾಣಬಹುದು. ತಮ್ಮ ಕುಟುಂಬದ ಆರೈಕೆಯಿಂದ ಸುತ್ತುವರೆದಿರುವ ಅವು ಅನೇಕ ವರ್ಷಗಳ ಅವಧಿಯಲ್ಲಿ ಭೂಮಿಯ ಮೇಲಿನ ಅತಿದೊಡ್ಡ ಭೂ ಪ್ರಾಣಿಗಳಾಗಿ ಬೆಳೆಯುತ್ತವೆ ಎಂದು ಬರೆದಿದ್ದಾರೆ.
ವೀಡಿಯೋ ನೋಡಿದ ನೆಟ್ಟಿಗರಿಂದ ಭಾರಿ ಮೆಚ್ಚುಗೆ:
ವೀಡಿಯೋ ನೋಡಿದ ಅನೇಕರು ಬಹಳ ಮುದ್ದಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಆನೆ ಮರಿಗಳು ಗೊರಕೆ ಹೊಡೆಯುತ್ತವೆ ಎಂಬುದು ಗೊತ್ತಿರಲಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇದು ನಮ್ಮ ಮನೆಯಲ್ಲಿರುವ ನನ್ನ ಅಜ್ಜನಂತೆ ಗೊರಕೆ ಹೊಡೆಯುತ್ತಿದೆ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬರು ನನ್ನ 12 ಪೌಂಡ್‌ನ ಸ್ನಿಟ್ಜು ಶ್ವಾನ ವಯಸ್ಕ ವ್ಯಕ್ತಿಯಂತೆ ಗೊರಕೆ ಹೊಡೆಯುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಈ ವೀಡಿಯೋ ಈಗ ಭಾರಿ ವೈರಲ್ ಆಗಿದೆ.
ಸಾಮಾನ್ಯವಾಗಿ ತಾಯಿ ಹಾಗೂ ತನ್ನ ಹಿಂಡಿನ ಜೊತೆ ಬಹಳ ಸುರಕ್ಷಿತವಾಗಿರುವ ಆನೆಮರಿಗಳು ಒಂದು ವೇಳೆ ಬೇರ್ಪಟ್ಟಲ್ಲಿ ಸಂಪೂರ್ಣ ತಬ್ಬಲಿಗಳಾಗಿ ಬಿಡುತ್ತವೆ. ತಾಯಿಯನ್ನೇ ಅವಲಂಬಿಸುವ ಅವಕ್ಕೆ ಮುಂದೇನು ಮಾಡಬೇಕು ಎಂದು ಗೊತ್ತಿರುವುದಿಲ್ಲ ಹೀಗಾಗಿ ಸಾಕಷ್ಟು ಭಾರಿ ಅರಣ್ಯ ಇಲಾಖೆ ಸಿಬ್ಬಂದಿಗಳು ಆನೆ ಮರಿಯಿಂದ ಬೇರ್ಪಟ್ಟರೆ ಸಾಮಾನ್ಯವಾಗಿ ಅವುಗಳನ್ನು ಆನೆ ಜೊತೆ ಸೇರಿಸಲು ಹಲವು ಸಾಹಸ ಮಾಡುತ್ತಾರೆ. ಕೆಲ ದಿನಗಳ ಹಿಂದೆ ತಾಯಿಯಿಂದ ಬೇರ್ಪಟ್ಟ ಆನೆಯನ್ನು ತಾಯಿ ಜೊತೆ ಸೇರಿಸುವುದಕ್ಕಾಗಿ ಆನೆ ಅರಣ್ಯ ಸಿಬ್ಬಂದಿ ಆನೆಮರಿಗೆ ಆನೆ ಲದ್ದಿಯನ್ನು ಉಜ್ಜಿದಂತಹ ಘಟನೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.
ಆನೆ ಮರಿ ಗೊರಕೆ ವೀಡಿಯೋ ನೋಡಲಿ ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ಶೋಲಾ ಕಾಡಲ್ಲಿ ನಿದ್ದೆಗೆ ಜಾರಿದ ಆನೆ ಹಿಂಡು: ಮರಿಗೆ ಸ್ನಾನ ಮಾಡಿಸಿದ ತಾಯಾನೆ: ವನ್ಯಲೋಕದ ಅದ್ಭುತ ವೀಡಿಯೋ
ಇದನ್ನೂ ಓದಿ: ರಕ್ಷಬಂಧನದ ದಿನ ಅಣ್ಣನ ಅರಸಿ ಬಂತು ತಂಗಿ ಸಾಯುವ ಮುನ್ನ ದಾನ ಮಾಡಿದ್ದ ಕೈ: ಭಾವುಕ ವೀಡಿಯೋ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ