ಪಶ್ಚಿಮ ಬಂಗಾಳದಲ್ಲಿ ಕರ್ತವ್ಯನಿರತ ವೈದ್ಯೆಯ ಮೇಲಿನ ಅತ್ಯಾಚಾರ-ಕೊಲೆ ಮತ್ತು ಮಹಾರಾಷ್ಟ್ರದ ಬದ್ಲಾಪುರದಲ್ಲಿ ನಡೆದ ಇಬ್ಬರು ನಾಲ್ಕು ವರ್ಷದ ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ದೇಶಾದ್ಯಂತ ಆಕ್ರೋಶ ಎದ್ದಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು, ‘ಮಹಿಳೆಯರ ಮೇಲೆ ಎಸಗುವ ಅಪರಾಧ ಕೃತ್ಯಗಳಿಗೆ ಕ್ಷಮೆಯಿಲ್ಲ. ಅದು ಮಹಾಪಾಪ’ ಎಂದು ಗುಡುಗಿದ್ದಾರೆ.
ಜಲಗಾಂವ್ (ಆ.26) : ಪಶ್ಚಿಮ ಬಂಗಾಳದಲ್ಲಿ ಕರ್ತವ್ಯನಿರತ ವೈದ್ಯೆಯ ಮೇಲಿನ ಅತ್ಯಾಚಾರ-ಕೊಲೆ ಮತ್ತು ಮಹಾರಾಷ್ಟ್ರದ ಬದ್ಲಾಪುರದಲ್ಲಿ ನಡೆದ ಇಬ್ಬರು ನಾಲ್ಕು ವರ್ಷದ ಹೆಣ್ಣುಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ದೇಶಾದ್ಯಂತ ಆಕ್ರೋಶ ಎದ್ದಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು, ‘ಮಹಿಳೆಯರ ಮೇಲೆ ಎಸಗುವ ಅಪರಾಧ ಕೃತ್ಯಗಳಿಗೆ ಕ್ಷಮೆಯಿಲ್ಲ. ಅದು ಮಹಾಪಾಪ’ ಎಂದು ಗುಡುಗಿದ್ದಾರೆ. ಅಲ್ಲದೆ, ‘ಸ್ತ್ರೀಪೀಡಕರಿಗೆ ಕಠಿಣ ಶಿಕ್ಷೆ ನೀಡಲು ಕಾಯ್ದೆಯನ್ನು ನಮ್ಮ ಸರ್ಕಾರ ಬಲಗೊಳಿಸುತ್ತಿದೆ’ ಎಂದಿದ್ದಾರೆ.
ಮಹಾರಾಷ್ಟ್ರದಲ್ಲಿ ‘ಲಖಪತಿ ದೀದಿ ಸಮ್ಮೇಳನ’ದಲ್ಲಿ ಭಾನುವಾರ ಮಾತನಾಡಿದ ಅವರು, ‘ಮಹಿಳೆಯರ ರಕ್ಷಣೆ ನಮ್ಮ ಆದ್ಯತೆಯಾಗಬೇಕು. ಈ ದೇಶದ ಪ್ರತಿಯೊಬ್ಬ ತಾಯಿ, ಅಕ್ಕ-ತಂಗಿ ಹಾಗೂ ಮಗಳ ರಕ್ಷಣೆ ನಮ್ಮ ಕರ್ತವ್ಯವಾಗಬೇಕು. ಕೆಂಪುಕೋಟೆಯ ಮೇಲಿನಿಂದಲೂ ನಾನು ಈ ವಿಷಯವನ್ನು ಪದೇಪದೇ ಹೇಳಿದ್ದೇನೆ. ದೇಶದ ಯಾವುದೇ ರಾಜ್ಯದಲ್ಲಾದರೂ ಸರಿ, ನಮ್ಮ ಅಕ್ಕ-ತಂಗಿಯರಿಗೆ ಹಾಗೂ ಹೆಣ್ಣುಮಕ್ಕಳಿಗೆ ಆಗುವ ನೋವು ನನಗೆ ಅರ್ಥವಾಗುತ್ತದೆ’ ಎಂದು ಹೇಳಿದರು.
‘ಪ್ರತಿಯೊಂದು ರಾಜಕೀಯ ಪಕ್ಷಕ್ಕೂ, ಪ್ರತಿಯೊಂದು ರಾಜ್ಯ ಸರ್ಕಾರಕ್ಕೂ ನಾನು ಹೇಳುವುದಿಷ್ಟೆ: ಮಹಿಳೆಯರ ಮೇಲಿನ ಅಪರಾಧ ಕೃತ್ಯಗಳು ಅಕ್ಷಮ್ಯ. ತಪ್ಪಿತಸ್ಥರು ಯಾರೇ ಇದ್ದರೂ ಬಿಡಬಾರದು. ತಪ್ಪಿತಸ್ಥರಿಗೆ ಸಹಾಯ ಮಾಡುವವರನ್ನೂ ಬಿಡಬಾರದು. ಆಸ್ಪತ್ರೆ, ಶಾಲೆ, ಸರ್ಕಾರ, ಪೊಲೀಸ್ ವ್ಯವಸ್ಥೆ ಅಥವಾ ಯಾವುದೇ ಹಂತದಲ್ಲಿ ನಿರ್ಲಕ್ಷ್ಯ ತೋರಿದರೂ ಅದಕ್ಕೆ ಸಂಬಂಧಪಟ್ಟ ಎಲ್ಲರನ್ನೂ ಹೊಣೆ ಮಾಡಬೇಕು. ಈ ಸಂದೇಶ ಉನ್ನತ ಹಂತದಿಂದ ಹಿಡಿದು ಕೊನೆಯ ಹಂತದವರೆಗೂ ಹೋಗಬೇಕು’ ಎಂದು ತೀಕ್ಷ್ಣವಾಗಿ ಹೇಳಿದರು.
‘ಮಹಿಳೆಯರ ಘನತೆಯನ್ನು ರಕ್ಷಿಸುವುದು ನಮ್ಮ ಮೇಲಿರುವ ದೊಡ್ಡ ಜವಾಬ್ದಾರಿ. ಸಮಾಜಕ್ಕೂ ಸರ್ಕಾರಕ್ಕೂ ಈ ಗುರುತರ ಜವಾಬ್ದಾರಿಯಿದೆ. ನಮ್ಮ ಸರ್ಕಾರ ಕಳೆದ 10 ವರ್ಷಗಳಲ್ಲಿ ಮಹಿಳೆಯರ ಏಳಿಗೆಗೆ ಹಿಂದೆ ಯಾವ ಸರ್ಕಾರವೂ ಮಾಡದಷ್ಟು ಕೆಲಸಗಳನ್ನು ಮಾಡಿದೆ. ಮಹಿಳೆಯರ ಮೇಲೆ ದೌರ್ಜನ್ಯ ಎಸಗುವವರ ವಿರುದ್ಧದ ಕಾನೂನು ಬಲಪಡಿಸುತ್ತಿದೆ’ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.