Karnataka Hijab Verdict: ಹಿಜಾಬ್, ಕೇಸರಿ ಯಾವುದೂ ಇಲ್ಲ, ತರಗತಿಗೆ ಸಮವಸ್ತ್ರ ಧರಿಸಿಯೇ ಎಂಟ್ರಿ!

By Suvarna News  |  First Published Mar 15, 2022, 10:40 AM IST

* ಬಹುನಿರೀಕ್ಷಿತ ಹಿಜಾಬ್ ತೀರ್ಪು ಪ್ರಕಟ
* ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗ ಅಲ್ಲ ಎಂದ ಕೋರ್ಟ್‌
* ತರಗತಿಗೆ ಸಮವಸ್ತ್ರ ಧರಿಸಿಯೇ ಎಂಟ್ರಿ. ಹಿಜಾಬ್, ಕೇಸರಿ ಶಾಲು ಎಲ್ಲವೂ ಬ್ಯಾನ್
* ರಾಜಕೀಯ ಬಣ್ಣ, ವಿದೇಶದಲ್ಲೂ ಸದ್ದು


ಬೆಂಗಳೂರು(ಮಾ.15): ಭಾರಿ ವಿವಾದಕ್ಕೆ ಕಾರಣವಾಗಿ ವಿಶ್ವಮಟ್ಟದಲ್ಲಿ ಗಮನ ಸೆಳೆದ ಹಿಜಾಬ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಮಂಗಳವಾರ ಬೆಳಗ್ಗೆ ತೀರ್ಪು ಪ್ರಕಟಿಸಿದ್ದು, ಹಿಜಾಬ್ ಇಸ್ಲಾಂನ ಅವಿಭಾಜ್ಯ ಅಂಗ ಅಲ್ಲ ಎಂದಿದೆ. ಅಲ್ಲದೇ ಶಾಲೆಗೆ ಕೇಸರಿ ಶಾಲು, ಹಿಜಾಬ್ ಆಗಲಿ ಯಾವುದೂ ಧರಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಈ ಮೂಲಕ ಸರ್ಕಾರ ಕಡ್ಡಾಯಗೊಳಿಸಿದ್ದ ಸರ್ಕಾರದ ಆದೇಶವನ್ನು ಕೋರ್ಟ್‌ ಎತ್ತಿ ಹಿಡಿದಿದೆ.

ಹಿಜಾಬ್‌ ಧರಿಸಿ ಶಾಲಾ-ಕಾಲೇಜಿನ ತರಗತಿಗಳಿಗೆ ಹಾಜರಾಗುವುದನ್ನು ನಿಷೇಧಿಸುವ ಮತ್ತು ಸಮವಸ್ತ್ರವನ್ನು ನಿರ್ಧರಿಸುವ ಜವಾಬ್ದಾರಿಯನ್ನು ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ (ಸಿಡಿಸಿ) ವಹಿಸಿ ರಾಜ್ಯ ಸರ್ಕಾರ ಫೆ.5ರಂದು ಹೊರಡಿಸಿತ್ತು. ಈ ಆದೇಶ ರದ್ದು ಕೋರಿ ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ರೇಷಮ್‌ ಮತ್ತಿತರೆ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಏಳು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.

Latest Videos

undefined

Hijab Row: ಸದನದಲ್ಲಿ HDK ಹಿಜಾಬ್‌ ಪ್ರಸ್ತಾಪಕ್ಕೆ ಜಮೀರ್‌ ಗರಂ

ಈ ಎಲ್ಲ ಅರ್ಜಿಗಳ ಕುರಿತು ಸತತ 11 ದಿನ ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿರುವ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ, ನ್ಯಾ.ಕೃಷ್ಣ ಎಸ್‌. ದೀಕ್ಷಿತ್‌ ಮತ್ತು ನ್ಯಾ.ಜೆ.ಎಂ. ಖಾಜಿ ಅವರನ್ನು ಒಳಗೊಂಡ ಪೀಠ ಸರ್ಕಾರದ ಆದೆಶ ಕಾನೂನು ಬದ್ಧವಾಗಿದೆ. ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗವಲ್ಲ, ಸರ್ಕಾರದ ಆದೇಶ ಪಾಲನೆ ಮಾಡಬೇಕು, ಇದು ಕಾನೂನು ಬದ್ಧವಾಗಿದೆ ಎಂದಿದೆ.

ಹೈಕೋರ್ಟ್‌ ತೀರ್ಪಿನಲ್ಲಿ ಉಲ್ಲೇಖಿಸಿದ ಮಹತ್ವದ ವಿಚಾರಗಳು:

1- ವಿದ್ಯಾರ್ಥಿನಿಯರು ಸಮವಸ್ತ್ರ ಸಂಹಿತೆ ಆದೇಶ ಪಾಲಿಸಲೇಬೇಕು
2. ಹಿಜಾಬ್ ಇಸ್ಲಾಮಿನ ಅವಿಭಾಜ್ಯ ಅಂಗವೇ ಅಲ್ಲ- ಹೈಕೋರ್ಟ್ ಐತಿಹಾಸಿಕ ತೀರ್ಪು
3. ಸಮವಸ್ತ್ರ ಕಡ್ಡಾಯಕ್ಕೆ ವಿದ್ಯಾರ್ಥಿಗಳು ವಿರೋಧಿಸುವಂತಿಲ್ಲ
4. ವಿದ್ಯಾರ್ಥಿನಿಯರು ಸಮವಸ್ತ್ರ ಸಂಹಿತೆ ಆದೇಶ ಪಾಲಿಸಲೇಬೇಕು
5. ಸಮವಸ್ತ್ರ ಕಡ್ಡಾಯಗೊಳಿಸಿದ್ದ ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ
6. ಹಿಜಾಬ್ಗೆ ಅವಕಾಶ ಕೊಡುವುದು ಬಿಡುವುದು ಆಯಾ ಸಂಸ್ಥೆಗೆ ಬಿಟ್ಟದ್ದು
7. ಹಿಜಾಬ್ಗೆ ಅವಕಾಶ ಇಲ್ಲ ಎಂದರೆ ಮುಸ್ಲಿಂ ವಿದ್ಯಾರ್ಥಿನಿಯರ ಧಾರ್ಮಿಕ ಹಕ್ಕಿನ ಉಲ್ಲಂಘನೆ ಅಲ್ಲ
8. ಶಾಲಾ- ಕಾಲೇಜಿನ ಸಮವಸ್ತ್ರ ನೀತಿ ಪಾಲಿಸುವುದು ವಿದ್ಯಾರ್ಥಿನಿಯರ ಕರ್ತವ್ಯ

ತೀರ್ಪು ಪ್ರಕಟ ಹಿನ್ನೆಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಒಂದು ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಅಲ್ಲದೆ ಹೆಚ್ಚುವರಿ ಪೊಲೀಸ್‌ ಪಡೆಯನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ. ಜೊತೆಗೆ ಸಾಮಾಜಿಕ ಜಾಲತಾಣದ ಮೇಲೆ ನಿಗಾ ಇಡುವಂತೆ ಪೊಲೀಸರಿಗೆ ಸೂಚಿಸಲಾಗಿದೆ.

Hijab Verdict: ಅಂತಿಮ ತೀರ್ಪು ಹಿನ್ನೆಲೆ ಶಾಲಾ-ಕಾಲೇಜ್ ಬಂದ್, ಬೆಂಗಳೂರಿನಲ್ಲಿ 1 ವಾರ ನಿಷೇದಾಜ್ಞೆ

ರಾಜಕೀಯ ಬಣ್ಣ, ವಿದೇಶದಲ್ಲೂ ಸದ್ದು:

ಉಡುಪಿಯ ಕಾಲೇಜಿನಲ್ಲಿ ಮೊದಲಿಗೆ ಆರಂಭಗೊಂಡ ಈ ಹಿಜಾಬ್‌ ವಿವಾದ ಬಳಿಕ ರಾಜ್ಯದ ಹಲವು ಜಿಲ್ಲೆಗಳಿಗೆ ವಿಸ್ತರಿಸಿತ್ತು. ಮೊದಲಿಗೆ ಧಾರ್ಮಿಕ ಸಂಘಟನೆಗಳ ಬೆಂಬಲ ಪಡೆದ ವಿವಾದಕ್ಕೆ ಬಳಿಕ ರಾಜಕೀಯ ಬಣ್ಣವೂ ಮೆತ್ತಿಕೊಂಡಿತು. ಹೀಗಾಗಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲೂ ಈ ವಿಷಯ ರಾಜಕೀಯ ಪಕ್ಷಗಳ ನಡುವೆ ಕೆಸರೆರಚಾಟಕ್ಕೆ ವೇದಿಕೆಯಾಯ್ತು. ಅಷ್ಟುಸಾಲದೆಂಬಂತೆ ನೊಬೆಲ್‌ ಪುರಸ್ಕೃತೆ ಮಲಾಲಾ ಮೊದಲಾದವರು ಇದರಲ್ಲಿ ಮೂಗು ತೂರಿಸಿದ ಪರಿಣಾಮ, ವಿವಾದ ದೇಶದ ಗಡಿ ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಯ್ತು.

ಉಡುಪಿಯಲ್ಲಿ ವಿವಾದದ ಮೂಲ, ಬಳಿಕ ಏನೇನಾಯ್ತು?

ಇಡೀ ಹಿಜಾಬ್‌ ವಿವಾದದ ಮೂಲ ಉಡುಪಿಯ ಸರ್ಕಾರಿ ಮಹಿಳಾ ಪಿಯು ಕಾಲೇಜು. ಈ ಕಾಲೇಜಿನ 12 ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ತರಗತಿಯಲ್ಲಿ ಕೂರಲು ಅವಕಾಶ ಕೋರಿ ಈ ವರ್ಷದ ಜನವರಿಯಲ್ಲಿ ಕಾಲೇಜಿನ ಪ್ರಾಂಶುಪಾಲರಿಗೆ ಮನವಿ ಸಲ್ಲಿಸಿದ್ದರು. ಪ್ರಾಂಶುಪಾಲರು ಅವಕಾಶ ನಿರಾಕರಿಸಿದ ಬಳಿಕ 6 ವಿದ್ಯಾರ್ಥಿನಿಯರು ಹಿಜಾಬ್‌ ತೆಗೆದು ತರಗತಿಗೆ ಹಾಜರಾದರು. ಉಳಿದ 6 ವಿದ್ಯಾರ್ಥಿನಿಯರು ತರಗತಿಗೆ ಗೈರಾದರು. ಇವರ ಬೆಂಬಲಕ್ಕೆ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ನಿಂತಿತು.

ಮತ್ತೊಂದೆಡೆ ಹಿಜಾಬ್‌ಗೆ ಪ್ರತಿಯಾಗಿ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗೆ ಬರಲು ಮುಂದಾದರು. ಈ ವಿವಾದ ಕುಂದಾಪುರದ ಎರಡು ಮೂರು ಕಾಲೇಜು ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಗೆ ಹಬ್ಬುತ್ತಿದ್ದಂತೆ ರಾಜ್ಯ ಸರ್ಕಾರ ಜ.27ರಂದು ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿತು. ಈ ಮಧ್ಯ ರಾಜ್ಯ ಸರ್ಕಾರ ಫೆ.5ರಂದು ಹಿಜಾಬ್‌ ಧರಿಸಿ ಶಾಲಾ-ಕಾಲೇಜುಗಳಿಗೆ ಧರಿಸುವುದನ್ನು ನಿಷೇಧಿಸಿ ಮತ್ತು ಸಮವಸ್ತ್ರವನ್ನು ನಿರ್ಧರಿಸುವ ಜವಾಬ್ದಾರಿಯನ್ನು ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ (ಸಿಡಿಸಿ) ವಹಿಸಿ ಆದೇಶಿಸಿತು. ಈ ಆದೇಶ ಪ್ರಶ್ನಿಸಿ ವಿದ್ಯಾರ್ಥಿನಿಯರು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಪೂರ್ಣ ಪೀಠಕ್ಕೆ ವರ್ಗಾವಣೆ:

ಹಿಜಾಬ್‌ ಧರಿಸುವುದು ಸಂವಿಧಾನದ ಮೂಲಭೂತ ಹಕ್ಕೆಂದು ಘೋಷಿಸಬೇಕು ಹಾಗೂ ಹಿಜಾಬ್‌ ಧಾರಣೆಯನ್ನು ಶಿಕ್ಷಣ ಸಂಸ್ಥೆಗಳು ನಿರ್ಬಂಧಿಸುವಂತಿಲ್ಲ ಎಂದು ಆದೇಶಿಸುವಂತೆ ಕೋರಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬರು 2022ರ ಜ.31ರಂದು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಫೆ.8 ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಅವರಿದ್ದ ಏಕಸದಸ್ಯ ಪೀಠ ಅರ್ಜಿ ಕುರಿತು ಸುದೀರ್ಘ ವಾದ ಆಲಿಸಿತ್ತು. ಆದರೆ, ಫೆ.9ರಂದು ಪ್ರಕರಣವನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿತ್ತು. ಅಂದೇ ಅರ್ಜಿಗಳ ವಿಚಾರಣೆಗೆ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ, ನ್ಯಾ.ಕೃಷ್ಣ ಎಸ್‌. ದೀಕ್ಷಿತ್‌, ನ್ಯಾ.ಜೆ.ಎಂ. ಖಾಜಿ ಅವರ ಪೂರ್ಣಪೀಠ ರಚನೆಯಾಯಿತು.

ಮಧ್ಯಂತರ ಆದೇಶ:

ಫೆ.10ರಂದು ಮೊದಲ ಬಾರಿಗೆ ಅರ್ಜಿ ವಿಚಾರಣೆ ನಡೆಸಿದ್ದ ಪೂರ್ಣಪೀಠ ಸುದೀರ್ಘ ವಾದ ಆಲಿಸಿದ ತರುವಾಯ, ಹಿಜಾಬ್‌-ಕೇಸರಿ ವಸ್ತ್ರ ಸೇರಿದಂತೆ ಯಾವುದೇ ಧಾರ್ಮಿಕ ಉಡುಪು ಧರಿಸದೆ ಶಾಲಾ ಕಾಲೇಜಿಗೆ ತೆರಳಬೇಕು. ಈ ವಿಚಾರದಲ್ಲಿ ಯಾರೂ ಒತ್ತಾಯ ಮಾಡುವಂತಿಲ್ಲ. ಈ ಆದೇಶವು ಸಮವಸ್ತ್ರ ನಿಗದಿ ಪಡಿಸಿ ವಸ್ತ್ರ ಸಂಹಿತೆ ವಿಧಿಸಿರುವ ಶಾಲೆಗಳಿಗೆ ಮಾತ್ರ ಅನ್ವಯವಾಗುತ್ತದೆ ಎಂದು ಮಧ್ಯಂತರ ಆದೇಶ ನೀಡಿತ್ತು. ನಂತರ 10 ದಿನಗಳ ಕಾಲ ಸತತವಾಗಿ ವಾದ-ಪ್ರತಿವಾದ ಆಲಿಸಿ ಅಂತಿಮವಾಗಿ ಫೆ.25ರಂದು ತೀರ್ಪು ಕಾಯ್ದಿರಿಸಿತ್ತು.

ಬಿಜೆಪಿ ಎಂಬ ಕುಡುಕ ಗಂಡನ ಮದುವೆಯಾಗಿದ್ದೇವೆ: ಪ್ರಮೋದ್‌ ಮುತಾಲಿಕ್‌

ಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್‌ ಭದ್ರತೆ

ಹಿಜಾಬ್‌ ತೀರ್ಪು ಬಳಿಕ ಸಾರ್ವಜನಿಕ ಸ್ಥಳಗಳಲ್ಲಿ ಸಂಭ್ರಮಾಚರಣೆ ಅಥವಾ ಪ್ರತಿಭಟನೆ ನಿರ್ಬಂಧಿಸಲಾಗಿದೆ. ನಗರದ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸೆಕ್ಷನ್‌ 144ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಆದೇಶ ಉಲ್ಲಂಘಿಸಿದರೆ ಕಾನೂನು ರೀತ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಆಯುಕ್ತ ಕಮಲ್‌ ಪಂತ್‌ ಎಚ್ಚರಿಕೆ ನೀಡಿದ್ದಾರೆ.

ಮಾ.15ರ ಮಂಗಳವಾರ ಬೆಳಗ್ಗೆಯಿಂದ 23ರ ರಾತ್ರಿವರೆಗೆ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಇದೇ ವಿಚಾರವಾಗಿ ಈ ಹಿಂದೆ ರಾಜ್ಯದ ಕೆಲವು ಕಡೆ ಅಶಾಂತಿ ಪರಿಸ್ಥಿತಿ ನೆಲೆಸಿತ್ತು. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ಅವಲೋಕಿಸಿ ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ ಬಿಗಿ ಬಂದೋಸ್‌್ತ ವ್ಯವಸ್ಥೆ ಮಾಡಲಾಗಿದೆ ಎಂದು ಆಯುಕ್ತರು ಹೇಳಿದ್ದಾರೆ.

ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಹೆಚ್ಚಿನ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ. ಆಯಾ ಠಾಣಾ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಧಕ್ಕೆ ಉಂಟಾಗದಂತೆ ನಿಗಾವಹಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ. ಅಲ್ಲದೆ ನಗರ ವ್ಯಾಪ್ತಿಯಲ್ಲಿ ಹೊಯ್ಸಳ ವಾಹನಗಳ ಪಹರೆ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ.

ವಿವಾದದ ಹಾದಿ

- ಉಡುಪಿ ಸರ್ಕಾರಿ ಕಾಲೇಜಿಗೆ ಹಿಜಾಬ್‌ ಧರಿಸಿ ಬಂದ ಕೆಲ ವಿದ್ಯಾರ್ಥಿನಿಯರು

- ಅವಕಾಶ ನಿರಾಕರಣೆ ಬಳಿಕ ಕಾಲೇಜಿಗೆ ಗೈರು, ಪ್ರತಿಭಟನೆ, ವಿವಾದ ಆರಂಭ

- ಗೈರಾದ ವಿದ್ಯಾರ್ಥಿನಿಯರಿಗೆ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ ಬೆಂಬಲ

- ಹಿಜಾಬ್‌ಗೆ ಸಡ್ಡು: ಕೇಸರಿ ಶಾಲು ಧರಿಸಿ ಬರತೊಡಗಿದ ಹಿಂದು ವಿದ್ಯಾರ್ಥಿಗಳು

- ರಾಜ್ಯಾದ್ಯಂತ ಕಾಲೇಜುಗಳಲ್ಲಿ ಹಿಜಾಬ್‌-ಕೇಸರಿ ಶಾಲಿನ ನಡುವೆ ಸಮರ ಆರಂಭ

- ವಿವಾದ ತಣಿಸಲು ಹಿಜಾಬ್‌ಗೆ ನಿಷೇಧ ಹೇರಿ ರಾಜ್ಯ ಸರ್ಕಾರದಿಂದ ಆದೇಶ

- ಸರ್ಕಾರದ ಆದೇಶ ಪ್ರಶ್ನಿಸಿ ಕೆಲ ವಿದ್ಯಾರ್ಥಿನಿಯರಿಂದ ಹೈಕೋರ್ಟ್‌ಗೆ ಮೊರೆ

- ಯಾವುದೇ ಧಾರ್ಮಿಕ ವಸ್ತ್ರ ಧರಿಸಿ ಶಾಲೆಗೆ ಬರದಂತೆ ಕೋರ್ಟ್‌ ಮಧ್ಯಂತರ ಆದೇಶ

- ಮುಖ್ಯ ನ್ಯಾಯಮೂರ್ತಿ ಪೀಠದಿಂದ ವಿಚಾರಣೆ ಪೂರ್ಣ: ಇಂದು ಅಂತಿಮ ತೀರ್ಪು

click me!