Covid-19 deaths: ಕೋವಿಡ್‌ನಿಂದ ಮೃತಪಟ್ಟ ಎಲ್ಲರಿಗೂ ₹50 ಸಾವಿರ: ಸುಪ್ರೀಂ ಸ್ಪಷ್ಟನೆ

By Kannadaprabha News  |  First Published Mar 15, 2022, 10:58 AM IST

ಕೋವಿಡ್‌ನಿಂದ ಮೃತರಾದ ಪ್ರತಿ ಸಾವಿಗೂ ತಲಾ 50,000 ರು. ಪರಿಹಾರಧನ ನೀಡುವಂತೆ ಈ ಹಿಂದೆ ತಾನು ನೀಡಿದ್ದ ಆದೇಶ ಸ್ಪಷ್ಟವಾಗಿದೆ ಎಂದು  ಸುಪ್ರೀಂ ಕೋರ್ಟ್‌ ಹೇಳಿದೆ


ನವದೆಹಲಿ (ಮಾ. 15) : ಕೋವಿಡ್‌ನಿಂದ ಮೃತರಾದ ಪ್ರತಿ ಸಾವಿಗೂ ತಲಾ 50,000 ರು. ಪರಿಹಾರಧನ ನೀಡುವಂತೆ ಈ ಹಿಂದೆ ತಾನು ನೀಡಿದ್ದ ಆದೇಶ ಸ್ಪಷ್ಟವಾಗಿದೆ. ಸರ್ಕಾರ ಇದನ್ನು ಜಾರಿಗೊಳಿಸಬೇಕು. ಎಂದು ಸುಪ್ರೀಂ ಕೋರ್ಟ್‌ ಸ್ಪಷ್ಟಪಡಿಸಿದೆ.ಒಂದೇ ಕುಟುಬದಲ್ಲಿ ಒಂದಕ್ಕಿಂತ ಹೆಚ್ಚು ಮಕ್ಕಳು ಸಾವನ್ನಪ್ಪಿದ್ದರೆ, ಆ ಮಗುವಿನ ತಂದೆ-ತಾಯಿಗೆ ಪ್ರತಿ ಮಗುವಿಗೂ 50,000 ಪರಿಹಾರ ರು. ನೀಡಬೇಕೇ ಎಂಬ ಅಸ್ಸಾಂ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ಸುಪ್ರೀಂ ಕೋರ್ಟ್‌ ಈ ಮೇಲಿನಂತೆ ಸ್ಪಷ್ಟನೆ ನೀಡಿದೆ. ‘ನಾವು ಈ ಬಗ್ಗೆ ಹಿಂದೆಯೇ ಆದೇಶ ನೀಡಿದ್ದು ಪ್ರತಿ ಸಾವಿಗೆ 50,000 ನೀಡಬೇಕೆಂದು ಹೇಳಿದ್ದೇವೆ’ ಎಂದು ಪೀಠ ಪುನರುಚ್ಚರಿಸಿದೆ.

ಕೋವಿಡ್‌ ಪರಿಹಾರ ಕೋರಿಕೆಗೆ ಕಾಲಮಿತಿ: ಇಂದು ಸುಪ್ರೀಂಗೆ ಕೇಂದ್ರದಿಂದ ಮಾನದಂಡ ಸಲ್ಲಿಕೆ:  ಕೋವಿಡ್‌ನಿಂದ ಮೃತಪಟ್ಟವ್ಯಕ್ತಿಗಳ ಕುಟುಂಬ ಸದಸ್ಯರು ರಾಜ್ಯ ಸರ್ಕಾರದಿಂದ ತಲಾ 50000 ರು. ಪಡೆಯಲು ನಿಗದಿತ ಕಾಲಮಿತಿಯಲ್ಲಿ ಅರ್ಜಿ ಸಲ್ಲಿಸಬೇಕು ಎಂಬ ಕುರಿತು ಕೇಂದ್ರ ಸರ್ಕಾರ ನಿಯಮ ರೂಪಿಸಿ ಅದನ್ನು ಮಂಗಳವಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸುವ ಸಾಧ್ಯತೆ ಇದೆ.

Latest Videos

ಇದನ್ನೂ ಓದಿ: Covid 19 Crisis: ಚೀನಾ, ದಕ್ಷಿಣ ಕೊರಿಯಾದಲ್ಲಿ ಮತ್ತೆ ಕೊರೋನಾ ಅಬ್ಬರ: ಭಾರತದಲ್ಲಿ ಕೇವಲ 2503 ಕೇಸು!

ಕೋವಿಡ್‌ಗೆ ಬಲಿಯಾದವರಿಗೆ ಪರಿಹಾರ ನೀಡಬೇಕು ಎಂಬ ಅರ್ಜಿಯ ಕುರಿತು ಸೋಮವಾರ ವಿಚಾರಣೆ ನಡೆಸಿದ ನ್ಯಾ. ಎಂ.ಆರ್‌.ಶಾ ಮತ್ತು ನ್ಯಾ.ಬಿ.ವಿ.ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠವು ‘ಕೋವಿಡ್‌ ಪರಿಹಾರದ ವಿಷಯದಲ್ಲೂ ವಂಚನೆ ನಡೆಸುತ್ತಿರುವುದು ಆತಂಕದ ವಿಷಯ. ಈ ವಿಷಯವನ್ನೂ ದುರ್ಬಳಕೆ ಮಾಡಿಕೊಳ್ಳಬಹುದು ಎಂದು ನಾವೆಂದೂ ಊಹಿಸಿರಲಿಲ್ಲ. ಇದೊಂದು ಧರ್ಮನಿಷ್ಠ ವಿಷಯ. ಈ ವಿಷಯದಲ್ಲೂ ನಮ್ಮ ನೈತಿಕತೆ ಇಷ್ಟುಅಧಃಪತನ ಕಾಣುತ್ತದೆ’ ಎಂದು ನಾವು ಎಣಿಸಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿತು. ಅಲ್ಲದೆ, ಈ ಬಗ್ಗೆ ಅಕೌಂಟಂಟ್‌ ಜನರಲ್‌ರಿಂದ ತನಿಖೆ ನಡೆಸುವಂತೆ ಸೂಚಿಸಬೇಕಾಗಬಹುದು ಎಂದಿತು.

ಈ ಹಂತದಲ್ಲಿ ಕೇಂದ್ರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮಾತನಾಡಿ ‘ಪರಿಹಾರ ಕೋರಿ ಅರ್ಜಿ ಸಲ್ಲಿಸಲು ಸಮಯ ನಿಗದಿ ಮಾಡುವ ಬಗ್ಗೆ ನ್ಯಾಯಾಲಯ ಪರಿಶೀಲಿಸಬಹುದು’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ‘ನಾವು ಹಿಂದಿನ ವಿಚಾರಣೆಯನ್ನು ಮುಂದೂಡಿದ್ದೇ ಇದೇ ಕಾರಣಕ್ಕಾಗಿ. ಈ ಬಗ್ಗೆ ನೀವು ಸೂಕ್ತ ಅರ್ಜಿಯನ್ನು ಸಿದ್ಧಪಡಿಸಿ ನಮಗೆ ಸಲ್ಲಿಸಿ’ ಎಂದು ಸೂಚಿಸಿತು. ಆಗ ಮೆಹ್ತಾ, ತಾವು ಮಂಗಳವಾರವೇ ಅರ್ಜಿ ಸಲ್ಲಿಸುವುದಾಗಿ ನ್ಯಾಯಾಲಯಕ್ಕೆ ಭರವಸೆ ನೀಡಿದರು. ಇದನ್ನು ಒಪ್ಪಿದ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಮಾ.21ಕ್ಕೆ ಮುಂದೂಡಿತು.

ಫ್ರಾನ್ಸ್‌ನಲ್ಲಿ ಮಾಸ್ಕ್‌ ಕಡ್ಡಾಯ ನಿಯಮ ಕೊಂಚ ಸಡಿಲ: ದೇಶಾದ್ಯಂತ ಕೋವಿಡ್‌ ಸೋಂಕು ಇಳಿಮುಖವಾಗುತ್ತಿರುವುದರಿಂದ ಮಾಸ್ಕ್‌ ಧರಿಸುವುದು ಕಡ್ಡಾಯ ಎಂಬುದು ಸೇರಿದಂತೆ ಹಲವು ಕೋವಿಡ್‌ ನಿರ್ಬಂಧಗಳನ್ನು ಫ್ರಾನ್ಸ್‌ ಸರ್ಕಾರ ಸೋಮವಾರ ಕೊಂಚ ಸಡಿಲಗೊಳಿಸಿದೆ. ಸಾರ್ವಜನಿಕ ಸಾರಿಗೆ, ಆಸ್ಪತ್ರೆ ಹಾಗೂ ಇತರ ಆರೋಗ್ಯ ಸಂಸ್ಥೆಗಳಲ್ಲಿ ಮಾಸ್ಕ್‌ ಕಡ್ಡಾಯ. ಆದರೆ ಶಾಲೆ, ಕಚೇರಿಗಳು, ಕಾರ್ಖಾನೆಯಲ್ಲಿ ಕಡ್ಡಾಯವಲ್ಲ ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: Covid Crisis: 22 ತಿಂಗಳ ಬಳಿಕ ಸೋಂಕಿತರ ಸಂಖ್ಯೆ 100ರ ಆಸುಪಾಸಿಗೆ..!

ಇದೇ ವೇಳೆ, ಲಸಿಕೆ ಪಡೆಯದವರಿಗೆ ರೆಸ್ಟೋರೆಂಟ್‌, ಕ್ರೀಡಾಂಗಣ ಮತ್ತು ಇತರ ಸಾರ್ವಜನಿಕ ಪ್ರದೇಶಗಳಿಗೆ ಪ್ರವೇಶವಿಲ್ಲ ಎಂಬ ನಿಯಮವನ್ನು ತೆಗೆದುಹಾಕಲಾಗಿದೆ. ಏ.10ರಂದು ನಿಗದಿಯಾಗಿರುವ ಅಧ್ಯಕ್ಷ ಚುನಾವಣೆಗೂ ಮೊದಲು ಈ ನಿರ್ಧಾರ ತೆಗೆದುಕೊಂಡಿರುವುದು ಸಾಕಷ್ಟುಕುತೂಹಲ ಮೂಡಿಸಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಫ್ರಾನ್ಸ್‌ನಲ್ಲಿ ಹೊಸ ಕೋವಿಡ್‌ ಪ್ರಕರಣಗಳು ಏರಿಕೆಯಾಗುತ್ತಿವೆ. ಹಾಗಾಗಿ ನಿರ್ಬಂಧಗಳನ್ನು ಇಷ್ಟುಬೇಗ ರದ್ದುಗೊಳಿಸುವುದು ಸಮಂಜಸವಲ್ಲ ಎಂದು ಹಲವು ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ 7 ದಿನಗಳ ಸರಾಸರಿ ನೋಡಿದರೆ ಅದರ ಹಿಂದಿನ ವಾರಕ್ಕಿಂತ 10 ಸಾವಿರ ಪ್ರಕರಣಗಳು ಹೆಚ್ಚಾಗಿವೆ.

ಬರಾಕ್‌ ಒಬಾಮಾಗೆ ಕೊರೋನಾ: ಶೀಘ್ರ ಚೇತರಿಕೆಗೆ ಮೋದಿ ಹಾರೈಕೆ: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್‌ ಒಬಾಮಾ (60) ಅವರಿಗೆ ಕೊರೋನಾ ಸೋಂಕು ತಗುಲಿದೆ. ಭಾನುವಾರ ತಮಗೆ ಕೊರೋನಾ ಸೋಂಕು ದೃಢಪಟ್ಟಿರುವುದಾಗಿ ಬರಾಕ್‌ ಒಬಾಮಾ ಟ್ವೀಟ್‌ ಮಾಡಿದ್ದಾರೆ. ‘ನನಗೆ ಕೋವಿಡ್‌ ಪಾಸಿಟಿವ್‌ ಬಂದಿದೆ,ಕಳೆದೆರಡು ದಿನಗಳಿಂದ ಗಂಟಲು ನೋವು ಕಾಣಿಸಿಕೊಂಡಿದ್ದು, ಉಳಿದಂತೆ ಯಾವುದೇ ಲಕ್ಷಣಗಳಿಲ್ಲದೇ ಆರಾಮಾಗಿದ್ದೇನೆ. ಎಲ್ಲಾ ಅಮೆರಿಕನ್ನರು ಕೊರೋನಾ ಲಸಿಕೆ ಪಡೆಯಿರಿ’ ಎಂದು ಮನವಿ ಮಾಡಿದ್ದರು. ಹಾಗೆಯೇ ತಮ್ಮ ಪತ್ನಿ ಮಿಷೆಲ್‌ ಒಬಾಮಾ ಕೊರೋನಾ ವರದಿ ನೆಗೆಟಿವ್‌ ಬಂದಿದೆ ಎಂದೂ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ಒಬಾಮಾ ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಸೋಮವಾರ ಟ್ವೀಟ್‌ ಮಾಡಿದ್ದಾರೆ.

click me!