ಬರೀ ಟ್ವೀಟ್‌ ಮಾಡಿದ್ರೆ ಪಕ್ಷ ಉದ್ಧಾರವಾಗಲ್ಲ: ಕಾಂಗ್ರೆಸ್‌ನ ಹಿರಿಯ ನಾಯಕ ವೀರಪ್ಪ ಮೊಯ್ಲಿ

By Suvarna News  |  First Published Mar 15, 2022, 10:37 AM IST

*ತಕ್ಷಣವೇ ಸೋನಿಯಾ ಪಕ್ಷವನ್ನು ಪೂರ್ಣ ಹಿಡಿತಕ್ಕೆ ಪಡೆಯಬೇಕು
*ಅವಕಾಶವಾದಿಗಳು ಸಂಘಟನೆಯನ್ನು ಆವರಿಸಿಕೊಂಡಿದ್ದಾರೆ
*ಜಿ 23 ನಾಯಕರ ವಿರುದ್ಧವೂ ಮಾಜಿ ಕೇಂದ್ರ ಸಚಿವ ಆಕ್ರೋಶ


ನವದೆಹಲಿ (ಮಾ. 15) : ಕಾಂಗ್ರೆಸ್‌ ನಾಯಕರು ಸಾಮಾಜಿಕ ಜಾಲತಾಣದಲ್ಲಿ ಕೇವಲ ಟ್ವೀಟ್‌ ಮಾಡಿಕೊಂಡು ಇರುವ ಸಂಸ್ಕೃತಿ ಬೆಳೆಸಿಕೊಂಡರೆ ಅದರಿಂದ ಪಕ್ಷ ಉದ್ಧಾರವಾಗದು ಎಂದು ಹೇಳಿರುವ ಕಾಂಗ್ರೆಸ್‌ನ ಹಿರಿಯ ನಾಯಕ ವೀರಪ್ಪ ಮೊಯ್ಲಿ, ತಕ್ಷಣವೇ ಸೋನಿಯಾ ಗಾಂಧಿ ಅವರು ಪಕ್ಷವನ್ನು ಪೂರ್ಣ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮೊಯ್ಲಿ ‘ಅವಕಾಶವಾದಿಗಳು ಸಂಘಟನೆಯನ್ನು ಆವರಿಸಿಕೊಂಡಿರುವ ಕಾರಣ, ಇತ್ತೀಚಿನ ದಿನಗಳಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಬಲಿಪಶುವಾಗಿದ್ದಾರೆ. ಇತ್ತೀಚಿನ ಚುನಾವಣಾ ಸೋಲಿಗೆ ಏನು ಕಾರಣ ಎಂಬುದರ ಬಗ್ಗೆ ಆತ್ಮ ವಿಮರ್ಶೆ ಅಗತ್ಯವಿದೆ. ಆದರೆ ಸೋಲಿನ ಬಗ್ಗೆ ಯಾವುದೇ ನಾಯಕರು ಅಥವಾ ಕಾರ್ಯಕರ್ತರು ಆತಂಕಕ್ಕೆ ಒಳಗಾಗಬೇಕಾದ ಅವಶ್ಯಕತೆ ಇಲ್ಲ’ ಎಂದು ಹೇಳಿದ್ದಾರೆ.

ಇದೇ ವೇಳೆ ‘ಪಂಚರಾಜ್ಯ ಚುನಾವಣೆ ಫಲಿತಾಂಶ ಪ್ರಕಟವಾದ ಕೂಡಲೇ ನಮ್ಮ ಕೆಲ ಹಿರಿಯ ನಾಯಕರು ನೀಡಿದ ಹೇಳಿಕೆಗಳ ಬಗ್ಗೆ ನಾನು ಚಿಂತಿತನಾಗಿದ್ದೇನೆ. ಸೋಲಿಗಿಂತ ನನಗೆ ಇಂಥ ಹೇಳಿಕೆಗಳೇ ಹೆಚ್ಚು ಆತಂಕ ಮೂಡಿಸಿವೆ. ಪಕ್ಷದಲ್ಲಿ ಆಮೂಲಾಗ್ರ ಬದಲಾವಣೆ ಆಗಬೇಕು ಎಂದು ಈ ಹಿಂದೆ ಸಲ್ಲಿಸಲಾದ ಮನವಿಗೆ ನಾನು ಸಹಿ ಹಾಕಿದ್ದು ನಿಜ. ಆದರೆ ಅದು ಪಕ್ಷದ ಹಿರಿಯ ನಾಯಕತ್ವವನ್ನು ಗುರಿಯಾಗಿಸಿ ಆಗಿರಲಿಲ್ಲ. ಈ ಕಾರಣಕ್ಕಾಗಿಯೇ ಬಳಿಕ ನಾನು ಅವರಿಂದ ದೂರವಾದೆ’ ಎಂದು ಜಿ23 ನಾಯಕರ ಬಗ್ಗೆಯೂ ಮೊಯ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Tap to resize

Latest Videos

ಇದನ್ನೂ ಓದಿಬೇರೆ ನಾಯಕರಿಗೆ ಅವಕಾಶ ಕೊಡಿ, ಸೋನಿಯಾ ಗಾಂಧಿ ಮೇಲೆ ಸಿಬಲ್ ನೇರ ವಾಗ್ದಾಳಿ!

ಮೋದಿ ಬಗ್ಗೆ ಕಾಂಗ್ರೆಸ್ಸಿಗ ತರೂರ್‌ ಪ್ರಶಂಸೆ: ಕಾಂಗ್ರೆಸ್‌ ಹಿರಿಯ ನಾಯಕ ಶಶಿ ತರೂರ್‌ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಅದ್ಭುತ ಚೈತನ್ಯ ಮತ್ತು ಕ್ರಿಯಾಶೀಲ ವ್ಯಕ್ತಿ’ ಎಂದು ಬಣ್ಣಿಸಿದ್ದಾರೆ. ಅಲ್ಲದೆ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಅಭೂತಪೂರ್ವ ಗೆಲುವಿಗೆ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂದು ಕ್ರೆಡಿಟ್‌ ನೀಡಿದ್ದಾರೆ.

ಭಾನುವಾರ ಜೈಪುರ ಸಾಹಿತ್ಯ ಉತ್ಸವದಲ್ಲಿ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ಅವರು, ‘ಮೋದಿ ಅವರು ಅದ್ಭುತ ಚೈತನ್ಯ ಮತ್ತು ಕ್ರಿಯಾಶೀಲ ವ್ಯಕ್ತಿ. ರಾಜಕೀಯವಾಗಿ ಕೆಲವು ಪ್ರಭಾವಶಾಲಿ ಕೆಲಸಗಳನ್ನು ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಇಷ್ಟುದೊಡ್ಡ ಅಂತರದಿಂದ ಗೆಲ್ಲುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಆದರೆ ಮೋದಿ ಅವರಿಂದ ಇದು ಸಾಧ್ಯವಾಗಿದೆ’ ಎಂದು ಹೇಳಿದರು.

ಇದೇ ವೇಳೆ, ‘ಮೋದಿ ಅವರು ದೇಶವನ್ನು ಕೋಮು ಮತ್ತು ಧಾರ್ಮಿಕ ಆಧಾರದ ಮೇಲೆ ವಿಭಜಿಸುವ ಶಕ್ತಿಗಳನ್ನು ಬೆಂಬಲಿಸುತ್ತಿದ್ದಾರೆ. ನನ್ನ ಪ್ರಕಾರ ಇದು ತುಂಬಾ ಅಪಾಯಕಾರಿ. ಮುಂದೊಂದು ದಿನ ಭಾರತೀಯ ಮತದಾರರು ಬಿಜೆಪಿಯನ್ನು ಅಚ್ಚರಿಗೊಳಿಸುತ್ತಾರೆ. ಆದರೆ ಇಂದು ಜನರು ಬಿಜೆಪಿಗೆ ಅದು ಬಯಸಿದ್ದನ್ನು ನೀಡಿದ್ದಾರೆ’ ಎಂದರು.

ಇದನ್ನೂ ಓದಿ: Farmer Protest ಚುನಾವಣೆಯಲ್ಲಿ ಲೆಕ್ಕಾಚಾರ ಉಲ್ಟಾ, ಕೇಂದ್ರ ಬಿಜೆಪಿ ವಿರುದ್ಧ ಮತ್ತೆ ಪ್ರತಿಭಟನೆಗಳಿದ SKM ರೈತ ಸಂಘಟನೆ!

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿನ ಕುರಿತು ಮಾತನಾಡಿದ ಅವರು, ‘ಪ್ರಿಯಾಂಕಾ ಗಾಂಧಿ ಪಕ್ಷಕ್ಕಾಗಿ ಬೃಹತ್‌ಪ್ರಚಾರ ನಡೆಸಿದ್ದರು. ಒಬ್ಬ ವ್ಯಕ್ತಿಯ ಪ್ರಚಾರದ ಕಾರಣದಿಂದ ಕಾಂಗ್ರೆಸ್‌ ಹಿನ್ನಡೆ ಅನುಭವಿಸಿದೆ ಎಂದು ನನಗನಿಸುವುದಿಲ್ಲ. ನಮ್ಮ ಅಸ್ತಿತ್ವ ಕಡಿಮೆಯಾಗುತ್ತಿರುವ ಕೆಲವು ರಾಜ್ಯಗಳಲ್ಲಿ ಪಕ್ಷವು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ’ ಎಂದರು.

ಸಿಎಂ ಕಸರತ್ತು: ಉ.ಪ್ರ.ಗೆ ಶಾ, ಉ.ಖಂಡಕ್ಕೆ ರಾಜನಾಥ್‌ ವೀಕ್ಷಕರು: ಬಿಜೆಪಿ ಜಯಗಳಿಸಿರುವ ರಾಜ್ಯಗಳಲ್ಲಿ ಸರ್ಕಾರ ನಿರ್ಮಿಸುವ ನಿಟ್ಟಿನಲ್ಲಿ ಬಿಜೆಪಿ 4 ರಾಜ್ಯಗಳಲ್ಲೂ ಬಿಜೆಪಿಯ ವೀಕ್ಷಕರನ್ನು ನೇಮಕ ಮಾಡಿದೆ. ಕೇಂದ್ರ ಗೃಹ ಮಂತ್ರಿ ಅಮಿತ್‌ ಶಾ ಅವರನ್ನು ಉತ್ತರ ಪ್ರದೇಶಕ್ಕೆ, ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರನ್ನು ಉತ್ತರಾಖಂಡಕ್ಕೆ, ನಿರ್ಮಲಾ ಸೀತಾರಾಮನ್‌ ಅವರನ್ನು ಮಣಿಪುರಕ್ಕೆ ಮತ್ತು ನರೇಂದ್ರ ಸಿಂಗ್‌ ತೋಮರ್‌ ಅವರನ್ನು ಗೋವಾ ರಾಜ್ಯಕ್ಕೆ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.

ಬಿಜೆಪಿ ಉಪಾಧ್ಯಕ್ಷ ರಘುಬರ್‌ ದಾಸ್‌ ಅವರು ಅಮಿತ್‌ ಶಾ ಅವರ ಸಹಾಯಕರಾಗಿರಲಿದ್ದಾರೆ. ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ಅವರು ರಾಜನಾಥ ಸಿಂಗ್‌ ಅವರ ಸಹಾಯಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಸಚಿವ ಕಿರಣ್‌ ರಿಜಿಜು ಅವರನ್ನು ಮಣಿಪುರ ಮತ್ತು ಎಲ್‌. ಮುರುಗನ್‌ ಅವರನ್ನು ಗೋವಾ ಸಹಾಯಕ ವೀಕ್ಷಕರನ್ನಾಗಿ ನೇಮಕ ಮಾಡಲಾಗಿದೆ.
 

click me!