
ಚಂಡೀಗಢ (ಅ.13): ವಂಶಾವಳಿ ಮುಂದುವರಿಕೆಗೆ ಜೈಲಿನ ಕಂಬಿಗಳೂ ಇನ್ನು ಮುಂದೆ ಸಾಕ್ಷಿಯಾಗಲಿವೆ. ಜೈಲಿನಲ್ಲಿರುವ ಗಂಡ ಅಥವಾ ಹೆಂಡತಿ ತಮ್ಮ ಜೀವನ ಸಂಗಾತಿಯನ್ನು ಏಕಾಂತದಲ್ಲಿ ಭೇಟಿಯಾಗಲು ಇನ್ನು ಮುಂದೆ ಸಾಧ್ಯವಾಗಲಿದೆ. ಪಂಜಾಬ್ ಸರ್ಕಾರ ಇತ್ತೀಚೆಗೆ ಈ ಉಪಕ್ರಮವನ್ನು ತೆಗೆದುಕೊಂಡಿದೆ. ಇದಕ್ಕೆ ಕಾರಣ ಇತ್ತೀಚೆಗೆ ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ಮೆಟ್ಟಿಲೇರಿದ ಕೆಲವು ಪ್ರಕರಣಗಳು. 2022ರ ಮಾರ್ಚ್‌ನಲ್ಲಿ ಗುರುಗ್ರಾಮ ಮೂಲದ ಮಹಿಳೆಯೊಬ್ಬಳು ಪಂಜಾಬ್ ಹೈಕೋರ್ಟ್ ಕದ ತಟ್ಟಿದ್ದಳು. ಆಕೆಯ ಪ್ರಕರಣ ಉಳಿದೆಲ್ಲ ಪ್ರಕರಣಕ್ಕಿಂತ ಭಿನ್ನವಾಗಿತ್ತು. ಜೈಲಿನಲ್ಲಿರುವ ತನ್ನ ಪತಿಯೊಂದಿಗೆ ದೈಹಿಕ ಸಂಬಂಧವನ್ನು ಬೆಳೆಸಲು ಅನುಮತಿ ನೀಡುವಂತೆ ಅವರು ಕೋರ್ಟ್‌ಗೆ ಅರ್ಜಿ ಹಾಕಿದ್ದರು. ಪತಿ ಜೈಲಲ್ಲಿದ್ದಾರೆ, ಆದರೆ ನಮ್ಮ ವಂಶ ಮುಂದುವರಿಯಬೇಕು. ಆ ಕಾರಣದಿಂದಾಗಿ ಆತನೊಂದಿಗೆ ಜೈಲಿನಲ್ಲಿ ದೈಹಿಕ ಸಂಬಂಧ ಬೆಳೆಸಲು ಅನುಮತಿ ನೀಡಬೇಕು ಎಂದು ವಾದ ಮಾಡಿದ್ದರು. ಗುರುಗ್ರಾಮ್ ನ್ಯಾಯಾಲಯವು ತನ್ನ ಪತಿಯನ್ನು ಕೊಲೆ ಮತ್ತು ಇತರ ಅಪರಾಧಗಳಲ್ಲಿ ಅಪರಾಧಿ ಎಂದು ಘೋಷಣೆ ಮಾಡಿದೆ. ಹಾಗಾಗಿ 2018 ರಿಂದ ಅವರನ್ನು ಭೋಂಡ್ಸಿ ಜಿಲ್ಲೆಯ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ ಎಂದು ಹೇಳಿದ್ದರು.
2022ರ ಜನವರಿಯಲ್ಲಿ ಇದೇ ರೀತಿಯ ಇನ್ನೊಂದು ಪ್ರಕರಣ ಪಂಜಾಬ್-ಹರಿಯಾಣ ಹೈಕೋರ್ಟ್‌ನಲ್ಲಿ ದಾಖಲಾಗಿತ್ತು. ಇದರಲ್ಲಿ ಪತ್ನಿ ತನ್ನ ಗಂಡನೊಂದಿಗೆ ಜೊತೆಯಾಗಿ ಇರಲು ಜೈಲಿನಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಅಪಾಯಿಂಟ್‌ಮೆಂಟ್ ನೀಡುವಂತೆ ಹೇಳಿದ್ದರು. ಅವರು ಸಂವಿಧಾನದ 21 ನೇ ವಿಧಿಯನ್ನು ಉಲ್ಲೇಖ ಮಾಡಿ, ದೇಶದ ಸಂವಿಧಾನ ನನಗೆ ಈ ಹಕ್ಕು ನೀಡಿದೆ ಎಂದಿದ್ದರು. ಇನ್ನು ಮೂರನೇ ಪ್ರಕರಣದಲ್ಲಿ ಜಸ್ವೀರ್ ಸಿಂಗ್ ಅವರು ತಮ್ಮ ವಂಶಾವಳಿಯನ್ನು ಮುಂದುವರಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಹೆಂಡತಿ ಗರ್ಭಿಣಿಯಾಗುವವರೆಗೂ (Pregnent Women) ಜೈಲಿನಲ್ಲಿ ತನ್ನೊಂದಿಗೆ ಇರಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದ್ದರು. ಆದರೆ, ಈ ಬೇಡಿಕೆಯನ್ನು ಹೈಕೋರ್ಟ್ ತಿರಸ್ಕರಿಸಿತ್ತು. ಆದರೆ, ಜಸ್ವಿರ್ ಸಿಂಗ್ ವಿ. ಪಂಜಾಬ್ ಸರ್ಕಾರ ಪ್ರಕರಣದಲ್ಲಿ, ಹೈಕೋರ್ಟ್ ಹರ್ಯಾಣ, ಪಂಜಾಬ್ ಮತ್ತು ಚಂಡೀಗಢ ಜೈಲು ಸುಧಾರಣಾ ಸಮಿತಿಯನ್ನು ರಚಿಸಲು ಮತ್ತು ಈ ನಿಟ್ಟಿನಲ್ಲಿ ನೀತಿಯನ್ನು ಮಾಡಲು ಸೂಚನೆ ನೀಡಿತ್ತು.
4 ಜೈಲುಗಳಲ್ಲಿ ದಾಂಪತ್ಯ ಭೇಟಿ ಸೌಲಭ್ಯ: ಹೈಕೋರ್ಟ್‌ನ (Punjab and Haryana High Court) ಸೂಚನೆಯ ಬಳಿಕ ಪಂಜಾಬ್ ನಾಲ್ಕು ಜೈಲುಗಳಲ್ಲಿ ಏಕಾಂತ ಭೇಟಿಯ ಸೌಲಭ್ಯ ಮಾಡಲಾಗಿದೆ. ಈ ಜೈಲಿನಲ್ಲಿ ಕೈದಿಗಳಿಗೆ ತಮ್ಮ ಜೀವನ ಸಂಗಾತಿಯೊಂದಿಗೆ ಒಂದಿಷ್ಟು ಸಮಯ ಕಳೆಯಲು ಅವಕಾಶ ಕಲ್ಪಿಸಲಾಗುತ್ತಿದೆ. ಇದಕ್ಕಾಗಿ ಜೈಲಿನಲ್ಲಿ ಪ್ರತ್ಯೇಕ (Conjugal Visit) ಕೊಠಡಿಯನ್ನು ಮಾಡಲಾಗಿದೆ. ಪ್ರಸ್ತುತ, ಇಂದ್ವಾಲ್ ಸಾಹಿಬ್, ನಭಾ, ಲುಧಿಯಾನ ಮತ್ತು ಬಟಿಂಡಾ ಮಹಿಳಾ ಜೈಲಿನಲ್ಲಿ ಈ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ಪಂಜಾಬ್‌ನ ಜೈಲುಗಳಲ್ಲಿ ಈ ಸೌಲಭ್ಯವನ್ನು ಆರಂಭಿಸಲು ಸಿದ್ಧತೆ ನಡೆದಿದೆ.
ಯುವತಿಗಾಗಿ ಬಡಿದಾಡಿಕೊಂಡ ಸ್ನೇಹಿತರು, ಲಿವಿಂಗ್ ರಿಲೇಷನ್‌ಶಿಪ್ ಗಲಾಟೆ ಕೊಲೆಯಲ್ಲಿ ಅಂತ್ಯ!
ಎಲ್ಲಾ ಕೈದಿಗಳಿಗಿಲ್ಲ ಈ ಸೌಲಭ್ಯ, 2 ಗಂಟೆ ಅವಕಾಶ: ಆದರೆ ಈ ಸೌಲಭ್ಯ ಎಲ್ಲಾ ಕೈದಿಗಳಿಗಿಲ್ಲ. ಉತ್ತಮ ನಡತೆ ತೋರಿದ ಕೈದಿಗಳಿಗೆ ಮಾತ್ರವೇ ಈ ಅವಕಾಶ ಇರಲಿದೆ. ಕುಖ್ಯಾತ ಅಪರಾಧಿಗಳು, ದರೋಡೆಕೋರರು ಮತ್ತು ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳು ಈ ಸೌಲಭ್ಯವನ್ನು ಪಡೆಯುವುದಿಲ್ಲ. ಇದಕ್ಕಾಗಿ ಕೈದಿ ಮೊದಲು ಜೈಲು ಆಡಳಿತಕ್ಕೆ ಅರ್ಜಿ ಸಲ್ಲಿಸುತ್ತಾನೆ ಎಂದು ಜೈಲು ಅಧಿಕಾರಿ ತಿಳಿಸಿದ್ದಾರೆ. ಅರ್ಜಿಯನ್ನು ಅನುಮೋದಿಸಿದ ನಂತರ, ಉತ್ತಮ ನಡವಳಿಕೆಯ ಕೈದಿಗಳು ತಮ್ಮ ಸಂಗಾತಿಯೊಂದಿಗೆ (Life Partner) ಎರಡು ಗಂಟೆಗಳ ಕಾಲ ಇರಲು ಅವಕಾಶ ನೀಡಲಾಗುತ್ತದೆ. ಇದಕ್ಕಾಗಿ ಜೈಲು ಆಡಳಿತ ಪ್ರತ್ಯೇಕ ಕೊಠಡಿಗಳನ್ನು ಸಿದ್ಧಪಡಿಸಿದ್ದು, ಪ್ರತ್ಯೇಕ ಡಬಲ್ ಬೆಡ್‌ಗಳು, ಟೇಬಲ್‌ಗಳು ಮತ್ತು ಅಟ್ಯಾಚ್ಡ್ ಬಾತ್‌ರೂಮ್‌ಗಳನ್ನು ಸಹ ಹೊಂದಿರಲಿದೆ.
ಗೋಬಿ ತಿನ್ಲಿಲ್ಲ ಅಂತಾ ಲಟ್ಟಣಿಗೆಯಲ್ಲಿ ಅಜ್ಜಿಗೆ ಕೊಟ್ಟ ಏಟು, 6 ವರ್ಷದ ನಂತ್ರ ಮೊಮ್ಮಗನಿಗೆ ತೆರೆದ ಜೈಲು ಗೇಟು!
ಇದಕ್ಕೂ ಇದೆ ನಿಯಮ: ಇನ್ನು ಏಕಾಂತ ಭೇಟಿಯ ಸೌಲಭ್ಯಕ್ಕಾಗಿ ಪಂಜಾಬ್ ಸರ್ಕಾರ ಕೆಲವು ನಿಯಮಗಳನ್ನು ರೂಪಿಸಿದೆ. ಮೊದಲನೆಯದಾಗಿ ಮದುವೆಯ ಪ್ರಮಾಣಪತ್ರ ಇರಬೇಕು. ತಾವಿಬ್ಬರೂ ದಂಪತಿಗಳು ಎನ್ನುವುದನ್ನು ಸಾಬೀತುಪಡಿಸುವ ಮದುವೆ ನೋಂದಣಿ ಪ್ರಮಾಣಪತ್ರೆ ಕಡ್ಡಾಯವಾಗಿದೆ. ಅದಾದ ಬಳಿಕ ವೈದ್ಯಕೀಯ ಪ್ರಮಾಣಪತ್ರ ಇರಬೇಕು. ಇದರಲ್ಲಿ ಸಂಗಾತಿಗೆ ಏಡ್ಸ್, ಲೈಂಗಿಕವಾಗಿ ಹರಡುವ ಕಾಯಿಲೆ, ಕರೋನಾ ಸೇರಿದಂತೆ ಇತರ ಕಾಯಿಲೆಗಳು ಇಲ್ಲ ಎಂದು ಸಾಬೀತು ಮಾಡುವ ಪ್ರಮಾಣಪತ್ರ ಇದಾಗಿರಬೇಕು. ಅದಾದ ಬಳಿಕ ಜೈಲು ಅಧಿಕಾರಿಗಳು ದಂಪತಿಗಳು ವಿಶೇಷ ರೂಮ್‌ನಲ್ಲಿ ಎರಡು ಗಂಟೆಗಳ ಕಾಲಾವಕಾಶ ನೀಡುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ