
ಹೈದರಾಬಾದ್(ಜು.12): ದಿನೇದಿನೇ ಕೊರೋನಾ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಕೊರೋನಾದಿಂದ ಗುಣಮುಖರಾದವರ ಪ್ಲಾಸ್ಮಾಕ್ಕೆ ಭರ್ಜರಿ ಬೇಡಿಕೆ ಕಂಡುಬರುತ್ತಿದೆ. ಹೀಗಾಗಿ ಪ್ಲಾಸ್ಮಾ ದಾನ ಎಂಬುದು ದಂಧೆಯಾಗಿ ಪರಿವರ್ತನೆಗೊಳ್ಳುವ ಭೀತಿ ಎದುರಾಗಿದೆ.
ಆಂಧ್ರದಲ್ಲಿ ಮೊದಲ ಬಾರಿ ಪ್ಲಾಸ್ಮಾ ದಾನ ಮಾಡಿದ ಹಿರಿಮೆ ಹೊಂದಿರುವ ವರಂಗಲ್‌ನ ವಕೀಲ ಅಖಿಲ್ ಎನ್ನಂಶೆಟ್ಟಿಪ್ರಕಾರ, 400 ಎಂ.ಎಲ್. ಪ್ಲಾಸ್ಮಾವನ್ನು ಒಂದು ಬಾರಿ ನೀಡುವುದಕ್ಕೆ 60000 ರು.ನಿಂದ 3 ಲಕ್ಷ ರು.ವರೆಗೆ ಆಫರ್ ನೀಡಲಾಗುತ್ತಿದೆ. ಅದರಲ್ಲೂ ಅನಿವಾಸಿ ಭಾರತೀಯರು ಪ್ಲಾಸ್ಮಾಕ್ಕಾಗಿ ಎಷ್ಟುಬೇಕಾದರೂ ಹಣ ನೀಡಲು ಸಿದ್ಧವಾಗಿರುವ ಕಾರಣ, ಬಡವರು ಪ್ಲಾಸ್ಮಾ ಪಡೆಯುವುದರಿಂದ ವಂಚಿರಾಗುತ್ತಿದ್ದಾರೆ.
ಕೊರೋನಾ ಸೋಂಕಿಂದ ಗುಣಮುಖರಾಗಿ ಪ್ಲಾಸ್ಮಾ ದಾನಗೈದ ಬಿಜೆಪಿ ವಕ್ತಾರ ಸಂಬಿತ್!
ಪ್ಲಾಸ್ಮಾ ಪಡೆಯಲು ಶ್ರೀಮಂತರು ಯಾವ ಹಂತಕ್ಕೆ ಹೋಗಲೂ ಸೈ ಎನ್ನುತ್ತಿದ್ದಾರೆ. ಇತ್ತೀಚೆಗೆ ರೋಗಿಯೊಬ್ಬರು ಪ್ಲಾಸ್ಮಾ ದಾನಿಯನ್ನು ದೆಹಲಿಯಿಂದ ಹೈದರಾಬಾದ್‌ಗೆ ವಿಶೇಷ ವಿಮಾನದಲ್ಲಿ ಕರೆಸಿಕೊಳ್ಳುವ ಆಫರ್ ನೀಡಿದ್ದಾರೆ. ಸರ್ಕಾರ ಕೊರೋನಾದಿಂದ ಗುಣಮುಖರಾದವರು ಮತ್ತು ಅವರಲ್ಲಿ ಪ್ಲಾಸ್ಮಾ ದಾನಕ್ಕೆ ಸಿದ್ಧವಿರುವವರ ಪಟ್ಟಿತಯಾರಿಸಿದರೆ, ಅರ್ಹರು ಯಾವುದೇ ಸಂಕಷ್ಟವಿಲ್ಲದೆ ಮತ್ತು ಹಣ ತೆರಬೇಕಾದ ಪ್ರಮೇಯವಿಲ್ಲದೇ ಪ್ಲಾಸ್ಮಾ ಚಿಕಿತ್ಸೆ ಪಡೆಯಬಹುದು. ಆದರೆ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸುತ್ತಿಲ್ಲ ಎಂದು ಅಖಿಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೋನಾದಿಂದ ಗುಣಮುಖರಾದ ವ್ಯಕ್ತಿಗಳು, 14 ದಿನಗಳ ಬಳಿಕ ತಮ್ಮ ರಕ್ತದಲ್ಲಿನ ಪ್ಲಾಸ್ಮಾವನ್ನು ದಾನ ಮಾಡಬಹುದು. ಆದರೆ ದಾನ ಮಾಡಬಯಸುವವರ ಪ್ಲಾಸ್ಮಾ ಮತ್ತು ತೆಗೆದುಕೊಳ್ಳುವವರ ರಕ್ತದ ಗುಂಪು ಒಂದೇ ಆಗಿರಬೇಕು. ಹೀಗಾಗಿ ಭಾರಿ ಬೇಡಿಕೆ ಕಂಡುಬರುತ್ತಿದೆ.
ದೆಹಲಿಯಲ್ಲಿ ದೇಶದ ಮೊದಲ ಪ್ಲಾಸ್ಮಾ ಬ್ಯಾಂಕ್ ಕಾರ್ಯಾರಂಭ..! ಹೀಗಿದೆ ರೂಲ್ಸ್
ಸುಪ್ರೀಂಕೋರ್ಟ್‌ನ ಈ ಹಿಂದಿನ ಆದೇಶವೊಂದರ ಅನ್ವಯ, ಭಾರತದಲ್ಲಿ ರಕ್ತವನ್ನು ಹಣಕ್ಕಾಗಿ ದಾನ ಮಾಡುವಂತಿಲ್ಲ. ಆದರೆ ಉಚಿತವಾಗಿ ಮಾಡಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ